ಲಾಕ್​ಡೌನ್​ ಎಫೆಕ್ಟ್​; 82 ವರ್ಷದ ನಂತರವೂ ಅತಿ ಹೆಚ್ಚು ಮಾರಾಟವಾಗಿ ದಾಖಲೆ ಬರೆದ ಪಾರ್ಲೆ-ಜಿ​ ಬಿಸ್ಕತ್​

ಕಾಮನ್ ಮ್ಯಾನ್ ಬಿಸ್ಕತ್ ಎಂದೇ ಕರೆಸಿಕೊಳ್ಳುವ ಪಾರ್ಲೆ-ಜಿಗೆ ಇನ್ನೂ ಬೇಡಿಕೆ ಕಡಿಮೆಯಾಗಿಲ್ಲ. 5 ರೂ.ಗೆ ಸಿಗುವ ಪಾರ್ಲೆ-ಜಿ ಬಿಸ್ಕತ್ ಲಕ್ಷಾಂತರ ಜನರ ಹಸಿವು ನೀಗಿಸಿದೆ. ಇದೇ ಕಾರಣಕ್ಕೆ ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ಪಾರ್ಲೆ-ಜಿ ಬಿಸ್ಕತ್ ಅತಿಹೆಚ್ಚು ಮಾರಾಟವಾದ ಬಿಸ್ಕತ್ ಎನಿಸಿಕೊಂಡಿದೆ.

ಪಾರ್ಲೆ-ಜಿ ಬಿಸ್ಕತ್

ಪಾರ್ಲೆ-ಜಿ ಬಿಸ್ಕತ್

  • Share this:
ನವದೆಹಲಿ (ಜೂ. 9): 90ರ ದಶಕಕ್ಕೂ ಹಿಂದಿನ ಪೀಳಿಗೆಯ ಜೀವನದಲ್ಲಿ ಪಾರ್ಲೆ-ಜಿ ಬಿಸ್ಕತ್ ಬೆರೆತುಹೋಗಿತ್ತು. ಕೈಗೆಟುಕುವ ದರದಲ್ಲಿ ಸಿಗುತ್ತಿದ್ದ ಈ ಬಿಸ್ಕತ್​ ರುಚಿ ಎಲ್ಲ ಪೀಳಿಗೆಯವರನ್ನೂ ಸೆಳೆದಿತ್ತು. ಸಂಜೆ ವೇಳೆಗೆ ಕಾಫಿ, ಟೀ ಜೊತೆಗೆ ಪಾರ್ಲೆ-ಜಿ. ಬಿಸ್ಕತ್ ಅದ್ದಿಕೊಂಡು ತಿನ್ನುವುದು ಎಲ್ಲರಿಗೂ ರೂಢಿಯಾಗಿಬಿಟ್ಟಿದ್ದು. ಕ್ರಮೇಣ ನಾನಾ ರೀತಿಯ ಬಿಸ್ಕತ್​ ಬ್ರಾಂಡ್​ಗಳು ಮಾರುಕಟ್ಟೆಗೆ ಬರತೊಡಗಿದ್ದರಿಂದ ಪಾರ್ಲೆ-ಜಿ ಬಿಸ್ಕತ್ ಕೊಳ್ಳುವವರ ಸಂಖ್ಯೆಯೂ ಕಡಿಮೆಯಾಯಿತು. ಆದರೆ, ಲಾಕ್​ಡೌನ್ ವೇಳೆ ಮತ್ತೆ ಬೇಡಿಕೆ ಸೃಷ್ಟಿಸಿಕೊಂಡಿರುವ ಪಾರ್ಲೆ-ಜಿ ಬಿಸ್ಕತ್ ಕಳೆದ ಮೂರ್ನಾಲ್ಕು ತಿಂಗಳಲ್ಲಿ ಅತಿಹೆಚ್ಚು ಮಾರಾಟವಾದ ಬಿಸ್ಕತ್ ಎನಿಸಿಕೊಂಡಿದೆ.

ಲಾಕ್​ಡೌನ್​ನಿಂದಾಗಿ ಹೋಟೆಲ್, ಡಾಬಾ ಯಾವುದೂ ಓಪನ್ ಇರಲಿಲ್ಲ. ಹೀಗಾಗಿ, ಒಂದು ಊರಿನಿಂದ ಮತ್ತೊಂದು ಊರಿಗೆ ಹೋಗುವ ಕಾರ್ಮಿಕರಿಗೆ, ದುಡಿಮೆಯಿಲ್ಲದೆ ಒಂದು ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ಇರುವ ಬಡವರ್ಗದವರಿಗೆ ಪಾರ್ಲೆ-ಜಿ ಬಿಸ್ಕತ್ ಹಸಿವನ್ನು ನೀಗಿಸಿದೆ. ಬೇರೆ ಬಿಸ್ಕತ್​​ಗಳ ಬೆಲೆ ದುಬಾರಿಯಾಗಿರುವ ಕಾರಣ 5 ರೂ.ಗೆ ಸಿಗುವ ಪಾರ್ಲೆ-ಜಿ ಬಿಸ್ಕತ್ ಪ್ಯಾಕ್​ಗಳು ಲಕ್ಷಾಂತರ ಜನರ ಹಸಿವು ನೀಗಿಸಿದೆ. ಇದೇ ಕಾರಣಕ್ಕೆ ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ಪಾರ್ಲೆ-ಜಿ ಬಿಸ್ಕತ್ ಅತಿಹೆಚ್ಚು ಮಾರಾಟವಾದ ಬಿಸ್ಕತ್ ಎನಿಸಿಕೊಂಡಿದೆ. 82 ವರ್ಷ ಹಳೆಯದಾದ ಪಾರ್ಲೆ-ಜಿ ಬಿಸ್ಕತ್ ಈ ಮೂಲಕ ಹೊಸ ದಾಖಲೆ ಬರೆದಿದೆ.

ಇದನ್ನೂ ಓದಿ: ವಿಧಾನಪರಿಷತ್ ಚುನಾವಣೆ ದಿನಾಂಕ ಪ್ರಕಟ: ಜೂನ್ 29ಕ್ಕೆ 7 ಸ್ಥಾನಗಳಿಗೆ ಚುನಾವಣೆ

ಲಾಕ್​ಡೌನ್​ನಿಂದಾಗಿ ತಿನ್ನಲು ಏನೂ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ವೇಳೆ ಜನರು ತಿನ್ನಲು ಏನೆಲ್ಲ ಸಿಗುತ್ತದೋ ಅದೆಲ್ಲವನ್ನೂ ಸ್ಟಾಕ್ ಮಾಡಿಟ್ಟುಕೊಂಡಿದ್ದರು. ಪಾರ್ಲೆ-ಜಿ ಬಿಸ್ಕತ್ ಕಡಿಮೆ ಬೆಲೆಯಲ್ಲಿ ಲಭ್ಯವಾಗುವುದು ಮಾತ್ರವಲ್ಲದೆ ರುಚಿಯಲ್ಲಿಯೂ ರಾಜಿಯಾಗದ ಕಾರಣ ಈ ಬಿಸ್ಕತ್​ ಕೊಳ್ಳುವವರ ಸಂಖ್ಯೆಯೂ ಹೆಚ್ಚಾಗಿತ್ತು.

ಕಾಮನ್ ಮ್ಯಾನ್ ಬಿಸ್ಕತ್ ಎಂದೇ ಕರೆಸಿಕೊಳ್ಳುವ ಪಾರ್ಲೆ-ಜಿಗೆ ಇನ್ನೂ ಬೇಡಿಕೆ ಕಡಿಮೆಯಾಗಿಲ್ಲ. ಅನೇಕ ರಾಜ್ಯ ಸರ್ಕಾರಗಳು ಬಡಜನರಿಗೆ ಅಗತ್ಯ ವಸ್ತುಗಳ ಕಿಟ್ ನೀಡುತ್ತಿವೆ. ಆ ಕಿಟ್​ನಲ್ಲಿ ಪಾರ್ಲೆ-ಜಿ ಬಿಸ್ಕತ್ ಕೂಡ ಇರಲಿದೆ. ಹೀಗಾಗಿ, ರಾಜ್ಯ ಸರ್ಕಾರ, ಎನ್​ಜಿಓಗಳಿಂದಲೂ ಪಾರ್ಲೆ-ಜಿ ಬಿಸ್ಕತ್​ಗೆ ಬೇಡಿಕೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಬಿಸ್ಕತ್ ಉತ್ಪಾದನಾ ಕಾರ್ಯ ಮತ್ತೆ ಶುರುವಾಗಿದ್ದು, ಪೂರೈಕೆ ಪ್ರಮಾಣವೂ ಹೆಚ್ಚಾಗಿದೆ. ಪ್ರಸ್ತುತ ಭಾರತದಲ್ಲಿ 130 ಪಾರ್ಲೆ ಪ್ರಾಡಕ್ಟ್​ಗಳ ಫ್ಯಾಕ್ಟರಿಗಳಿವೆ. ಅವುಗಳಲ್ಲಿ ಬಿಸ್ಕತ್​ಗಳ ಉತ್ಪಾದನೆ ನಿರಂತರವಾಗಿ ನಡೆಯುತ್ತಿದೆ.
First published: