ನವದೆಹಲಿ(ಮಾ. 8) : ತೀವ್ರ ಕುತೂಹಲ ಮೂಡಿಸಿರುವ ಸಂಸತ್ತಿನ ಬಜೆಟ್ ಅಧಿವೇಶನದ ಮುಂದುವರಿದ ಭಾಗ ಇಂದಿನಿಂದ ಶುರುವಾಗಲಿದೆ. ಜನವರಿ 29ರಿಂದ ಫೆಬ್ರವರಿ 13ರವರೆಗೆ ಮೊದಲ ಹಂತದ ಬಜೆಟ್ ಅಧಿವೇಶನ ನಡೆದಿತ್ತು. ಎರಡನೇ ಹಂತದ ಬಜೆಟ್ ಅಧಿವೇಶನ ಇಂದಿನಿಂದ ಏಪ್ರಿಲ್ 8ರವರೆಗೆ ನಡೆಯಲಿದೆ.
ಈ ಬಾರಿಯ ಸಂಸತ್ ಅಧಿವೇಶನದಲ್ಲಿ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ಮಸೂದೆ, ಮೂಲಸೌಕರ್ಯ ಮತ್ತು ಅಭಿವೃದ್ಧಿಗಾಗಿ ರಾಷ್ಟ್ರೀಯ ಬ್ಯಾಂಕ್ ಕುರಿತ ಮಸೂದೆ ಮತ್ತು ವಿದ್ಯುತ್ (ತಿದ್ದುಪಡಿ) ಮಸೂದೆ, ಕ್ರಿಪ್ಟೊ ಕರೆನ್ಸಿ ಮತ್ತು ಅಧಿಕೃತ ಡಿಜಿಟಲ್ ಕರೆನ್ಸಿ ಮಸೂದೆಗಳ ಮಂಡನೆ ಆಗಲಿದೆ. ಇದೇ ಅಧಿವೇಶನದಲ್ಲಿ ಅವುಗಳ ಬಗ್ಗೆ ಚರ್ಚೆ ಆಗಿ ಅಂಗೀಕಾರ ಆಗುವ ಸಾಧ್ಯತೆಗಳೂ ಇವೆ.
ವಿಶೇಷ ಎಂದರೆ ಇದೇ ಹೊತ್ತಿನಲ್ಲಿ ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಕೇರಳ ಮತ್ತು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದೆ. ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಆಯಾರಾಜ್ಯಗಳ, ಅಲ್ಲಿನ ಪ್ರಾದೇಶಿಕ ಪಕ್ಷದ ಹಾಗೂ ಕೇಂದ್ರ ನಾಯಕರಾಗಿರುವ ಸಂಸದರು ಅಧಿವೇಶನಕ್ಕೆ ಗೈರು ಆಗುವ ಸಾಧ್ಯತೆ ಹೆಚ್ಚಿದೆ.
ಬೆಳಗಾವಿಯಲ್ಲಿ ಅಪಾರ ಪ್ರಮಾಣದ ಸ್ಪೋಟಕ ವಸ್ತು ಪತ್ತೆ; ಮೂವರು ಆರೋಪಿಗಳ ಬಂಧನ
ಈ ಬಾರಿ ಕೊರೋನಾ ಕಾರಣಕ್ಕೆ ಜಂಟಿ ಅಧಿವೇಶನ ಮತ್ತು ಬಜೆಟ್ ಅಧಿವೇಶನವನ್ನು ಒಟ್ಟಾಗಿ ನಡೆಸಲಾಗುತ್ತಿದೆ. ಕಡಿಮೆ ದಿನಗಳ ಕಾಲ ನಡೆಸುತ್ತಿರುವ ಬಗ್ಗೆ, ಶಿಫ್ಟ್ ನಲ್ಲಿ ನಡೆಸುತ್ತಿರುವ ಬಗ್ಗೆ, ಅಂದರೆ ದಿನದಲ್ಲೂ ಕಡಿಮೆ ಅವಧಿ ಅಧಿವೇಶನ ನಡೆಸುತ್ತಿರುವ ಬಗ್ಗೆ ಮಾಹಿತಿ ನೀಡಿ ಸರ್ಕಾರಕ್ಕೆ ಸಹಕಾರ ನೀಡುವಂತೆ ಸರ್ವ ಪಕ್ಷಗಳ ಸಭೆಯಲ್ಲಿ ಸರ್ಕಾರ ಮನವಿ ಮಾಡಿದೆ.
ಪ್ರತಿಪಕ್ಷಗಳು, ವಿಶೇಷವಾಗಿ ಕಾಂಗ್ರೆಸ್ ವಿವಾದಾತ್ಮಕ ಕೃಷಿ ಕಾನೂನುಗಳ ಬಗ್ಗೆ, ರೈತರ ಪ್ರತಿಭಟನೆ ಬಗ್ಗೆ, ಕೊರೋನಾ ಬಗ್ಗೆ, ಭಾರತ ಮತ್ತು ಚೀನಾ ಗಡಿಯಲ್ಲಿ ನಿರ್ಮಾಣವಾಗಿರುವ ಉದ್ವಿಗ್ನತೆ ಬಗ್ಗೆ, ಪುಲ್ವಾಮಾ ದಾಳಿಯ ಮಾಹಿತಿಗಳು ಸೋರಿಕೆಯಾದ ಬಗ್ಗೆ, ದೇಶದಲ್ಲಿ ಹಿಂದೆಂದೂ ಕಂಡರಿಯದ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಿರುವ ಬಗ್ಗೆ, ನಿರುದ್ಯೋಗ ಸಮಸ್ಯೆ ಬಗ್ಗೆ ಮತ್ತು ಪೆಟ್ರೋಲ್, ಡೀಸೆಲ್, ಗ್ಯಾಸ್ ಸಿಲಿಂಡರ್ ಗಳ ಬೆಲೆ ಏರಿಕೆ ಆಗಿರುವ ಬಗ್ಗೆ ಸಂಸತ್ ಅಧಿವೇಶನದಲ್ಲಿ ಚರ್ಚೆ ನಡೆಸುವಂತೆ ಒತ್ತಾಯಿಸಲಿದೆ.
ಮೇಲಿನ ವಿಷಯಗಳ ಬಗ್ಗೆ ಸಮರ್ಪಕವಾದ ಉತ್ತರ ನೀಡುವ ಸಾಮರ್ಥ್ಯ ಇಲ್ಲದಿರುವ ಕಾರಣಕ್ಕೆ ಆಡಳಿತರೂಢ ಪಕ್ಷ ಈ ವಿಷಯಗಳ ಬಗ್ಗೆ ಚರ್ಚೆಗೆ ಆಸ್ಪದ ಕೊಡುವ ಸಾಧ್ಯತೆಗಳು ಕಡಿಮೆ. ಅಥವಾ ನೆಪ ಮಾತ್ರಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಆಗ ಆಡಳಿತಾರೂಢ ಹಾಗೂ ಪ್ರತಿಪಕ್ಷಗಳ ನಡುವೆ ಅಧಿವೇಶನದಲ್ಲಿ ಜಟಾಪಟಿ ಆಗುವ ಸಾಧ್ಯತೆಗಳು ಹೆಚ್ಚಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ