ಐದು ಬದಲು ಒಂದೇ ವರ್ಷಕ್ಕೆ ಗ್ರಾಚ್ಯುಟಿ ಹಣ ಪಡೆಯುವ ಅವಕಾಶ ನೀಡಿ: ಸಂಸದೀಯ ಸಮಿತಿ ಶಿಫಾರಸು

ಗ್ರಾಚ್ಯುಟಿ ಹಣ ಉಳಿಸುವ ಸಲುವಾಗಿ ಐದು ವರ್ಷ ಸೇವಾವಧಿಗಿಂತ ಮುನ್ನವೇ ಉದ್ಯೋಗಿಗಳನ್ನ ಕೆಲಸದಿಂದ ಕಿತ್ತು ಹಾಕುವ ಪ್ರವೃತ್ತಿ ಕಂಪನಿಗಳಲ್ಲಿ ಬೆಳೆದಿದೆ. ಇದನ್ನು ತಡೆಯಲು ಗ್ರಾಚ್ಯುಟಿಗೆ ಕನಿಷ್ಠ ಸೇವಾವಧಿಯನ್ನು ಒಂದು ವರ್ಷಕ್ಕೆ ಇಳಿಸುವುದು ಸೂಕ್ತ ಎಂದು ಸಂಸದೀಯ ಸಮಿತಿ ಅಭಿಪ್ರಾಯಪಟ್ಟಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • News18
  • Last Updated :
  • Share this:
ನವದೆಹಲಿ(ಆ. 06): ಸಂಬಳದ ಉದ್ಯೋಗಿಗಳಿಗೆ ಪಿಎಫ್​ನಂತೆ ಗ್ರಾಚುಟಿ (ಗೌರವ ಧನ) ಸೌಲಭ್ಯ ಇರುತ್ತದೆ. ಉದ್ಯೋಗಿ ನಿವೃತ್ತನಾದಾಗ ಅಥವಾ ಕೆಲಸ ತ್ಯಜಿಸಿದಾಗ ಗ್ರಾಚ್ಯುಟಿ ಹಣವನ್ನು ನೀಡಲಾಗುತ್ತದೆ. ಆದರೆ, ಆತ ಆ ಕಂಪನಿಯಲ್ಲಿ ಕನಿಷ್ಠ ಐದು ವರ್ಷ ನಿರಂತರವಾಗಿ ಸೇವೆ ಸಲ್ಲಿಸಿರಬೇಕು ಅಷ್ಟೇ. ಆದರೆ, ಸಂಸದೀಯ ಸ್ಥಾಯಿ ಸಮಿತಿಯೊಂದು ಗ್ರಾಚ್ಯುಟಿ ಪಡೆಯಲು ಇರುವ ಐದು ವರ್ಷದ ಕನಿಷ್ಠ ಸೇವಾವಧಿಯನ್ನು ಒಂದು ವರ್ಷಕ್ಕೆ ಇಳಿಸಬೇಕೆಂದು ಶಿಫಾರಸು ಮಾಡಿದೆ. ಜುಲೈ 31ರಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಸಲ್ಲಿಸಲಾದ ಸಾಮಾಜಿಕ ಭದ್ರತಾ ಸಂಹಿತೆ 2019 ವರದಿಯಲ್ಲಿ ಈ ಅಂಶಗಳಿವೆ.

ಕೊರೋನಾ ವೈರಸ್ ಬಿಕ್ಕಟ್ಟು ಸೃಷ್ಟಿಯಾದ ಬಳಿಕ ಬಹಳಷ್ಟು ಕಂಪನಿಗಳು ತಮ್ಮ ಅನೇಕ ಉದ್ಯೋಗಿಗಳನ್ನ ಕೆಲಸದಿಂದ ಕಿತ್ತುಹಾಕಿದ್ದವು. ಬಿಜು ಜನತಾ ದಳ ಸಂಸದ ಭ್ರಾತೃಹರಿ ಮಹತಾಬ್ ನೇತೃತ್ವದ ಸಂಸದೀಯ ಸ್ಥಾಯಿ ಸಮಿತಿ ಈ ವಿಚಾರವನ್ನು ಗಮನಿಸಿ, ಗ್ರಾಚ್ಯುಟಿ ಹಣ ಪಡೆಯಲು ಇರುವ ಸೇವಾವಧಿಯನ್ನು ಇಳಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿದೆ.

ಗ್ರ್ಯಾಚುಟಿ ಹಣ ಪಡೆಯುವ ಈ ಐದು ವರ್ಷಗಳ ಸೇವಾವಧಿಯ ನಿಯಮ ಇರುವುದರಿಂದ ಅನೇಕ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ಐದು ವರ್ಷಕ್ಕಿಂತ ಬೇಗನೇ ಕೆಲಸದಿಂದ ಕಿತ್ತುಹಾಕುವ ಪ್ರವೃತ್ತಿ ಗಮನಕ್ಕೆ ಬಂದಿದೆ. ಇದರಿಂದ ಉದ್ಯೋಗಿಗಳಿಗೆ ಕೆಲಸದ ಜೊತೆಗೆ ಗ್ರಾಚುಟಿ ಹಣವೂ ಕೈಪ್ಪುವಂತಾಗಿದೆ ಎಂದು ಸ್ಥಾಯಿ ಸಮಿತಿ ಆತಂಕ ವ್ಯಕ್ತಪಡಿಸಿದೆ.

ಇದನ್ನೂ ಓದಿ: RBI Repo Rate - ಶೇ. 4ರ ರೆಪೋ ದರ ಉಳಿಸಿಕೊಂಡ ಆರ್​ಬಿಐ; ರಿವರ್ಸ್ ರೆಪೋದಲ್ಲೂ ಇಲ್ಲ ಬದಲಾವಣೆ

ಸಮಿತಿ ಮಾಡಿರುವ ಮತ್ತೊಂದು ಪ್ರಮುಖ ಶಿಫಾರಸು ಎಂದರೆ, ಗ್ರಾಚುಟಿಯನ್ನು ದಿನಗೂಲಿ ನೌಕರರು, ಗುತ್ತಿಗೆ ನೌಕರರು ಹೀಗೆ ಪ್ರತಿಯೊಬ್ಬ ಉದ್ಯೋಗಿಗಳಿಗೂ ನೀಡಬೇಕು. ಕಾಂಟ್ರಾಕ್ಟರ್ ಬದಲಾದವರೂ ಒಂದು ವರ್ಷದವರೆಗೆ ಸೇವೆ ಸಲ್ಲಿಸಿದ ಎಲ್ಲಾ ಗುತ್ತಿಗೆ ನೌಕರರಿಗೆ ಗ್ರಾಚುಟಿ ನೀಡಬೇಕು ಎಂದು ಈ ವರದಿಯಲ್ಲಿ ಸಲಹೆ ನೀಡಲಾಗಿದೆ.

ಏನಿದು ಗ್ರಾಚ್ಯುಟಿ? ಇದನ್ನು ಲೆಕ್ಕ ಹಾಕುವುದು ಹೇಗೆ?

ಗ್ರಾಚ್ಯುಟಿ (Gratuity) ಇದು ಇಂಗ್ಲೀಷ್​ನ Gratitude ನಿಂದ ಉದ್ಭವವಾದ ಪದ. ಒಂದು ಸಂಸ್ಥೆಯು ತನ್ನ ಉದ್ಯೋಗಿಯ ಸೇವೆಯನ್ನು ಪರಿಗಣಿಸಿ ಸಲ್ಲಿಸುವ ಗೌರವ (Gratitude) ಕಾಣಿಕೆ. ಕನಿಷ್ಠ 5 ವರ್ಷ ಸೇವೆ ಸಲ್ಲಿಸಿದವರಿಗೆ ಈ ಗೌರವಧನ ನೀಡಲಾಗುತ್ತದೆ. ಉದ್ಯೋಗಿಯ ಸಂಬಳದಿಂದ ಈ ಹಣವನ್ನು ತೆಗೆಯುವಂತಿಲ್ಲ.

ಗ್ರಾಚ್ಯುಟಿ ಹಣದ ಲೆಕ್ಕ ಮಾಡಲು ಒಂದು ಸರಳ ಸೂತ್ರ ಇದೆ.

ಗ್ರಾಚ್ಯುಟಿ ಹಣ = ವ X ಸಂ X 25/26

ಇಲ್ಲಿ 'ವ' ಎಂದರೆ ಸೇವೆ ಸಲ್ಲಿಸಿ ವರ್ಷಗಳು; 'ಸಂ' ಎಂದರೆ ಕೊನೆಯ ಬಾರಿ ಪಡೆದ ಡಿಎ ಒಳಗೊಂಡಂತಹ ಬೇಸಿಕ್ ಸಂಬಳ.

ಉದಾಹರಣೆಗೆ, ಒಬ್ಬ ಉದ್ಯೋಗಿ 5 ವರ್ಷ ಒಂದು ಕಂಪನಿಯಲ್ಲಿ ಸತತವಾಗಿ ಸೇವೆ ಸಲ್ಲಿಸಿ ಕೆಲಸ ಬಿಟ್ಟುಬಿಡುತ್ತಾನೆಂದಿಟ್ಟುಕೊಳ್ಳೋಣ. ಆತ ಕೆಲಸ ಬಿಡುವ ಮುಂಚಿನ ತಿಂಗಳು ಡಿಎ ಮತ್ತು ಮೂಲ ವೇತನದ ಮೊತ್ತ 15 ಸಾವಿರ ರೂ ಇದೆ. ಆಗ ಗ್ರಾಚ್ಯುಟಿ ಹಣವನ್ನು ಈ ರೀತಿ ಲೆಕ್ಕ ಹಾಕಬಹುದು.

5 X 15000 X 15/26 = 43,269 ರೂ.

ಒಂದು ವೇಳೆ ಉದ್ಯೋಗಿಯು 5 ವರ್ಷ 6 ತಿಂಗಳು ಕೆಲಸ ಮಾಡಿದರೆ ಗ್ರಾಚ್ಯುಟಿ ಹಣದ ಲೆಕ್ಕದಲ್ಲಿ 6 ವರ್ಷ ಎಂದು ಪರಿಗಣಿಸಬೇಕಾಗುತ್ತದೆ. ಒಂದು ವೇಳೆ 5 ವರ್ಷ 4 ತಿಂಗಳು ಕೆಲಸ ಮಾಡಿದರೆ ಅದನ್ನು 5 ವರ್ಷ ಎಂದೇ ಪರಿಗಣಿಸಲಾಗುತ್ತದೆ.

ಗ್ರಾಚ್ಯುಟಿ ಕಾಯ್ದೆ ಪ್ರಕಾರ, ಒಬ್ಬ ಉದ್ಯೋಗಿಗೆ ನೀಡುವ ಗ್ರಾಚ್ಯುಟಿ ಹಣ 10 ಲಕ್ಷ ಮೀರಬಾರದು ಎಂದಿದೆ. ಆದರೆ, ಕಂಪನಿಗಳು ಇಚ್ಛಿಸಿದರೆ ನೈತಿಕ ರೂಪದಲ್ಲಿ 10 ಲಕ್ಷಕ್ಕಿಂತ ಹೆಚ್ಚು ಹಣ ನೀಡಬಹುದು ಅಷ್ಟೇ.
Published by:Vijayasarthy SN
First published: