ಪಿಂಕ್, ನೇರ್​ಕೊಂಡ ಪಾರ್ವೈ ಎಂಬ ಸಿನಿಮಾ ಮತ್ತು ಆಕೆಯ ಮೇಲಿನ ಸಾಮೂಹಿಕ ಅತ್ಯಾಚಾರ; ಇಲ್ಲಿದೆ ಮಹಿಳೆಯೊಬ್ಬಳ ಆರ್ತನಾದದ ಕಥೆ!

ಸುಜ್ಹೆಟ್​ ಜೋರ್ಡಾನ್ ಸಾಯುವ ಕೆಲವೇ ದಿನಗಳಿಗೆ ಮುನ್ನ ಖ್ಯಾತ ಚಿತ್ರನಟ ಅಮೀರ್ ಖಾನ್ ದೂರದರ್ಶನಕ್ಕೆ ನಡೆಸಿಕೊಡುತ್ತಿದ್ದ ಸತ್ಯಮೇವ ಜಯತೆ ಎಂಬ ಕಾರ್ಯಕ್ರಮದಲ್ಲಿ ತನಗಾದ ನೋವನ್ನು ಹಂಚಿಕೊಂಡಿದ್ದಳು. ದೇಶದಲ್ಲಿ ಸ್ತ್ರೀ ಸಮಾನತೆ ಹಾಗೂ ಸ್ವಾತಂತ್ರ್ಯದ ಬಗ್ಗೆ ಪ್ರಶ್ನೆ ಎತ್ತುವ ಮೂಲಕ ಇಡೀ ದೇಶದ ಗಮನ ಸೆಳೆದಿದ್ದಳು. ​

MAshok Kumar | news18
Updated:August 15, 2019, 6:56 PM IST
ಪಿಂಕ್, ನೇರ್​ಕೊಂಡ ಪಾರ್ವೈ ಎಂಬ ಸಿನಿಮಾ ಮತ್ತು ಆಕೆಯ ಮೇಲಿನ ಸಾಮೂಹಿಕ ಅತ್ಯಾಚಾರ; ಇಲ್ಲಿದೆ ಮಹಿಳೆಯೊಬ್ಬಳ ಆರ್ತನಾದದ ಕಥೆ!
ಪಿಂಕ್ ಮತ್ತು ನೇರ್​ಕೊಂಡ ಪಾರ್ವೈ ಚಿತ್ರದ ಸ್ಟಿಲ್​.
  • News18
  • Last Updated: August 15, 2019, 6:56 PM IST
  • Share this:
ಡಿಸೆಂಬರ್ 16, 2012 ದೆಹಲಿಯ ನಿರ್ಭಯಾ ಅತ್ಯಾಚಾರ ಪ್ರಕರಣ ಆ ದಿನಗಳ ಮಟ್ಟಿಗೆ ಇಡೀ ದೇಶದ ಗಮನ ಸೆಳೆದ ಮಹತ್ವದ ಪ್ರಕರಣ. ದೇಶದಾದ್ಯಂತ ಹತ್ತಾರು ಪ್ರತಿಭಟನೆಗೆ ಸಾಕ್ಷಿಯಾದ ಹಾಗೂ ತರುವಾಯ ಮಹಿಳೆಯರ ರಕ್ಷಣೆ ಕುರಿತ ಕೆಲವು ಕಾನೂನುಗಳು ಮತ್ತಷ್ಟ ಗಟ್ಟಿಯಾಗಲು ಈ ಪ್ರಕರಣ ಕಾರಣವಾಗಿತ್ತು.

ಆದರೆ, ಅದೇ ವರ್ಷ ಇಂತಹದ್ದೇ ಮತ್ತೊಂದು ಪ್ರಕರಣ ಕೋಲ್ಕತ್ತಾದಲ್ಲಿ ನಡೆದಿತ್ತು ಮತ್ತು ಆಕೆಯ ಹೆಸರು ಸುಜ್ಹೆಟಿ ಜೋರ್ಡಾನ್ ಎಂಬುದು ಭಾಗಶಃ ಈ ದೇಶದ ಬಹುಪಾಲು ಜನರಿಗೆ ಗೊತ್ತಿರಲಿಕ್ಕಿಲ್ಲವೇನೋ?.

ಸುಜ್ಹೆಟಿ ಜೋರ್ಡನ್ ಅನ್ನೋದಕ್ಕಿಂತ, 2016ರಲ್ಲಿ ಹಿಂದಿ ಭಾಷೆಯಲ್ಲಿ ತೆರೆಕಂಡು ಸಾಮಾಜಿಕ ವಿಷಯಗಳ ಕುರಿತ ಅತ್ಯುತ್ತಮ ಚಲನಚಿತ್ರ ಎಂದು ರಾಷ್ಟ್ರೀಯ ಪ್ರಶಸ್ತಿ ಪಡೆದ ‘PINK’ ಚಲನಚಿತ್ರ ಈಕೆಯ ಬದುಕಿನ ನಿಜ ಘಟನೆಯನ್ನು ಆಧರಿಸಿದ್ದು ಎಂದರೆ ನೀವು ನಂಬ್ತೀರ?. ನಂಬಲೇಬೇಕು ಯಾಕಂದ್ರೆ ಅದೇ ಸತ್ಯ. ಆದರೆ, ಈ ವಿಚಾರ ದೇಶದ ಬಹುಪಾಲು ಜನರಿಗೆ ಈವರೆಗೆ ತಿಳಿದಿಲ್ಲ. ಚಿತ್ರತಂಡವೂ ಇದನ್ನು ಎಲ್ಲಿಯೂ ಬಲವಾಗಿ ಉಲ್ಲೇಖಿಸಿಲ್ಲ.

ಹೆಂಡತಿಯಾಗಲಿ, ಗೆಳತಿಯಾಗಲಿ ಕೊನೆಗೆ ವೇಶ್ಯೆಯೇ ಆಗಲಿ NO ಎಂದರೆ NO ಅಷ್ಟೇ. ಆಕೆಗೆ ಇಷ್ಟವಿಲ್ಲದಿದ್ದರೆ ಯಾರೇ ಆದರೂ ಆಕೆಯನ್ನು ಮುಟ್ಟುವಂತಿಲ್ಲ, ಪುರುಷನಂತೆ ಹೆಣ್ಣು ಸಹ ಮಧ್ಯಪಾನ ಮಾಡುವ ಕಾರಣಕ್ಕೆ ಆಕೆಯ ಚಾರಿತ್ರ್ಯವನ್ನು ತೀರ್ಮಾನಿಸುವ ಅಗತ್ಯವಿಲ್ಲ ಎಂದು ಸಾರುವ ಮೂಲಕ ಮಹಿಳೆಯರ ಸ್ವಾತಂತ್ರ್ಯ ಹಾಗೂ ಸಮಾನತೆಯ ಕುರಿತು ಹೊಸ ಭಿನ್ನವಾದ ನೋಟವನ್ನು ಈ ಚಿತ್ರ ಕಟ್ಟಿಕೊಟ್ಟಿತ್ತು.

ಬಾಲಿವುಡ್​ನಲ್ಲಿ 2016ರಲ್ಲಿ ಸದ್ದು ಮಾಡಿದ್ದ ಇದೇ ಚಿತ್ರ ಇದೀಗ “ನೇರ್ಕೊಂಡ ಪಾರ್ವೈ” ಎಂಬ ಹೆಸರಿನಲ್ಲಿ ತಮಿಳಿನಲ್ಲಿ ರಿಮೇಕ್ ಆಗುವ ಮೂಲಕ ಸದ್ದು ಮಾಡುತ್ತಿದೆ. ನಾಯಕ ನಟ ಅಜಿತ್ ನಟನೆಯ ಈ ಚಿತ್ರ ವಿಮರ್ಶಾತ್ಮಕವಾಗಿ ಅತ್ಯುತ್ತಮ ಚಿತ್ರ ಎನಿಸಿಕೊಂಡಿದೆ ಅಲ್ಲದೆ, ಹಣ ಗಳಿಕೆಯಲ್ಲೂ ನೂರು ಕೋಟಿಯ ಕಡೆಗೆ ದಾಪುಗಾಲಿಟ್ಟಿದೆ.

ಎಲ್ಲಾ ಚಿತ್ರಗಳಂತೆ ಈ ಚಿತ್ರದಲ್ಲೂ ಹ್ಯಾಪಿ ಎಂಡಿಂಗ್ ಇದೆ. ಪುರುಷರಿಂದ ದೌರ್ಜನ್ಯಕ್ಕೆ ಒಳಗಾದ ಮೂರು ಜನ ಹುಡುಗಿಯರ ಪರ ನ್ಯಾಯಾಲಯದಲ್ಲಿ ವಾದ ಮಂಡಿಸುವ ನಾಯಕ ಅವರಿಗೆ ನ್ಯಾಯ ಕೊಡಿಸುತ್ತಾನೆ. ಆದರೆ, ನಿಜ ಜೀವನದಲ್ಲಿ ಸುಜ್ಹೆಟಿ ಜೋರ್ಡನ್​ಗೆ ನ್ಯಾಯ ಎಂಬುದು ಮರೀಚಿಕೆಯಾಗಿತ್ತು. ಐದು ಜನ ಕಾಮುಕರ ವಿರುದ್ಧದ ನಿರಂತರ ಹೋರಾಟ ನಡೆಸಿದ ಈಕೆ ಕೊನೆಗೆ ಹಣವಂತರ ರಾಜಕಾರಣಿಗಳ ಕಾಟ, ನ್ಯಾಯಾಲಯದ ಕಲಾಪ ಹಾಗೂ ನಿರಂತರ ವಿಚಾರಣೆಯಿಂದ ಅಕ್ಷರಶಃ ಮಾನಸಿಕ ಅಸ್ವಸ್ಥೆಯಾದಳು ಕೊನೆಗೆ ಪ್ರಾಣವನ್ನೂ ಕಳೆದುಕೊಳ್ಳಬೇಕಾದದ್ದು ಮಾತ್ರ ದುರುಂತ.

ಇಂದು ಇಡೀ ದೇಶ 73ನೇ ಸ್ವಾತಂತ್ರ್ಯ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸುತ್ತಿದೆ. ಅಲ್ಲದೆ ಹಿಂದೆಂದಿಗಿಂತಲೂ ಇಂದಿನ ದಿನಗಳಲ್ಲಿ ಸ್ತ್ರೀ ಸ್ವಾತಂತ್ರ್ಯ ಸಮಾನತೆ ಹಾಗೂ ರಕ್ಷಣೆಯ ಕುರಿತು ಚರ್ಚೆ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಬಹುತೇಕರಿಗೆ ಅಪರಿಚಿತವಾಗಿಯೇ ಉಳಿದುಹೋದ ಸುಜ್ಹೆಟಿ ಜೋರ್ಡನ್ ಅವರ ಕರಾಳ ಕಥೆಯನ್ನು ಇಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ. ಆಸಕ್ತಿ ಇದ್ದವರು ಓದಿಕೊಳ್ಳಿ.
Loading...

ಕೋಲ್ಕತ್ತಾದಲ್ಲಿ ವಾಸವಾಗಿದ್ದ ಸುಜ್ಹೆಟಿ ಜೋರ್ಡನ್ ಮೂಲತಃ ಆಂಗ್ಲೋ ಇಂಡಿಯನ್. ಎರಡು ಮಕ್ಕಳ ತಾಯಿಯಾದ ಈಕೆ ಪತಿಯನ್ನು ತೊರೆದು ಸ್ವತಂತ್ರ್ಯವಾಗಿ ಬದುಕು ಕಟ್ಟಿಕೊಂಡಿದ್ದ ದಿಟ್ಟ ಮಹಿಳೆ. ಸ್ತ್ರೀ ಸಮಾನತೆ ಹಾಗೂ ಸ್ವಾತಂತ್ರ್ಯ ತನ್ನ ಹಕ್ಕು ಎಂದೇ ಭಾವಿಸಿದ್ದವಳು.

ಪಬ್​ಗಳಿಗೆ ಒಂಟಿಯಾಗಿ ಹೋಗಿ ಬಿಯರ್ ಕುಡಿಯುವುದು ನನಗೆ ಇಷ್ಟ, ಅದು ನನ್ನ ಸ್ವಾತಂತ್ರ್ಯ, ಇದನ್ನು ಪ್ರಶ್ನೆ ಮಾಡುವ ಹಕ್ಕು ಯಾರಿಗೂ ಇಲ್ಲ ಎಂದು ನ್ಯಾಯಾಲಯದ ಮುಂದೆ ನಿಂತು ವಾದ ಮಂಡಿಸಿದ್ದ ಗಟ್ಟಿಗಿತ್ತಿ. ಆದರೆ, ಈಕೆಯ ಬದುಕಲ್ಲಿ ಅಂದು ಆಗಬಾರದ್ದು ಆಗಿ ಹೋಗಿತ್ತು.

ಅದು 2012 ಫೆಬ್ರವರಿ 6ರ ರಾತ್ರಿ. ಕೋಲ್ಕತ್ತಾದ ಪಾರ್ಕ್ ಸ್ಟ್ರೀಟ್ ನಲ್ಲಿರುವ ಪಬ್ ಒಂದಕ್ಕೆ ತೆರಳಿದ್ದ ಈಕೆಗೆ ಅಲ್ಲೇ ಅಪರಿಚಿತನೊಬ್ಬ ಪರಿಚಯವಾಗಿದ್ದ, ಆತನ ಜೊತೆಗೆ ಒಟ್ಟಿಗೆ ಕುಳಿತು ಕುಡಿದ ಈಕೆ ನಂತರ ತಡವಾಯ್ತು ಎಂದು ಮನೆಗೆ ಹೊರಟಿದ್ದಳು. ಆದರೆ, ಓಲಾ ಆಗಲಿ ಊಬರ್ ಆಗಲಿ ಇನ್ನೂ ಭಾರತವನ್ನು ಪ್ರವೇಶಿಸದ ಆ ಕಾಲದಲ್ಲಿ ಮನೆಗೆ ಹೋಗಲು ಯಾವುದೇ ವಾಹನ ಸಿಗದೆ ಆಕೆ ರಸ್ತೆಯಲ್ಲೇ ನಿಂತಿದ್ದಳು.

ಇದೇ ಸಮಯಕ್ಕೆ ಕಾದಿದ್ದ ಕಾಮುಕ ತನ್ನ ಉಳಿದ ನಾಲ್ಕು ಜನ ಗೆಳೆಯರ ಜೊತೆಗೆ ಐಶಾರಾಮಿ ಕಾರಿನಲ್ಲಿ ಬಂದು ಆಕೆಯನ್ನು ಮನೆಗೆ ಡ್ರಾಪ್ ಮಾಡುವುದಾಗಿ ಒತ್ತಾಯಿಸಿದ್ದಾನೆ. ಆದರೆ, ಆಕೆ ಅದನ್ನು ನಿರಾಕರಿಸಿದ್ದಳು. ಕೊನೆಗೂ ಆತನ ಒತ್ತಾಯಕ್ಕೆ ಮಣಿದು ಸುಜ್ಹೆಟಿ ಜೋರ್ಡನ್ ಕಾರ್ ಹತ್ತಿಯೇ ಬಿಟ್ಟಲು. ಭಾಗಶಃ ಆಕೆಯ ಜೀವನದಲ್ಲಿ ಆಕೆ ಮಾಡಿದ ಮೊದಲ ತಪ್ಪು ನಿರ್ಧಾರ ಅದೇ ಇರಬೇಕು.

ಪ್ರಮುಖ ಅತ್ಯಾಚಾರ ಆರೋಪಿಗಳಾದ ಖಾದರ್​ ಖಾನ್ ಮತ್ತು ಮೊಹಮ್ಮದ್ ಅಲಿ.


ಆಕೆ ಕಾರಿಗೆ ಹತ್ತುತ್ತಿದ್ದಂತೆ ಆಕೆಯ ಜೊತೆಗೆ ಅಸಭ್ಯವಾಗಿ ವರ್ತಿಸಿದ 5 ಜನ ಕಾಮುಕರು ಕೊನೆಗೆ ತಲೆಗೆ ಗನ್​ ಇಟ್ಟು ಆಕೆಯ ಮೇಲೆ ಚಲಿಸುತ್ತಿದ್ದ ಕಾರಿನಲ್ಲೇ ಪದೇ ಪದೇ ಸಾಮೂಹಿಕ ಅತ್ಯಾಚಾರ ಎಸಗಿ ಕೊನೆಗೆ ಆಕೆಯನ್ನು ನಡುರಸ್ತೆಯಲ್ಲಿ  ಎಸೆದುಹೋಗಿದ್ದರು. ಹರಿದ ಬಟ್ಟೆ ಹಾಗೂ ರಕ್ತದ ಮಡುವಿನಲ್ಲಿದ್ದ ಆಕೆ ಅಂದು ಬದುಕಿದ್ದೆ ಹೆಚ್ಚು.

ಈ ಕಹಿ ಘಟನೆಯ ನಂತರ ಆಕೆ ಸುಮ್ಮನೆ ಕೂರಲಿಲ್ಲ. ಪೊಲೀಸ್ ಠಾಣೆ ಮೆಟ್ಟಿಲೇರಿ ಐದು ಜನರ ವಿರುದ್ಧ ಪ್ರಕರಣ ದಾಖಲಿಸಲು ಮುಂದಾದರು, ಆದರೆ, ಐದೂ ಜನ ಅಂದಿನ ಕೋಲ್ಕತ್ತಾ ಆಡಳಿತ ಪಕ್ಷದ ಜೊತೆಗೆ ನಿಕಟ ಸಂಪರ್ಕ ಹೊಂದಿದವರಾಗಿದ್ದರು. ಪ್ರಮುಖ ಆರೋಪಿ ಖಾದರ್ ಖಾನ್ ಇಂದಿನ ತೃಣಮೂಲ ಕಾಂಗ್ರೆಸ್ ಸಂಸದೆ ಮಾಜಿ ನಟಿ ನುಸ್ರತ್ ಜಹಾನ್ ಅವರ ಪ್ರಿಯಕರ ಎಂಬುದು ಇಲ್ಲಿ ಉಲ್ಲೇಖಾರ್ಹ.

ಇದೇ ಕಾರಣಕ್ಕೆ ಈ ಪ್ರಕರಣ ದಾಖಲಾಗಬಾರದು ಎಂದು ಆಕೆಯ ಮನೋಸ್ಥೈರ್ಯವನ್ನು ಕದಡುವ ಕೆಲಸವನ್ನು ಅಲ್ಲಿನ ರಾಜ್ಯ ಸರ್ಕಾರವೇ ಮಾಡಿತ್ತು ಎಂಬ ಗಂಭೀರ ಆರೋಪಕ್ಕೆ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್​ ಗುರಿಯಾಗಿತ್ತು. ನಂತರ ಕೋರ್ಟ್​ ಕೂಡ ಸರ್ಕಾರಕ್ಕೆ ಛೀಮಾರಿ ಹಾಕಿತ್ತು. ಆದರೂ, ಆಕೆ ಧೈರ್ಯದಿಂದ ಪ್ರಕರಣ ದಾಖಲಿಸುವಲ್ಲಿ ಸಫಲವಾಗಿದ್ದಳು.

ಪ್ರಕರಣ ದಾಖಲಾಗುತ್ತಿದ್ದಂತೆ ಮಾಧ್ಯಮದಲ್ಲಿ ದೊಡ್ಡ ಕೋಲಾಹಲವೇ ಸೃಷ್ಟಿಯಾಗಿತ್ತು. ಸರ್ಕಾರವನ್ನು ಮಾಧ್ಯಮಗಳು ಇನ್ನಿಲ್ಲದಂತೆ ತರಾಟೆಗೆ ತೆಗೆದುಕೊಂಡಿದ್ದವು. ಹೀಗಾಗಿ ಮಾಧ್ಯಮಗಳ ಎದುರು ಸ್ವತಃ ಹೇಳಿಕೆ ನೀಡಿದ್ದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ “ಇದು ನಮ್ಮ ಸರ್ಕಾರವನ್ನು ಅವಮಾನಿಸಲು ನಡೆಸುತ್ತಿರುವ ಪಿತೂರಿ," ಎಂದು ಜರಿದಿದ್ದರು. ಅಲ್ಲದೆ, "ಸುಜ್ಹೆಟಿ ಜೋರ್ಡನ್ ಓರ್ವ ನಡತೆಗೆಟ್ಟವಳು, ಹಣದ ವಿಚಾರದಲ್ಲಿ ಗಿರಾಕಿಗಳ ಜೊತೆ ಜಗಳವಾಗಿದ್ದು ಹೀಗಾಗಿ ಆಕೆ ಪ್ರಕರಣ ದಾಖಲಿಸಿದ್ದಾಳೆ,” ಎಂದು ಬಹಿರಂಗವಾಗಿ ಹೇಳುವ ಮೂಲಕ ಜೋರ್ಡನ್ ಅವರ ಚಾರಿತ್ರ್ಯವಧೆಗೆ ಮುಂದಾಗಿದ್ದರು.

ನ್ಯಾಯಾಲಯದ ಮೆಟ್ಟಿಲೇರಿದ್ದ ಈ ಪ್ರಕರಣದಲ್ಲಿ ಸುಜ್ಹೆಟ್ ಜೋರ್ಡನ್ ಕೊನೆವರೆಗೆ ಹೋರಾಡಿದರು. ವಿಚಾರಣೆ ಸಂದರ್ಭದಲ್ಲಿ ಪುರುಷ ಪ್ರಧಾನ ಸಮಾಜ ನೀಡಿದ ಎಲ್ಲಾಹಿಂಸೆಯನ್ನು, ಆಡಳಿತ ಪಕ್ಷದ ಕಿರುಕುಳವನ್ನು ಸಹಿಸಿಕೊಂಡಿದ್ದಳು. ಒಂದು ಹಂತದ ಮೇಲೆ ಒತ್ತಡ ಅಧಿಕವಾಗಿ ಆಕೆ ಮಾನಸಿಕ ಅಸ್ವಸ್ಥೆಯೇ ಆಗಿಹೋಗಿದ್ದಳು. ಪರಿಣಾಮ 2015 ಮಾರ್ಚ್ 13 ರಂದು ಎರಡು ಮಕ್ಕಳ ತಾಯಿಯಾದ ಜೋರ್ಡನ್ ಈ ಲೋಕವನ್ನೇ ತ್ಯಜಿಸಿದ್ದಳು. ಅವಳ ಎರಡು ಹೆಣ್ಣು ಮಕ್ಕಳು ತಬ್ಬಲಿಯಾದವು.

ಈಕೆ ಸಾಯುವ ಕೆಲವೇ ದಿನಗಳಿಗೆ ಮುನ್ನ ಖ್ಯಾತ ಚಿತ್ರನಟ ಅಮೀರ್ ಖಾನ್ ದೂರದರ್ಶನಕ್ಕೆ ನಡೆಸಿಕೊಡುತ್ತಿದ್ದ "ಸತ್ಯಮೇವ ಜಯತೆ" ಕಾರ್ಯಕ್ರಮದಲ್ಲಿ ತನಗಾದ ನೋವನ್ನು ಹಂಚಿಕೊಂಡಿದ್ದಳು. ದೇಶದಲ್ಲಿ ಸ್ತ್ರೀ ಸಮಾನತೆ ಹಾಗೂ ಸ್ವಾತಂತ್ರ್ಯದ ಬಗ್ಗೆ ಪ್ರಶ್ನೆ ಎತ್ತುವ ಮೂಲಕ ಇಡೀ ದೇಶದ ಗಮನ ಸೆಳೆದಿದ್ದಳು. ​ಈಕೆಯ ಸಾವಿನ ನಂತರ ಈ ಪ್ರಕರಣ ದೊಡ್ಡ ಮಟ್ಟದಲ್ಲಿ ಸುದ್ದಿಯಾಯಿತು. ಸ್ಥಳೀಯ ಮಾಧ್ಯಮಗಳು ಸಾಮಾಜಿಕ ಹೋರಾಟಗಾರರು ನ್ಯಾಯಕ್ಕಾಗಿ ಮೊರೆಯಿಟ್ಟರು. ಕೊನೆಗೂ ತ್ವರಿತ ವಿಚಾರಣೆಗೆ ಮುಂದಾದ ಕೋಲ್ಕತ್ತಾ ಸೆಷನ್ಸ್ ಕೋರ್ಟ್  10ನೇ ಡಿಸೆಂಬರ್​ 2015 ರಂದು ತೀರ್ಪು ನೀಡಿತ್ತು. 5 ಜನ ಕಾಮುಕರ ಆರೋಪ ಸಾಬೀತಾಗಿದೆ ಎಂದು ಅಭಿಪ್ರಾಯಪಟ್ಟಿತ್ತು. ಅಲ್ಲದೆ, ಕಲಂ 376(B) ಸಾಮೂಹಿಕ ಅತ್ಯಾಚಾರ, 120(B) ಕ್ರಿಮಿನಲ್ ಪಿತೂರಿ, 506 ಬೆದರಿಕೆ, 323 ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು ಹಾಗೂ 34 ಸಾಮಾನ್ಯ ಉದ್ದೇಶ ಎಂಬ ವಿವಿಧ ಕಲಂ ಗಳ ಮೇಲೆ ಶಿಕ್ಷೆ ಪ್ರಕಟಿಸಿತ್ತು.

ಪರಿಣಾಮ ಆರೋಪಿಗಳಾದ ನಸೀರ್ ಖಾನ್, ರುಮಾನ್ ಖಾನ್ ಹಾಗೂ ನಿಶಾಂತ್ ಆಲಮ್ ಎಂಬವರನ್ನು ನ್ಯಾಯಾಲಯದಲ್ಲೇ ಬಂಧಿಸಲಾಗಿತ್ತು. ಆದರೆ ಸಂಸದೆ ನುಸ್ರತ್​ ಜಹಾನ್ ಆಪ್ತರಾಗಿದ್ದ ಪ್ರಮುಖ ಆರೋಪಿಗಳಾದ ಖಾದರ್ ಖಾನ್ ಹಾಗೂ ಮಹಮ್ಮದ್ ಅಲಿಯನ್ನು ಕೋಲ್ಕತ್ತಾ ಸರ್ಕಾರವೇ ದೆಹಲಿಯಲ್ಲಿ ಅವರು ತಲೆಮರೆಸಿಕೊಂಡಿರಲು ಸಹಾಯ ಮಾಡಿತ್ತು ಎಂದೂ ಹೇಳಲಾಗಿತ್ತು. ಸೆಪ್ಟೆಂಬರ್ 30 2016ರಲ್ಲಿ ಅವರನ್ನೂ ಬಂಧಿಸಿದ್ದ ಪೊಲೀಸರು ಕಾನೂನಿನ ಕುಣಿಕೆಗೆ ತಂದಿದ್ದರು.

ಸಿನಿಮಾದಂತೆ ಮೃತ ಸುಜ್ಹೆಟಿ ಜೊರ್ಡನ್​ ಅವರ ಬದುಕಲ್ಲಿ ಹ್ಯಾಪಿ ಎಂಡಿಂಗ್ ಸಿಗದಿದ್ದರೂ ಆಕೆ ಸತ್ತನಂತರವಾದರು ಆರೋಪಿಗಳಿಗೆ ಶಿಕ್ಷೆಯಾಗಿತ್ತು, ನ್ಯಾಯ ದೊರಕಿತ್ತು. ಆದರೆ, ಇದೇ ದೇಶದಲ್ಲಿ ಹೀಗೆ ನ್ಯಾಯಕ್ಕಾಗಿ ಪರದಾಡುತ್ತಿರುವ ಅದೆಷ್ಟೋ ಹೆಣ್ಣುಮಕ್ಕಳ ಆರ್ತನಾದ ನಮಗೆ ಕೇಳಿಸುತ್ತಿಲ್ಲವಷ್ಟೆ. ನ್ಯಾಯಾಲಯದ ಕಟಕಟೆ ಹತ್ತಿದರೆ ಎಲ್ಲಿ ತಮ್ಮ ಚಾರಿತ್ರ್ಯವಧೆಯಾಗುತ್ತೋ ಎನ್ನುವ ಕಾರಣಕ್ಕೆ ಅದೆಷ್ಟೋ ಅತ್ಯಾಚಾರ ಪ್ರಕರಣಗಳು ದಾಖಲಾಗದೆ ಉಳಿದಿವೆ. ಮತ್ತಷ್ಟು ಪ್ರಕರಣಗಳು ಆಯಾ ಹಳ್ಳಿಗಳ ಪಂಚಾಯ್ತಿ ಕಟ್ಟೆಯಲ್ಲೆ ಚಿಲ್ಲರೆ ಕಾಸಿಗೆ ಪೈಸಲ್ ಆಗುತ್ತಿವೆ.

ಸ್ವಾತಂತ್ರ್ಯ ದಕ್ಕಿ 70 ವರ್ಷವಾದರೂ ಈಗಲೂ ಈ ದೇಶದಲ್ಲಿ ಹೆಣ್ಣು ಮಕ್ಕಳು ಪುರುಷ ಪ್ರಧಾನ ಸಮಾಜದಲ್ಲಿ ನಲುಗುತ್ತಲೇ ಇದ್ದಾರೆ. ವಾಸ್ತವದಲ್ಲಿ ತಮ್ಮ ಸಮಾನತೆ ಹಾಗೂ ಸ್ವಾತಂತ್ರ್ಯಕ್ಕಾಗಿ ನಿರಂತರವಾಗಿ ಹೋರಾಡುತ್ತಲೇ ಇರಬೇಕಾದ ಪರಿಸ್ಥಿತಿ ಇದೆ. ಭಾರತದಲ್ಲಿ ದೇವರೆಂದು ಪೂಜಿಸುವ ಹೆಣ್ಣಿಗೆ ಸಮಾನತೆ ಹಾಗೂ ಸ್ವಾತಂತ್ರ್ಯ ದಕ್ಕುವವರೆಗೆ ಇಂತಹ ಯಾವುದೇ ಸ್ವಾತಂತ್ರ್ಯ ದಿನಾಚರಣೆಗೆ ಅರ್ಥವಿರುವುದಿಲ್ಲ.
First published:August 15, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...