HOME » NEWS » National-international » PAPA AB TOH AA JAO THIS HOLI COLOURS HOLD NO MEANING FOR FAMILIES DEVASTATED BY DELHI RIOTS MAK

ಅಪ್ಪಾ ಈಗಲಾದರೂ ಬಾ; ದೆಹಲಿ ಗಲಭೆಯಲ್ಲಿ ಬದುಕು ಕಳೆದುಕೊಂಡವರಿಗಿದು ಬಣ್ಣವಿಲ್ಲದ ಹೋಳಿ

ಸುನೀತ ತನ್ನ ಗಂಡನನ್ನು ದೆಹಲಿ ಹಿಂಸಾಚಾರದಲ್ಲಿ ಕಳೆದುಕೊಂಡಿದ್ದಾರೆ. ಆದರೆ, ಹೋಳಿ ಹಬ್ಬದ ಈ ಸಮಯದಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶೋಕಿಸುತ್ತಿರುವವರಲ್ಲಿ ಸುನೀತ ಒಬ್ಬರೇ ಇಲ್ಲ.

MAshok Kumar | news18-kannada
Updated:March 10, 2020, 1:21 PM IST
ಅಪ್ಪಾ ಈಗಲಾದರೂ ಬಾ; ದೆಹಲಿ ಗಲಭೆಯಲ್ಲಿ ಬದುಕು ಕಳೆದುಕೊಂಡವರಿಗಿದು ಬಣ್ಣವಿಲ್ಲದ ಹೋಳಿ
ದೆಹಲಿ ಕೋಮುಗಲಭೆಯಲ್ಲಿ ತಂದೆಯನ್ನು ಕಳೆದುಕೊಂಡ ಮಕ್ಕಳು.
  • Share this:
ನವದೆಹಲಿ: ದೆಹಲಿ ಕೋಮು ಹಿಂಸಾಚಾರ ಅದೆಷ್ಟೋ ಜನರ ಬಣ್ಣ ಬಣ್ಣದ ಬದುಕಿನ ಮೇಲೆ ಕಮಟು ಕೆಂಪು ಬಣ್ಣವನ್ನು ಎರಚಿ, ರಕ್ತದೋಕುಳಿ ಆಡಿದ್ದು ಭಾರತ ಇತಿಹಾಸದಲ್ಲಿ ಉಳಿದುಹೋದ ಕರಾಳ ಸತ್ಯ. ಇತಿಹಾಸ ಕಾಣದ ಈ ಕೋಮು ದಂಗೆಯ ಬೆನ್ನಿಗೆ ಇಡೀ ದೇಶ ಇಂದು ಹೋಳಿ ಅರ್ಥಾದ್ ಬಣ್ಣದ ಹಬ್ಬವನ್ನು ಆಚರಿಸುತ್ತಿದೆ. ಆದರೆ, ದೆಹಲಿಯಲ್ಲಿ ಮಾತ್ರ ಈ ಹಬ್ಬವನ್ನು ಆಚರಿಸುವ ಮನಸ್ಥಿತಿಯಲ್ಲಿ ಅಲ್ಲಿನ ಜನರಿಲ್ಲ. ಇಲ್ಲಿನ ಜನರ ಬದುಕನ್ನೇ ಹರಿದುಹಾಕಿರುವ ಕೋಮು ಗಲಭೆ, ಸೃಷ್ಟಿಸಿರುವ ಮನಕಲಕುವ ಕಥೆಗಳು ಇಲ್ಲಿವೆ!  

ಆಕೆಯ ಹೆಸರು ಸುನೀತ. 25 ವರ್ಷದ ಸುನೀತ ಮೂವರು ಮಕ್ಕಳ ತಾಯಿ. ಪ್ರತಿ ವರ್ಷ ಮಕ್ಕಳು ಮತ್ತು ಕುಟುಂಬದೊಂದಿಗೆ ಈಶಾನ್ಯ ದೆಹಲಿಯ ಕಾಸ್​ಗಂಜ್ ಗೆ ತೆರಳಿ ಹೋಳಿ ಹಬ್ಬವನ್ನು ಆಕೆ ಸಂಭ್ರಮದಿಂದ ಆಚರಿಸುತ್ತಿದ್ದರು. ಆದರೆ, ದೆಹಲಿ ಹಿಂಸಾಚಾರ ಅಕ್ಷರಶಃ ಅವರ ಸಂತೋಷದ ಬದುಕನ್ನು ಬಲಿ ಪಡೆದುಕೊಂಡಿದೆ. ದೆಹಲಿಯ ಕೋಮು ಗಲಾಭೆಯಲ್ಲಿ ಗಂಡನನ್ನು ಕಳೆದುಕೊಂಡ ಸುನೀತ ಇದೀಗ ಏಳು ತಿಂಗಳ ತುಂಬು ಗರ್ಭಿಣಿ. ಆದರೆ, ಇಂತಹ ಸಂದರ್ಭದಲ್ಲಿ ಜೊತೆಗಿರಬೇಕಿದ್ದ ಗಂಡನನ್ನು ಕಳೆದುಕೊಂಡಿರುವ ಅವರು ಬ್ರಿಜ್​ಪುರ್​ನಲ್ಲಿ ಒಂದು ಸಣ್ಣ ಕೊಠಡಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ.

“ನಾವು ಕಳೆದ ವರ್ಷ ಕಾಸ್​ಗಂಜ್​ನಲ್ಲಿ ಕುಟುಂಬದೊಂದಿಗೆ ಒಟ್ಟಿಗೆ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದೆವು. ಈ ಬಾರಿಯ ಹಬ್ಬಕ್ಕೂ ನಾವು ಊರಿಗೆ ತೆರಳಲು ತಯಾರಿ ನಡೆಸುತ್ತಿದ್ದೆವು. ಆದರೆ, ಇದೀಗ ಗಂಡನನ್ನು ಕಳೆದುಕೊಂಡಿರುವ ನಾನು ಒಬ್ಬಳೆ ಹೋಗಲು ಸಾದ್ಯವಿಲ್ಲ. ಹೀಗಾಗಿ ಇಲ್ಲಿ ಒಬ್ಬಳೆ ಕಾಲ ಕಳೆಯುತ್ತೇನೆ” ಎಂದು ತನ್ನ ಸಂಕಷ್ಟದ ಬದುಕನ್ನು ಕಣ್ಣೆದುರು ತೆರೆದಿಡುತ್ತಾರೆ ಸುನೀತ.

ಇದನ್ನೂ ಓದಿ : ಕಾಂಗ್ರೆಸ್​ಗೆ ಜ್ಯೋತಿರಾಧಿತ್ಯ ಸಿಂಧಿಯಾ ರಾಜೀನಾಮೆ, ಬಿಜೆಪಿ ಸೇರ್ಪಡೆ ಸಾಧ್ಯತೆ: ಪತನದತ್ತ ಮಧ್ಯಪ್ರದೇಶ ಕಾಂಗ್ರೆಸ್​ ಸರ್ಕಾರ

ಸುನೀತ ಮತ್ತು ಆಕೆಯ ಮಕ್ಕಳು ಈಗಲೂ ದೆಹಲಿ ಗಲಭೆಯ ಆಘಾತದಿಂದ ಹೊರ ಬಂದಿಲ್ಲ. ಅಲ್ಲದೇ ಮಕ್ಕಳು ತಮ್ಮ ಜೊತೆ ನಡೆದ ಭಯಾನಕ ಘಟನೆಯನ್ನು ಇನ್ನೂ ಸರಿಯಾಗಿ ಅರ್ಥವನ್ನೇ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ನನ್ನ ಮಕ್ಕಳು ಅವರ ತಂದೆ ಎಲ್ಲಿಯೋ ಕಳೆದು ಹೋಗಿದ್ದಾರೆ ಎಂದು ಭಾವಿಸಿದ್ದಾರೆ. ನನ್ನ ಮೊದಲ ಮಗಳು ಪಪ್ಪ ಖೊ ಗಾಯೆ( ಅಪ್ಪ ಕಳೆದು ಹೋಗಿದ್ದಾರೆ) ಎನ್ನುತ್ತಾಳೆ. ಇನ್ನು ಚಿಕ್ಕ ಮಗಳು ಪೋನ್ ಹಿಡಿದುಕೊಂಡು ತಂದೆಯ ಜೊತೆ ಮಾತನಾಡುತ್ತಿದ್ದೇನೆ ಎಂದು ತಿಳಿದು ಪಪ್ಪ ಅಬ್ ತೋ ಆ ಜಾವೋ ( ಅಪ್ಪ ಈಗಲಾದರು ಬನ್ನಿ) ಎನ್ನುತ್ತಾಳೆ ಎಂದು ಸುನೀತ ತಮ್ಮ ದಯಾನೀಯ ಸ್ಥಿತಿಯನ್ನು ವಿವರಿಸುತ್ತಾರೆ.

ಸುನೀತ ತನ್ನ ಗಂಡನನ್ನು ದೆಹಲಿ ಹಿಂಸಾಚಾರದಲ್ಲಿ ಕಳೆದುಕೊಂಡಿದ್ದಾರೆ. ಆದರೆ, ಹೋಳಿ ಹಬ್ಬದ ಈ ಸಮಯದಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶೋಕಿಸುತ್ತಿರುವವರಲ್ಲಿ ಸುನೀತ ಒಬ್ಬರೇ ಇಲ್ಲ.

ನ್ಯೂಸ್ 18 ಹಿಂಸಾಚಾರ ನಡೆದ ಪ್ರದೇಶಗಳಾದ ಬ್ರಿಜ್ಪುರ್, ಶಿವ್ ವಿಹಾರ್ ಮತ್ತು ಕಜುರಿ ಕಾಸ್ ಸೇರಿದಂತೆ ಉತ್ತರ ದೆಹಲಿಯ ಹಲವಾರು ಪ್ರದೇಶಗಳಿಗೆ ಭೇಟಿ ನೀಡಿದಾಗ ಅಲ್ಲಿಯ ಜನರು ಇನ್ನು ಆ ಭಯಾನಕ ಘಟನೆಯಿಂದ ಹೊರ ಬಂದಿಲ್ಲ ಎಂಬುದು ತಿಳಿಯಿತು. ಅಲ್ಲದೇ ಅವರ್ಯಾರು ದೇಶದ ಮುಖ್ಯ ಹಬ್ಬವಾದ ಹೋಳಿ ಹಬ್ಬವನ್ನು ಆಚರಿಸುವ ಮನಸ್ಥಿಯಲ್ಲೂ ಇಲ್ಲ ಎಂಬುದು ಸ್ಪಷ್ಟವಾಗಿದೆ.ಕಜುರಿ ಖಾಸ್ ಒಂದೇ ಪ್ರದೇಶದಲ್ಲಿ 20ಕ್ಕೂ ಹೆಚ್ಚು ಜನರನ್ನು ಹಿಂಸಿಸಿ ಹತ್ಯೆ ಮಾಡಲಾಗಿದೆ. ಹತ್ಯೆಯಾದವರ ದೇಹದ ವಿವಿಧ ಅಂಗಗಳು ಈಗಲೂ ಸಹ ಆ ಕಾಲೋನಿಯಲ್ಲಿ ಹರಿಯುವ ಕೊಳಚೆ ನೀರಿನಲ್ಲಿ ಪತ್ತೆಯಾಗುತ್ತಿದೆ ಎಂದರೆ ದೆಹಲಿ ಕೋಮು ಗಲಭೆ ಸೃಷ್ಟಿಸಿರುವ ಭೀತಿಯನ್ನು ತಿಳಿಯಬಹುದು. ಹೀಗಾಗಿ ಹೋಳಿ ಹಬ್ಬದ ಬಣ್ಣದ ಸಂಭ್ರವನ್ನು ಆಚರಿಸುವ ಉತ್ಸಾಹ ಇಲ್ಲಿ ಯಾರಿಗೂ ಉಳಿದಿಲ್ಲ.

ದೆಹಲಿ ಕೋಮು ಗಲಭೆ ಶಾಂತ ಸ್ಥಿತಿಗೆ ಬಂದು ಒಂದು ವಾರಗಳೇ ಕಳೆದಿದೆ. ಆದರೆ, ಇದರಿಂದ ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಬರುತ್ತಿದೆ ಎಂದು ಹೇಳಲಾಗುವುದಿಲ್ಲ ಎಂದು ತಮ್ಮ ಅಳಲನ್ನು ತೊಡಿಕೊಳ್ಳುತ್ತಾರೆ ಸುಟ್ಟುಕರಕಲಾಗಿರುವ ಮನೆಗಳು ಮತ್ತು ಅಂಗಡಿ ಮುಂಗಟ್ಟುಗಳ ಎದುರು ಕುಳಿತು ರೋಧಿಸುತ್ತಿರುವ ಮಹಿಳೆಯರು.

ಇದನ್ನೂ ಓದಿ : ದೆಹಲಿ ಹಿಂಸಾಚಾರಕ್ಕೆ 46 ಬಲಿ; ಕೋಮುಗಲಭೆಯಲ್ಲಿ ಬಿಜೆಪಿ ಮುಸ್ಲಿಂ ನಾಯಕನ ಮನೆಯೂ ಸುಟ್ಟು ಭಸ್ಮ

ಈ ಭಾಗದ ಜನರಲ್ಲಿ ಯಾರಲ್ಲೂ ಇನ್ನೂ ಉತ್ಸಾಹವೇ ಉಳಿದಿಲ್ಲ. ಎಲ್ಲರೂ ಭಯದಲ್ಲಿಯೇ ಬದುಕುತ್ತಿದ್ದಾರೆ. ರಾತ್ರಿಗಳಲ್ಲಿ ನಮಗೆ ಸರಿಯಾಗಿ ನಿದ್ದೆ ಮಾಡಲೂ ಸಹ ಸಾಧ್ಯವಾಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಇಲ್ಲಿ ನಮಗೆ ಯಾರಾದರು ಹೋಳಿ ತಯಾರಿಸುತ್ತಿರುವವರು ಕಾಣುತ್ತಾರೆಯೇ? ಇದು ನಮ್ಮ ಜೀವನದಲ್ಲಿ ಅತಿ ಕೆಟ್ಟ ಹೋಳಿ ಹಬ್ಬ. ನಾವು ಯಾವ ನೋವನ್ನು ಅನುಭವಿಸುತ್ತಿದ್ದೇವೆಯೋ ಅದನ್ನೆ ನಮ್ಮ ಮಕ್ಕಳು ಸಹ ಅನುಭವಿಸುತ್ತಿದ್ದಾರೆ. ಮನೆಯಿಂದ ಹೊರ ಹೋಗಲು ಭಯಪಡುತ್ತಿದ್ದಾರೆ ಎಂದು ತಮ್ಮ ಅಳಲನ್ನು ತೋಡಿಕೊಳ್ಳುತ್ತಾರೆ ಓರ್ವ ಹೆಸರು ಹೇಳಲು ಇಚ್ಚಿಸದ ಮಹಿಳೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹೋಳಿ ಹಬ್ಬಕ್ಕೆ ಸಂಬಂಧಿಸಿದ ವಸ್ತುಗಳ ಖರೀದಿಯಲ್ಲಿ ಶೇ.80ರಷ್ಟು ಇಳಿಕೆಯಾಗಿದೆ. ಸಾರ್ವಜನಿಕರು ಇನ್ನೂ ಭಯದಲ್ಲಿಯೇ ಬದುಕುತ್ತಿದ್ದಾರೆ. ರಸ್ತೆಗೆ ಇಳಿಯುವುದಕ್ಕೂ ಜನ ಹಿಂದೂ ಮುಂದೂ ನೋಡುವಂತಾಗಿದೆ ಎಂದು ನೋವು ತೋಡಿಕೊಳ್ಳುತ್ತಾರೆ ವ್ಯಾಪಾರಿ ಅಜಯ್ ಗೋಯಲ್.

ಫೆಬ್ರವರಿ 26 ರಂದು ನ್ಯೂಸ್ 18 ಭೇಟಿ ನೀಡಿದ ವೇಳೆ ಯುದ್ಧಭೂಮಿಯಂತೆ ಭಾಸವಾಗುತ್ತಿದ್ದ ಶಿವ್ ವಿಹಾರ್​ನಲ್ಲಿ ನಮಗೆ ಹೋಳಿ ಹಬ್ಬವನ್ನು ಆಚರಿಸುವುದಕ್ಕಿಂತ ನಮ್ಮ ಸುರಕ್ಷತೆಯೇ ಮುಖ್ಯ ಎನ್ನುತ್ತಾರೆ ಅಲ್ಲಿನ ಅಂಗಡಿ ಮಾಲೀಕರು.

ನಾವು ಇನ್ನು ಭಯದಲ್ಲಿಯೇ ಬದುಕುತ್ತಿದ್ದೇವೆ, ಅಲ್ಲದೇ ಹೋಳಿ ಹಬ್ಬದ ಉತ್ಸಾಹ ಯಾರಲ್ಲೂ ಇಲ್ಲ. ಮೊದಲೆಲ್ಲ ಹೋಳಿ ಹಬ್ಬದ ಸಮಯದಲ್ಲಿ ಅಂಗಡಿಗಳನ್ನು ರಾತ್ರಿ 10 ಗಂಟೆಯವರೆಗೆ ತೆರೆದಿರುತ್ತಿದ್ದವು. ಆದರೆ ಈಗ ಕತ್ತಲಾಗುವ ಮೊದಲೇ, ಸಂಜೆ ಆರು ಗಂಟೆಗೆ ಅಂಗಡಿಯನ್ನು ಮುಚ್ಚುತ್ತಿದ್ದೇವೆ. ಅಂಗಡಿ ಮಾಲೀಕರು ಯಾವುದೇ ಅಪಾಯವನ್ನು ಎದುರಿಸಲು ತಯಾರಿಲ್ಲ. ಯಾರಿಗೆ ಗೊತ್ತು ಯಾವ ಸಮಯದಲ್ಲಿ ಯಾರು ಯಾವ ವೇಷದಲ್ಲಿ ಬಂದು ಏನು ಬೇಕಾದರು ಮಾಡಬಹುದು ಎನ್ನುತ್ತಾರೆ ಮತ್ತೋರ್ವ ಅಂಗಡಿ ಮಾಲೀಕ ಗಜೇಂದ್ರ ಪರಿಹಾರ್.

ಭಾಗಶಃ ದೆಹಲಿ ಸ್ವಾತಂತ್ರ್ಯಾ ನಂತರದ ಕಾಲದಲ್ಲಿ ಈ ಪ್ರಮಾಣದ ಕೋಮು ದಳ್ಳುರಿಯನ್ನು ಇಂದೆಂದೂ ಕಂಡಿರಲಿಕ್ಕಿಲ್ಲವೇನೊ? ಆದರೆ, ಈ ದಳ್ಳುರಿಯನ್ನು ಹದಗೆಟ್ಟ ಇಲ್ಲಿನ ಜನರ ಬದುಕು ಮತ್ತೆ ಹಳಿಗೆ ಮರಳಲು ಇನ್ನೂ ಅದೆಷ್ಟು ಹೋಳಿ ಹಬ್ಬಗಳು ಕಳೆಯಬೇಕೋ ಏನೋ?

(ವರದಿ-ಸಂಧ್ಯಾ. ಎಂ)

ಇದನ್ನೂ ಓದಿ : ಮಧ್ಯಪ್ರದೇಶ ಸರ್ಕಾರದ ಬಿಕ್ಕಟ್ಟು; ಅಖಾಡಕ್ಕೆ ಎಂಟ್ರಿಕೊಟ್ಟ ಕರ್ನಾಟಕದ ಟ್ರಬಲ್ ಶೂಟರ್ ಡಿಕೆಶಿ
Youtube Video
First published: March 10, 2020, 1:21 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories