ವಿಶ್ವಸಂಸ್ಥೆ ಮಾನವ ಹಕ್ಕು ಮಂಡಳಿ ಎದುರು ಕಾಶ್ಮೀರ ವಿಚಾರ ಪ್ರಸ್ತಾಪಕ್ಕೆ ಮುಂದಾದ ಪಾಕ್​; ತಿರುಗೇಟು ನೀಡಲು ಭಾರತ ಸಿದ್ಧತೆ

Seema.R | news18-kannada
Updated:September 10, 2019, 12:18 PM IST
ವಿಶ್ವಸಂಸ್ಥೆ ಮಾನವ ಹಕ್ಕು ಮಂಡಳಿ ಎದುರು ಕಾಶ್ಮೀರ ವಿಚಾರ ಪ್ರಸ್ತಾಪಕ್ಕೆ ಮುಂದಾದ ಪಾಕ್​; ತಿರುಗೇಟು ನೀಡಲು ಭಾರತ ಸಿದ್ಧತೆ
ಕಾಶ್ಮೀರದ ಚಿತ್ರಣ
  • Share this:
ನವದೆಹಲಿ (ಸೆ.10): ಕಾಶ್ಮೀರ ವಿಷಯವಾಗಿ ಪದೇ ಪದೇ ಕ್ಯಾತೆ ತೆಗೆಯುತ್ತಿರುವ ಪಾಕಿಸ್ತಾನ ಇದೀಗ ಕಣಿವೆ ರಾಜ್ಯದಲ್ಲಿ ಭಾರತ ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತಿದೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ ಎದುರು ದೂರು ನೀಡಲು ಸಜ್ಜಾಗಿದೆ.

ಇಂದಿನಿಂದ ಜಿನಿವಾದಲ್ಲಿ ಮೂರು ದಿನಗಳ ಕಾಲ ವಿಶ್ವಸಂಸ್ಥೆಯ ಮಾನವಹಕ್ಕುಗಳ ಮಂಡಳಿ ಸಭೆ ನಡೆಯಲಿದ್ದು, ಪಾಕಿಸ್ತಾನದ ವಿದೇಶಾಂಗ ಸಚಿವ ಮೊಹಮ್ಮದ್​ ಖುರೇಷಿ ಸಭೆಯಲ್ಲಿ ಕಾಶ್ಮೀರದಲ್ಲಿ ಭಾರತ ಸರ್ಕಾರ ನಡೆಸುತ್ತಿರುವ ಮಾನವ ಹಕ್ಕು ಉಲ್ಲಂಘನೆ ಕುರಿತ ವಿಷಯವನ್ನು ಮುಂದಿಡಲು ಬೇಕಾದ ಎಲ್ಲಾ ಸಿದ್ಧತೆಗಳನ್ನು ನಡೆಸಿದ್ದಾರೆ.

ಪಾಕ್​ ಧ್ವನಿ ಎತ್ತಲಿರುವ ವಿಷಯದ ಕುರಿತು ಭಾರತದ ಪರವಾಗಿ ಸಮರ್ಥ ವಾದ ಮಂಡಿಸಲು ಕೇಂದ್ರ ಸರ್ಕಾರ ವಿಜಯ್​ ಠಾಕೂರ್​ ಸಿಂಗ್​ ನೇತೃತ್ವದ ವಿದೇಶಾಂಗ ಕಾರ್ಯದರ್ಶಿಗಳ ತಂಡವನ್ನು ಸಿದ್ಧತೆ ನಡೆಸಿದೆ.

ಮಾನವ ಹಕ್ಕು ಮಂಡಳಿಯಲ್ಲಿ ಈ ವಿಷಯದ ಕುರಿತಾದ ತುರ್ತು ಚರ್ಚೆ ಕರೆಯಲು ಪಾಕಿಸ್ತಾನಕ್ಕೆ ಸರಳ ಬಹುಮತ ಇಲ್ಲ ಎಂಬ ಬಗ್ಗೆ ಪ್ರಚಾರ ಮಾಡುವತ್ತಲೂ ಭಾರತ ಚಿತ್ತಹರಿಸಿದೆ. ಮಂಡಳಿಯಲ್ಲಿ 47 ಸದಸ್ಯರು ಇದ್ದು, ಏಷ್ಯಾನ್​ ಫೆಸಿಫಿಕ್​ ಗ್ರೂಪ್​ನಡಿ ಭಾರತ ಮತ್ತು ಪಾಕಿಸ್ತಾನವನ್ನು ಕೂಡ ಗುರುತಿಸಲಾಗಿದೆ. ಭಾರತದ ಸದಸ್ಯತ್ವ 2021ರವರೆಗೆ ಇರಲಿದ್ದು, ಪಾಕಿಸ್ತಾನದ ಸದಸ್ಯತ್ವ 2020ಕ್ಕೆ ಮುಗಿಯಲಿದೆ.

ಮಂಡಳಿಯ ಸದಸ್ಯರು ಮೂರು ವರ್ಷ ಸೇವೆ ಬಳಿಕ ತಕ್ಷಣಕ್ಕೆ ಸದಸ್ಯ ರಾಷ್ಟ್ರಗಳು ಮರುಚುನಾವಣೆ ಸಾಧ್ಯವಿಲ್ಲ. ಇದರ ಸದಸ್ಯರನ್ನು ವಿಶ್ವಸಂಸ್ಥೆ ಸದಸ್ಯ ರಾಷ್ಟ್ರಗಳ ಮಾನವ ಹಕ್ಕುಗಳ ರಕ್ಷಣೆಯಲ್ಲಿನ ಬದ್ಧತೆಯನ್ನು ಪರಿಗಣಿಸಿ ಆಯ್ಕೆ ಮಾಡುತ್ತದೆ.

ಜಮ್ಮು-ಕಾಶ್ಮೀರ ವಿಚಾರವನ್ನು ವಿಶ್ವಸಂಸ್ಥೆಯ ಮಂಡಳಿಯಲ್ಲಿ ಮಂಡಿಸುವ ಬಗ್ಗೆ ಸಿದ್ಧತೆ ನಡೆಸಿರುವ ಪಾಕಿಸ್ತಾನ ಮೂರನೇ ವ್ಯಕ್ತಿ ಮಧ್ಯಸ್ಥಿಕೆ ಮೂಲಕವೂ ಈ ವಿಷಯವನ್ನು ಪ್ರಸ್ತಾಪಿಸಲು ಚಿಂತನೆ ನಡೆಸಿದೆ. ಈಗಾಗಲೇ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದ ಪಾಕ್​ ಸರ್ಕಾರಕ್ಕೆ ತನ್ನ ಪ್ರಯತ್ನದಲ್ಲಿ ಹಿನ್ನೆಡೆ ಅನುಭವಿಸಿತ್ತು.

ಇದನ್ನು ಓದಿ: ಜಾರ್ಖಂಡ್​​ ಸಾಮೂಹಿಕ ಹಲ್ಲೆ ಪ್ರಕರಣ: 11 ಆರೋಪಿಗಳ ವಿರುದ್ದದ ಚಾರ್ಜ್​ಶೀಟ್​ ಕೈ ಬಿಟ್ಟ ಪೊಲೀಸರುಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂಬ ವಿಚಾರದ ಕುರಿತು ಖುರೇಷಿ ಮಂಡಳಿಯಲ್ಲಿ ವಾದ ಮಂಡಿಸಲು ಸಿದ್ಧರಾಗಿದ್ದಾರೆ. ಅಲ್ಲೆ, ಕಾಶ್ಮೀರದಲ್ಲಿ ಅಂತರ್ಜಾಲ ಸಂಪರ್ಕ ಕಡಿತ ಹಾಗೂ ಸ್ಥಳೀಯ ನಾಯಕರ ಬಂಧನ ಕುರಿತು ಈಗಾಗಲೇ ವಿಶ್ವಸಂಸ್ಥೆ ಮಾನವ ಹಕ್ಕುಗಳ ಹೈ ಕಮಿಷನರ್​ ಮಿಷೆಲ್​ ಬಚ್ಲೆಟ್​ ಆಯೋಗದ ಜಾಗತಿಕ ವರದಿಯನ್ನೂ ಸಹ ಅವರು ಈ ವೇಳೆ ಉಲ್ಲೇಖಿಸಲಿದ್ದಾರೆ ಎಂದು ತಿಳಿದುಬಂದಿದೆ. 

ಈ ಹಿಂದೆ ವಿಶ್ವಸಂಸ್ಥೆ ಮಾನವ ಹಕ್ಕುಗಳ ಹೈ ಕಮಿಷನರ್​ ಮಿಷೆಲ್​ ಬಚ್ಲೆಟ್​ ಗಡಿ ನಿಯಂತ್ರಣ ರೇಖೆಯ ಎರಡು ಕಡೆ ಮಾನವ ಹಕ್ಕುಗಳ ಪರಿಸ್ಥಿತಿ ಕುರಿತು ವಿಶ್ವಸಂಸ್ಥೆಗೆ ವಿಸ್ಕೃತ ವರದಿ ಸಲ್ಲಿಸಿದ್ದರು. 

ಪಾಕಿಸ್ತಾನದ ವಾದಕ್ಕೆ ಪ್ರತಿವಾದ ಮಂಡಿಸಲು ಸಿದ್ದತೆ ನಡೆಸಿರುವ ಭಾರತ ಕಾಶ್ಮೀರದ ವಿಚಾರ ಭಾರತದ ಆಂತರಿಕ ವಿಚಾರವಾಗಿದ್ದು, ಇಲ್ಲಿನ ಸಂಪರ್ಕ ಕಡಿತ, ಸಾರ್ವಜನಿಕ ನಿರ್ಬಂಧ ಹಾಗೂ ತುರ್ತು ಸಂದರ್ಭದಲ್ಲಿ ರಾಜಕೀಯ ನಾಯಕರ ಬಂಧನದ ಕುರಿತು ಕೇಂದ್ರ ಸರ್ಕಾರದ ನಿಲುವನ್ನು ಸಮರ್ಥಿಸಿಕೊಳ್ಳಲು ಮುಂದಾಗಿದೆ.

ಅಲ್ಲದೆ, ಕಣಿವೆ ರಾಜ್ಯದಲ್ಲಿ ಶಾಂತಿ ಕದಡಲು ಪಾಕಿಸ್ತಾನ ಪ್ರೇರಿತ ಉಗ್ರರು ನಡೆಸುತ್ತಿರುವ ಸಂಚು ಹಾಗೂ ಈ ರಾಜ್ಯವನ್ನು ಅಭಿವೃದ್ಧಿ ಪಥದತ್ತ ಮುನ್ನಡೆಸಲು, ಸಾಮಾನ್ಯ ಜನರ ಬದುಕನ್ನು ಗುಣಮಟ್ಟಗೊಳಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ವಿಶ್ವಸಂಸ್ಥೆ ಎದುರು ವಿವರಿಸಲು ವಿಜಯ್ ಠಾಕೂರ್ ಸಿಂಗ್ ನೇತೃತ್ವದ ತಂಡ ಸಿದ್ದತೆ ನಡೆಸಿದೆ.

First published:September 10, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ