ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi ನೇತೃತ್ವದ ಭಾರತ್ ಜೋಡೋ ಯಾತ್ರೆ (Bharat Jodo Yatra) ದೇಶದಾದ್ಯಂತ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿಯ ಅನೇಕ ಫೋಟೋಗಳು ವೈರಲ್ ಆಗಿದ್ದು, ಕೆಲವು ವಿವಾದಗಳನ್ನು ಸಹ ಸೃಷ್ಟಿಸಿವೆ. ಯಾತ್ರೆಯ ಮತ್ತೊಂದು ವಿಶೇಷತೆ ಎಂದರೆ ರಾಹುಲ್ ಗಾಂಧಿಗೆ ಮಾಜಿ ಸೈನಿಕರು ಸಾಥ್ ನೀಡುತ್ತಿರುವುದು. ರಾಯಚೂರಿನಲ್ಲಿ (Raichuru) ಸಾಗಿದ ರಾಹುಲ್ ರ್ಯಾಲಿಯಲ್ಲಿಯೂ ಅನೇಕ ನಿವೃತ್ತ ಯೋಧರು ರಾಹುಲ್ ಗಾಂಧಿ ಜೊತೆ ಪಾದಯಾತ್ರೆ ಕೈಗೊಂಡಿದ್ದರು. ಹಾಗೆಯೇ ಪಂಜಾಬ್ನಲ್ಲಿ (Punjab) ನಡೆದ ಭಾರತ್ ಜೋಡೋ ಯಾತ್ರೆಯಲ್ಲೂ ಮಾಜಿ ಸೈನಿಕರು (Solider) ಪಾಲ್ಗೊಂಡಿದ್ದರು. ಈ ವೇಳೆ ರಾಹುಲ್ ಗಾಂಧಿ ಮತ್ತು ಮಾಜಿ ಸೈನಿಕ ಪರಸ್ಪರ ಸೆಲ್ಯೂಟ್ ಮಾಡಿಕೊಳ್ಳುವ ಫೋಟೋ ವೈರಲ್ ಆಗಿದೆ.
ಫೋಟೋ ಟ್ವೀಟ್ ಮಾಡಿದ ಕಾಂಗ್ರೆಸ್ ಪಡೆ
"ಧೈರ್ಯ, ಸಂಯಮ, ದೇಶಭಕ್ತಿ ಮತ್ತು ಭಾವೋದ್ರೇಕಕ್ಕಾಗಿ ಸೆಲ್ಯೂಟ್..." ಎಂಬ ಶೀರ್ಷಿಕೆಯೊಂದಿಗೆ ಕಾಂಗ್ರೆಸ್ ಅಧಿಕೃತ ಹ್ಯಾಂಡಲ್ ಈ ಫೋಟೋವನ್ನ ಟ್ವೀಟ್ ಮಾಡಿದೆ.
ಪರಸ್ಪರ ಸೆಲ್ಯೂಟ್ ಮಾಡಿಕೊಂಡ ರಾಹುಲ್ ಗಾಂಧಿ ಮತ್ತು ಮಾಜಿ ಸೈನಿಕ
ಪಂಜಾಬ್ನಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯಲ್ಲಿ ಸೇನಾ ಸಮವಸ್ತ್ರ ಮತ್ತು ಪದಕಗಳನ್ನು ಧರಿಸಿದ ವ್ಯಕ್ತಿಯೊಬ್ಬರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ನಮಸ್ಕರಿಸುತ್ತಿರುವ ಮತ್ತು ಅಪ್ಪಿಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪರ-ವಿರೋಧ ಪ್ರತಿಕ್ರಿಯೆಗಳನ್ನು ಪಡೆದುಕೊಳ್ಳುತ್ತಿದೆ.
ಫೋಟೋದಲ್ಲಿ ಮಾಜಿ ಸೈನಿಕರು ಇದ್ದು, ಅವರ ವಸ್ತ್ರದ ಮೇಲೆ ದಿ ಗ್ರೆನೇಡಿಯರ್ಸ್ ರೆಜಿಮೆಂಟ್ನ ರೆಜಿಮೆಂಟಲ್ ಲಾಂಛನ ಕೂಡ ಇದೆ. ಸಮವಸ್ತ್ರದಲ್ಲಿರುವ ಹೆಸರಿನ ಟ್ಯಾಗ್ ಮೂಲಕ ಆ ವ್ಯಕ್ತಿಯ ಹೆಸರು 'ಜತೇಂದರ್ ಸಿಂಗ್' ಎಂದು ತಿಳಿದುಬಂದಿದೆ. ಫೋಟೋದಲ್ಲಿ ಮಾಜಿ ಸೈನಿಕನ ಸೆಲ್ಯೂಟ್ಗೆ ಸ್ಪಂದಿಸಿದ ರಾಹುಲ್ ಅವರೂ ಪ್ರತಿಯಾಗಿ ಸೆಲ್ಯೂಟ್ ಹೊಡೆದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಫೋಟೋ ಬಗ್ಗೆ ಚರ್ಚೆ
ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋಗೆ ಪರ-ವಿರೋಧ ವ್ಯಕ್ತವಾಗುತ್ತಿದೆ. ಕೆಲವರು ಈ ಫೋಟೋದ ಬಗ್ಗೆ ಚಕಾರ ಎತ್ತಿದರೆ, ಇನ್ನೂ ಕೆಲವರು ಪ್ರಧಾನಿಯ ಒಂದು ಘಟನೆಯನ್ನು ನೆನಪಿಸಿ ಪ್ರತ್ಯುತ್ತರ ನೀಡಿದ್ದಾರೆ. ಟ್ವಿಟರ್ ಬಳಕೆದಾರರೊಬ್ಬರು ಮಾಜಿ ಸೈನಿಕರೊಬ್ಬರು ಹೀಗೆ ರಾಜಕೀಯ ಕಾರ್ಯಕ್ರಮಗಳಲ್ಲಿ ಸಮವಸ್ತ್ರವನ್ನು ಧರಿಸಬಾರದು ಎಂದು ಕಾಮೆಂಟ್ ಮಾಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿನ ಟೀಕೆಗೆ ಪ್ರತಿಕ್ರಿಯಿಸಿದ ನಾಗಾಲ್ಯಾಂಡ್ನ ಕಾಂಗ್ರೆಸ್ ಉಪಾಧ್ಯಕ್ಷ ಮತ್ತು ಮಾಜಿ ಸೇನಾಧಿಕಾರಿ ಜಿ ಕೆ ಜಿಮೋನಿ ಟ್ವೀಟ್ ಮಾಡಿ, “ರಾಹುಲ್ ಗಾಂಧಿಯನ್ನು ಭೇಟಿಯಾಗುವಾಗ ಯುದ್ಧ ಸಮವಸ್ತ್ರ ಧರಿಸಿದ ವ್ಯಕ್ತಿಯ ನಡೆ ತಪ್ಪಾಗಿದ್ದರೆ, ಪ್ರಧಾನಿ ಮೋದಿಯವರೂ ಇಂತಹ ತಪ್ಪು ಮಾಡಿದ್ದಾರೆ. ನಕಲಿ ರಾಷ್ಟ್ರೀಯತೆಯ ಈ ಯುಗದಲ್ಲಿ ಉಡುಗೆ ನಿಯಮಾವಳಿಗಳನ್ನು ಯಾರು ಪರಿಗಣಿಸುತ್ತಾರೆ" ಎಂದು ಕಾಮೆಂಟ್ ಮಾಡಿದ್ದಾರೆ.
ಕಳೆದ ವರ್ಷ 2021ರ ದೀಪಾವಳಿಯಂದು ಕಾಶ್ಮೀರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸೇನಾ ಸಿಬ್ಬಂದಿಯೊಂದಿಗೆ ಸಂವಾದ ನಡೆಸುತ್ತಿದ್ದ ವೇಳೆ ಭಾರತೀಯ ಸೇನಾ ಸಮವಸ್ತ್ರವನ್ನು ಧರಿಸಿದ್ದಕ್ಕಾಗಿ ಉತ್ತರ ಪ್ರದೇಶದ ಜಿಲ್ಲಾ ನ್ಯಾಯಾಲಯವು ಕಳೆದ ವರ್ಷ ಪ್ರಧಾನಿ ಕಾರ್ಯಾಲಯಕ್ಕೆ ನೋಟಿಸ್ ನೀಡಿತ್ತು.
ಇದನ್ನೂ ಓದಿ: Bharat Jodo Yatra: ರಾಹುಲ್ ಗಾಂಧಿ ಶಂಕರಾಚಾರ್ಯರ ಅವತಾರವಂತೆ! ರಾಗಾರನ್ನು ಹೊಗಳಿದ ಕೈ ನಾಯಕ
ಜ.17ರಂದು ಮಾಜಿ ಸೈನಿಕರನ್ನು ಭೇಟಿಯಾಗಿದ್ದ ರಾಹುಲ್
ಪಂಜಾಬ್ನ ದಸುಯಾ ಮತ್ತು ಮುಕೇರಿಯನ್ ಪಟ್ಟಣಗಳ ನಡುವೆ ಜನವರಿ 17 ರಂದು ರಾಹುಲ್ ಗಾಂಧಿ ಮಾಜಿ ಸೈನಿಕರ ಗುಂಪನ್ನು ಭೇಟಿಯಾದಾಗ ತೆಗೆದ ಫೋಟೋ ಇದು ಎಂದು ಹೇಳಲಾಗಿದೆ. ಛಾಯಾಚಿತ್ರದಲ್ಲಿರುವ ವ್ಯಕ್ತಿಯ ಗುರುತಿನ ಬಗ್ಗೆ ಸೇನೆಯು ವಿಚಾರಣೆ ನಡೆಸಬೇಕು ಎಂದು ಹಲವು ಟ್ವಿಟರ್ ಬಳಕೆದಾರರು ಒತ್ತಾಯಿಸಿದ್ದಾರೆ.
ಸೆಪ್ಟೆಂಬರ್ 7 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ 3,570 ಕಿಲೋಮೀಟರ್ ವ್ಯಾಪಿಸಿರುವ ಜಾಥಾವು ಜನವರಿ 30 ರೊಳಗೆ ಶ್ರೀನಗರದಲ್ಲಿ ಮುಕ್ತಾಯಗೊಳ್ಳಲಿದ್ದು, ಜಮ್ಮು ಮತ್ತು ಕಾಶ್ಮೀರದ ಬೇಸಿಗೆ ರಾಜಧಾನಿಯಲ್ಲಿ ರಾಹಲ್ ಗಾಂಧಿ ಅವರು ರಾಷ್ಟ್ರಧ್ವಜಾರೋಹಣ ಮಾಡಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ