ಪಾಕಿಸ್ತಾನ: ಆರ್ಥಿಕ (Financial) ಬಿಕ್ಕಟ್ಟಿನಿಂದ ಕಂಗೆಟ್ಟಿರುವ ಪಾಕಿಸ್ತಾನದ ಸ್ಥಿತಿ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಒಂದು ಹೊತ್ತಿನ ಊಟಕ್ಕೂ ಜನ ಪರದಾಡುವಂತಾಗಿದೆ. ಮುಸ್ಲಿಂ ಬಾಂಧವರು ರಂಜಾನ್ (Ramdan) ಹಬ್ಬದ ಖುಷಿಯಲ್ಲಿದ್ದರೆ ಪಾಕಿಸ್ತಾನಕ್ಕೆ ಮಾತ್ರ ಇದ್ಯಾವುದರ ಖುಷಿಯೇ ಇಲ್ಲ. ಹಬ್ಬ-ಹರಿದಿನ ಇರಲಿ ನಮ್ಮ ಮಕ್ಕಳಿಗೆ ಊಟ ಸಿಕ್ಕರೆ ಸಾಕು ಅಂತಿದ್ದಾರೆ ಪಾಕ್ ಜನತೆ. ಸಾಲ, ದುಬಾರಿ ಆಹಾರ, ಇಂಧನ ಕೊರತೆ, ಹಣದುಬ್ಬರ ಜನರನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ಸರ್ಕಾರ (Government) ಕೂಡ ಏನೂ ಮಾಡದ ಅಸಹಾಯಕ ಸ್ಥಿತಿಯಲ್ಲಿದೆ. ಪಾಕಿಸ್ತಾನದಲ್ಲಿ ಆರ್ಥಿಕ ಬಿಕ್ಕಟ್ಟಿಗೆ ನಲುಗುತ್ತಿರುವವರಲ್ಲಿ ಪ್ರಜೆಗಳಲ್ಲದೇ ಪಾಪ ಮೂಕ ಪ್ರಾಣಿಗಳು ಸೇರಿವೆ. ಅವುಗಳ ಗೋಳನ್ನು ಯಾರೂ ಕೇಳೋರಿಲ್ಲದಂತಾಗಿದೆ. ಸುಮಾರು ಮೃಗಾಲಯದಲ್ಲಿ ಆಹಾರದ ಕೊರತೆ ಉಂಟಾಗಿದ್ದು, ಝೂಗಳನ್ನೇ ಮುಚ್ಚುವ ಪರಿಸ್ಥಿತಿ ಬಂದಿದೆ.
ಆಹಾರ, ಆರೈಕೆ ಇಲ್ಲದೇ ಆನೆ ಅಸ್ವಸ್ಥ
ಬಂದರು ನಗರವಾದ ಕರಾಚಿಯಲ್ಲಿರುವ ಒಂದು ಪ್ರಸಿದ್ಧ ಮೃಗಾಲಯದಲ್ಲಿ ಪ್ರಾಣಿಗಳಿಗೆ ಸರಿಯಾದ ಆಹಾರ ಸರಬರಾಜು ಮಾಡಲಾಗದೇ ಆ ಮೃಗಾಲಯವನ್ನು ಪಾಕಿಸ್ತಾನ ಮುಚ್ಚುವ ನಿರ್ಧಾರ ಮಾಡಿದ್ದಾರೆ. ಮೃಗಾಲಯದ ಅಧಿಕಾರಿಗಳ ಅಸಮರ್ಪಕ ಆರೈಕೆ ಮತ್ತು ಚಿಕಿತ್ಸೆಯಿಂದಾಗಿ ಮೃಗಾಲಯದಲ್ಲಿ ನೂರ್ ಜೆಹಾನ್ ಎಂಬ 17 ವರ್ಷದ ಆನೆ ತೀವ್ರ ಅಸ್ವಸ್ಥಗೊಂಡಿತ್ತು. ಈ ಘಟನೆಯ ನಂತರ ಕರಾಚಿಯ ಮೃಗಾಲಯವನ್ನು ಮುಚ್ಚುವ ಕ್ರಮಕ್ಕೆ ಸರ್ಕಾರ ಮತ್ತು ಮೃಗಾಲಯದ ಆಡಳಿತ ಮಂಡಳಿ ನಿರ್ಧರಿಸಿದೆ.
ಮೃಗಾಲಯ ಮುಚ್ಚುವಂತೆ ಆಗ್ರಹ
17 ವರ್ಷಗಳ ಹಿಂದೆ ನೂರ್ ಜೆಹಾನ್ ಆನೆಯನ್ನು ತಾಂಜಾನಿಯಾದಿಂದ ಪಾಕಿಸ್ತಾನಕ್ಕೆ ಕರೆತರಲಾಗಿತ್ತು. ಆನೆ ನಡೆದಾಡುವ ಪರಿಸ್ಥಿತಿಯಲ್ಲೂ ಇಲ್ಲದ ಕಾರಣ, ಪ್ರಸ್ತುತ ಅದಕ್ಕೆ ಹೆಚ್ಚಿನ ಕಾಳಜಿ, ಆಹಾರ ಬೇಕಿದೆ. ಆದರೆ ಈ ಎಲ್ಲಾ ಸೌಲಭ್ಯಗಳನ್ನು ನೀಡುವಷ್ಟು ಪಾಕ್ ಸಮರ್ಥವಾಗಿಲ್ಲ. ಹೀಗಾಗಿ ಸಾರ್ವಜನಿಕರಿಂದ ಮೃಗಾಲಯ ಮುಚ್ಚಿ ಎಂಬ ಕೂಗು ಕೇಳಿ ಬರುತ್ತಿದೆ. ತೀವ್ರ ಪ್ರತಿಭಟನೆಯ ನಂತರ ಪಾಕಿಸ್ತಾನದ ಹವಾಮಾನ ಬದಲಾವಣೆಯ ಕೇಂದ್ರ ಸಚಿವ ಶೆರ್ರಿ ರೆಹಮಾನ್ ಅವರು ಪ್ರಾಂತೀಯ ಸಿಂಧ್ ಸರ್ಕಾರವನ್ನು ಕಾಡು ಪ್ರಾಣಿಗಳನ್ನು ನೋಡಿಕೊಳ್ಳುವ ಸಾಮರ್ಥ್ಯದ ಕೊರತೆಯಿಂದಾಗಿ ಮೃಗಾಲಯವನ್ನು ಮುಚ್ಚುವಂತೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಇಂದೇ ಸರ್ಕಾರಿ ಬಂಗಲೆ ಖಾಲಿ ಮಾಡಲಿದ್ದಾರೆ ರಾಹುಲ್! ಮುಂದಿನ ಪಯಣ ಎಲ್ಲಿಗೆ ಗೊತ್ತಾ?
ಪಾಕ್ ಸರ್ಕಾರ ಕೂಡ ಮೃಗಾಲಯದಲ್ಲಿ ಇರಿಸಲಾಗಿರುವ ಪ್ರಾಣಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವುದಾಗಿ ಹೇಳಿದೆ. ಆದರೆ ಈ ಕ್ರಮ ಇನ್ನೂ ಕೂಡ ಜಾರಿಯಾಗಿಲ್ಲ. ಇನ್ನೂ ಸಹ ಪ್ರಾಣಿಗಳು ಮೃಗಾಲಯದಲ್ಲೇ ಇದ್ದು, ಅದರ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ವಿಡಿಯೋದಲ್ಲಿ ಪ್ರಾಣಿಗಳು ಆಹಾರವಿಲ್ಲದೇ ಸೊರಗಿರುವುದನ್ನು ನೋಡಬಹುದಾಗಿದೆ.
ಹದಗೆಟ್ಟ ಆರ್ಥಿಕ ಸ್ಥಿತಿ
ಪಾಕ್‌ನ ಪ್ರಾಣಿಗಳ ಸ್ಥಿತಿ ಬಗ್ಗೆ ವಿಶ್ವವೇ ಕಳವಳ ವ್ಯಕ್ತಪಡಿಸುತ್ತಿದೆ. "ದಯವಿಟ್ಟು ಕರಾಚಿ ಮೃಗಾಲಯವನ್ನು ಮುಚ್ಚಿ. ಮನುಷ್ಯರಿಗೆ ಆಹಾರ ಮತ್ತು ಆರೈಕೆ ಮಾಡಲು ಹಣವಿಲ್ಲದ ಪರಿಸ್ಥಿತಿಯಲ್ಲಿ, ಮೂಕ ಪ್ರಾಣಿಗಳ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುತ್ತಾರೆ" ಎಂದು ಸಂಶೋಧನಾ ವಿಶ್ಲೇಷಕ ಜುನೈರಾ ಖಾನ್ ಟ್ವಿಟರ್‌ನಲ್ಲಿ ಬರೆದಿದ್ದಾರೆ.
ಇದನ್ನೂ ಓದಿ: ಮಳೆಗಾಗಿ ಕಳಸೇಶ್ವರನ ಮೊರೆ, ಪೂಜೆಗೂ ಮುನ್ನ ಸುರಿದ ವರ್ಷಧಾರೆ!
ಆಹಾರ ಬೆಲೆಗಳಂತೂ ಗಗನಕ್ಕೇರಿವೆ. ಒಂದು ಕೆಜಿ ಚಿಕನ್ ಬೆಲೆ 350, ಒಂದು ಕೆಜಿ ಅಕ್ಕಿಯ ಬೆಲೆ 335 ಪಾಕಿಸ್ತಾನ ರೂಪಾಯಿ, ಬಾಳೆ ಹಣ್ಣು 300 ರೂ. ಆಗಿದೆ. ಈ ಮಧ್ಯೆ ಏಪ್ರಿಲ್ 2023 ರಿಂದ ಜೂನ್ 2026 ರೊಳಗೆ ಪಾಕಿಸ್ತಾನವು ಚೀನಾ, ಸೌದಿ ಅರೇಬಿಯಾಕ್ಕೆ 77.5 ಶತಕೋಟಿ ಬಾಹ್ಯ ಸಾಲವನ್ನು ಮರುಪಾವತಿಸಬೇಕಾಗಿದೆ.
ಗಗನಕ್ಕೇರುತ್ತಿರುವ ಹಣದುಬ್ಬರ, ಪ್ರಧಾನಿ ಶೆಹಬಾಜ್ ಷರೀಫ್ ಅವರ ಸರ್ಕಾರ ಮತ್ತು ಮಾಜಿ ಪ್ರಧಾನಿ ಇಮ್ರಾನ್ ಖಾನ್ ನಡುವಿನ ರಾಜಕೀಯ ಸಂಘರ್ಷ, ಭಯೋತ್ಪಾದನೆ ಉಲ್ಬಣ ನಡುವೆ, ಪಾಕಿಸ್ತಾನವು ತನ್ನ ಬೃಹತ್ ಬಾಹ್ಯ ಸಾಲದ ಬಾಧ್ಯತೆಗಳಿಂದ ಕೆಟ್ಟ ಆರ್ಥಿಕ ಸ್ಥಿತಿಯನ್ನು ಎದುರಿಸುತ್ತಿದೆ. ಪಾಕಿಸ್ತಾನದ ಆರ್ಥಿಕ ಸ್ಥಿತಿ ದಿನೇದಿನೇ ಗಂಭೀರ ಸ್ವರೂಪ ಪಡೆಯುತ್ತಿದೆ ಎಂಬುದಕ್ಕೆ ಮೃಗಾಲಯದ ಪರಿಸ್ಥಿತಿಗಳು ಕೂಡ ಸಾಕ್ಷಿಯಾಗುತ್ತಿವೆ. ಆರ್ಥಿಕ ಬಿಕ್ಕಟ್ಟು ವನ್ಯಜೀವಿಗಳು ಸೇರಿದಂತೆ ದೇಶದ ಪ್ರತಿಯೊಂದು ಅಂಶಗಳ ಮೇಲೆ ಪರಿಣಾಮ ಬೀರುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ