HOME » NEWS » National-international » PAST GOVERNMENTS ARE RESPONSIBLE FOR THE PETROL AND DIESEL PRICE HIKE SAYS PRIME MINISTER NARENDRA MODI MAK

ಪೆಟ್ರೋಲ್​-ಡೀಸೆಲ್​ ಬೆಲೆ ಏರಿಕೆಗೆ ಈ ಹಿಂದಿನ ಸರ್ಕಾರಗಳೇ ಕಾರಣ; ಪ್ರಧಾನಿ ನರೇಂದ್ರ ಮೋದಿ ಹೇಳಿಕೆ

ಹಿಂದಿನ ಸರ್ಕಾರಗಳು ಇಂಧನ ಆಮದು ಪ್ರಮಾಣ ತಗ್ಗಿಸುವತ್ತ ಗಮನ ನೀಡಿದ್ದರೆ ಈಗ ಮಧ್ಯಮ ವರ್ಗಕ್ಕೆ ಹೊರೆ ಆಗುತ್ತಿರಲಿಲ್ಲ ಎಂದು ಪ್ರಧಾನಿ ನೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.

news18-kannada
Updated:February 19, 2021, 6:18 AM IST
ಪೆಟ್ರೋಲ್​-ಡೀಸೆಲ್​ ಬೆಲೆ ಏರಿಕೆಗೆ ಈ ಹಿಂದಿನ ಸರ್ಕಾರಗಳೇ ಕಾರಣ; ಪ್ರಧಾನಿ ನರೇಂದ್ರ ಮೋದಿ ಹೇಳಿಕೆ
ಸಾಂದರ್ಭಿಕ ಚಿತ್ರ.
  • Share this:
ನವ ದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ದಿನದಿಂದ ದಿನಕ್ಕೆ ಇಳಿಯುತ್ತಿದೆ. ಆದರೆ, ಭಾರತದಲ್ಲಿ ಮಾತ್ರ ಪೆಟ್ರೋಲ್​-ಡೀಸೆಲ್​ ಹಾಗೂ ಅಡುಗೆ ಅನಿಲ (ಎಲ್​ಪಿಜಿ) ಬೆಲೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಕಚ್ಚಾತೈಲದ ಮೇಲಿನ ಕೇಂದ್ರದ ಸೆಸ್​ ಏರಿಸಿರುವ ಪರಿಣಾಮ ಇದೀಗ ದೇಶದಾದ್ಯಂತ ಪೆಟ್ರೋಲ್​ ಬೆಲೆ 1 ಲೀಟರ್​ಗೆ 92ರ ಗಡಿದಾಟಿದೆ. ಇನ್ನೂ ರಾಜಸ್ಥಾನದಲ್ಲಿ ಪೆಟ್ರೋಲ್ ಒಂದು ಲೀಟರ್‌ಗೆ 100 ರೂ.ಗಳ ಗಡಿ ದಾಟಿದ್ದು, ಭಾರತದಲ್ಲಿ ಸಾರ್ವಕಾಲಿಕ ಹೆಚ್ಚಳ ಕಂಡಿದೆ. ಹೀಗಾಗಿ ದೇಶದಾದ್ಯಂತ ಇದೀಗ ಪೆಟ್ರೋಲ್​-ಡೀಸೆಲ್​ ಬೆಲೆ ಏರಿಕೆಯ ವಿಚಾರ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಆದರೆ, ಈ ಬೆಲೆ ಏರಿಕೆಗೆ ಕಡಿವಾಣ ಹಾಕಬೇಕಾದ ಪ್ರಧಾನಿ ನರೇಂದ್ರ ಮೋದಿ ಮಾತ್ರ "ಇಂಧನದ ಬೆಲೆ ಹೆಚ್ಚಳಕ್ಕೆ ಹಿಂದೆ ಅಧಿಕಾರದಲ್ಲಿದ್ದ ಸರ್ಕಾರಗಳೇ ಕಾರಣ" ಎಂದು ಹೇಳುವ ಮೂಲಕ ಮತ್ತೆ ಹಿಂದಿನ ಸರ್ಕಾರಗಳ ದೂಷಣೆಗೆ ಮುಂದಾಗಿದ್ದಾರೆ.

ತಮಿಳುನಾಡಿನ ತೈಲ ಮತ್ತು ಅನಿಲ ಯೋಜನೆಗಳನ್ನು ಉದ್ಘಾಟಿಸುವ ಆನ್‌ಲೈನ್ ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, "2019–20 ರಲ್ಲಿ ಭಾರತಕ್ಕೆ ಅಗತ್ಯವಿದ್ದ ಶೇ.85 ಕ್ಕಿಂತ ಹೆಚ್ಚಿನ ಪ್ರಮಾಣದ ತೈಲವನ್ನು ಆಮದು ಮಾಡಿಕೊಳ್ಳಲಾಯಿತು, ನೈಸರ್ಗಿಕ ಅನಿಲದ ಅಗತ್ಯತೆಯ ಶೇ 53ರಷ್ಟನ್ನು ಆಮದು ಮಾಡಿಕೊಳ್ಳಲಾಯಿತು. ಹಿಂದಿನ ಸರ್ಕಾರಗಳು ಇಂಧನ ಆಮದು ಪ್ರಮಾಣ ತಗ್ಗಿಸುವತ್ತ ಗಮನ ನೀಡಿದ್ದರೆ ಈಗ ಮಧ್ಯಮ ವರ್ಗಕ್ಕೆ ಹೊರೆ ಆಗುತ್ತಿರಲಿಲ್ಲ" ಎಂದು ಅಭಿಪ್ರಾಯಪಟ್ಟಿದ್ದಾರೆ.

"ನಮ್ಮಷ್ಟು ವೈವಿಧ್ಯತೆ ಹೊಂದಿರುವ, ಇಷ್ಟೊಂದು ಪ್ರತಿಭೆ ಹೊಂದಿರುವ ದೇಶವು ಇಂಧನದ ಅಗತ್ಯಗಳಿಗೆ ಈ ರೀತಿಯಲ್ಲಿ ಆಮದನ್ನು ಅವಲಂಬಿಸಿರಬೇಕೆ?. ನಾನು ಯಾರನ್ನೂ ಟೀಕಿಸಲು ಬಯಸುವುದಿಲ್ಲ" ಎಂದು ಹೇಳುತ್ತಲೇ ಇಂಧನ ಬೆಲೆ ಹೆಚ್ಚಳದ ಹೊಣೆಯನ್ನು ಹಿಂದಿನ ಸರ್ಕಾರದ ಮೇಲೆ ಹೊರಿಸಿದ್ದಾರೆ. ಆದರೆ, ತಮ್ಮ ಭಾಷಣದಲ್ಲಿ ಅವರು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ನಿರಂತರವಾಗಿ ಹೆಚ್ಚಳ ಆಗುತ್ತಿರುವುದರ ಬಗ್ಗೆ ಉಲ್ಲೇಖಿಸದಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.

ಇದನ್ನೂ ಓದಿ : ಪಂಜಾಬ್​ ಸ್ಥಳೀಯ ಚುನಾವಣೆ; NOTA ಗಿಂತಲೂ ಕಡಿಮೆ ಮತ ಪಡೆದು ಮುಜುಗರಕ್ಕೀಡಾದ ಬಿಜೆಪಿ

"ಇಂಧನ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಲು ಸಾಮೂಹಿಕ ಪ್ರಯತ್ನದ ಅಗತ್ಯವಿದೆ. ನಮ್ಮ ಸರ್ಕಾರವು ಮಧ್ಯಮ ವರ್ಗದವರ ಬಗ್ಗೆ ಸಂವೇದನಾಶೀಲಕಾರಿಯಾಗಿದೆ. ಹಾಗಾಗಿ ದೇಶವು ಇಂದು ಎಥೆನಾಲ್ ಬಳಕೆಗೆ ಆದ್ಯತೆ ನೀಡುತ್ತಿದೆ. ಇದು ಗ್ರಾಹಕರಿಗೂ ರೈತರಿಗೂ ಸಹಾಯ ಮಾಡುತ್ತದೆ. ಇಂಧನ ಆಮದನ್ನು ತಗ್ಗಿಸಲು ದೇಶ ಯತ್ನಿಸುತ್ತಿದೆ" ಎಂದು ಪ್ರಧಾನಿ ಹೇಳಿದ್ದಾರೆ.

"2014 ರಿಂದ, ನಾವು ತೈಲ ಮತ್ತು ಅನಿಲ ವಲಯದಾದ್ಯಂತ ವಿವಿಧ ಸುಧಾರಣೆಗಳನ್ನು ತಂದಿದ್ದೇವೆ. ಪರಿಶೋಧನೆ ಮತ್ತು ಉತ್ಪಾದನೆ, ನೈಸರ್ಗಿಕ ಅನಿಲ ಮಾರುಕಟ್ಟೆ ಮತ್ತು ವಿತರಣೆಯನ್ನು ಒಳಗೊಂಡಿದೆ. ಹೂಡಿಕೆದಾರ ಸ್ನೇಹಿ ಕ್ರಮಗಳ ಮೂಲಕ ದೇಶೀಯ ಮತ್ತು ಅಂತರರಾಷ್ಟ್ರೀಯ ಹೂಡಿಕೆಯನ್ನು ಆಕರ್ಷಿಸುವ ಕೆಲಸ ಮಾಡುತ್ತಿದ್ದೇವೆ. ಭಾರತದ ಶಕ್ತಿಯ ಮೇಲೆ ಹೂಡಿಕೆ ಮಾಡಬೇಕೆಂದು ಜಗತ್ತಿಗೆ ಹೇಳಲು ನಾನು ಬಯಸುತ್ತೇನೆ" ಎಂದು ಮೋದಿ ತಿಳಿಸಿದ್ದಾರೆ.
Published by: MAshok Kumar
First published: February 19, 2021, 6:18 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories