• Home
  • »
  • News
  • »
  • national-international
  • »
  • Parliament Session - ಇಂದಿನಿಂದ ಸಂಸತ್ ಅಧಿವೇಶನ: ಫೆ.1ಕ್ಕೆ ಬಜೆಟ್ ಮಂಡನೆ

Parliament Session - ಇಂದಿನಿಂದ ಸಂಸತ್ ಅಧಿವೇಶನ: ಫೆ.1ಕ್ಕೆ ಬಜೆಟ್ ಮಂಡನೆ

ಭಾರತೀಯ ಸಂಸತ್

ಭಾರತೀಯ ಸಂಸತ್

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಲೋಕಸಭೆ ಮತ್ತು ರಾಜ್ಯಸಭೆ ಉಭಯ ಸದನಗಳನ್ನು ಉದ್ದೇಶಿಸಿ ಮಾಡುವ ಭಾಷಣವನ್ನು 16 ಪ್ರತಿಪಕ್ಷಗಳು ಬಹಿಷ್ಕಾರ ಮಾಡಲಿವೆ. ಈ ಬಾರಿ ಚಳಿಗಾಲ ಮತ್ತು ಬಜೆಟ್ ಅಧಿವೇಶನ ಎರಡೂ ಒಟ್ಟಿಗೆ ನಡೆಯುತ್ತಿವೆ.

  • Share this:

ನವದೆಹಲಿ(ಜ. 29): ಕೊರೋನಾ ಕಾರಣದಿಂದ ಅನಿಶ್ಚಿತಗೊಂಡಿದ್ದ ಸಂಸತ್ತಿನ ಬಜೆಟ್ ಅಧಿವೇಶನ ಇಂದಿನಿಂದ ನಡೆಯಲಿದೆ.‌ ಈ ಬಾರಿ ಚಳಿಗಾಲದ ಅಧಿವೇಶನ ಮತ್ತು ಬಜೆಟ್ ಅಧಿವೇಶನಗಳೆರಡನ್ನೂ ಒಟ್ಟುಗೂಡಿಸಿ ನಡೆಸುತ್ತಿರುವುದರಿಂದ ಇಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಜಂಟಿ ಸದನ ಉದ್ದೇಶಿಸಿ ಭಾಷಣ ಮಾಡುತ್ತಾರೆ. ಹಾಗೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1ರಂದು ಬಹು ನಿರೀಕ್ಷಿತ ಬಜೆಟ್ ಮಂಡಿಸಲಿದ್ದಾರೆ.


ಕೊರೋನಾ ಕಾರಣಕ್ಕೆ ಈ ಬಾರಿಯ ಸಂಸತ್ ಅಧಿವೇಶನದಲ್ಲಿ ಪಾಲ್ಗೊಳ್ಳುವ ಸಂಸತ್ ಸದಸ್ಯರು RT-PCR ಟೆಸ್ಟ್ ಮಾಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಈ ಹಿಂದೆಯೇ ತಿಳಿಸಿದ್ದಾರೆ. ದೇಶದಲ್ಲಿ ಇನ್ನು ಕೂಡ ಕೊರೋನಾ ವೈರಸ್ ಹರಡುವಿಕೆ ಕಡಿಮೆ ಆಗಿಲ್ಲದ ಕಾರಣ ಬಜೆಟ್ ಅಧಿವೇಶನವನ್ನೂ ಮಳೆಗಾಲದ ಅಧಿವೇಶನದಂತೆ ಶಿಫ್ಟ್ ನಲ್ಲಿ ನಡೆಸಲು ನಿರ್ಧರಿಸಲಾಗಿದೆ. ಬೆಳಿಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ರಾಜ್ಯಸಭೆಯ ಕಲಾಪಗಳು ನಡೆಯಲಿವೆ.  2 ಗಂಟೆಗಳ ಬಿಡುವಿನಲ್ಲಿ ಕಲಾಪ ನಡೆಯುವ ಸ್ಥಳವನ್ನು ಸ್ಯಾನಿಟೈಸ್ ಮಾಡಿ ಮತ್ತೆ ಸಂಜೆ 4ರಿಂದ ರಾತ್ರಿ 9 ಗಂಟೆವರೆಗೆ ಲೋಕಸಭೆಯ ಕಲಾಪ ನಡೆಸಲಾಗುವುದು ಎಂದು ಹೇಳಿದ್ದಾರೆ.


ಸಮಯಾವಕಾಶ ಕಡಿಮೆ ಇರುವುದರಿಂದ ಕಲಾಪದಲ್ಲಿ ಶೂನ್ಯ ವೇಳೆ ಮತ್ತು ಪ್ರಶ್ನೋತ್ತರಕ್ಕೆ ಅವಕಾಶ ನೀಡಲಾಗುತ್ತದೆಯೇ ಎಂಬ ಪ್ರಶ್ನೆ ಉದ್ಭವಿಸಿತ್ತು. ಈ ಬಗ್ಗೆ ಸ್ಪಷ್ಟೀಕರಣ ನೀಡಿರುವ ಓಂ ಬಿರ್ಲ, ಈ ಬಾರಿಯ ಬಜೆಟ್ ಅಧಿವೇಶನದಲ್ಲಿ ಶೂನ್ಯ ವೇಳೆ ಮತ್ತು ಪ್ರಶ್ನೋತ್ತರಗಳು ಇರಲಿವೆ ಎಂದು ತಿಳಿಸಿದ್ದಾರೆ.


ಇದನ್ನೂ ಓದಿ: Delhi Air Pollution | ದೆಹಲಿಯಲ್ಲಿ ನಿರಂತರವಾಗಿ ಕುಸಿಯುತ್ತಿದೆ ಗಾಳಿಯ ಗುಣಮಟ್ಟ; ಹೆಚ್ಚುತ್ತಲೇ ಇದೆ ವಾಯು ಮಾಲಿನ್ಯ


ಸಂಸದೀಯ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯು ಜನವರಿ 29ರಿಂದ ಏಪ್ರಿಲ್ 8ರವರೆಗೆ ಬಜೆಟ್ ಅಧಿವೇಶನ ನಡೆಸುವಂತೆ ಶಿಫಾರಸು ಮಾಡಿತ್ತು.‌ ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿ ಶಿಫಾರಸಿನ ಅನ್ವಯ ಜನವರಿ 29 ರಿಂದ ಫೆಬ್ರವರಿ 15ರವರೆಗೆ ಮೊದಲ ಹಂತದ ಅಧಿವೇಶನ ನಡೆಸಲಾಗುವುದು. ನಂತರ. ಮಾರ್ಚ್ 8 ರಿಂದ ಏಪ್ರಿಲ್ 8ರವರೆಗೆ ಎರಡನೇ ಹಂತದ ಅಧಿವೇಶನ ನಡೆಸಲಾಗುವುದು ಎಂದು ಹೇಳಿದ್ದಾರೆ.


ಈ ನಡುವೆ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಇಂದು ಲೋಕಸಭೆ ಮತ್ತು ರಾಜ್ಯಸಭೆ ಉಭಯ ಸದನಗಳನ್ನು ಉದ್ದೇಶಿಸಿ ಮಾಡುವ ಭಾಷಣವನ್ನು 16 ಪ್ರತಿಪಕ್ಷಗಳು ಬಹಿಷ್ಕಾರ ಮಾಡಲಿವೆ. ಕೇಂದ್ರ ಸರ್ಕಾರ ಇತ್ತೀಚೆಗೆ ತಂದಿರುವ ರೈತ ವಿರೋಧಿ ಕಾನೂನುಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಲು ಹಾಗೂ ಇದಕ್ಕೆ ಸಂಬಂಧಿಸಿದಂತೆ ರೈತರು ದೆಹಲಿ ಗಡಿಗಳಲ್ಲಿ ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಲು ರಾಷ್ಟ್ರಪತಿ ಭಾಷಣ ಬಹಿಷ್ಕಾರಕ್ಕೆ ನಿರ್ಧರಿಸಿವೆ.


ಇದನ್ನೂ ಓದಿ: ಯಾರು ಈ ಮಾಜಿ ಗ್ಯಾಂಗ್​ಸ್ಟರ್​ ಲಖಾ ಸಿಧಾನಾ; ಜ.26ರ ಗಲಭೆಯಲ್ಲಿ ಈತನೂ ಪಾತ್ರಧಾರಿಯೇ?


ಫೆಬ್ರವರಿ 1ಕ್ಕೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡುವರು. ಇದು ಕೊರೋನಾ ಮತ್ತು ಲಾಕ್ಡೌನ್ ನಂತರ ಮಂಡನೆ ಆಗುತ್ತಿರುವ ಮೊದಲ ಬಜೆಟ್ ಇದಾಗಿರುವುದರಿಂದ ಈ ಬಜೆಟ್ ತೀವ್ರ ಕುತೂಹಲ ಮೂಡಿಸಿದೆ. ಹಾಗೂ ಅಷ್ಟೇ ಮಹತ್ವವನ್ನೂ ಪಡೆದುಕೊಂಡಿದೆ. ದೇಶದಲ್ಲಿ ಆರ್ಥಿಕ ಮುಗ್ಗಟ್ಟು ಸೃಷ್ಟಿಯಾಗಿದ್ದು ಆರ್ಥಿಕ ಪುನಶ್ಚೇತನಕ್ಕೆ ಪೂರಕವಾದ ಬಜೆಟ್ ಮಂಡಿಸುವ ಗುರುತರ ಹೊಣೆಗಾರಿಕೆ ನಿರ್ಮಲಾ ಸೀತಾರಾಮನ್ ಅವರ ಮೇಲಿದೆ.


ಕೋವಿಡ್ ಮಾರ್ಗಸೂಚಿಗಳ ಅನ್ವಯ ಉಭಯ ಸದನಗಳಲ್ಲಿ ತಲಾ 4 ಗಂಟೆಗಳ ಕಾಲ ಅಧಿವೇಶನ ನಡೆಸಲು ತೀರ್ಮಾನಿಸಲಾಗಿದೆ.  ಸಾಮಾಜಿಕ ಅಂತರ ಕಾಯ್ದುಕೊಂಡು ಅಧಿವೇಶನ ನಡೆಸಲು ನಿರ್ಧರಿಸಲಾಗಿದೆ.‌ ಅದಕ್ಕಾಗಿ ಲೋಕಸಭೆ, ರಾಜ್ಯಸಭೆಯ ಸಂಸದರ ಗ್ಯಾಲರಿಗಳು, ಸ್ಪೀಕರ್ ಗ್ಯಾಲರಿಗಳು, ಸಂದರ್ಶಕರ ಗ್ಯಾಲರಿಗಳು, ಸೆಂಟ್ರಲ್ ಹಾಲ್ ಮತ್ತಿತರ ಜಾಗಗಳಲ್ಲಿ ಸಂಸದರಿಗೆ ಆಸನದ ವ್ಯವಸ್ಥೆ  ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. ಅಧಿವೇಶನದಲ್ಲಿ ಕೊರೊನಾ, ಆರ್ಥಿಕ ಹಿನ್ನಡೆ, ಗಡಿ ಸಮಸ್ಯೆ ಬಗ್ಗೆ ಚರ್ಚೆಯಾಗುವ ಸಂಭವ ಇದೆ.


ವರದಿ: ಧರಣೀಶ್ ಬೂಕನಕೆರೆ

Published by:Vijayasarthy SN
First published: