ನವ ದೆಹಲಿ (ಜುಲೈ 19); ರಾಜಸ್ಥಾನದ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು ಬಂಡಾಯ ನಾಯಕ ಸಚಿನ್ ಪೈಲಟ್ ಹಾಗೂ ಅವರ ಬೆಂಬಲಿತ ಶಾಸಕರು ಚಿತಾವಣೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದ ಕಾಂಗ್ರೆಸ್ ಅವರನ್ನು ಪೈಲಟ್ ಅವರನ್ನು ಡಿಸಿಎಂ ಸ್ಥಾನದಿಂದ ಕೆಳಗಿಳಿಸಿತ್ತು. ಅಲ್ಲದೆ, ಇದಕ್ಕೆ ಸಾಕ್ಷಿಯಾಗಿ ಮೂರು ಆಡಿಯೋಗಳೂ ಬಿಡುಗಡೆಯಾಗಿದ್ದವು. ಇದೀಗ ಈ ಆಡಿಯೋಗೆ ಸಂಬಂಧಿಸಿದಂತೆ ಫೋನ್ ಟ್ಯಾಪಿಂಗ್ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವಾಲಯ ರಾಜಸ್ಥಾನದ ಮುಖ್ಯಕಾರ್ಯದರ್ಶಿಯಿಂದ ವರದಿ ಕೇಳಿದೆ.
ಈ ಆಡಿಯೋದಲ್ಲಿ ಕೇಂದ್ರ ಸಚಿವ ಹಾಗೂ ಬಿಜೆಪಿ ಮುಖಂಡ ಗಜೇಂದ್ರ ಶೆಖಾವತ್ ಜೊತೆ ಕೈಪಾಳಯದ ರೆಬೆಲ್ ಶಾಸಕರು ಮಾತನಾಡಿರುವುದು ಖಚಿತವಾಗಿತ್ತು. ಹೀಗಾಗಿ ಈ ಆಡಿಯೋ ಲೀಕ್ ಆದ ಬೆನ್ನಲ್ಲೇ ಕಾಂಗ್ರೆಸ್ ಪಕ್ಷ ಸಚಿನ್ ಪೈಲಟ್ ಬಣದ ಜೊತೆ ಗುರುತಿಸಿಕೊಂಡಿರುವ ಭನ್ವರ್ ಲಾಲ್ ಶರ್ಮಾ ಮತ್ತು ವಿಶ್ವೇಂದ್ರ ಸಿಂಗ್ ಎಂಬ ಇಬ್ಬರು ಶಾಸಕರನ್ನು ಅಮಾನತುಗೊಳಿಸಿತ್ತು.
ಈ ಫೋನ್ ಟ್ಯಾಪಿಂಗ್ ಪ್ರಕರಣ ಇದೀಗ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ಈ ಕುರಿತು ಕೆಂಡಕಾರಿರುವ ಬಿಜೆಪಿ ನಾಯಕರು, “ರಾಜಕಾರಣಿಗಳ ಫೋನ್ಗಳನ್ನು ಟ್ಯಾಪ್ ಮಾಡುವುದು ’ಅಸಂವಿಧಾನಿಕ’ ವಿಧಾನ. ಹೀಗಾಗಿ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು” ಎಂದು ಒತ್ತಾಯಿಸಿದ್ದಾರೆ.
ಬಿಜೆಪಿ ನಾಯಕರ ಒತ್ತಾಯದ ಬೆನ್ನಿಗೆ ಕೇಂದ್ರ ಗೃಹ ಸಚಿವಾಲಯ ಫೋನ್ ಟ್ಯಾಪಿಂಗ್ ಪ್ರಕರಣಕ್ಕೆ ಸಂಬಂಧಿಸಿದ ಸಂಪೂರ್ಣ ವರದಿಯನ್ನು ಶೀಘ್ರದಲ್ಲೇ ಕಳುಹಿಸಿಕೊಡುವಂತೆ ರಾಜಸ್ಥಾನ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿರುವುದು ಇದೀಗ ಅಶೋಕ್ ಗೆಹ್ಲೋಟ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ ಎನ್ನಲಾಗುತ್ತಿದೆ.
ಈ ನಡುವೆ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು ಪಿತೂರಿ ನಡೆಸಿರುವ ಬಿಜೆಪಿ ಮುಖಂಡ ಗಜೇಂದ್ರ ಶೆಖಾವತ್ ವಿರುದ್ಧ ಕಾಂಗ್ರೆಸ್ ಪ್ರಕರಣ ದಾಖಲಿಸಿದೆ. ಅಲ್ಲದೆ, ಹಲವಾರು ಕಾಂಗ್ರೆಸ್ ನಾಯಕರು ಶೇಖಾವತ್ ಅವರನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ. ಆದರೆ, ಈ ಕುರಿತು ಸ್ಪಷ್ಟನೆ ನೀಡಿರುವ ಶೇಖಾವತ್, "ಆ ಆಡಿಯೋದಲ್ಲಿರುವ ದ್ವನಿ ನನ್ನದಲ್ಲ. ಕಾಂಗ್ರೆಸ್ ನಾಯಕರು ನಕಲಿ ಆಡಿಯೋವನ್ನು ಸೃಷ್ಟಿಸಿ ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಹೀಗಾಗಿ ಈ ಪ್ರಕರಣದ ಸಂಬಂಧ ನಾನು ಯಾವುದೇ ತನಿಖೆಗೂ ಸಿದ್ಧ" ಎಂದಿದ್ದಾರೆ.
ಇದನ್ನೂ ಓದಿ : ರಾಜಸ್ಥಾನ ರಾಜಕೀಯ ನಾಟಕ; ಆಡಿಯೋ ಲೀಕ್ ಬೆನ್ನಲ್ಲೇ ಇಬ್ಬರು ಕಾಂಗ್ರೆಸ್ ಶಾಸಕರ ಅಮಾನತು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ