Petrol Price: 23 ದಿನಗಳಿಂದ ಏರುತ್ತಲೇ ಇದೆ ಪೆಟ್ರೋಲ್-ಡೀಸೆಲ್ ದರ; ಯಾವ ನಗರದಲ್ಲಿ ಎಷ್ಟು ಬೆಲೆ?

Petrol Diesel Rate: ಕಳೆದ 23 ದಿನಗಳಿಂದ ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಾಗುತ್ತಿದ್ದು ಈವರೆಗೆ ಪ್ರತಿ ಲೀಟರ್ ಪೆಟ್ರೋಲ್ ಗೆ 9.17 ರೂ. ಹಾಗೂ ಪ್ರತಿ ಲೀಟರ್ ಡೀಸೆಲ್ ಗೆ  11.14 ರೂ. ಹೆಚ್ಚಳ ಮಾಡಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನವದೆಹಲಿ (ಜೂ. 29): ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಕಡಿಮೆಯಾಗುತ್ತಿದ್ದರೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸರ್ಕಾರ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಮಾತ್ರ ಕಡಿಮೆ ಮಾಡುತ್ತಿಲ್ಲ. ಬದಲಿಗೆ ಭಾನುವಾರ ಒಂದು ದಿನ‌ ಹೊರತುಪಡಿಸಿ ಕಳೆದ 23 ದಿನಗಳಿಂದ ನಿರಂತರವಾಗಿ ಬೆಲೆಯನ್ನು ಏರಿಸುತ್ತಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಹೆಚ್ಚಳವಾದಾಗ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಿಸುವುದು, ಹಾಗೆಯೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಕಡಿಮೆಯಾದಾಗ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಸುವುದು ಸಾಮಾನ್ಯವಾದ ಸಂಗತಿ. ಬಹಳ‌ ಹಿಂದಿನಿಂದಲೂ ನಡೆದುಕೊಂಡ ಬಂದಿರುವ ರೀತಿ. ಆದರೆ ನರೇಂದ್ರ ಮೋದಿ ಅವರ ಸರ್ಕಾರ ಈ‌ ಸತ್ಸಂಪ್ರದಾಯವನ್ನು ಮರೆತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಕಡಿಮೆ ಆಗುತ್ತಿದ್ದರೂ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕಳೆದ 23 ದಿನಗಳಿಂದ ನಿರಂತರವಾಗಿ ಹೆಚ್ಚಳ ಮಾಡುತ್ತಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ 41.50 ಡಾಲರ್ ಇದೆ. ಒಂದು ಡಾಲರ್​ಗೆ ರೂ. ಮೌಲ್ಯ 75.66ರಷ್ಟಿದೆ. ಆದರೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಪ್ರತಿದಿನ ಏರಿಸಲಾಗುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ಬೆಲೆ ಕಡಿಮೆ‌ ಇರುವುದರಿಂದ ಹಾಗೂ ಕೊರೊನಾ ಮತ್ತು ಲಾಕ್ಡೌನ್ ನಂತಹ‌‌‌ ಕಷ್ಟದ ಸಂದರ್ಭ‌ ಇದಾಗಿರುವುದರಿಂದ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು‌ ಡೀಸೆಲ್ ಬೆಲೆ‌ಯನ್ನು‌ ಇಳಿಕೆ ಮಾಡಬೇಕು. ಜನರಿಂದ ಹಣ ಸುಲಿಯಲು ಇದು ಸೂಕ್ತ ಕಾಲವಲ್ಲ ಎಂದು ಕಾಂಗ್ರೆಸ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ. ಆದರೂ‌ ಪ್ರತಿಪಕ್ಷಗಳ ಮಾತಿಗೆ ಕಿಮ್ಮತ್ತಿನ ಬೆಲೆ ಕೂಡ ನೀಡದೆ ಮೋದಿ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು‌ ಏರಿಸುತ್ತಲೇ ಇದೆ.

ಇದನ್ನೂ ಓದಿ: Vande Bharat Mission: ಜುಲೈ 3ರಿಂದ ವಂದೇ ಭಾರತ್​ ಮಿಷನ್​ 4ನೇ ಹಂತ ಶುರು; 17 ದೇಶಗಳ ಭಾರತೀಯರ ರಕ್ಷಣೆಗೆ ಸಿದ್ಧತೆ

ಕೇಂದ್ರ ಸರ್ಕಾರ ಅಬಕಾರಿ ಸುಂಕವನ್ನು ಪೆಟ್ರೋಲ್‌ಗೆ 32.98 ರೂಪಾಯಿ ಮತ್ತು ಡೀಸೆಲ್‌ಗೆ 31.83 ರೂಪಾಯಿ ಹಾಗೂ ಪೆಟ್ರೋಲ್ ಮೇಲಿನ ಡೀಲರ್ ಕಮಿಷನ್ 3.60 ರೂಪಾಯಿ ಮತ್ತು ಡೀಸೆಲ್ ಮೇಲಿನ ಡೀಲರ್ ಕಮಿಷನ್ 2.53 ರೂಪಾಯಿ ವಿಧಿಸುತ್ತಿದೆ‌. ಅಂದರೆ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟದಲ್ಲಿ ನೇರವಾಗಿ ಅರ್ಧ ಹಣ ಕೇಂದ್ರ ಸರ್ಕಾರದ ತಿಜೋರಿ ಸೇರಲಿದೆ‌.

ಕಳೆದ 23 ದಿನಗಳಿಂದ ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಾಗುತ್ತಿದ್ದು ಈವರೆಗೆ ಪ್ರತಿ ಲೀಟರ್ ಪೆಟ್ರೋಲ್ ಗೆ 9.17 ರೂಪಾಯಿ ಹಾಗೂ ಪ್ರತಿ ಲೀಟರ್ ಡೀಸೆಲ್ ಗೆ  11.14 ರೂಪಾಯಿ ಹೆಚ್ಚಳ ಮಾಡಲಾಗಿದೆ. ಸೋಮವಾರ ಪ್ರತಿ ಲೀಟರ್ ಪೆಟ್ರೋಲ್ ಗೆ 5 ಪೈಸೆ ಮತ್ತು ಪ್ರತಿ ಲೀಟರ್ ಡೀಸೆಲ್ ಗೆ 13 ಪೈಸೆ ಹೆಚ್ಚಿಸಲಾಗಿದೆ. ದೇಶದ ವಿವಿದ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಈ ರೀತಿ ಇವೆ.

ಇದನ್ನೂ ಓದಿ: Boycott China: ಚೀನಾ ಹೂಡಿಕೆ ವಿರೋಧಿಸಿ ಜೊಮ್ಯಾಟೋ ಟಿ-ಶರ್ಟ್​ ಸುಟ್ಟು ಪ್ರತಿಭಟನೆ

ವಿವಿಧ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ
ಭೂಪಾಲ್-  ಪೆಟ್ರೋಲ್ 88.08ರೂ., ಡೀಸೆಲ್ 79.94 ರೂ.
ಮುಂಬೈ- ಪೆಟ್ರೋಲ್ 87.19 ರೂ., ಡೀಸೆಲ್ 78.84 ರೂ.
ಚೆನ್ನೈ- ಪೆಟ್ರೋಲ್ 83.64 ರೂ., ಡೀಸೆಲ್ 77.74 ರೂ.
ಪಾಟ್ನಾ- ಪೆಟ್ರೋಲ್ 83.32 ರೂ., ಡೀಸೆಲ್ 77.43 ರೂ.
ಬೆಂಗಳೂರು- ಪೆಟ್ರೋಲ್ 83.02 ರೂ., ಡೀಸೆಲ್ 76.18 ರೂ.
ಕೋಲ್ಕತ್ತಾ- ಪೆಟ್ರೋಲ್  82.10ರೂ., ಡೀಸೆಲ್ 75.65 ರೂ.
ಲಕ್ನೊ- ಪೆಟ್ರೋಲ್ 80.99ರೂ., ಡೀಸೆಲ್ 72.50 ರೂ.
ನೋಯ್ಡಾ- ಪೆಟ್ರೋಲ್ 80.97ರೂ., ಡೀಸೆಲ್ 72.46 ರೂ.
ದೆಹಲಿ- ಪೆಟ್ರೋಲ್ 80.43 ರೂ., ಡೀಸೆಲ್ 80.53 ರೂ.
ರಾಂಚಿ- ಪೆಟ್ರೋಲ್ 80.31 ರೂ., ಡೀಸೆಲ್ 76.52ರೂ.
ಫರೀದಾಬಾದ್- ಪೆಟ್ರೋಲ್ 78.88ರೂ., ಡೀಸೆಲ್ 73.13 ರೂ.
ಗುರುಗ್ರಾಮ- ಪೆಟ್ರೋಲ್ 78.64ರೂ., ಡೀಸೆಲ್ 72.66 ರೂ.
First published: