ಹೊಸ ದಾಖಲೆಯ ಮಟ್ಟಕ್ಕೇರಿದ ಡೀಸೆಲ್ ಬೆಲೆ


Updated:August 27, 2018, 5:07 PM IST
ಹೊಸ ದಾಖಲೆಯ ಮಟ್ಟಕ್ಕೇರಿದ ಡೀಸೆಲ್ ಬೆಲೆ

Updated: August 27, 2018, 5:07 PM IST
- ನ್ಯೂಸ್18 ಕನ್ನಡ

ನವದೆಹಲಿ(ಆ. 27): ರೂಪಾಯಿ ಮೌಲ್ಯ ಕುಸಿತಗೊಂಡ ಬೆನ್ನಲ್ಲೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಗಗನಕ್ಕೇರಿವೆ. ಸರಕಾರಿ ಸ್ವಾಮ್ಯದ ತೈಲ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಕ್ರಮವಾಗಿ 13 ಮತ್ತು 14 ಪೈಸೆಗಳಷ್ಟು ಏರಿಕೆ ಮಾಡಿವೆ. ಡೀಸೆಲ್ ಬೆಲೆಯಂತೂ ದಾಖಲೆಯ ಮಟ್ಟಕ್ಕೆ ಏರಿದೆ. ಒಂದು ಲೀಟರ್ ಡೀಸೆಲ್ ಈಗ 69.46 ರೂಪಾಯಿಗೆ ಏರಿದೆ. ಇದು ಇತಿಹಾಸದಲ್ಲೇ ಗರಿಷ್ಠ ಡೀಸೆಲ್ ಬೆಲೆ. ಮೇ 29ರಂದು ಡೀಸೆಲ್ ಬೆಲೆ 69.31 ರೂ ಇದ್ದದ್ದೇ ಇದೂವರೆಗಿನ ಗರಿಷ್ಠ ದರವಾಗಿತ್ತು. ಇನ್ನು, ಪೆಟ್ರೋಲ್ ಬೆಲೆ ಕೂಡ 78 ರೂಪಾಯಿ ದರದ ಗಡಿ ಸಮೀಪ ಬಂದಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 80 ರೂ ಗಡಿ ದಾಟಿಯಾಗಿದೆ. ಡೀಸೆಲ್ ಬೆಲೆ ಕೂಡ ಬೆಂಗಳೂರಿನಲ್ಲಿ 71 ರೂ ಗಡಿ ದಾಟಿದೆ.

ಎನ್​ಡಿಎ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸಬ್ಸಿಡಿಗೆ ಬ್ರೇಕ್ ಬಿದ್ದಿದೆ. ಅದರ ಜೊತೆಗೆ ಪೆಟ್ರೋಲಿಯಂ ಉತ್ಪನ್ನಗಳಿಗೆ 9 ಬಾರಿ ಅಬಕಾರಿ ಸುಂಕಗಳನ್ನ ಏರಿಸಲಾಗಿದೆ.

ಕೇಂದ್ರ ಸರಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲೆ 21.48 ರೂ ಮತ್ತು 17.33 ರೂ ಅಬಕಾರಿ ಸುಂಕಗಳನ್ನ ವಿಧಿಸುತ್ತಿದೆ. ಇದರ ಜೊತೆಗೆ ರಾಜ್ಯ ಸರಕಾರಗಳು ಪ್ರತ್ಯೇಕವಾಗಿ ವ್ಯಾಟ್ (ಮೌಲ್ಯವರ್ಧಿತ ತೆರಿಗೆ) ಹೇರುತ್ತವೆ. ಈ ವ್ಯಾಟ್ ಆಧಾರದ ಮೇಲೆ ಪೆಟ್ರೋಲ್ ಬೆಲೆಗಳು ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸವಾಗುತ್ತದೆ. ದೆಹಲಿಯಲ್ಲಿ ಕಡಿಮೆ ವ್ಯಾಟ್ ಇರುವುದರಿಂದ ಬೇರೆ ನಗರಗಳಿಗೆ ಹೋಲಿಸಿದರೆ ಪೆಟ್ರೋಲ್, ಡೀಸೆಲ್ ಬೆಲೆ ಅಲ್ಲಿ ತುಸು ಕಡಿಮೆ ಇರುತ್ತದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಮೇಲೆ ಶೇ. 30 ಹಾಗೂ ಡೀಸೆಲ್ ಮೇಲೆ ಶೇ. 19ರಷ್ಟು ವ್ಯಾಟ್ ವಿಧಿಸಲಾಗುತ್ತದೆ. ಆದರೆ, ಪೆಟ್ರೋಲ್ ಡೀಲರ್ ನೀಡಬೇಕಿದ್ದ 5% ಎಂಟ್ರಿ ಟ್ಯಾಕ್ಸನ್ನ ಕರ್ನಾಟಕ ಹಿಂಪಡೆದುಕೊಂಡಿದೆ. ಇದರಿಂದ ಅನೇಕ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಪೆಟ್ರೋಲ್ ದರ ತುಸು ಕಡಿಮೆ ಮುಂಬೈನಲ್ಲಿ ಪೆಟ್ರೋಲ್ ಮೇಲೆ 39.12% ವ್ಯಾಟ್ ವಿಧಿಸಲಾಗುತ್ತದೆ. ಹೀಗಾಗಿ, ಮುಂಬೈನಲ್ಲಿ ಪೆಟ್ರೋಲ್ ಬೆಲೆ ಬೆಂಗಳೂರಿಗಿಂತ ದುಬಾರಿಯಾಗಿರುತ್ತದೆ. ದಕ್ಷಿಣದ ಬೇರೆ ಪ್ರಮುಖ ನಗರಗಳಲ್ಲಿ ಬೆಂಗಳೂರಿಗಿಂತ ಹೆಚ್ಚು ಪೆಟ್ರೋಲ್ ದರಗಳಿವೆ.

ಬೆಂಗಳೂರಿನಲ್ಲಿ ಎಷ್ಟಿದೆ ಇವತ್ತಿನ ಪೆಟ್ರೋಲ್, ಡೀಸೆಲ್ ದರ?
ಪೆಟ್ರೋಲ್: 80.49 ರೂ
ಡೀಸೆಲ್: 71.73 ರೂ
First published:August 27, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ