ಬಿಟ್ ಕಾಯಿನ್ ಎಂಬ ಕ್ರಿಪ್ಟೋಕರೆನ್ಸಿ ಜಾಲ ಇತ್ತೀಚೆಗೆ ಸಾಕಷ್ಟು ಸದ್ದು ಮಾಡುತ್ತಿದೆ. ನಾಡಿನ ಅಧಿಕೃತ ಕರೆನ್ಸಿಗೆ ಪರ್ಯಾಯವಾಗಿ ಇವು ವಹಿವಾಟಿಗೆ ಅನುವು ಮಾಡಿಕೊಡುತ್ತದೆ. ಈಗ ಬಿಟ್ಕಾಯಿನ್ಗಳ ಮೌಲ್ಯ ಇತ್ತೀಚೆಗೆ ಗಗನಕ್ಕೇರಿದೆ. ಒಂದು ಬಿಟ್ ಕಾಯಿನ್ ಬೆಲೆ ರೂಪಾಯಿಗೆ ಪರಿವರ್ತಿಸಿದರೆ 25 ಲಕ್ಷ ರೂ ಆಗುತ್ತದೆ. ಇದರ ಮೌಲ್ಯ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಹೀಗಾಗಿ, ಜನರು ಬಿಟ್ ಕಾಯಿನ್ ಖರೀದಿಗೆ ಮುಗಿಬೀಳುತ್ತಿರುವುದು ಹೆಚ್ಚಾಗಿದೆ. ತಮ್ಮ ಬಿಟ್ ಕಾಯಿನ್ ಅಕೌಂಟ್ಗೆ ಲಾಗಿನ್ ಆಗಲು ಸಾಧ್ಯವಾಗದೇ ಲಾಕೌಟ್ ಆಗುತ್ತಿರುವವರ ಸಂಖ್ಯೆ ಬಹಳ ಇದೆ. ಒಂದು ಅಂದಾಜು ಪ್ರಕಾರ, 140 ಬಿಲಿಯನ್ ಡಾಲರ್ ಮೌಲ್ಯದ ಬಿಟ್ಕಾಯಿನ್ಗಳಿಗೆ ಈಗ ವಾರಸುದಾರರೇ ಇಲ್ಲವಾಗಿದೆ. ಹೀಗೆ ಅನಾಥವಾಗಿರುವ ಬಿಟ್ಕಾಯಿನ್ ಮೌಲ್ಯ ಸುಮಾರು 10 ಲಕ್ಷ ಕೋಟಿ ರೂ ಆಗಿದೆ. ಈ ಬಿಟ್ ಕಾಯಿನ್ನ ಮಾಲೀಕರು ಬದುಕಿದ್ದರೂ ಪಾಸ್ವರ್ಡ್ ಇಲ್ಲದೆಯೋ ಅಥವಾ ಹಾರ್ಡ್ವೇರ್ ಇಲ್ಲದೆಯೋ ಇದನ್ನು ಪಡೆಯಲು ಸಾಧ್ಯವಾಗುತ್ತಿಲ್ಲ.
2008ರಿಂದಲೇ ಚಾಲನೆಗೆ ಬಂದ ಬಿಟ್ ಕಾಯಿನ್ ಬಹಳ ಸಂಕೀರ್ಣ ಎನಿಸುವ ಡಿಜಿಟಲ್ ಕರೆನ್ಸಿಯಾಗಿದೆ. ಅದರ ವ್ಯವಸ್ಥೆ ಕೂಡ ಬಹಳ ಜಟಿಲವಾದುದು, ರಹಸ್ಯವಾದುದು. ಒಂದು ಹಾರ್ಡ್ವೇರ್ನಲ್ಲಿ ಬಿಟ್ಕಾಯಿನ್ ವ್ಯಾಲೆಟ್ನ ಕೀಲಿಗಳು ಇರುತ್ತವೆ. ಈ ಹಾರ್ಡ್ವೇರ್ ಅನ್ನು ತೆರೆಯಲು ಪಾಸ್ವರ್ಡ್ ನೀಡಬೇಕಾಗುತ್ತದೆ. 10 ಬಾರಿ ಪಾಸ್ವರ್ಡ್ ತಪ್ಪಾಗಿ ಹಾಕಿದರೆ ಹಾರ್ಡ್ವೇರ್ ಸಂಪೂರ್ಣವಾಗಿ ಲಾಕ್ ಔಟ್ ಆಗುತ್ತದೆ. ನಮ್ಮ ಈಗಿನ ಅನೇಕ ಸೋಷಿಯಲ್ ಮೀಡಿಯಾ ಅಕೌಂಟ್ಗಳಲ್ಲಿ ನಾವು ಪಾಸ್ವರ್ಡ್ ರಿಕವರಿ ಮಾಡಲು ಅವಕಾಶ ಇರುವಂತೆ ಬಿಟ್ಕಾಯಿನ್ನಲ್ಲಿ ವ್ಯವಸ್ಥೆ ಇಲ್ಲ. ಹೀಗಾಗಿ, ಅನೇಕ ಮಂದಿ ಪಾಸ್ವರ್ಡ್ ಮರೆತುಹೋಗಿ ಪರದಾಡುತ್ತಿದ್ದಾರೆ. ಇನ್ನೂ ಕೆಲವರು ವ್ಯಾಲೆಟ್ ಕೀಗಳಿರುವ ಹಾರ್ಡ್ ಡ್ರೈವ್ ಅನ್ನೇ ಕಳೆದುಕೊಂಡವರಿದ್ದಾರೆ.
ಇದನ್ನೂ ಓದಿ: Signal ಬಳಸಿ ಎಂದು ವಿಶ್ವದ ನಂ 1 ಶ್ರೀಮಂತ ಹೇಳಿದ್ದನ್ನ ತಪ್ಪಾಗಿ ಅರ್ಥೈಸಿಕೊಂಡ ಹೂಡಿಕೆದಾರರ ಫಜೀತಿ
ಬ್ರಿಟನ್ನಲ್ಲಿ ವ್ಯಕ್ತಿಯೊಬ್ಬ 2013ರಲ್ಲಿ ಇಂಥದ್ದೊಂದು ಹಾರ್ಡ್ ಡ್ರೈವ್ ಅನ್ನು ಆಕಸ್ಮಿಕವಾಗಿ ಕಸದ ಬುಟ್ಟಿಗೆ ಎಸೆದಿದ್ದ. ಅದು ಅಂತಿಮವಾಗಿ ಡಂಪಿಂಗ್ ಯಾರ್ಡ್ ಸೇರಿಕೊಂಡಿತ್ತು. ಯಾವಾಗ ಬಿಟ್ ಕಾಯಿನ್ಗಳ ಬೆಲೆ ಹೆಚ್ಚಳವಾಯಿತೋ ಆ ವ್ಯಕ್ತಿ 2017ರಲ್ಲಿ ಎಚ್ಚೆತ್ತುಕೊಳ್ಳುತ್ತಾನೆ. ಆಗ ಆತನ ಬಳಿ ಇದ್ದ 7,500 ಬಿಟ್ ಕಾಯಿನ್ಗಳ ಮೌಲ್ಯ 127 ಮಿಲಿಯನ್ ಡಾಲರ್ ಆಗಿತ್ತು. ಇಷ್ಟು ಅಪಾರ ಮೌಲ್ಯದ ಬಿಟ್ ಕಾಯಿನ್ಗಳ ಕೀಲಿ ಇರುವ ಹಾರ್ಡ್ ಡ್ರೈವ್ ಅನ್ನು ಡಂಪಿಂಗ್ ಯಾರ್ಡ್ನಲ್ಲಿ ಶೋಧಿಸಿಕೊಡುವಂತೆ ಈಗ ಪಾಲಿಕೆಗೆ ಮನವಿ ಮಾಡಿದ್ದ. ಆದರೆ, ಅದಕ್ಕೆ ಪಾಲಿಕೆ ಒಪ್ಪಲಿಲ್ಲ. ಈತ ಕೋಟಿ ಕೋಟಿ ಹಣ ಎದುರಿಗಿದ್ದರೂ ಪಡೆಯಲು ಸಾಧ್ಯವಾಗದೇ ಕೈ ಕೈ ಹಿಸುಕಿಕೊಂಡು ಕೂತಿದ್ದಾನೆ.
ಇಂಥ ಪ್ರಕರಣಗಳು ಹೆಚ್ಚಾಗುತ್ತಿರುವಂತೆಯೇ ಬಿಟ್ ಕಾಯಿನ್ನ ವ್ಯಾಲೆಟ್ ತೆರೆಯಲು 12 ಪದಗಳ ರಿಕವರಿ ಪದಗುಚ್ಛ ಸೃಷ್ಟಿಸುವ ವ್ಯವಸ್ಥೆಯನ್ನು ಈ ವರ್ಷ ಜಾರಿಗೆ ತರಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ