ಹೈದ್ರಾಬಾದ್(ಜ.25): ಮಾನವ ಎಷ್ಟೇ ಆಧುನಿಕತೆಯತ್ತ ಮುಖಮಾಡಿದರೂ ಸಹ ಮೂಢನಂಬಿಕೆ ಎಂಬ ಮೌಢ್ಯದಲ್ಲಿ ಕೆಲವೊಮ್ಮೆ ಸಿಲುಕುತ್ತಾನೆ. ಇತ್ತೀಚೆಗೆ ಮೌಢ್ಯ ಆಚರಣೆಗಳು ಹೆಚ್ಚಾಗುತ್ತಿವೆ. ನಿಧಿ ಸಿಗುತ್ತದೆ ಎಂಬ ಮೂಢನಂಬಿಕೆಯಿಂದ ಮಕ್ಕಳನ್ನೇ ಬಲಿಕೊಡುವ ಸುದ್ದಿಗಳನ್ನು ನಾವೆಲ್ಲರೂ ಕೇಳಿರುತ್ತೇವೆ. ಇದಕ್ಕೆ ಪೂರಕವೆಂಬಂತೆ ಹೈದ್ರಾಬಾದ್ನಲ್ಲಿ ಒಂದು ಘಟನೆ ನಡೆದಿದೆ. ಆದರೆ ಹೈದ್ರಾಬಾದ್ನಲ್ಲಿ ನಿಧಿ ಅಥವಾ ಹಣದ ಆಸೆಗೆ ಪೋಷಕರು ತಮ್ಮ ಮಕ್ಕಳನ್ನು ಸಾಯಿಸಿಲ್ಲ. ಬದಲಾಗಿ ಅವರು ಮತ್ತೆ ಹುಟ್ಟಿ ಬರುತ್ತಾರೆ ಎಂಬ ಮೂಢನಂಬಿಕೆಯಿಂದ ಮಕ್ಕಳನ್ನು ಬಲಿಕೊಟ್ಟಿದ್ದಾರೆ.
ಹೌದು, ಮೌಢ್ಯತೆಯನ್ನು ಬಲವಾಗಿ ನಂಬಿದ್ದ ಪೋಷಕರು ಮದುವೆ ವಯಸ್ಸಿಗೆ ಬಂದಿದ್ದ ತಮ್ಮ ಇಬ್ಬರ ಹೆಣ್ಣುಮಕ್ಕಳನ್ನು ಹತ್ಯೆ ಮಾಡಿರುವ ಘಟನೆ ಆಂಧ್ರಪ್ರದೇಶದ ಚಿತ್ತೋರ್ ಜಿಲ್ಲೆಯ ಮರನಪಲ್ಲೆ ಗ್ರಾಮಾಂತರ ಮಂಡಲದ ಶಿವನಗರ ಎಂಬ ಗ್ರಾಮದಲ್ಲಿ ನಡೆದಿದೆ.
ಮಕ್ಕಳನ್ನು ಕೊಂದ ತಂದೆ ಪುರುಷೋತ್ತಮ್ ನಾಯ್ಡು ಮದನಪಲ್ಲೆ ಸರ್ಕಾರಿ ಮಹಿಳಾ ಪದವಿ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದಾರೆ. ತಾಯಿ ಪದ್ಮಜಾ ಕೂಡ ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ಪ್ರಿನ್ಸಿಪಾಲ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜೊತೆಗೆ ಕರೆಸ್ಪಾಂಡೆಂಟ್ ಆಗಿಯೂ ಸಹ ಕೆಲಸ ಮಾಡುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
![]()
ಮಕ್ಕಳೊಂದಿಗೆ ತಂದೆ-ತಾಯಿ
ಈ ದಂಪತಿಗೆ ಅಲೇಕ್ಯಾ(27) ಮತ್ತು ಸಾಯಿದಿವ್ಯ (22) ಎಂಬ ಇಬ್ಬರು ಹೆಣ್ಣುಮಕ್ಕಳಿದ್ದರು. ಹಿರಿಯ ಮಗಳು ಅಲೇಕ್ಯಾ ಭೂಪಾಲ್ನಲ್ಲಿ ಸ್ನಾತಕೋತ್ತರ ಪದವಿ ಓದುತ್ತಿದ್ದಳು. ಕಿರಿಯ ಮಗಳು ಸಾಯಿದಿವ್ಯ ಬಿಬಿಎ ಮುಗಿಸಿ, ಎ.ಆರ್.ರೆಹಮಾನ್ ಮ್ಯೂಸಿಕ್ ಅಕಾಡೆಮಿಯಲ್ಲಿ ಸಂಗೀತಾಭ್ಯಾಸ ಮಾಡುತ್ತಿದ್ದಳು. ಇವರು ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ಶಿವನಗರದ ಹೊಸ ಮನೆಗೆ ಬಂದಿದ್ದರು ಎಂದು ತಿಳಿದು ಬಂದಿದೆ.
National Voters Day: ರಾಷ್ಟ್ರೀಯ ಮತದಾರರ ದಿನ 2021: ಈ ದಿನದ ಮಹತ್ವ ಮತ್ತು ಇತಿಹಾಸ ತಿಳಿಯಿರಿ
ಅವರ ಮನೆಯಲ್ಲಿ ಆಗಾಗ್ಗೆ ಪೂಜೆಗಳನ್ನು ಮಾಡುತ್ತಿದ್ದರು, ಭಾನುವಾರ ರಾತ್ರಿಯೂ ಸಹ ಅವರ ಮನೆಯಲ್ಲಿ ಪೂಜೆ-ಪುನಸ್ಕಾರಗಳನ್ನು ಮಾಡಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ. ಮೊದಲಿಗೆ ಕಿರಿಯ ಮಗಳು ಸಾಯಿದಿವ್ಯಾಳನ್ನು ತ್ರಿಶೂಲದಿಂದ ಇರಿದು ಸಾಯಿಸಲಾಗಿದೆ. ಬಳಿಕ ಹಿರಿಯ ಮಗಳು ಅಲೇಕ್ಯಾಳನ್ನು ಡಂಬ್ ಬೆಲ್ನಿಂದ ಹೊಡೆದು, ಬಳಿಕ ತಾಮ್ರದ ಬಟ್ಟಲನ್ನು ಆಕೆಯ ಬಾಯಿಗೆ ತುರುಕಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆಯಾದ ಬಳಿಕ ತಂದೆ ಪುರುಷೋತ್ತಮ್ ನಾಯ್ಡು ಘಟನೆ ಬಗ್ಗೆ ತನ್ನ ಗೆಳೆಯನಿಗೆ ತಿಳಿಸಿದ್ದಾನೆ. ಆತ ಕೂಡಲೇ ನಾಯ್ಡು ಮನೆಗೆ ಬಂದು, ಬಳಿಕ ಪೊಲೀಸರಿಗೆ ವಿಷಯ ತಿಳಿಸಿದ್ದಾನೆ.
ಕೊಲೆಯಾದ ಮಕ್ಕಳು ಮತ್ತು ಕೊಲೆ ಮಾಡಿದ ಪೋಷಕರು ಸಂಪೂರ್ಣವಾಗಿ ಮೌಢ್ಯತೆಯಲ್ಲಿ ಮುಳುಗಿದ್ದರು ಎಂದು ವಿಭಾಗೀಯ ಪೊಲೀಸ್ ವರಿಷ್ಠಾಧಿಕಾರಿ ರವಿ ಮನೋಹರ ಚಾರಿ ಹೇಳಿದ್ದಾರೆ.
ತಮ್ಮ ಮಕ್ಕಳು ಮತ್ತೆ ಹುಟ್ಟಿ ಬರುತ್ತಾರೆ ಎಂಬ ಮೂಢನಂಬಿಕೆಯಿಂದ ಈ ಕೊಲೆ ಮಾಡಿದ್ದಾರೆ. ತಾಯಿ ಪದ್ಮಜಾ ತನ್ನ ಮಕ್ಕಳನ್ನು ಹೊಡೆದು ಸಾಯಿಸುವಾಗ ತಂದೆ ಪುರುಷೋತ್ತಮ್ ನಾಯ್ಡು ಕೂಡ ಅಲ್ಲೇ ಇದ್ದರೆಂದು ಡಿಎಸ್ಪಿ ತಿಳಿಸಿದ್ದಾರೆ. ಆ ನಾಲ್ವರು ಮಾನಸಿಕವಾಗಿಯೂ ಕುಗ್ಗಿದ್ದರು ಎಂದು ತಿಳಿದು ಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ