ಸೆ.14ರಿಂದ ಅ.1ರವರೆಗೆ ಸಂಸತ್ ಅಧಿವೇಶನ; ಭಿನ್ನವಾಗಿ ನಡೆಯಲಿದೆ ಲೋಕಸಭೆ ಮತ್ತು ರಾಜ್ಯಸಭೆ ಕಲಾಪ

ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ದೃಷ್ಟಿಯಿಂದ ಲೋಕಸಭಾ ಮತ್ತು ರಾಜ್ಯಸಭಾ ಸದಸ್ಯರಿಗೆ ಆಸನದ ವ್ಯವಸ್ಥೆಯೂ ಭಿನ್ನವಾಗಿರಲಿದೆ. 542 ಲೋಕಸಭಾ ಸದಸ್ಯರ ಪೈಕಿ ಕೆಲವರಿಗೆ ಲೋಕಸಭೆಯಲ್ಲಿ, ಕೆಲವರಿಗೆ ರಾಜ್ಯಸಭೆಯಲ್ಲಿ ಮತ್ತೆ ಕೆಲವರಿಗೆ ಸೆಂಟ್ರಲ್ ಹಾಲ್ ನಲ್ಲಿ ಆಸನದ ವ್ಯವಸ್ಥೆ ಮಾಡಲಾಗುತ್ತದೆ.

ಮಾನ್ಸೂನ್ ಸೆಷನ್​

ಮಾನ್ಸೂನ್ ಸೆಷನ್​

  • Share this:
ನವದೆಹಲಿ ( ಸೆ. 1): ಕಡೆಗೂ ಸಂಸತ್ತಿನ ಮುಂಗಾರು ಅಧಿವೇಶನಕ್ಕೆ ದಿನಾಂಕ ನಿಗದಿಯಾಗಿದೆ.‌ ಸೆಪ್ಟೆಂಬರ್ 14ರಿಂದ ಅಕ್ಟೋಬರ್ 1ರವರೆಗೆ ಅಧಿವೇಶನ ನಡೆಸಲಾಗುವುದು ಎಂದು ಲೋಕಸಭೆ ಮತ್ತು ರಾಜ್ಯಸಭೆಯ ಸಚಿವಾಲಯಗಳು ಅಧಿಕೃತ ಆದೇಶ ಹೊರಡಿಸಿವೆ. ಕೊರೋನಾ ಹಿನ್ನಲೆಯಲ್ಲಿ ಜನರ ಜೀವನಶೈಲಿಯೇ ಬದಲಾಗಿದೆ. ಜೊತೆಗೆ ಸರ್ಕಾರದ ಆಡಳಿತ ಶೈಲಿ ಕೂಡ. ಇದೇ ರೀತಿ ಈಗ ಇದೇ ಮೊದಲ ಬಾರಿಗೆ ದೇಶದ ಸಂಸತ್ ಅಧಿವೇಶನವೂ ಭಿನ್ನವಾಗಿ ನಡೆಯಲಿದೆ. ಈ ಬಾರಿಯ ಸಂಸತ್ತಿನ ಮಳೆಗಾಲದ ಅಧಿವೇಶನವನ್ನು ಶಿಫ್ಟ್ ನಲ್ಲಿ ನಡೆಸಲು ನಿರ್ಧರಿಸಲಾಗಿದೆ. ಅಂದರೆ ಬೆಳಿಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ಲೋಕಸಭೆ ಮತ್ತು ಮಧ್ಯಾಹ್ನ 3ರಿಂದ ಸಂಜೆ 7ರವರೆಗೆ ರಾಜ್ಯಸಭೆ ಕಲಾಪ ಮಾಡಲು ನಿರ್ಧರಿಸಲಾಗಿದೆ.

ಕೊರೋನಾ ಕಾರಣಕ್ಕೆ ಈ ಬಾರಿಯ ಸಂಸತ್ತಿನ ಮುಂಗಾರು ಅಧಿವೇಶನವನ್ನು ಹೇಗೆ ನಡೆಸಬೇಕೆಂಬ ಗೊಂದಲ ಉಂಟಾಗಿತ್ತು. ಸಂಸತ್ ಸಚಿವಾಲಯದ ಅಧಿಕಾರಿಗಳು ವರ್ಚ್ಯುಯಲ್, ಸೆಮಿ ವರ್ಚ್ಯುಯಲ್, ಬೇರೆ ಬೇರೆ ಪ್ರದೇಶಗಳಲ್ಲಿ ಸಂಸದನ್ನು ಕೂರಿಸಿ, ಕೆಲವರನ್ನು ಮಾತ್ರ ಸೇರಿಸಿಕೊಂಡು ಎಂಬ ಹಲವು ಮಾದರಿಗಳನ್ನು ನೀಡಿದ್ದರು. ಶಿಫ್ಟ್ ನಲ್ಲಿ ಅಥವಾ ದಿನ ಬಿಟ್ಟು ದಿನ ಅಧಿವೇಶನ ನಡೆಸುವ ಎರಡು ಆಯ್ಕೆಗಳನ್ನು ಮುಂದಿಡಲಾಗಿತ್ತು. ಅಂತಿಮವಾಗಿ ರಾಜ್ಯಸಭೆಯ ಸಭಾಪತಿ ಎಂ.‌ ವೆಂಕಯ್ಯನಾಯ್ಡು ಮತ್ತು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಸಂಸತ್ ಸಚಿವಾಲಯದ ಅಧಿಕಾರಿಗಳ ಜೊತೆ ಹಲವು‌ ಸುತ್ತಿನ ಮಾತುಕತೆ ನಡೆಸಿ, ಹಲವು ಸಾಧ್ಯತೆಗಳನ್ನು ಪರಿಶೀಲಿಸಿ ದಿನ ಬಳಿಕ ಶಿಫ್ಟ್ ನಲ್ಲಿ ನಡೆಸಲು ನಿರ್ಧರಿಸಿದ್ದಾರೆ ಎಂದು ಗೊತ್ತಾಗಿದೆ.

ಕಡೆಯದಾಗಿ ಸಂಸತ್ ಅಧಿವೇಶನ ನಡೆದಿದ್ದು ಮಾರ್ಚ್ 23ರಂದು. ಸಂಸತ್ತಿನ ನಿಯಮಾವಳಿಗಳ ಪ್ರಕಾರ 6 ತಿಂಗಳೊಳಗೆ ಮತ್ತೆ ಅಧಿವೇಶನ ನಡೆಸಲೇಬೇಕು. ಆದುದರಿಂದ ಕೊರೊನಾ ನಡುವೆಯೂ ಸೆಪ್ಟೆಂಬರ್ 22ರೊಳಗೆ ಅಧಿವೇಶನ ನಡೆಸಲೇಬೇಕಾದ ಒತ್ತಡ ನಿರ್ಮಾಣವಾಗಿತ್ತು. ಇದೇ ಹಿನ್ನಲೆಯಲ್ಲಿ ಸೆಪ್ಟೆಂಬರ್ 14ರಿಂದ ಅಧಿವೇಶನ ನಡೆಸಲು ನಿರ್ಣಯ ಮಾಡಲಾಗಿದೆ.

ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ದೃಷ್ಟಿಯಿಂದ ಲೋಕಸಭಾ ಮತ್ತು ರಾಜ್ಯಸಭಾ ಸದಸ್ಯರಿಗೆ ಆಸನದ ವ್ಯವಸ್ಥೆಯೂ ಭಿನ್ನವಾಗಿರಲಿದೆ. 542 ಲೋಕಸಭಾ ಸದಸ್ಯರ ಪೈಕಿ ಕೆಲವರಿಗೆ ಲೋಕಸಭೆಯಲ್ಲಿ, ಕೆಲವರಿಗೆ ರಾಜ್ಯಸಭೆಯಲ್ಲಿ ಮತ್ತೆ ಕೆಲವರಿಗೆ ಸೆಂಟ್ರಲ್ ಹಾಲ್ ನಲ್ಲಿ ಆಸನದ ವ್ಯವಸ್ಥೆ ಮಾಡಲಾಗುತ್ತದೆ. ಅಗತ್ಯ ಬಿದ್ದರೆ ಲೋಕಸಭೆ ಮತ್ತು ರಾಜ್ಯಸಭೆ ಗ್ಯಾಲರಿಗಳಲ್ಲಿ ಕೂಡ ಆಸನದ ವ್ಯವಸ್ಥೆ ಮಾಡಲಾಗುತ್ತದೆ‌.

ಈ ಬಾರಿಯ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಪ್ರಶ್ನೋತ್ತರ ಮತ್ತು ಶೂನ್ಯವೇಳೆ ಇರುವುದಿಲ್ಲ. ಪ್ರೈವೇಟ್ ಮೆಂಬರ್ ಬಿಲ್ ಮಂಡಿಸುವುದಕ್ಕೂ ಅವಕಾಶ ಇರುವುದಿಲ್ಲ. ಸಂಸದರು ಆರೋಗ್ಯ ಸೇತು ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕಿರುವುದು ಕಡ್ಡಾಯವಾಗಿದೆ. ಎಲ್ಲರನ್ನೂ ತಪಾಸಣೆ ಮಾಡಿದ ಬಳಿಕವೇ ಒಳಗಡೆಗೆ ಪ್ರವೇಶಾವಕಾಶ ಕಲ್ಪಿಸಲಾಗುತ್ಯದೆ. ಅಧಿವೇಶನದ ಹಿನ್ನಲೆಯಲ್ಲಿ ಇಡೀ ಸಂಸತ್ ಭವನಕ್ಕೆ ಸ್ಯಾನಿಟೈಸ್ ಮಾಡಲಾಗುತ್ತದೆ. ಸಂಸದರ ಪಿಎಗಳಿಗೆ ಸಂಸತ್ ಭವನಕ್ಕರೆ ಪ್ರವೇಶಾವಕಾಶ ನಿರಾಕರಿಸಲಾಗುತ್ತದೆ.
Published by:Rajesh Duggumane
First published: