Fuel Price Today (ಬೆಂಗಳೂರು ಜುಲೈ 09); ದೇಶದಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಇಂದು ಮತ್ತೊಮ್ಮೆ ಏರಿಕೆಯಾಗಿದೆ. ಪೆಟ್ರೋಲ್ ಮತ್ತು ಡೀಸೆಲ್‌ನ ಪಂಪ್ ಬೆಲೆಯನ್ನು ಜುಲೈ 9 ರಂದು ಸರ್ಕಾರಿ ತೈಲ ಕಂಪನಿಗಳು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಕೊಂಡೊಯ್ದಿವೆ. ಭಾರತದ ಅನೇಕ ನಗರಗಳಲ್ಲಿ ಈಗಾಗಲೇ ಪೆಟ್ರೋಲ್ ಬೆಲೆ 1 ಲೀಟರ್‌ಗೆ 100ರ ಗಡಿ ದಾಟಿದೆ. ಆದರೆ, ರಾಜಸ್ಥಾನದ ಗಂಗಾನಗರದಲ್ಲಿ ಭಾರತದಲ್ಲಿ ಇದುವರೆಗೆ ಪೆಟ್ರೋಲ್ ಕಂಡ ಗರಿಷ್ಠ ಬೆಲೆಯನ್ನು ದಾಖಲಿಸಿದೆ. ಏಕೆಂದರೆ ಈ ನಗರದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಅನ್ನು 112 ರೂ.ಗೆ ಮಾರಾಟ ಮಾಡಲಾಗುತ್ತಿದೆ ಚೆನ್ನೈ, ದೆಹಲಿ, ಕೋಲ್ಕತಾ, ಮುಂಬೈ ಮತ್ತು ಬೆಂಗಳೂರಿನ ನಾಲ್ಕು ಪ್ರಮುಖ ಮೆಟ್ರೋ ನಗರಗಳಲ್ಲಿ ಈಗಾಗಲೇ ಪೆಟ್ರೋಲ್ 100ರ ಗಡಿ ದಾಟಿದೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ವೆಬ್‌ಸೈಟ್‌ನ ಮಾಹಿತಿಯ ಪ್ರಕಾರ, ಮಹಾನಗರಗಳಲ್ಲಿ ಪೆಟ್ರೋಲ್ ಬೆಲೆ 31-39 ಪೈಸೆ ಏರಿಕೆಯಾಗಿದೆ, ಆದರೆ ಡೀಸೆಲ್ ಬೆಲೆ ಇಂದು 9-15 ಪೈಸೆ ಏರಿಕೆಯಾಗಿದೆ.
ಮುಂಬಯಿಯಲ್ಲಿ ಇಂಧನದ ಬೆಲೆ ಪ್ರತಿ ಲೀಟರ್ ಪೆಟ್ರೋಲ್ಗೆ 106.59 ರೂ.ಗೆ ಏರಿದೆ. ಇದು ನಿನ್ನೆಯ ಬೆಲೆಯಿಂದ 34 ಪೈಸೆಗಳ ಏರಿಕೆಯಾಗಿದೆ. ದೆಹಲಿ ಮತ್ತು ಕೋಲ್ಕತ್ತಾ ಇತ್ತೀಚಿಗೆ 100 ಕ್ಲಬ್ ಸೇರಿದ್ದು, ಪೆಟ್ರೋಲ್ ಬೆಲೆ ಕ್ರಮವಾಗಿ 100.56 ಮತ್ತು 100.62 ರೂ. ಇದೆ. ಇನ್ನೂ ದೆಹಲಿಯ ಪೆಟ್ರೋಲ್ ಬೆಲೆ ಸಹ 35 ಪೈಸೆ ಹೆಚ್ಚಾಗಿದೆ. ಚೆನ್ನೈ ನಗರಕ್ಕೆ ಪ್ರಸ್ತುತ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 101.37 ರೂ. ಇದು ಹಿಂದಿನ ದಿನಕ್ಕಿಂತ 31 ಪೈಸೆ ಹೆಚ್ಚಳವಾಗಿದೆ. ಬೆಂಗಳೂರು ಪೆಟ್ರೋಲ್ ದರವನ್ನು ಪ್ರತಿ ಲೀಟರ್‌ಗೆ 103.93 ರೂ. ಇದು ಪೆಟ್ರೋಲ್ ದರದಲ್ಲಿ 37 ಪೈಸೆ ಹೆಚ್ಚಳವಾಗಿದೆ.
ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ, ತೆಲಂಗಾಣ, ರಾಜಸ್ಥಾನ, ಒರಿಸ್ಸಾ, ಕೇರಳ, ಆಂಧ್ರಪ್ರದೇಶ, ಲಡಾಖ್, ಬಿಹಾರ, ಜಮ್ಮು ಕಾಶ್ಮೀರದಲ್ಲಿ 1 ಲೀಟರ್ ಪೆಟ್ರೋಲ್ ಬೆಲೆ 103.93 ರೂ. ದಾಟಿದೆ. ಕರ್ನಾಟಕದ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಪೆಟ್ರೋಲ್ ಬೆಲೆ 103 ರೂ. ದಾಟಿದೆ. ಬೆಂಗಳೂರಿನಲ್ಲಿ 1 ಲೀಟರ್ ಪೆಟ್ರೋಲ್ಗೆ 103 ರೂ. ಆಗಿದೆ. ಇಂದು ಪೆಟ್ರೋಲ್ ಬೆಲೆ ಮತ್ತೆ ಏರಿಕೆಯಾಗಿದ್ದು, ಡೀಸೆಲ್ ಬೆಲೆಯಲ್ಲಿ ಯಾವುದೇ ಏರಿಕೆಯಾಗಿಲ್ಲ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಹೆಚ್ಚಳವಾದಾಗ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಹೆಚ್ಚಿಸುವುದು, ಹಾಗೆಯೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಕಡಿಮೆಯಾದಾಗ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಇಳಿಸುವುದು ಸಾಮಾನ್ಯವಾದ ಸಂಗತಿ.
ಆದರೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೊರೋನಾ ಕಾರಣದಿಂದಾಗಿ ಕಳೆದ ಒಂದು ವರ್ಷದಿಂದ ತೈಲ ಬೆಲೆಯನ್ನು ಸಾಕಷ್ಟು ಇಳಿಸಲಾಗಿತ್ತು. ಆದರೆ, ಕೇಂದ್ರ ಸರ್ಕಾರ ಈ ಲಾಭವನ್ನು ಜನರಿಗೆ ನೀಡದೆ ಪ್ರತಿದಿನ ತೈಲದ ಮೇಲೆ ತೆರಿಗೆಯನ್ನು ವಿಧಿಸುತ್ತಲೇ ಇದೆ. ಪರಿಣಾಮ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾದರೆ ಸಹಜವಾಗಿ ನಿತ್ಯ ಬಳಕೆಯ ಬೇರೆಲ್ಲಾ ವಸ್ತುಗಳ ಬೆಲೆ ಹೆಚ್ಚಳವಾಗುತ್ತದೆ. ಇದರಿಂದ ಜನಸಾಮಾನ್ಯರಿಗೆ ಮತ್ತಷ್ಟು ತೊಂದರೆಯಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ