• Home
  • »
  • News
  • »
  • national-international
  • »
  • Parliament: ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ, ಕೃಷಿ ಕಾನೂನುಗಳ ವಿಷಯ ಚರ್ಚೆಗೆ ಒಪ್ಪದ ಕೇಂದ್ರ ಸರ್ಕಾರ: ಸಂಸತ್ ಸದನ ಸ್ಥಗಿತ

Parliament: ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ, ಕೃಷಿ ಕಾನೂನುಗಳ ವಿಷಯ ಚರ್ಚೆಗೆ ಒಪ್ಪದ ಕೇಂದ್ರ ಸರ್ಕಾರ: ಸಂಸತ್ ಸದನ ಸ್ಥಗಿತ

ಸಂಸತ್ತು

ಸಂಸತ್ತು

ಸದನ ಆರಂಭವಾದಾಗ ಕೇಂದ್ರ ಸರ್ಕಾರ ಎರಡೂ ವಿಷಯಗಳ ಬಗ್ಗೆಯೂ ಚರ್ಚೆ ಮಾಡಲು ನಿರಾಕರಿಸಿತು. ಆಗ ಕೇಂದ್ರ ಸರ್ಕಾರದ ನಡೆ ಖಂಡಿಸಿ ಪ್ರತಿ ಪಕ್ಷಗಳು ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಪ್ರತಿಭಟನೆ ನಡೆಸಿದವು.

  • Share this:

ನವದೆಹಲಿ, ಮಾ. 10: ಸಂಸತ್ತಿನ ಬಜೆಟ್ ಅಧಿವೇಶನದ ಎರಡನೇ ಭಾಗ ಸೋಮವಾರದಿಂದ (ಮಾರ್ಚ್ 8) ಆರಂಭವಾಗಿದ್ದು ಕಳೆದ ಎರಡು ದಿನಗಳ ಕಾಲ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಬಗ್ಗೆ ಚರ್ಚೆಗೆ ಅವಕಾಶ ನೀಡಲಿಲ್ಲ ಎನ್ನುವ ಕಾರಣಕ್ಕೆ ನಡೆದಿರಲಿಲ್ಲ. ಬುಧವಾರ ಕೇಂದ್ರ ಸರ್ಕಾರ ಇತ್ತೀಚೆಗೆ ತಂದಿರುವ ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ವಾಪಸ್ ಪಡೆಯುವ ಬಗ್ಗೆ ಹಾಗೂ ಪೆಟ್ರೋಲ್ ಮತ್ತು ಡೀಸೆಲ್ ಬಗ್ಗೆ ಚರ್ಚೆ ನಡೆಯದೆ ಆಡಳಿತಾರೂಢ ಹಾಗೂ ಪ್ರತಿಪಕ್ಷಗಳ ನಡುವೆ ಗದ್ದಲ ಉಂಟಾಗಿ ಸದನ ಮುಂದೂಡಲ್ಪಟ್ಟಿದೆ. ಬುಧವಾರ ಬೆಳಿಗ್ಗೆ ಕೃಷಿ ಕಾನೂನುಗಳ ಬಗ್ಗೆ ಚರ್ಚೆ ಮಾಡಲು ಅವಕಾಶ ನೀಡುವಂತೆ ಕಾಂಗ್ರೆಸ್ ಮತ್ತು ಟಿಎಂಸಿ ಪಕ್ಷಗಳು ಸ್ಪೀಕರ್ ಗೆ ನೊಟೀಸ್ ನೀಡಿದ್ದವು. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಬಗ್ಗೆ ಚರ್ಚೆಗೆ ಅವಕಾಶ ಮಾಡಿಕೊಡುವಂತೆ ಒತ್ತಾಯಿಸಿ ಡಿಎಂಕೆ, ಸಿಪಿಐ, ಶಿವಸೇನಾ ಹಾಗೂ ಬಿಎಸ್ ಪಿ ಪಕ್ಷಗಳು ಕೇಳಿಕೊಂಡಿದ್ದವು. ಆದರೆ ಸದನ ಆರಂಭವಾದಾಗ ಕೇಂದ್ರ ಸರ್ಕಾರ ಎರಡೂ ವಿಷಯಗಳ ಬಗ್ಗೆಯೂ ಚರ್ಚೆ ಮಾಡಲು ನಿರಾಕರಿಸಿತು. ಆಗ ಕೇಂದ್ರ ಸರ್ಕಾರದ ನಡೆ ಖಂಡಿಸಿ ಪ್ರತಿ ಪಕ್ಷಗಳು ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಪ್ರತಿಭಟನೆ ನಡೆಸಿದವು.


ಮೊದಲಿಗೆ ರಾಜ್ಯಸಭಾ ಕಲಾಪವನ್ನು ಮಧ್ಯಾಹ್ನ 12ರವರೆಗೆ ಹಾಗೂ ಲೋಕಸಭಾ ಕಲಾಪವನ್ನು ಮಧ್ಯಾಹ್ನ 12.30ರವರೆಗೆ ಮುಂದೂಡಿಕೆ ಮಾಡಲಾಯಿತು. ಬಳಿಕ ಕಲಾಪ ಆರಂಭವಾದಾಗಲೂ ಕೇಂದ್ರ ಸರ್ಕಾರದ ಕಠಿಣ ನಿರ್ಧಾರ ಬದಲಾಗದ ಹಿನ್ನೆಲೆಯಲ್ಲಿ ಮತ್ತೆ ಪ್ರತಿಭಟನೆ ಮುಂದುವರೆಯಿತು. ಆಗ ಎರಡೂ ಸದನಗಳನ್ನು ಮಧ್ಯಾಹ್ನ ‌2.30ರವರೆಗೆ ಮುಂದೂಡಲಾಯಿತು. ಊಟದ ವಿರಾಮದ ಬಳಿಕವೂ ಪರಿಸ್ಥಿತಿ ಬದಲಾಗದ ಹಿನ್ನೆಲೆಯಲ್ಲಿ ಮಾರ್ಚ್ 15ರ ಬೆಳಿಗ್ಗೆ 11 ಗಂಟೆವರೆಗೂ ಸದನ ಮುಂದೂಡಲಾಯಿತು. ಅಲ್ಲಿಗೆ ಸಂಸತ್ತಿನ ಬಜೆಟ್ ಅಧಿವೇಶನದ ಮೊದಲ ವಾರ ಸಂಪೂರ್ಣವಾಗಿ ಹಾಳಾಯಿತು.


ಇದನ್ನು ಓದಿ: ಕೇರಳದಲ್ಲಿ ಚುನಾವಣೆಗೆ ಮುನ್ನ ಕಾಂಗ್ರೆಸ್​ಗೆ ಆಘಾತ; ಪಕ್ಷ ತೊರೆದ ಹಿರಿಯ ನಾಯಕ ಚಾಕೊ


ಕೊರೋನಾ ನಂತರ ಮಂಗಳವಾರ ಮೊದಲು ಹಿಂದಿನಂತೆ ಬೆಳಿಗ್ಗೆ 11ಗಂಟೆಗೆ ಎರಡೂ ಸದನಗಳು ಶುರುವಾಗಿದ್ದವು. ಆದರೆ ದೇಶದಲ್ಲಿ ನಡೆಯುತ್ತಿರುವ ಎರಡು ಪ್ರಮುಖ ವಿದ್ಯಮಾನಗಳ ಬಗ್ಗೆ, ಜನಸಾಮಾನ್ಯರ ನಿತ್ಯ ಬದುಕಿನ ಮೇಲೆ ಭಾರೀ ಪರಿಣಾಮ ಬೀರುವ ಸಂಗತಿಗಳ ಬಗ್ಗೆ ಕೇಂದ್ರ ಸರ್ಕಾರ ಚರ್ಚೆ ಮಾಡಲು ಅವಕಾಶ ನೀಡದೆ ಹಠಮಾರಿತನ‌ ಪ್ರದರ್ಶಿಸಿದ್ದರಿಂದ ಸದನದ ಅತ್ಯಮೂಲ್ಯ ಸಮಯ ವ್ಯರ್ಥವಾಗಿದೆ.


ಫೆಬ್ರವರಿ ತಿಂಗಳಲ್ಲಿ 16ನೇ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸಲಾಗಿದೆ. ಕಳೆದ 16ದಿನಗಳಿಂದ  4.97 ಪೈಸೆ ಬೆಲೆ ಹೆಚ್ಚಳ ಮಾಡಲಾಗಿದೆ. ಪ್ರತಿ ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಫೆಬ್ರವರಿ 4ರಂದು ತಾರೀಖು ತಲಾ 37 ಪೈಸೆ, ಫೆಬ್ರವರಿ 5ರಂದು 37 ಪೈಸೆ, ಫೆಬ್ರವರಿ 9ರಂದು 42 ಪೈಸೆ, ಫೆಬ್ರವರಿ 10ರಂದು 31 ಪೈಸೆ, ಫೆಬ್ರವರಿ 11ರಂದು 38 ಪೈಸೆ, ಫೆಬ್ರವರಿ 12ರಂದು 38 ಪೈಸೆ, ಫೆಬ್ರವರಿ 13ರಂದು 39 ಪೈಸೆ, ಫೆಬ್ರವರಿ 14ರಂದು 34 ಪೈಸೆ, ಫೆಬ್ರವರಿ 15ರಂದು 30 ಪೈಸೆ, ಫೆಬ್ರವರಿ 16ರಂದು 38 ಪೈಸೆ, ಫೆಬ್ರವರಿ 17ರಂದು 27 ಪೈಸೆ, ಫೆಬ್ರವರಿ 18ರಂದು 36 ಪೈಸೆ ಹೆಚ್ಚಳ, ಫೆಬ್ರವರಿ 19ರಂದು 36 ಪೈಸೆ, ಫೆಬ್ರವರಿ 20ರಂದು 41 ಪೈಸೆ, ಫೆಬ್ರವರಿ 23ರಂದು 38 ಪೈಸೆ ಹಾಗೂ ಫೆಬ್ರವರಿ 27ರಂದು ಮತ್ತೆ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ 25 ಪೈಸೆ ಹೆಚ್ಚಳ ಮಾಡಲಾಗಿದೆ.

Published by:Seema R
First published: