ಕೊರೋನಾ ಆತಂಕದ ನಡುವೆ ಸಂಸತ್ ಅಧಿವೇಶನ ಹೇಗೆ ನಡೆಯಲಿದೆ ಗೊತ್ತಾ?

ಸಾಮಾಜಿಕ ಅಂತರ ಕಾಪಾಡಿಕೊಂಡೇ ಅಧಿವೇಶನ ನಡೆಸುವ ಬಗ್ಗೆಯೂ ಪರಿಶೀಲನೆ ನಡೆಸುತ್ತಿದ್ದಾರೆ. ಲೋಕಸಭೆ, ರಾಜ್ಯಸಭೆಗಳಲ್ಲದೆ ಸೆಂಟ್ರಲ್ ಹಾಲ್, ವಿಜ್ಞಾನ ಭವನದಲ್ಲೂ ಆಸನದ ವ್ಯವಸ್ಥೆ ಮಾಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಆದರೂ ಜಾಗದ ಸಮಸ್ಯೆ ಆಗುವ ಆತಂಕ ಕೂಡ ವ್ಯಕ್ತವಾಗಿದೆ. ಏಕೆಂದರೆ 543 ಜನ ಲೋಕಸಭಾ ಸದಸ್ಯರು ಹಾಗೂ 243ಜನ ರಾಜ್ಯಸಭಾ ಸದಸ್ಯರಿಗೆ ಆಸನದ ವ್ಯವಸ್ಥೆ ಮಾಡಬೇಕಾಗಿದೆ.

ಸಂಸತ್​ ಚಿತ್ರಣ

ಸಂಸತ್​ ಚಿತ್ರಣ

  • Share this:
ನವದೆಹಲಿ(ಜೂ.10): ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಪ್ರತಿವರ್ಷದಂತೆ ಜುಲೈನಲ್ಲಿ ನಡೆಸಬೇಕಿರುವ ಸಂಸತ್ತಿನ ಮುಂಗಾರು ಅಧಿವೇಶನವನ್ನು‌ ಹೇಗೆ ನಡೆಸಬೇಕೆಂದು ಕೇಂದ್ರ ಸರ್ಕಾರಕ್ಕೆ ತಲೆನೋವು ಶುರುವಾಗಿದೆ.

ಈ ಬಗ್ಗೆ ಈಗಾಗಲೇ ಸಂಸತ್ತಿನ‌ ಸಚಿವಾಲಯದ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದು ರಾಜ್ಯಸಭಾ ಸಭಾಪತಿ ಎಂ. ವೆಂಕಯ್ಯ ನಾಯ್ಡು ಮತ್ತು ಲೋಕಸಭಾ ಸ್ಪೀಕರ್  ಓಂ ಬಿರ್ಲಾ ಬಳಿ ಎರಡು ರೀತಿಯ ಪ್ರಸ್ತಾಪ ನೀಡಿದ್ದಾರೆಂದು ತಿಳಿದುಬಂದಿದೆ.

ಒಂದು ಮುಂಬರುವ ಮುಂಗಾರಿನ‌ ಅಧಿವೇಶನವನ್ನು ವರ್ಚ್ಯುಯಲ್ ಆಗಿ ನಡೆಸುವುದು ಅಂತ. ಇನ್ನೊಂದು ಸೆಮಿ ವರ್ಚ್ಯುಯಲ್ ಅಧಿವೇಶನ ನಡೆಸುವುದು ಎಂದು. ವರ್ಚ್ಯುಯಲ್ ಅಧಿವೇಶನ‌ ಎಂದರೆ ಸಂಪೂರ್ಣ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸುವುದು. ಸೆಮಿ ವರ್ಚ್ಯುಯಲ್ ಎಂದರೆ ಕೆಲವು ಸದಸ್ಯರು ಖುದ್ದು ಹಾಜರಾಗಲು ಅವಕಾಶ ಕಲ್ಪಿಸಿ, ಇನ್ನುಳಿದವರು ಹೊರಗಡೆಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಲು ಅವಕಾಶ ನೀಡುವುದು.

ಇದಲ್ಲದೇ ಸಾಮಾಜಿಕ ಅಂತರ ಕಾಪಾಡಿಕೊಂಡೇ ಅಧಿವೇಶನ ನಡೆಸುವ ಬಗ್ಗೆಯೂ ಪರಿಶೀಲನೆ ನಡೆಸುತ್ತಿದ್ದಾರೆ. ಲೋಕಸಭೆ, ರಾಜ್ಯಸಭೆಗಳಲ್ಲದೆ ಸೆಂಟ್ರಲ್ ಹಾಲ್, ವಿಜ್ಞಾನ ಭವನದಲ್ಲೂ ಆಸನದ ವ್ಯವಸ್ಥೆ ಮಾಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಆದರೂ ಜಾಗದ ಸಮಸ್ಯೆ ಆಗುವ ಆತಂಕ ಕೂಡ ವ್ಯಕ್ತವಾಗಿದೆ. ಏಕೆಂದರೆ 543 ಜನ ಲೋಕಸಭಾ ಸದಸ್ಯರು ಹಾಗೂ 243ಜನ ರಾಜ್ಯಸಭಾ ಸದಸ್ಯರಿಗೆ ಆಸನದ ವ್ಯವಸ್ಥೆ ಮಾಡಬೇಕಾಗಿದೆ.

ಮಾರಕ ಕೊರೋನಾ ಸೋಂಕಿಗೆ ತಮಿಳುನಾಡಿನ ಡಿಎಂಕೆ ಶಾಸಕ ಅನ್ಬಳಗನ್ ಬಲಿ

ಆದರೆ ಲೋಕಸಭೆಯಲ್ಲಿ ಕೇವಲ 60 ಸಂಸದರಿಗೆ, ಸೆಂಟ್ರಲ್ ಹಾಲ್ ನಲ್ಲಿ 100 ಸಂಸದರಿಗೆ ಹಾಗೂ ವಿಜ್ಞಾನ ಭವನದಲ್ಲಿ ಹೆಚ್ಚೆಂದರೆ 100 ಸಂಸದರಿಗೆ ಆಸನ ವ್ಯವಸ್ಥೆ ಮಾಡಬಹುದು. ಉಳಿದವರಿಗೆ ಏನು ಮಾಡಬೇಕೆಂಬ ಸಮಸ್ಯೆ ತಲೆದೂರಿದೆ.
ಈ ಬಗ್ಗೆ ಅಧಿಕಾರಿಗಳು  ಎಂ. ವೆಂಕಯ್ಯ ನಾಯ್ಡು ಮತ್ತು  ಓಂ ಬಿರ್ಲಾ ಬಳಿ ಅಸಹಾಯಕತೆ ತೋಡಿಕೊಂಡಿದ್ದಾರೆ.

ಅಧಿಕಾರಿಗಳಿಗೆ ಬೇರೆ ಪರಿಹಾರ ಮಾರ್ಗಗಳನ್ನು ಹುಡುಕುವಂತೆ ವೆಂಕಯ್ಯ ನಾಯ್ಡು ಮತ್ತು  ಓಂ ಬಿರ್ಲಾ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.‌ ಸದ್ಯ ಈ ಬಾರಿಯ ಸಂಸತ್ತಿನ ಮುಂಗಾರು ಅಧಿವೇಶನ ಹೇಗೆ ನಡೆಯಲಿದೆ ಎಂಬುದು  ಕುತೂಹಲಕಾರಿ ವಿಷಯವಾಗಿದೆ.
First published: