news18-kannada Updated:October 22, 2020, 11:31 AM IST
ಲಾಲೂ ಪ್ರಸಾದ್ ಯಾದವ್, ನಿತೀಶ್ ಕುಮಾರ್.
ಪಾಟ್ನಾ (ಅಕ್ಟೋಬರ್ 22); ಬಿಹಾರದ ಚುನಾವಣೆ ದಿನಗಣನೆ ಆರಂಭವಾಗಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಎನ್ಡಿಎ ಮೈತ್ರಿಕೂಟ ಮತ್ತೊಂದು ಅವಧಿಗೆ ಅಧಿಕಾರ ಹಿಡಿಯಲು ಕಾತರವಾಗಿದೆ. ಈ ನಡುವೆ ವಿರೋಧ ಪಕ್ಷವಾದ ಆರ್ಜೆಡಿ ರಾಜ್ಯಾದ್ಯಂತ ವ್ಯಾಪಕವಾದ ಪ್ರಚಾರ ನಡೆಸುತ್ತಿದೆ. ಅಲ್ಲದೆ, ಯುವ ನಾಯಕ ತೇಜಸ್ವಿ ಯಾದವ್ ರಾಜ್ಯದ ಅಭಿವೃದ್ಧಿ ಕುರಿತು ಬಹಿರಂಗ ಚರ್ಚೆಗೆ ಬರುವಂತೆ ಸಿಎಂ ನಿತೀಶ್ ಕುಮಾರ್ ಅವರಿಗೆ ಬಹಿರಂಗ ಸವಾಲು ಹಾಕುವ ಮೂಲಕ ಆಡಳಿತ ಪಕ್ಷಕ್ಕೆ ಮುಜುಗರ ಉಂಟು ಮಾಡುತ್ತಿದ್ದಾರೆ. ಈ ನಡುವೆ ನಿತೀಶ್ ಕುಮಾರ್ ವಿರುದ್ಧ ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್ ಸಹ ಟ್ವಿಟರ್ನಲ್ಲಿ ವ್ಯಾಪಕವಾದ ಟೀಕಾಸ್ತ್ರವನ್ನು ಪ್ರಯೋಗಿಸುತ್ತಿರುವುದು ಚುನಾವಣಾ ಕಾವನ್ನು ಮತ್ತಷ್ಟು ಹೆಚ್ಚಿಸಿದೆ.
ಟ್ವಿಟರ್ನಲ್ಲಿ ನಿತೀಶ್ ಕುಮಾರ್ ವಿರುದ್ಧ ಕಿಡಿಕಾರಿರುವ ಲಾಲೂ ಪ್ರಸಾದ್ ಯಾದವ್, “ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಹಲವು ಬಾರಿ ರಾಜ್ಯದ ಜನ ಅಧಿಕಾರ ನೀಡಿದ್ದಾರೆ. ಆದರೆ, ನಿತೀಶ್ ಅಧಿಕಾರ ನೀಡಿದ ಜನರಿಗೆ ದ್ರೋಹ ಬಗೆದಿದ್ದಾರೆ” ಎಂದು ಕಿಡಿಕಾರಿದ್ದಾರೆ.
ಈ ಹಿಂದೆ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ್ದ ಯುವ ನಾಯಕ ತೇಜಸ್ವಿ ಯಾದವ್, "ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ 10 ಲಕ್ಷ ಉದ್ಯೋಗಗಳಿಗೆ ಅನುಮೋದನೆ ನೀಡುವುದು" ಎಂದು ಉದ್ಯೋಗದ ಭರವಸೆ ನೀಡಿದ್ದರು.
ಇದನ್ನೂ ಓದಿ : ಟಿಆರ್ಪಿ ಹಗರಣ; ಮಹಾರಾಷ್ಟ್ರದಲ್ಲಿ ಸಿಬಿಐ ತನಿಖೆಯನ್ನು ನಿರ್ಬಂಧಿಸಿದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ
ಆದರೆ, ತೇಜಶ್ವಿ ಯಾದವ್ ನೀಡಿದ ಭರವಸೆಯನ್ನು ಅಪಹಾಸ್ಯ ಮಾಡಿದ್ದ ನಿತೀಶ್ ಕುಮಾರ್, "ಅಷ್ಟು ಉದ್ಯೋಗಗಳನ್ನು ಸೃಷ್ಟಿಸಲು ಹಣ ಜೈಲಿನಿಂದ ಬರುತ್ತದೆಯೇ? ಅಥವಾ ನಕಲಿ ನೋಟುಗಳನ್ನು ಪ್ರಿಂಟ್ ಮಾಡಲಾಗುತ್ತದೆಯೇ?, ಮೊದಲು ಜನರಿಗೆ ಪ್ರಲೋಭನೆಯನ್ನು ಒಡ್ಡಿ ದಾರಿ ತಪ್ಪಿಸುವುದನ್ನು ಬಿಡಿ. ರಾಜ್ಯವನ್ನು ಅಭಿವೃದ್ಧಿಯ ಹಾದಿಯಲ್ಲಿ ತರಲು ನಾವು ಶ್ರಮಿಸಿದ್ದೇವೆ. 1990-2005ರ ಅವಧಿಯಲ್ಲಿ ಆರ್ಜೆಡಿ ತನ್ನ ಆಡಳಿತದಲ್ಲಿ ಎಷ್ಟು ಉದ್ಯೋಗಗಳನ್ನು ಒದಗಿಸಿತು?" ಎಂದು ಲಾಲೂ ಪ್ರಸಾದ್ ಯಾದವ್ ಅವರ ಹೆಸರನ್ನು ಉಲ್ಲೇಖಿಸದೆ ಪರೋಕ್ಷವಾಗಿ ಕಾಲೆಳೆದಿದ್ದರು.
ಈ ಘಟನೆಯಾದ ಎರಡು ದಿನಗಳ ನಂತರ ನಿತೀಶ್ ಕುಮಾರ್ ವಿರುದ್ಧ ಕಿಡಿಕಾರಿರುವ ಲಾಲೂ ಪ್ರಸಾದ್ ಯಾದವ್, "ಬಿಹಾರದ ಜನ ನಿತೀಶ್ ಕುಮಾರ್ ಅವರಿಗೆ ಹಲವು ಬಾರಿ ಅಧಿಕಾರ ನೀಡಿದ್ದಾರೆ. ಆದರೆ, ಅಧಿಕಾರ ಅನುಭವಿಸಿದ ಅವರು ರಾಜ್ಯದ ಜನರಿಗೆ ದ್ರೋಹ ಬಗೆದಿದ್ದಾರೆ. ಬಿಹಾರದ ಅಭಿವೃದ್ಧಿ ನಿಂತ ನೀರಾಗಿದೆ. ಭ್ರಷ್ಟಾಚಾರ ಹೆಚ್ಚಾಗಿದೆ. ನಿರುದ್ಯೋಗದ ಸಮಸ್ಯೆಯಿಂದಾಗಿ ಯುವ ಜನ ಕಂಗೆಟ್ಟಿದ್ಧಾರೆ. ಹೀಗಾಗಿ ಈ ಭಾರಿ ನಿತೀಶ್ ಕುಮಾರ್ ನೇತೃತ್ವದ ಎನ್ಡಿಎ ಗೆಲುವು ಸಾಧಿಸುವುದು ಕಷ್ಟ. ಜನ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ" ಎಂದು ಕಿಡಿಕಾರಿದ್ದಾರೆ.
Published by:
MAshok Kumar
First published:
October 22, 2020, 11:31 AM IST