ನವದೆಹಲಿ(ಜೂ.08): ಹಿರಿಯ ಬಾಲಿವುಡ್ ನಟಿ ಹಾಗೂ ಮಥುರಾದ ಬಿಜೆಪಿ ಸಂಸದೆ ಹೇಮಾ ಮಾಲಿನಿ ಕೊರೋನಾ ನಿಯಂತ್ರಣಕ್ಕಾಗಿ ಒಂದು ಸಲಹೆ ನೀಡಿದ್ದಾರೆ. ಮನೆಯಲ್ಲಿ ಪ್ರತಿದಿನ ಹೋಮ- ಹವನ ಮಾಡುವುದರಿಂದ ಮನುಷ್ಯ ಕೊರೋನಾ ವೈರಸ್ ಹಾಗೂ ಇನ್ನಿತರೆ ರೋಗಗಳಿಂದ ದೂರ ಇರಬಹುದು ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅವರು ವಿಶ್ವ ಪರಿಸರ ದಿನದಂದು ವಿಡಿಯೋವೊಂದನ್ನು ಹಂಚಿಕೊಂಡು ಪ್ರತಿದಿನ ಮನೆಯಲ್ಲಿ ಹವನ ಮಾಡುವಂತೆ ಜನರಲ್ಲಿ ಮನವಿ ಮಾಡಿದ್ದರು. ಪ್ರಕೃತಿಯನ್ನು ಶುದ್ದೀಕರಿಸುವುದರ, ಜೊತೆಗೆ ಕೋವಿಡ್-19 ನಂತಹ ಸಾಂಕ್ರಾಮಿಕ ರೋಗಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.
ಇಷ್ಟೇ ಅಲ್ಲದೇ, ಹೇಮಾಮಾಲಿನಿ ಹೋಮ- ಹವನಕ್ಕೆ ಯಾವೆಲ್ಲಾ ಪದಾರ್ಥಗಳನ್ನು ಬಳಸಲಾಗುತ್ತದೆ ಎಂಬುದರ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ಬೇವಿನ ಎಲೆ, ತುಪ್ಪ, ಲವಂಗ, ಸಾಸಿವೆ, ಉಪ್ಪು ಮತ್ತು ಧೂಪ-ಇಷ್ಟು ಸಾಮಾಗ್ರಿಗಳನ್ನು ಹವನಕ್ಕೆ ಬಳಸುವಂತೆ ನಟಿ ಸಲಹೆ ನೀಡಿದ್ದಾರೆ. ನಾನು ಹಲವಾರು ವರ್ಷಗಳಿಂದ ಪೂಜೆಯಾದ ಬಳಿಕ ಹವನವನ್ನು ಮಾಡುತ್ತಿದ್ದೇನೆ. ಜೊತೆಗೆ ಈ ಕೊರೋನಾ ವೈರಸ್ ಹರಡಲು ಶುರುವಾದಾಗಿನಿಂದ ಮನೆಯಲ್ಲಿ ದಿನಕ್ಕೆ ಎರಡು ಬಾರಿ ಹವನ ಮಾಡುತ್ತಿದ್ದೇನೆ. ಇದು ಪರಿಸರವನ್ನು ಸ್ವಚ್ಛವಾಗಿರಿಸುವುದು ಮಾತ್ರವಲ್ಲದೇ, ಶುದ್ಧತೆಯ ಪ್ರಜ್ಞೆಯನ್ನೂ ಸಹ ನೀಡುತ್ತದೆ. ಜೊತೆಗೆ ಕೊರೋನಾ ವೈರಸ್ನಂತಹ ಸಾಂಕ್ರಾಮಿಕ ರೋಗಗಳಿಂದ ನಮ್ಮನ್ನು ದೂರವಿಡುತ್ತದೆ.
ಇದನ್ನೂ ಓದಿ:World Oceans Day 2021: ಸಮುದ್ರವನ್ನು ಪ್ರೀತಿಸು, ಅದು ಯಾವತ್ತೂ ನಿನಗೆ ದ್ರೋಹ ಮಾಡಲ್ಲ...!
ಮತ್ತೊಂದು ವಿಡಿಯೋ ಹಂಚಿಕೊಂಡಿರುವ ಹೇಮಾ ಮಾಲಿನಿ, ಅದರಲ್ಲಿ ಹೋಮ-ಹವನ ಅಭ್ಯಾಸದ ಮತ್ತೊಂದು ಮಹತ್ವನ್ನು ತಿಳಿಸಿದ್ದಾರೆ. ಹವನ ಯುಗ-ಯುಗಗಳಿಂದಲೂ ನಕಾರಾತ್ಮಕತೆಯನ್ನು ತೊಡೆದು ಹಾಕುವಲ್ಲಿ ಪರಿಣಾಮಕಾರಿ ಪಾತ್ರ ವಹಿಸುತ್ತದೆ ಎಂದು ನಂಬಲಾಗಿದೆ. ಇಂದು ಇಡೀ ಜಗತ್ತು ಸಾಂಕ್ರಾಮಿಕ ರೋಗ ಹಾಗೂ ಪ್ರಕೃತಿ ವಿಕೋಪಗಳ ಹೊಡೆತಕ್ಕೆ ಸಿಕ್ಕಿ ನಲುಗಿದೆ. ಪರಿಸರ ದಿನದಂದು ಮಾತ್ರ ಪ್ರಕೃತಿಯನ್ನು ಸಂರಕ್ಷಿಸುವುದಲ್ಲ. ಪ್ರತೀ ದಿನ ಪರಿಸರ ಸಂರಕ್ಷಣೆ ಮಾಡಬೇಕಿದೆ. ಹೀಗಾಗಿ ಎಲ್ಲರೂ ನಿತ್ಯ ನಿಮ್ಮ ಮನೆಗಳಲ್ಲಿ ಹವನವನ್ನು ಮಾಡಿ ಎಂದು ಎಲ್ಲರಿಗೂ ಮನವಿ ಮಾಡುತ್ತಿದ್ದೇನೆ ಎಂದು ಅವರು ಹೇಳಿದರು.
ದೇಶದಲ್ಲಿ ಕಳೆದ 2 ತಿಂಗಳ ಅವಧಿಯಲ್ಲಿ ಇಂದು ಅತೀ ಕಡಿಮೆ ಕೊರೋನಾ ಕೇಸುಗಳು ದಾಖಲಾಗಿರುವೆ. ಕೇವಲ 1 ಲಕ್ಷ ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಅಂತೆಯೇ ಸಾವಿನ ಸಂಖ್ಯೆ ಕೂಡ ಕಡಿಮೆಯಾಗಿದೆ. ಸದ್ಯ ದೇಶದಲ್ಲಿ 14,01,609 ಸಕ್ರಿಯ ಪ್ರಕರಣಗಳಿವೆ.
ಕಳೆದ 10 ದಿನಗಳಿಂದ ನಿರಂತರವಾಗಿ ದೇಶದಲ್ಲಿ ಕೊರೋನಾ ಸೋಂಕು ಪೀಡಿತರಾಗುವವರ ಸಂಖ್ಯೆ ಎರಡು ಲಕ್ಷಕ್ಕಿಂತ ಕಡಿಮೆ ಆಗಿವೆ. ಕೊರೋನಾದಿಂದ ಸಾಯುವವರ ಸಂಖ್ಯೆ ಇಳಿಮುಖವಾಗಿದೆ. ಇನ್ನೊಂದೆಡೆ ಕೊರೋನಾದಿಂದ ಚೇತರಿಸಿಕೊಳ್ಳುತ್ತಿರುವವರ ಸಂಖ್ಯೆ ಚಿಗರುತ್ತಿದ್ದು, ಕಳೆದ 61 ದಿನಗಳ ಬಳಿಕ ದೇಶದಲ್ಲಿ ಸಕ್ರೀಯ ಪ್ರಕರಣಗಳ ಸಂಖ್ಯೆ 15 ಲಕ್ಷಕ್ಕಿಂತ ಕಡಿಮೆಯಾಗಿದೆ.
ಮೇ ತಿಂಗಳ ಮಧ್ಯ ಭಾಗದಲ್ಲಿ ಕೊರೋನ ಎರಡನೇ ಅಲೆ ತಾರಕಕ್ಕೇ ಏರುತ್ತದೆ. ತಿಂಗಳ ಕೊನೆಯಲ್ಲಿ ಕಡಿಮೆ ಆಗುತ್ತದೆ ಎಂಬ ತಜ್ಞರು ಅಭಿಪ್ರಾಯ ಪಟ್ಟಿದ್ದರು. ಅದೇ ರೀತಿ ಮೇ 6ರಂದು 4,14,188 ಪ್ರಕರಣಗಳು ಕಂಡುಬಂದಿದ್ದು ದೇಶದಲ್ಲಿ ದಿನ ಒಂದರಲ್ಲಿ ದಾಖಲಾದ ಅತಿ ಹೆಚ್ಚು ಪ್ರಕರಣಗಳಾಗಿದ್ದವು. ನಂತರ ಕೆಳಮುಖವಾಗಿ ಸಾಗಿ ಮೇ 16ರಂದು ಮೊದಲ ಬಾರಿಗೆ ಮೂರು ಲಕ್ಷಕ್ಕೂ ಕಡಿಮೆ ಪ್ರಕರಣಗಳು (2,81,386) ಕಂಡು ಬಂದಿದ್ದವು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ