Parliament Monsoon session : ಸೆಪ್ಟೆಂಬರ್ 14 ರಿಂದ ಸಂಸತ್ ಮುಂಗಾರು ಅಧಿವೇಶನ ಆರಂಭ ಸಾಧ್ಯತೆ

ಸಂಸತ್​ ಭವನ

ಸಂಸತ್​ ಭವನ

ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ದೃಷ್ಟಿಯಿಂದ 542 ಲೋಕಸಭಾ ಸದಸ್ಯರ ಪೈಕಿ ಕೆಲವರಿಗೆ ಲೋಕಸಭೆಯಲ್ಲಿ, ಕೆಲವರಿಗೆ ರಾಜ್ಯಸಭೆಯಲ್ಲಿ ಮತ್ತೆ ಕೆಲವರಿಗೆ ಸೆಂಟ್ರಲ್ ಹಾಲ್ ನಲ್ಲಿ ಆಸನದ ವ್ಯವಸ್ಥೆ ಮಾಡಲಾಗುತ್ತದೆ

  • Share this:

ನವದೆಹಲಿ(ಆಗಸ್ಟ್​.21): ಕಡೆಗೂ ಸಂಸತ್ತಿನ ಮುಂಗಾರು ಅಧಿವೇಶನಕ್ಕೆ ದಿನಾಂಕ ನಿಗಧಿಯಾಗಿದೆ.‌ ಸೆಪ್ಟೆಂಬರ್ 14 ರಿಂದ ಅಧಿವೇಶನ ‌ಆರಂಭವಾಗಲಿದೆ ಎಂದು ಕೇಂದ್ರ ಸರ್ಕಾರದ ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಕೊರೋನಾ ಹಿನ್ನಲೆಯಲ್ಲಿ ಜನರ ಜೀವನ ಶೈಲಿಯೇ ಬದಲಾಗಿದೆ. ಜೊತೆಗೆ ಸರ್ಕಾರದ ಯಂತ್ರದ ಶೈಲಿ ಕೂಡ. ಇದೇ ರೀತಿ ಈಗ ಇದೇ ಮೊದಲ ಬಾರಿಗೆ ದೇಶದ ಘನತೆವೆತ್ತ ಸಂಸತ್ ಅಧಿವೇಶನವೂ ಭಿನ್ನವಾಗಿ ನಡೆಯಲಿದೆ. ಈ ಬಾರಿಯ ಸಂಸತ್ತಿನ ಮುಂಗಾರು ಅಧಿವೇಶನವನ್ನು ದಿನ ಬಿಟ್ಟು ದಿನ ನಡೆಸಲು ನಿರ್ಧರಿಸಲಾಗಿದೆ.


ಕೊರೋನಾ ಕಾರಣಕ್ಕೆ ಈ ಬಾರಿಯ ಸಂಸತ್ತಿನ ಮುಂಗಾರು ಅಧಿವೇಶನವನ್ನು ಹೇಗೆ ನಡೆಸಬೇಕೆಂಬ ಗೊಂದಲ ಉಂಟಾಗಿತ್ತು. ಸಂಸತ್ ಸಚಿವಾಲಯದ ಅಧಿಕಾರಿಗಳು ವರ್ಚ್ಯುಯಲ್, ಸೆಮಿ ವರ್ಚ್ಯುಯಲ್, ಬೇರೆ ಬೇರೆ ಪ್ರದೇಶಗಳಲ್ಲಿ ಸಂಸದನ್ನು ಕೂರಿಸಿ, ಕೆಲವರನ್ನು ಮಾತ್ರ ಸೇರಿಸಿಕೊಂಡು ಎಂಬ ಹಲವು ಮಾದರಿಗಳನ್ನು ನೀಡಿದ್ದರು. ಶಿಫ್ಟ್ ನಲ್ಲಿ ಅಥವಾ ದಿನ ಬಿಟ್ಟು ದಿನ ಅಧಿವೇಶನ ನಡೆಸುವ ಎರಡು ಆಯ್ಕೆಗಳನ್ನು ಮುಂದಿಡಲಾಗಿತ್ತು. ಅಂತಿಮವಾಗಿ ರಾಜ್ಯಸಭೆಯ ಸಭಾಪತಿ ಎಂ.‌ ವೆಂಕಯ್ಯನಾಯ್ಡು ಮತ್ತು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಸಂಸತ್ ಸಚಿವಾಲಯದ ಅಧಿಕಾರಿಗಳ ಜೊತೆ ಹಲವು‌ ಸುತ್ತಿನ ಮಾತುಕತೆ ನಡೆಸಿ, ಹಲವು ಸಾಧ್ಯತೆಗಳನ್ನು ಪರಿಶೀಲಿಸಿ ದಿನ ಬಿಟ್ಟು ದಿನ ನಡೆಸಲು ನಿರ್ಧರಿಸಿದ್ದಾರೆ ಎಂದು ಗೊತ್ತಾಗಿದೆ.


ಕಡೆಯದಾಗಿ ಸಂಸತ್ ಅಧಿವೇಶನ ನಡೆದಿದ್ದು ಮಾರ್ಚ್ 23ರಂದು. ಸಂಸತ್ತಿನ ನಿಯಮಾವಳಿಗಳ ಪ್ರಕಾರ 6 ತಿಂಗಳೊಳಗೆ ಮತ್ತೆ ಅಧಿವೇಶನ ನಡೆಸಲೇಬೇಕು. ಆದುದರಿಂದ ಕೊರೋನಾ ನಡುವೆಯೂ ಸೆಪ್ಟೆಂಬರ್ 22 ರೊಳಗೆ ಅಧಿವೇಶನ ನಡೆಸಲೇಬೇಕಾದ ಒತ್ತಡ ನಿರ್ಮಾಣವಾಗಿತ್ತು. ಇದೇ ಹಿನ್ನಲೆಯಲ್ಲಿ ಸೆಪ್ಟೆಂಬರ್ 14ರಿಂದ ಅಧಿವೇಶನ ನಡೆಸಲು ನಿರ್ಣಯ ಮಾಡಲಾಗಿದೆ.


ಶಿಫ್ಟ್ ನಲ್ಲಿ ಎಂದರೆ ಬೆಳಿಗ್ಗೆ ಒಂದು ಸದನ ಮತ್ತು (ಲೋಕಸಭೆ ಅಥವಾ ರಾಜ್ಯಸಭೆ) ಮಧ್ಯಾಹ್ನ ಇನ್ನೊಂದು ಸದನ ನಡೆಸುವ ಆಲೋಚನೆ ಇತ್ತು. ಅದರ ಬದಲಾಗಿ ಈಗ ಒಂದು ದಿನ ಲೋಕಸಭೆ ಇನ್ನೊಂದು ದಿನ ರಾಜ್ಯಸಭಾ ಕಲಾಪ ನಡೆಸಲು ನಿರ್ಧರಿಸಲಾಗಿದೆ. ಸೆಪ್ಟೆಂಬರ್ 14 ರಿಂದ 4 ವಾರಗಳ ಕಾಲ ಸದನ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿದು ಬಂದಿದೆ.


ಇದನ್ನೂ ಓದಿ : SP balasubrahmanyam – ಎಸ್​ಪಿ ಬಾಲಸುಬ್ರಹ್ಮಣ್ಯಂ ಇನ್ನೂ ಗಂಭೀರ ಸ್ಥಿತಿಯಲ್ಲೇ; ಚಿತ್ರರಂಗಗಳ ದಿಗ್ಗಜರಿಂದ ಸಾಮೂಹಿಕ ಪ್ರಾರ್ಥನೆ


ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ದೃಷ್ಟಿಯಿಂದ ಲೋಕಸಭಾ ಮತ್ತು ರಾಜ್ಯಸಭಾ ಸದಸ್ಯರಿಗೆ ಆಸನದ ವ್ಯವಸ್ಥೆಯೂ ಭಿನ್ನವಾಗಿರಲಿದೆ. 542 ಲೋಕಸಭಾ ಸದಸ್ಯರ ಪೈಕಿ ಕೆಲವರಿಗೆ ಲೋಕಸಭೆಯಲ್ಲಿ, ಕೆಲವರಿಗೆ ರಾಜ್ಯಸಭೆಯಲ್ಲಿ ಮತ್ತೆ ಕೆಲವರಿಗೆ ಸೆಂಟ್ರಲ್ ಹಾಲ್ ನಲ್ಲಿ ಆಸನದ ವ್ಯವಸ್ಥೆ ಮಾಡಲಾಗುತ್ತದೆ. ಅಗತ್ಯ ಬಿದ್ದರೆ ಲೋಕಸಭೆ ಮತ್ತು ರಾಜ್ಯಸಭೆ ಗ್ಯಾಲರಿಗಳಲ್ಲಿ ಕೂಡ ಆಸನದ ವ್ಯವಸ್ಥೆ ಮಾಡಲಾಗುತ್ತದೆ‌.


ಈ ಬಾರಿಯ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಪ್ರಶ್ನೋತ್ತರ ಮತ್ತು ಶೂನ್ಯವೇಳೆ ಇರುವುದಿಲ್ಲ. ಸಂಸದರು ಆರೋಗ್ಯ ಸೇತು ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕಿರುವುದು ಕಡ್ಡಾಯವಾಗಿದೆ. ಎಲ್ಲರನ್ನೂ ತಪಾಸಣೆ ಮಾಡಿದ ಬಳಿಕವೇ ಒಳಗಡೆಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಅಧಿವೇಶನದ ಹಿನ್ನಲೆಯಲ್ಲಿ ಇಡೀ ಸಂಸತ್ ಭವನಕ್ಕೆ ಸ್ಯಾನಿಟೈಸ್ ಮಾಡಲಾಗುತ್ತದೆ. ಸಂಸದರ ಪಿಎಗಳಿಗೆ ಸಂಸತ್ ಭವನಕ್ಕೆ ಪ್ರವೇಶಾವಕಾಶ ನಿರಾಕರಿಸಲಾಗುತ್ತದೆ.

Published by:G Hareeshkumar
First published: