news18-kannada Updated:August 25, 2020, 9:03 AM IST
ಸಾಂದರ್ಭಿಕ ಚಿತ್ರ
ನವದೆಹಲಿ (ಆ. 25): ಜೂನ್ ಮತ್ತು ಜುಲೈ ತಿಂಗಳಲ್ಲಿ ನಿರಂತರವಾಗಿ ಇಂಧನ ಬೆಲೆ ಏರಿಸಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈಗ ಮತ್ತೆ ಅದೇ ಚಾಳಿ ಮುಂದುವರೆಸಿದೆ. ಕಳೆದ ಹತ್ತು ದಿನಗಳಲ್ಲಿ ಒಂಭತ್ತು ಬಾರಿ ಪೆಟ್ರೋಲ್ ಬೆಲೆಯನ್ನು ನಿರಂತರವಾಗಿ ಏರಿಕೆ ಮಾಡಿದೆ.
ಆಗಸ್ಟ್ 16ರಿಂದ ಪೆಟ್ರೋಲ್ ಬೆಲೆ ಏರಿಕೆ ಆರಂಭವಾಗಿದೆ. ಅಂದಿನಿಂದ ಆಗಸ್ಟ್ 19ರ ಹೊರತಾಗಿ ಆಗಸ್ಟ್ 25ರವರೆಗೆ ಪ್ರತಿದಿನವೂ ಪೆಟ್ರೋಲ್ ದರ ಏರಿಸಲಾಗಿದೆ. ಆಗಸ್ಟ್ 25ರಂದು ಮತ್ತೆ ಪ್ರತಿ ಲೀಟರ್ ಪೆಟ್ರೋಲ್ ಮೇಲೆ 11 ಪೈಸೆಯನ್ನು ಹೆಚ್ಚಳ ಮಾಡಲಾಗಿದೆ. ಇದರಿಂದಾಗಿ ಒಟ್ಟು 10 ದಿನಗಳಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಮೇಲೆ 1.30 ಪೈಸೆಯನ್ನು ಏರಿಕೆ ಮಾಡಿದಂತಾಗಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರೂಡ್ ಆಯಿಲ್ ಬೆಲೆ ಗಣನೀಯವಾಗಿ ಕಡಿಮೆ ಆಗುತ್ತಿದ್ದರೂ, ಮಹಾಕ್ರೂರಿ ಕೊರೋನಾ ಮತ್ತು ಲಾಕ್ಡೌನ್ ಕಾರಣಗಳಿಂದ ಜನ ಸಾಮಾನ್ಯರು ಎಷ್ಟೇ ಕಷ್ಟದಲ್ಲಿದ್ದರೂ ಹಾಗೂ ಕಾಂಗ್ರೆಸ್ ನಾಯಕರು ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಗೆ ವ್ಯಾಪಕವಾದ ವಿರೋಧ ವ್ಯಕ್ತಪಡಿಸುತ್ತಿದ್ದರೂ ಇದ್ಯಾವುದನ್ನೂ ಪರಿಗಣಿಸದ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪೆಟ್ರೊಲ್ ಬೆಲೆಯನ್ನು ಏರಿಸುತ್ತಲೇ ಇದೆ.
ಇದನ್ನು ಓದಿ: ಅಂತರರಾಜ್ಯ ಪ್ರಯಾಣ ಇನ್ನು ಸರಾಗ; ಕ್ವಾರಂಟೈನ್ ಸೇರಿ ಎಲ್ಲಾ ನಿಯಮಗಳನ್ನು ರದ್ದುಗೊಳಿಸಿದ ಸರ್ಕಾರ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಹೆಚ್ಚಳವಾದಾಗ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಹೆಚ್ಚಿಸುವುದು, ಹಾಗೆಯೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಕಡಿಮೆಯಾದಾಗ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಇಳಿಸುವುದು ಸಾಮಾನ್ಯವಾದ ಸಂಗತಿ. ಬಹಳ ಹಿಂದಿನಿಂದಲೂ ಇದು ನಡೆದುಕೊಂಡು ಬಂದಿರುವ ರೀತಿ. ಆದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ಸತ್ಸಂಪ್ರದಾಯವನ್ನು ಮರೆತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಗಣನೀಯವಾಗಿ ಕಡಿಮೆ ಆಗುತ್ತಿದ್ದರೂ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ನಿರಂತರವಾಗಿ ಹೆಚ್ಚಳ ಮಾಡುತ್ತಲೇ ಇದೆ.
ಜೂನ್ ತಿಂಗಳಲ್ಲಿ ಬರೊಬ್ಬರಿ 23 ದಿನ ನಿರಂತರವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಏರಿಕೆ ಮಾಡಲಾಗಿತ್ತು. ನಂತರ ಜುಲೈ 7ರಂದು ಪ್ರತಿ ಲೀಟರ್ ಡೀಸೆಲ್ ಗೆ 25 ಪೈಸೆ, ಜುಲೈ 12ರಂದು 16 ಪೈಸೆ, ಜುಲೈ 13ರಂದು 11 ಪೈಸೆ, ಜುಲೈ 15ರಂದು 13 ಪೈಸೆ, ಜುಲೈ 17ರಂದು 17 ಪೈಸೆ, ಜುಲೈ 18ರಂದು ಮತ್ತೆ 17 ಪೈಸೆ, ಜುಲೈ 20ರಂದು 12 ಪೈಸೆ ಹಾಗೂ ಜುಲೈ 26ರಂದು 15 ಪೈಸೆ ಹೆಚ್ಚಳ ಮಾಡಿತ್ತು. ಈಗ ಆಗಸ್ಟ್ ನಲ್ಲಿ ಮತ್ತೆ ಇಂಧನ ಬೆಲೆ ಏರಿಸಿ ಜನ ಸಾಮಾನ್ಯೆರ ಜೇಬಿಗೆ ಕೊಳ್ಳಿ ಇಡುತ್ತಿದೆ.
Published by:
HR Ramesh
First published:
August 25, 2020, 9:03 AM IST