ಇಸ್ಲಾಮಾಬಾದ್ : ಪ್ರವಾಹ, ಆಹಾರ ಬಿಕ್ಕಟ್ಟು ಹಾಗೂ ಆರ್ಥಿಕ ಬಿಕ್ಕಟ್ಟಿಗೆ (economic crisis) ಸಿಲುಕಿ ಒದ್ದಾಡುತ್ತಿರುವ ಪಾಕಿಸ್ತಾನಕ್ಕೆ (Pakistan) ಮತ್ತೊಂದು ಪ್ರತಿಭಟನೆಯ ಬಿಸಿ ತಟ್ಟುತ್ತಿದೆ. ಹಲವಾರು ದಶಕಗಳ ಕಾಲ ತಮ್ಮ ಪ್ರದೇಶವನ್ನು ದುರುಪಯೋಗ ಮಾಡಿಕೊಂಡಿರುವ ಪಾಕಿಸ್ತಾನ ಸರ್ಕಾರದ ತಾರತಮ್ಯ ನೀತಿಗಳಿಂದ ಬೇಸತ್ತಿರುವ ಪಾಕ್ ಆಕ್ರಮಿತ ಕಾಶ್ಮೀರದ (ಪಿಒಕೆ) ( Pakistan Occupied Kashmir ) ಜನರು ಗಿಲ್ಗಿಟ್ ಬಾಲ್ಟಿಸ್ತಾನ (Gilgit Baltistan) ಪ್ರದೇಶಗಳನ್ನು ಭಾರತದೊಂದಿಗೆ ವಿಲೀನಗೊಳಿಸುವಂತೆ ಒತ್ತಾಯಿಸಿ ಪಾಕ್ ಮಿಲಿಟರಿ ಹಾಗೂ ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟ ಆರಂಭಿಸಿದ್ದಾರೆ. ಪಾಕಿಸ್ತಾನ ಸರ್ಕಾರ ಗಿಲ್ಗಿಟ್ ಹಾಗೂ ಬಾಲ್ಟಿಸ್ಥಾನವನ್ನು ಆಕ್ರಮಿಸಿಕೊಂಡಿದೆ. ಆದರೆ ಅಲ್ಲಿನ ಜನರಿಗೆ ಸೌಭ್ಯಗಳನ್ನು ಒದಗಿಸುವ ವಿಚಾರದಲ್ಲಿ ತಾರತಮ್ಯ, ದಬ್ಬಾಳಿಕೆ ನೀತಿಗಳನ್ನು ಅನುಸರಿಸುತ್ತಿರುವುದಕ್ಕೆ ಅಲ್ಲಿ ಜನರು ಆಕ್ರೋಶಗೊಂಡಿದ್ದಾರೆ.
ಗಿಲ್ಗಿಟ್ ಬಾಲ್ಟಿಸ್ತಾನವನ್ನು ಆಕ್ರಮಿಸಿಕೊಂಡಿರುವ ಪಾಕಿಸ್ತಾನಕ್ಕೆ ಅವುಗಳಿಗೆ ಸವಲತ್ತುಗಳನ್ನು ಒದಗಿಸಿಕೊಡುವ ಸಾಮರ್ಥ್ಯವಿಲ್ಲ. ಎಲ್ಲಾ ಸೌಕರ್ಯ ಹಾಗೂ ಅಭಿವೃದ್ಧಿ ಯೋಜನೆಗಳ ಹಂಚಿಕೆಯಲ್ಲೂ ಪಿಒಕೆಗೆ ತಾರತಮ್ಯ ಎಸಗುತ್ತಿದೆ ಎಂದು ಅಸಮಧಾನ ವ್ಯಕ್ತಪಡಿಸುತ್ತಿರುವ ಜನರು ತಮ್ಮ ಪ್ರದೇಶಗಳನ್ನು ಭಾರತದ ಕೇಂದ್ರಾಡಳಿತ ಪ್ರದೇಶವಾಗಿರುವ ಲಡಾಕ್ನೊಂದಿಗೆ ವಿಲೀನಗೊಳಿಸಿ ಎಂದು ಘೋಷಣೆ ಕೂಗುತ್ತಾ ಪ್ರತಿಭಟಿಸುತ್ತಿದ್ದಾರೆ.
ಇದನ್ನೂ ಓದಿ: POK: ಶೀಘ್ರವೇ ಭಾರತಕ್ಕೆ ಸೇರುತ್ತಾ ಪಾಕ್ ಆಕ್ರಮಿತ ಕಾಶ್ಮೀರ? ಸುಳಿವು ಕೊಟ್ರು ರಕ್ಷಣಾ ಸಚಿವ ರಾಜನಾಥ ಸಿಂಗ್!
ಲಡಾಖ್ನೊಂದಿಗೆ ವಿಲೀನಕ್ಕೆ ಒತ್ತಾಯ
ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಗಿಲ್ಗಿಟ್ ಬಾಲ್ಟಿಸ್ತಾನ್ನ ಜನರು ಸಾಮೂಹಿಕವಾಗಿ ಪ್ರತಿಭಟನೆ ಮಾಡುತ್ತಿದ್ದು, ತಮ್ಮ ಪ್ರದೇಶವನ್ನು ಭಾರತದ ಲಡಾಖ್ನಲ್ಲಿ ವಿಲೀನಗೊಳಿಸಿ. ಕಾರ್ಗಿಲ್ ರಸ್ತೆಯನ್ನು ಪುನಃ ತೆರೆದು ಕಾರ್ಗಿಲ್ ಜಿಲ್ಲೆಯಲ್ಲಿ ತಮ್ಮ ಸಹವರ್ತಿ ಬಾಲ್ಟಿಗಳೊಂದಿಗೆ ಸೇರಿಸುವಂತೆ ಒತ್ತಾಯಿಸಿ ಬೃಹತ್ ಹೋರಾಟ ಮಾಡುತ್ತಿರುವುದನ್ನು ಕಾರಣಬಹುದಾಗಿದೆ.
ಮಲತಾಯಿ ಧೋರಣೆ ಆರೋಪ
ಪಾಕಿಸ್ತಾನ ಸರ್ಕಾರದ ಮೇಲೆ ಪಿಒಕೆ ಜನರು ಮಲತಾಯಿ ಧೋರಣೆ ಆರೋಪ ಮಾಡಿದ್ದಾರೆ. ಇಡೀ ದೇಶ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿ ಸಂಕಷ್ಟದಲ್ಲಿದೆ. ಇಂತಹ ಸಂದರ್ಭದಲ್ಲಿ ಆಹಾರ ಪದಾರ್ಥಗಳ ಬೆಲೆಗಳಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿದೆ. ಪಾಕ್ನ ಪಂಜಾಬ್ ಮತ್ತು ಸಿಂಧ್ ಪ್ರಾಂತ್ಯಗಳಲ್ಲಿ ಕೆಜಿ ಗೋಧಿಗೆ 150 ರೂ ಗಳಿದ್ದರೆ, ಗಿಲ್ಗಿಟ್ ಬಾಲ್ಟಿಸ್ತಾನ್ ಪ್ರದೇಶಗಳಲ್ಲಿ 200 ರೂ ವರೆಗಿದೆ. ಇಂತಹ ಹಲವು ವಿಚಾರಗಳನ್ನು ಮುನ್ನಲೆಗೆ ತಂದು ಪಿಒಕೆ ಜನರು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.
ಪಾಕಿಸ್ತಾನದಲ್ಲಿ ವಿದ್ಯುತ್ ಬಿಕ್ಕಟ್ಟು
ಆರ್ಥಿಕ ಬಿಕ್ಕಟ್ಟಿನ ಜೊತೆಗೆ ಪಾಕಿಸ್ತಾನದಲ್ಲಿ ವಿದ್ಯುತ್ ಬಿಕ್ಕಟ್ಟನ್ನು ಎದುರಾಗಿದೆ. ದೇಶದಲ್ಲಿ ಹೆಚ್ಚುತ್ತಿರುವ ಇಂಧನ ಬಿಕ್ಕಟ್ಟನ್ನು ತಡೆಯಲು ಸರ್ಕಾರವು ಇಂಧನ ಸಂರಕ್ಷಣಾ ಯೋಜನೆಗೆ ಜಾರಿಗೆ ತಂದಿದೆ. ಈ ಕಾನೂನಿನ ಪ್ರಕಾರ, ದೇಶದ ಮಾರುಕಟ್ಟೆಗಳು ರಾತ್ರಿ 8:30 ರವರೆಗೆ ಮಾತ್ರ ತೆಗೆಯಬೇಕಾಗಿದೆ. ಮದುವೆ ಹಾಲ್ಗಳನ್ನು ಮಾತ್ರ ರಾತ್ರಿ 10 ರವರೆಗೆ ತೆರೆಯಲು ಅನುಮತಿ ನೀಡಲಾಗಿದೆ.
ಆಹಾರ ಧಾನ್ಯಗಳ ಕೊರತೆ
ಕಳೆದ ವರ್ಷ ಭೀಕರ ಪ್ರವಾಹಕ್ಕೆ ತುತ್ತಾಗಿದ್ದ ಪಾಕಿಸ್ತಾನಕ್ಕೆ ಇನ್ನೂ ಚೇತರಿಸಿಕೊಂಡಿಲ್ಲ. ಪಾಕಿಸ್ತಾನದ ಅತಿ ಪ್ರಮುಖ ಆಹಾರ ಧಾನ್ಯವಾದ ಗೋಧಿಯ ಕೊರತೆ ಈ ದೇಶವನ್ನು ಇನ್ನಿಲ್ಲದಂತೆ ಬಾಧಿಸುತ್ತಿದೆ. ಅಲ್ಲಿನ ಜನರು ಹೆಚ್ಚಾಗಿ ಬಳಸುವ ಗೋಧಿಯನ್ನು ಪಾಕಿಸ್ತಾನ ಬೇರೆ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುತ್ತಿದೆ. ಉಕ್ರೇನ್ -ರಷ್ಯಾ ಯುದ್ಧ ಆರಂಭವಾದಾಗಿನಿಂದ ಗೋಧಿ ಕೊರತೆ ಹೆಚ್ಚಾಗಿದೆ. ದೇಶೀಯವಾಗಿ ಬೆಳೆಯುವ ಗೋಧಿಗೆ ಬೆಂಬಲ ಬೆಲೆ ನೀಡಲು ಸರಕಾರ ಮುಂದೆ ಬರುತ್ತಿಲ್ಲ.
ಆಹಾರ ಪದಾರ್ಥಗಳನ್ನು ಆಮದು ಮಾಡಿಕೊಳ್ಳುವುದಕ್ಕೆ ಪಾಕಿಸ್ತಾನ ಸರ್ಕಾರ 14 ಬಿಲಿಯನ್ ಡಾಲರ್ ವೆಚ್ಚ ಮಾಡಿದೆ. ಆದರೆ ಇದರಲ್ಲಿ ಅರ್ಧ ಹಣವನ್ನು ಖರ್ಚು ಮಾಡಿದರೆ, ಇಡೀ ಪಾಕಿಸ್ತಾನಕ್ಕೆ ಆಗುವಷ್ಟು ಗೋಧಿ ಸೇರಿದಂತೆ ಇತರೆ ಆಹಾರ ಧಾನ್ಯಗಳನ್ನು ಪಾಕಿಸ್ತಾನದ ಪಂಜಾಬ್ ಮತ್ತು ಖೈಬರ್ ಪಖ್ತುನ್ಖವ್ ಪ್ರಾಂತ್ಯಗಳಲ್ಲೇ ಬೆಳೆಯಬಹುದು. ಆದರೆ ಆಡಳಿತ ವ್ಯವಸ್ಥೆಯ ವೈಫಲ್ಯದಿಂದ ಈ ಬಿಕ್ಕಟ್ಟ ಸಂಭವಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ