Punjab Political Crisis| ಸಿಧು ಸಿಟ್ಟು ಶಮನ; ಪಕ್ಷದ ಆಂತರಿಕ ಕಚ್ಚಾಟಕ್ಕೆ ಕೊನೆ ಹಾಡಲು ಕಾಂಗ್ರೆಸ್ ಹೊಸ ಸೂತ್ರ!

ಗುರುವಾರ ಸಂಜೆ ಚಂಡೀಘಡದ ಪಂಜಾಬ್ ಭವನದಲ್ಲಿ ಚರಣಜೀತ್ ಸಿಂಗ್ ಚನ್ನಿ, ನವಜೋತ್ ಸಿಂಗ್ ಸಿಧು ಮತ್ತು ಹಿರಿಯ ಕಾಂಗ್ರೆಸ್ ನಾಯಕ ಹರೀಶ್ ಚೌಧರಿ ನಡುವೆ ಎರಡು ಗಂಟೆಗಳ ಸುದೀರ್ಘ ಭೇಟಿಯ ನಂತರ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ.

ನವಜೋತ್ ಸಿಂಗ್ ಸಿಧು-ಚರಣ್​ಜೀತ್​ ಸಿಂಗ್ ಚೆನ್ನಿ.

ನವಜೋತ್ ಸಿಂಗ್ ಸಿಧು-ಚರಣ್​ಜೀತ್​ ಸಿಂಗ್ ಚೆನ್ನಿ.

 • Share this:
  ಚಂಡೀಘಡ (ಅಕ್ಟೋಬರ್ 01); ಪಂಜಾಬ್​ನ ನೂತನ ಸಿಎಂ ಚರಣ್​ಜಿತ್ ಸಿಂಗ್ ಚನ್ನಿ(Charanjit Singh Channi) ಕಾರ್ಯವೈಖರಿಯಿಂದ ಅಸಮಾಧಾನಗೊಂಡು ಪಂಜಾಬ್ ಕಾಂಗ್ರೆಸ್ (Punjab Congress) ರಾಜ್ಯಾಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ್ದ ನವಜೋತ್ ಸಿಂಗ್ ಸಿಧು (Navjot Singh Sidhu) ಅವರನ್ನು ಮನವೊಲಿಸುವಲ್ಲಿ ಕೊನೆಗೂ ಪಂಜಾಬ್​ನ ಕೈ ನಾಯಕರು ಯಶಸ್ವಿಯಾಗಿದ್ದಾರೆ. ಅಲ್ಲದೆ, ಕಾಂಗ್ರೆಸ್ ಹೈಕಮಾಂಡ್ ಪಂಜಾಬ್ ಮುಖ್ಯಮಂತ್ರಿ ಚರಣ್​ಜೀತ್ ಸಿಂಗ್ ಚನ್ನಿ, ನವಜೋತ್ ಸಿಂಗ್ ಸಿಧು ಮತ್ತು ಪಂಜಾಬ್ ವ್ಯವಹಾರಗಳ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹರೀಶ್ ರಾವತ್ (Harish Raut) ಅವರನ್ನೊಳಗೊಂಡ ತ್ರಿಸದಸ್ಯ ಸಮಿತಿಯನ್ನು ರಚಿಸಲು ನಿರ್ಧರಿಸಿದ್ದು, ಭವಿಷ್ಯದಲ್ಲಿ ಯಾವುದೇ ಸರ್ಕಾರಿ ನೇಮಕಾತಿಗಳು ಈ ಸಭೆಯಲ್ಲಿ ನಿರ್ಧಾರಗೊಂಡ ನಂತರವೇ ಕಾರ್ಯರೂಪಕ್ಕೆ ಬರಲಿದೆ ಎಂದು ತಿಳಿಸಿದೆ.

  ಗುರುವಾರ ಸಂಜೆ ಚಂಡೀಘಡದ ಪಂಜಾಬ್ ಭವನದಲ್ಲಿ ಚರಣಜೀತ್ ಸಿಂಗ್ ಚನ್ನಿ, ನವಜೋತ್ ಸಿಂಗ್ ಸಿಧು ಮತ್ತು ಹಿರಿಯ ಕಾಂಗ್ರೆಸ್ ನಾಯಕ ಹರೀಶ್ ಚೌಧರಿ ನಡುವೆ ಎರಡು ಗಂಟೆಗಳ ಸುದೀರ್ಘ ಭೇಟಿಯ ನಂತರ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ.

  ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ಪಕ್ಷವನ್ನು ತೊರೆಯುವುದಾಗಿ ಘೋಷಿಸಿದ ದಿನದಂದು ಈ ನಿರ್ಧಾರವನ್ನು ತೆಗೆದುಕೊಂಡಿರುವುದು ವಿಶೇಷ. ಇತ್ತೀಚೆಗೆ ಚನ್ನಿ ಸರ್ಕಾರದಿಂದ ಆಯ್ಕೆಯಾದ ಅಡ್ವೋಕೇಟ್ ಜನರಲ್ ಎಪಿಎಸ್ ಡಿಯೋಲ್ ಅವರ ಬದಲಿಯನ್ನು ಹುಡುಕುವ ಪ್ರಕ್ರಿಯೆಯಲ್ಲಿ ಸಿದ್ದು ಅವರನ್ನು ತೊಡಗಿಸಿಕೊಳ್ಳಲು ಹೈಕಮಾಂಡ್ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

  ಡಿಯೋಲ್ ಪಂಜಾಬ್‌ನ ಮಾಜಿ ಡಿಜಿಪಿ ಸುಮೇದ್ ಸೈನಿ ಮತ್ತು ಅಮಾನತುಗೊಂಡ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ಪರಮರಾಜ್ ಸಿಂಗ್ ಉಮ್ರಾನಂಗಲ್ ಅವರ ಜೊತೆ ಸಂಬಂಧ ಹೊಂದಿದ್ದರು. ಅಲ್ಲದೆ, ಡಿಯೋಲ್ ಸೈನಿಯನ್ನು ಭ್ರಷ್ಟಾಚಾರ ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ಪ್ರತಿನಿಧಿಸಿದ್ದರು. ಹೀಗಾಗಿ ಭ್ರಷ್ಟಾಚಾರ ಆರೋಪ ಹೊತ್ತಿದ್ದ ಅವರನ್ನು ಪ್ರಮುಖ ಹುದ್ದೆಗೆ ಚೆನ್ನಿ ಸರ್ಕಾರ ಆಯ್ಕೆ ಮಾಡಿದ್ದು ಬಹುತೇಕರ ಹುಬ್ಬೇರುವಂತೆ ಮಾಡಿತ್ತು. ಇದನ್ನು ವಿರೋಧಿಸಿಯೇ ನವಜೋತ್ ಸಿಂಗ್ ಸಿಧು ಸಹ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ಮಾತುಕತೆ ಮೂಲಕ ಪಂಜಾಬ್ ಕಾಂಗ್ರೆಸ್​ನಲ್ಲಿ ಎಲ್ಲಾ ಭಿನ್ನಾಭಿಪ್ರಾಯಗಳೂ ತಹಬದಿಗೆ ಬಂದಿದೆ.

  ಇದೀಗ ಕದನ ವಿರಾಮ ಯೋಜನೆಯ ಭಾಗವಾಗಿ, ಹೊಸ ಡಿಜಿಪಿ ನೇಮಕಾತಿಗಾಗಿ ಯುಪಿಎಸ್‌ಸಿಗೆ ಹೆಸರುಗಳನ್ನು ನಾಮ ನಿರ್ದೇಶನ ಮಾಡಲಾಗಿದೆ. ಪಂಜಾಬ್ ಸರ್ಕಾರ ಇತ್ತೀಚೆಗೆ ಡಿಜಿಪಿಯ ಹೆಚ್ಚುವರಿ ಜವಾಬ್ದಾರಿಯನ್ನು ಇಕ್ಬಾಲ್ ಪ್ರೀತ್ ಸಿಂಗ್ ಸಹೋತಾ ಅವರಿಗೆ ನೀಡಿತ್ತು, ಅವರ ಹೆಸರನ್ನು ಸಹ ಸಿಧು ವಿರೋಧಿಸಿದ್ದರು. ಪಿಸಿಸಿ ಮುಖ್ಯಸ್ಥ ಸಿದ್ಧಾರ್ಥ್ ಚಟ್ಟೋಪಾಧ್ಯಾಯ ಅವರ ಹೆಸರನ್ನು ಮುಂದಿಟ್ಟಿದ್ದರು.

  ಪ್ರಸ್ತುತ ಕಾಂಗ್ರೆಸ್​ ಹೈಕಮಾಂಡ್ ಸೂಚಿಸಿರುವ ಮೂವರು ಸದಸ್ಯರ ಸಮಿತಿಯು ವಾರಕ್ಕೊಮ್ಮೆಯಾದರೂ ಸಭೆ ಸೇರಿ ಸರ್ಕಾರದ ಪ್ರಮುಖ ನಿರ್ಧಾರಗಳು ಮತ್ತು ನೇಮಕಾತಿಗಳನ್ನು ಚರ್ಚಿಸಲು ತಿಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಆದಾಗ್ಯೂ, "ಕಳಂಕಿತ" ಮಂತ್ರಿಗಳನ್ನು ಬದಲಿಸಲು ಯಾವುದೇ ಒಮ್ಮತ ಕಂಡು ಬಂದಿಲ್ಲ ಎಂದು ಹೇಳಲಾಗುತ್ತಿದೆ. ಈ ನಡುವೆ ನವಜೋತ್ ಸಿಂಗ್ ಸಿಧು ಅವರು ಶಾಸಕ ಸುರ್ಜಿತ್ ಧೀಮಾನ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಉತ್ಸುಕರಾಗಿದ್ದಾರೆ. ಆದರೆ, ಹೈಕಮಾಂಡ್ ಇದಕ್ಕೆ ಒಪ್ಪಿಗೆ ನೀಡುತ್ತಾ ಎಂಬುದೂ ಸಹ ಪಂಜಾಬ್ ರಾಜಕಾರಣದಲ್ಲಿ ಕುತೂಹಲಕ್ಕೆ ಕಾರಣವಾಗಿದೆ ಎಂದು ವರದಿಯಾಗಿದೆ.

  ಇದನ್ನೂ ಓದಿ: Sidhu Return to Congress: ಮನವೊಲಿಕೆ ಸಭೆ ಸಕ್ಸಸ್, ಸಿಧು ಕಾಂಗ್ರೆಸ್​​ಗೆ ವಾಪಸ್: ಡಿಮ್ಯಾಂಡ್​​ಗಳಿಗೆ ಸಿಎಂ ಅಸ್ತು

  ಇನ್ನೂ ಪಂಜಾಬ್ ಶಾಸಕರು ಸಿಎಂ ಚನ್ನಿಯನ್ನು ಭೇಟಿಯಾಗಿ ಮಾತುಕತೆ ನಡೆಸಿದ ನಂತರ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರಾಗಿ ಸಿಧು ಮುಂದುವರಿಯಲಿದ್ದಾರೆ ಎಂದು ಘೋಷಿಸಲಾಗಿದೆ ಮತ್ತು ಅವರ ಹೆಚ್ಚಿನ ಬೇಡಿಕೆಗಳನ್ನು ಸಹ ಅಂಗೀಕರಿಸಲಾಗಿದೆ. ಅಕ್ಟೋಬರ್ 4 ರಂದು ಕರೆಯಲಾಗಿರುವ ಕ್ಯಾಬಿನೆಟ್ ಸಭೆಯಲ್ಲಿ ಈ ನಿರ್ಧಾರವನ್ನು ಔಪಚಾರಿಕವಾಗಿ ಘೋಷಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
  Published by:MAshok Kumar
  First published: