ಲಾಕ್​ಡೌನ್ ಮುಗಿದ ಬಳಿಕವೂ ಸೋಂಕು ಬಿಕ್ಕಟ್ಟು ಮುಂದುವರಿದರೆ? ಈಗಲೇ ಕಾರ್ಯತಂತ್ರ ರೂಪಿಸಿ ಎಂದು ರಾಜನ್ ಸಲಹೆ

ಸಣ್ಣ ಮತ್ತು ಮಧ್ಯಮ ಗಾತ್ರ ಕಂಪನಿಗಳಿಗೆ ತುರ್ತಾಗಿ ಪುಷ್ಟಿ ಸಿಗಬೇಕಿದೆ. ಸಾಕಷ್ಟು ಮಂದಿಗೆ ನೌಕರಿ ನೀಡುವ ಕೆಲ ಸಂಸ್ಥೆಗಳನ್ನ ಗುರುತಿಸಿ ಉತ್ತೇಜನ ನೀಡಬಹುದು ಎಂದು ರಾಜನ್ ಸಲಹೆ ನೀಡಿದ್ಧಾರೆ.

ರಘುರಾಮ್ ರಾಜನ್

ರಘುರಾಮ್ ರಾಜನ್

 • News18
 • Last Updated :
 • Share this:
  ನವದೆಹಲಿ(ಏ 05): ಕೊರೋನಾ ಬಿಕ್ಕಟ್ಟಿನಿಂದಾಗಿ ಭಾರತ ತೀವ್ರ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿರುವ ಈ ಸಂದರ್ಭದಲ್ಲಿ ಮಾಜಿ ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಮ್ ರಾಜನ್ ಕೇಂದ್ರ ಸರ್ಕಾರಕ್ಕೆ ಒಂದಷ್ಟು ಸಲಹೆಗಳನ್ನ ನೀಡಿದ್ದಾರೆ. ಆರ್ಥಿಕ ಪರಿಸ್ಥಿತಿಯನ್ನು ನಿಭಾಯಿಸಲು ಸರ್ಕಾರ ಯಾವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬಹುದೆಂದು ಅವರು ತಿಳಿಸಿದ್ಧಾರೆ. ತಮ್ಮ ಬ್ಲಾಗ್​ನಲ್ಲಿ ಲೇಖನ ಬರೆದಿರುವ ಅವರು, ಸ್ವಾತಂತ್ರ್ಯಾನಂತರ ಭಾರತ ಕಂಡ ಅತ್ಯಂತ ತುರ್ತು ಸಂಕಷ್ಟದ ಸ್ಥಿತಿ ಈಗ ಬಂದೊದಗಿದೆ ಎಂದು ಆತಂಕಪಟ್ಟಿದ್ದಾರೆ.

  ಹಾಗೆಯೆ, 2008ರ ವಿಶ್ವ ಆರ್ಥಿಕ ಹಿಂಜರಿತದ ಸಂದರ್ಭಕ್ಕೂ ಈಗಿನ ಸಂದರ್ಭಕ್ಕೂ ಹೋಲಿಕೆ ಮಾಡಿದ ಅವರು ಈಗಿನದ್ದು ಇನ್ನೂ ಹೆಚ್ಚು ಗಂಭೀರ ಸ್ವರೂಪದ ಸಮಸ್ಯೆ ಎಂದು ಅಭಿಪ್ರಾಯಪಟ್ಟಿದ್ಧಾರೆ.

  2008-09ರಲ್ಲಿ ಜಾಗತಿಕ ಹಣಕಾಸು ಬಿಕ್ಕಟ್ಟು ಉಂಟಾದಾಗ ವಿಶ್ವಾದ್ಯಂತ ಮಹಾ ಬೇಡಿಕೆ ಕುಸಿತವಾಗಿತ್ತು. ಆದರೆ, ಈ ಬಿಕ್ಕಟ್ಟು ಸೃಷ್ಟಿಯಾಗುವ ಕೆಲ ವರ್ಷಗಳ ಮುಂಚಿನಿಂದಲೂ ಭಾರತ ಆರ್ಥಿಕವಾಗಿ ಸಾಕಷ್ಟು ಶಕ್ತಿ ಸಂಪಾದನೆ ಮಾಡಿತ್ತು. ನಮ್ಮ ಹಣಕಾಸು ವ್ಯವಸ್ಥೆ ಪ್ರಬಲವಾಗಿತ್ತು. ನಮ್ಮ ಸರ್ಕಾರದ ಹಣಕಾಸು ಸ್ಥಿತಿ ಕೂಡ ಉತ್ತಮವಾಗಿತ್ತು. ಹೀಗಾಗಿ, ವಿಶ್ವ ಆರ್ಥಿಕ ಹಿಂಜರಿತವನ್ನು ನಮ್ಮ ಕಂಪನಿಗಳು ತಡೆದುಕೊಂಡಿದ್ದವು. ಜನರಿಗೆ ಉದ್ಯೋಗವಂಚನೆಯಾಗಿರಲಿಲ್ಲ. ಆದರೆ, ಈಗ ನಮ್ಮ ಸರ್ಕಾರದ ಹಣಕಾಸು ಸ್ಥಿತಿ ಉತ್ತಮವಿಲ್ಲ. ಕೊರೋನಾ ಬಿಕ್ಕಟ್ಟು ಎದುರಿಸಲು ಬಹಳ ಪರದಾಡಬೇಕಿದೆ. 13 ಕೋಟಿಗೂ ಹೆಚ್ಚು ಜನರು ಕೆಲಸ ಕಳೆದುಕೊಳ್ಳುವ ಸ್ಥಿತಿ ಬರಬಹುದು ಎಂದು ರಘುರಾಮ್ ರಾಜನ್ ಎಚ್ಚರಿಸಿದ್ಧಾರೆ.

  ಇದನ್ನೂ ಓದಿ: ಲಾಕ್ ಡೌನ್ ಮುಂದುವರಿದಲ್ಲಿ ಭಾರತಕ್ಕೆ ಇನ್ನಷ್ಟು ಆರ್ಥಿಕ ಪೆಟ್ಟು: ಖ್ಯಾತ ಅರ್ಥತಜ್ಞ ಜೀನ್ ಡ್ರೆಜ್ ಎಚ್ಚರಿಕೆ

  ಸರ್ಕಾರವು ಬಡವರು ಮತ್ತು ಸಂಬಳದಾರರೇತರರತ್ತ ತತ್​​ಕ್ಷಣ ಗಮನ ಹರಿಸಬೇಕು. ಸರ್ಕಾರದ ಯೋಜನೆಗಳ ಹಣ ಡೈರೆಕ್ಟ್ ಟ್ರಾನ್ಸ್​ಫರ್ ವ್ಯವಸ್ಥೆ ಮೂಲಕ ಬಹಳಷ್ಟು ಮಂದಿಯನ್ನು ತಲುಪುತ್ತಾದರೂ ಎಲ್ಲರಿಗೂ ದಕ್ಕುವುದಿಲ್ಲ. ಹಾಗೆಯೇ, ಸರ್ಕಾರ ನೀಡುವ ಹಣ ಕೂಡ ಸಾಕಾಗುವಷ್ಟಿಲ್ಲ. ಇದರಿಂದಾಗಿಯೇ ಲಾಕ್ ಡೌನ್ ಇದ್ದರೂ ವಲಸಿಗ ಕಾರ್ಮಿಕರು ಕೆಲಸದ ಸ್ಥಳದಲ್ಲಿ ಬದುಕು ನಡೆಸಲು ಸಾಧ್ಯವಾಗದೇ ತಮ್ಮ ಊರಿಗೆ ವಾಪಸ್ ಹೋಗುತ್ತಿದ್ದಾರೆ. ಜನರಿಗೆ ತಮ್ಮ ಬದುಕಿನ ಪ್ರಶ್ನೆ ಬಂದರೆ ಲಾಕ್ ಡೌನ್ ಇತ್ಯಾದಿ ಯಾವುದನ್ನೂ ಬೇಕಾದರೂ ಭಂಗಿಸಿ ಹೋಗುತ್ತಾರೆ ಎಂದು ಮಾಜಿ ಆರ್​ಬಿಐ ಗವರ್ನರ್ ತಿಳಿಸಿದ್ದಾರೆ.

  ಲಾಕ್ ಡೌನ್ ಅವಧಿ ಮುಗಿದ ನಂತರವೂ ವೈರಸ್ ಸೋಂಕು ಸರಿಯಾಗಿ ನಿವಾರಣೆಯಾಗದಿದ್ದರೆ, ಆ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು? ಆರ್ಥಿಕತೆಗೆ ಹೇಗೆ ಮರುಚಾಲನೆ ನೀಡಬೇಕು ಎಂಬುದನ್ನು ಸರ್ಕಾರ ಈಗಲೇ ಕಾರ್ಯತಂತ್ರ ರೂಪಿಸಬೇಕಿದೆ. ಇನ್ನೂ ಬಹಳ ಕಾಲ ಲಾಕ್ ಡೌನ್ ಸ್ಥಿತಿಯಲ್ಲಿ ಮುಂದುವರಿಯಲು ಸಾಧ್ಯವಿಲ್ಲ. ಕಡಿಮೆ ಸೋಂಕು ಇರುವ ಪ್ರದೇಶಗಳಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಕೆಲ ಚಟುವಟಿಕೆಗಳಿಗೆ ಅವಕಾಶ ಕೊಡಬೇಕಾಗುತ್ತದೆ. ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರದ ಕಂಪನಿಗಳಲ್ಲಿ ಕೆಲಸ ಮಾಡುವ ಆರೋಗ್ಯವಂತ ಯುವ ನೌಕರರಿಗೆ ಕೆಲಸಕ್ಕೆ ಹೋಗಲು ಅವಕಾಶ ಕಲ್ಪಿಸಬಹುದು. ಕೆಲಸದ ಸ್ಥಳದ ಸಮೀಪದ ಹಾಸ್ಟೆಲ್​ನಲ್ಲಿ ಕೆಲ ಸುರಕ್ಷತಾ ಕ್ರಮಗಳಿಂದ ಅವರನ್ನಿರಿಸಬಹುದು ಎಂದು ಕೆಲ ಉದಾಹರಣೆ ಸಹಿತವಾಗಿ ರಘುರಾಮ್ ರಾಜನ್ ಸರ್ಕಾರಕ್ಕೆ ಕಿವಿಮಾತು ಹೇಳಿದ್ಧಾರೆ.

  ಆರ್ಥಿಕ ಮುಗ್ಗಟ್ಟು ಮತ್ತು ಕೊರೊನಾ ಬಿಕ್ಕಟ್ಟಿನಿಂದ ಸಂಕಷ್ಟದಲ್ಲಿರುವ ಎಲ್ಲಾ ಉದ್ಯಮಗಳಿಗೆ ಚೇತರಿಕೆ ನೀಡುವಷ್ಟು ಹಣಕಾಸು ಬಲ ಸರ್ಕಾರಕ್ಕೆ ಇಲ್ಲ. ಈ ಹಿನ್ನೆಲೆಯಲ್ಲಿ ಆದ್ಯತೆ ಮೇಲೆ ಕೆಲ ಆಯ್ಕೆ ಮಾಡಬಹುದು. ಸಣ್ಣ ಮತ್ತು ಮಧ್ಯಮ ಗಾತ್ರ ಕಂಪನಿಗಳಿಗೆ ತುರ್ತಾಗಿ ಪುಷ್ಟಿ ಸಿಗಬೇಕಿದೆ. ಸಾಕಷ್ಟು ಮಂದಿಗೆ ನೌಕರಿ ನೀಡುವ ಕೆಲ ಸಂಸ್ಥೆಗಳನ್ನ ಗುರುತಿಸಿ ಉತ್ತೇಜನ ನೀಡಬಹುದು ಎಂದು ರಾಜನ್ ಸಲಹೆ ನೀಡಿದ್ಧಾರೆ.

  First published: