ಸರ್ಕಾರಿ ಕೆಲಸ ( Government Job) ಅಂತ ಸುಮ್ಮನೆ ಬೇಕಾಬಿಟ್ಟಿ ಕೆಲಸ ಮಾಡುವವರಿಗೆ ಕೇಂದ್ರ ಬಿಗ್ ಶಾಕ್ ನೀಡಿದೆ. ನಿರ್ಲಕ್ಷ್ಯ ತೋರಿ ಸರಿಯಾಗಿ ಕೆಲಸ ಮಾಡದಿದ್ದರೆ ನಿಮ್ಮ ನಿವೃತ್ತಿಯ ನಂತರದ ಪಿಂಚಣಿ ಮತ್ತು ಗ್ರಾಚ್ಯುಟಿಗೆ ಕತ್ತರಿ ಹಾಕುವ ನಿಯಮವೊಂದರ ಬಗ್ಗೆ ಕೇಂದ್ರ ಅಧಿಸೂಚನೆ ಹೊರಡಿಸಿದೆ. ಕೇಂದ್ರ ನೌಕರರಿಗೆ ಡಿಎ ಮತ್ತು ಬೋನಸ್ ಗಿಫ್ಟ್ ನೀಡಿದ ಬೆನ್ನಲ್ಲೇ ಸರ್ಕಾರವು ನೌಕರರಿಗೆ ಕಟ್ಟುನಿಟ್ಟಿನ ಎಚ್ಚರಿಕೆಯೊಂದನ್ನು ನೀಡಿದೆ. ನೌಕರರು ಈ ಎಚ್ಚರಿಕೆಯನ್ನು ನಿರ್ಲಕ್ಷ್ಯಿಸಿದರೆ ಮುಂದೆ ಅವರ ಪಿಂಚಣಿ ಮತ್ತು ಗ್ರಾಚ್ಯುಟಿಗೆ ಕುತ್ತು ಬರಬಹುದು ಎನ್ನಲಾಗಿದೆ. ಹೊಸ ನಿಯಮಗಳ (Rule) ಪ್ರಕಾರ ನೌಕರನು ಕೆಲಸದಲ್ಲಿ ನಿರ್ಲಕ್ಷ್ಯ ತೋರಿದರೆ ನಿವೃತ್ತಿಯ ನಂತರ ಪಿಂಚಣಿ ಮತ್ತು ಗ್ರಾಚ್ಯುಟಿಯನ್ನು ನಿಲ್ಲಿಸುವಂತೆ ಸೂಚನೆ ನೀಡಲಾಗಿದೆ. ಈ ಆದೇಶವು ಕೇಂದ್ರ ಉದ್ಯೋಗಿಗಳಿಗೆ ಅನ್ವಯಿಸುತ್ತದೆ, ಆದರೆ ಮುಂದೆ ರಾಜ್ಯಗಳು (State) ಸಹ ಈ ನಿಯಮವನ್ನು ಜಾರಿಗೆ ತರಬಹುದು.
ಅಧಿಸೂಚನೆ ಹೊರಡಿಸಿದ ಕೇಂದ್ರ
ಕೇಂದ್ರ ಸರ್ಕಾರವು ಇತ್ತೀಚೆಗೆ ಕೇಂದ್ರ ನಾಗರಿಕ ಸೇವೆಗಳ (ಪಿಂಚಣಿ) ನಿಯಮಗಳು 2021 ರ ಅಡಿಯಲ್ಲಿ ಅಧಿಸೂಚನೆಯನ್ನು ಹೊರಡಿಸಿದೆ. ಕೇಂದ್ರ ಸರ್ಕಾರವು ಇತ್ತೀಚೆಗೆ CCS (ಪಿಂಚಣಿ) ನಿಯಮಗಳು 2021 ರ ನಿಯಮ 8 ಅನ್ನು ಬದಲಾಯಿಸಿದೆ, ಅದರಲ್ಲಿ ಹೊಸ ನಿಬಂಧನೆಗಳನ್ನು ಸೇರಿಸಲಾಗಿದೆ ಎಂದು ಈ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಕೇಂದ್ರ ನೌಕರನು ತನ್ನ ಸೇವಾ ಅವಧಿಯಲ್ಲಿ ಯಾವುದೇ ಗಂಭೀರ ಅಪರಾಧ ಅಥವಾ ನಿರ್ಲಕ್ಷ್ಯವನ್ನು ತೋರಿದ್ದಲ್ಲಿ ನಿವೃತ್ತಿಯ ನಂತರದ ಪಿಂಚಣಿ ಮತ್ತು ಅವರ ಗ್ರಾಚ್ಯುಟಿಯನ್ನು ನಿಲ್ಲಿಸಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಬದಲಾದ ನಿಯಮಗಳ ಕುರಿತು ಕೇಂದ್ರದಿಂದ ಸಂಬಂಧಪಟ್ಟ ಎಲ್ಲ ಅಧಿಕಾರಿಗಳಿಗೆ ಸುತ್ತೋಲೆಯನ್ನು ಹೊರಡಿಸಲಾಗಿದೆ. ಅಷ್ಟೇ ಅಲ್ಲ, ತಪ್ಪಿತಸ್ಥ ನೌಕರರ ಬಗ್ಗೆ ಮಾಹಿತಿ ಬಂದರೆ ಅವರ ಪಿಂಚಣಿ ಮತ್ತು ಗ್ರಾಚ್ಯುಟಿ ನಿಲ್ಲಿಸಲು ಕ್ರಮ ಕೈಗೊಳ್ಳಬೇಕು ಎಂದು ಸ್ಪಷ್ಟವಾಗಿ ಸರ್ಕಾರ ವಿವರಿಸಿದೆ ಮತ್ತು ಈ ನೀತಿಯನ್ನು ಕಟ್ಟುನಿಟ್ಟಾಗಿ ಜಾರಿ ಮಾಡುವಂತೆ ಹೇಳಿದೆ.
ಕ್ರಮ ಕೈಗೊಳ್ಳುವವರು ಯಾರು ?
* ನಿವೃತ್ತ ನೌಕರರ ನೇಮಕಾತಿ ಪ್ರಾಧಿಕಾರದಲ್ಲಿ ಭಾಗಿಯಾಗಿರುವ ಅಧ್ಯಕ್ಷರು ಗ್ರಾಚ್ಯುಟಿ ಅಥವಾ ಪಿಂಚಣಿ ತಡೆಹಿಡಿಯುವ ಅಧಿಕಾರವನ್ನು ಹೊಂದಿದ್ದಾರೆ.
* ನಿವೃತ್ತಿಯಾಗುವ ನೌಕರನನ್ನು ನೇಮಿಸಿರುವ ಸಂಬಂಧಪಟ್ಟ ಸಚಿವಾಲಯ ಅಥವಾ ಇಲಾಖೆಯೊಂದಿಗೆ ಸಂಬಂಧ ಹೊಂದಿರುವ ಕಾರ್ಯದರ್ಶಿಗಳಿಗೆ ಪಿಂಚಣಿ ಮತ್ತು ಗ್ರಾಚ್ಯುಟಿಯನ್ನು ತಡೆಹಿಡಿಯುವ ಹಕ್ಕನ್ನು ನೀಡಲಾಗಿದೆ.
* ನೌಕರನು ಆಡಿಟ್ ಮತ್ತು ಅಕೌಂಟ್ಸ್ ಇಲಾಖೆಯಿಂದ ನಿವೃತ್ತರಾಗಿದ್ದರೆ, ತಪ್ಪಿತಸ್ಥ ನೌಕರರ ನಿವೃತ್ತಿಯ ನಂತರ ಪಿಂಚಣಿ ಮತ್ತು ಗ್ರಾಚ್ಯುಟಿಯನ್ನು ತಡೆಹಿಡಿಯಲು ಸಿಎಜಿಗೆ ಅಧಿಕಾರ ನೀಡಲಾಗಿದೆ.
ಇದನ್ನೂ ಓದಿ: ಭಾರತದಲ್ಲಿ ಮುಂದಿನ ಜಿ20 ಶೃಂಗಸಭೆ, ರಷ್ಯಾದ ಭಾಗವಹಿಸುವಿಕೆಯನ್ನು ನಿರೀಕ್ಷಿಸುತ್ತಿದ್ದೇವೆ ಎಂದ ಬಾಗ್ಚಿ
ಕ್ರಮ ಹೇಗಿರುತ್ತದೆ?
- ಹೊಸ ನಿಯಮದ ಪ್ರಕಾರ, ಕೆಲಸದ ಸಮಯದಲ್ಲಿ ನೌಕರರ ವಿರುದ್ಧ ಯಾವುದೇ ಇಲಾಖೆ ಅಥವಾ ನ್ಯಾಯಾಂಗ ಕ್ರಮವನ್ನು ತೆಗೆದುಕೊಂಡರೆ, ನಂತರ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸುವುದು ಅಗತ್ಯವಾಗಿರುತ್ತದೆ.
- ನೌಕರನು ನಿವೃತ್ತಿಯ ನಂತರ ಪುನಃ ನೇಮಕಗೊಂಡರೆ, ಅದೇ ನಿಯಮಗಳು ಅವನಿಗೂ ಅನ್ವಯಿಸುತ್ತವೆ.
- ನೌಕರನು ನಿವೃತ್ತಿಯ ನಂತರ ಪಿಂಚಣಿ ಮತ್ತು ಗ್ರಾಚ್ಯುಟಿ ಪಾವತಿಯನ್ನು ತೆಗೆದುಕೊಂಡರೆ ಮತ್ತು ತಪ್ಪಿತಸ್ಥರೆಂದು ಕಂಡುಬಂದರೆ, ಪೂರ್ಣ ಅಥವಾ ಭಾಗಶಃ ಮೊತ್ತದ ಪಿಂಚಣಿ ಅಥವಾ ಗ್ರಾಚ್ಯುಟಿಯನ್ನು ಅವರಿಂದ ವಸೂಲಿ ಮಾಡಬಹುದು.
– ಇಲಾಖೆಗೆ ಉಂಟಾದ ನಷ್ಟದ ಆಧಾರದ ಮೇಲೆ ಕ್ರಮವನ್ನು ನಿರ್ಣಯಿಸಲಾಗುತ್ತದೆ.
- ಪ್ರಾಧಿಕಾರವು ಬಯಸಿದರೆ, ನೌಕರನ ಪಿಂಚಣಿ ಅಥವಾ ಗ್ರಾಚ್ಯುಟಿಯನ್ನು ಶಾಶ್ವತವಾಗಿ ಅಥವಾ ಸ್ವಲ್ಪ ಸಮಯದವರೆಗೆ ನಿಲ್ಲಿಸಬಹುದು.
ಸಲಹೆಗಳನ್ನು ತೆಗೆದುಕೊಳ್ಳಬೇಕು
ಈ ನಿಯಮದ ಪ್ರಕಾರ, ಪ್ರಾಧಿಕಾರವು ಯಾವುದೇ ಅಂತಿಮ ಆದೇಶವನ್ನು ನೀಡುವ ಮೊದಲು ಕೇಂದ್ರ ಲೋಕಸೇವಾ ಆಯೋಗದಿಂದ ಸಲಹೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.
ಪಿಂಚಣಿಯನ್ನು ತಡೆಹಿಡಿಯಲಾದ ಅಥವಾ ಹಿಂತೆಗೆದುಕೊಳ್ಳುವ ಯಾವುದೇ ಸಂದರ್ಭದಲ್ಲಿ, ಕನಿಷ್ಠ ಮೊತ್ತವು ತಿಂಗಳಿಗೆ ರೂ.9000 ಕ್ಕಿಂತ ಕಡಿಮೆಯಿರಬಾರದು, ಇದನ್ನು ಈಗಾಗಲೇ ನಿಯಮ 44 ರ ಅಡಿಯಲ್ಲಿ ನಿಗದಿಪಡಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ