ಬೆಂಗಳೂರು: ಆನ್‌ಲೈನ್ ಲೂಡೋ ಗೇಮ್ (Ludo Game) ಆಡುವ ಮೂಲಕ ಭಾರತದ ಯುವಕನೊಂದಿಗೆ ಪ್ರೇಮಾಂಕುರವಾಗಿ ಬೆಂಗಳೂರಿಗೆ ಬಂದು ನೆಲೆಸಿದ್ದ ಪಾಕಿಸ್ತಾನದ ಯುವತಿಗೆ (Pakistan Girl) ಕಾನೂನಿನ ತೊಡಕು ಉಂಟಾಗಿದೆ. ಪರಿಣಾಮ ಆಕೆಯನ್ನು ಇಂದು ಬೆಂಗಳೂರು ಪೊಲೀಸರು (Bengaluru Police) ವಾಘಾ ಗಡಿ (Wagah Border) ಮೂಲಕ ಸ್ವದೇಶಕ್ಕೆ ಹಸ್ತಾಂತರ ಮಾಡಿದ್ದಾರೆ.
ಹೌದು.. ಕಳೆದ ಕೆಲ ಸಮಯದಿಂದ ಪಾಕಿಸ್ತಾನದ ಯುವತಿ ಇಕ್ರಾ ಜಿವಾನಿ ಮತ್ತು ಉತ್ತರ ಪ್ರದೇಶ ಮೂಲದ ಯುವಕ ಮುಲಾಯಂ ಸಿಂಗ್ ಯಾದವ್ ಪರಸ್ಪರ ಪ್ರೀತಿಸಿ ಕಾನೂನಿನ ಕಣ್ತಪ್ಪಿಸಿ ಬೆಂಗಳೂರಿನಲ್ಲಿ ಜತೆಯಾಗಿ ನೆಲೆಸಿದ್ದರು. ಆದರೆ ಅದು ಹೇಗೋ ಅವರ ವರ್ತನೆಯ ಬಗ್ಗೆ ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ಸಿಕ್ಕಿದ್ದು ಅದರನ್ವಯ ವಿಚಾರಿಸಿದಾಗ ಆಕೆ ಪಾಕ್ ಯುವತಿ ಎಂದು ತಿಳಿದು ಬಂದಿದೆ ಹೀಗಾಗಿ ಆ ಯುವತಿಯನ್ನು ಮಂಗಳವಾರ ವಾಘಾ ಗಡಿಯಲ್ಲಿ ಬೆಂಗಳೂರಿನ ಬೆಳ್ಳಂದೂರು ಪೊಲೀಸರು ಎಫ್‌ಆರ್‌ಆರ್‌ಓ ಅಧಿಕಾರಿಗಳ ಮೂಲಕ ಪಾಕಿಸ್ತಾನಕ್ಕೆ ಹಸ್ತಾಂತರ ಮಾಡಿದ್ದಾರೆ.
ಇದನ್ನೂ ಓದಿ: Viral News: ಲುಡೋ ಗೇಮ್ ಆಡ್ತಾ ಹುಟ್ಟಿಕೊಂಡೇ ಬಿಡ್ತು ಪ್ರೀತಿ, ಪ್ರಿಯಕರನನ್ನು ಮದುವೆಯಾಗಲು ಭಾರತಕ್ಕೆ ಬಂದ ಪಾಕ್ ಹುಡುಗಿ!
ಏನಿದು ಘಟನೆ?
ಅಂದ ಹಾಗೆ 19 ವರ್ಷ ವಯಸ್ಸಿನ ಪಾಕಿಸ್ತಾನದ ಯುವತಿ ಇಕ್ರಾ ಜೀವಾನಿ ಪ್ರತಿನಿತ್ಯ ಆನ್‌ಲೈನ್‌ನಲ್ಲಿ ಲೂಡೋ ಆಡುವ ಹವ್ಯಾಸವನ್ನು ಹೊಂದಿದ್ದರು. ಒಂದು ದಿನ ಲೂಡೋ ಆಡುವಾಗ ಆಕೆಗೆ ಭಾರತದ ಉತ್ತರಪ್ರದೇಶದ ಯುವಕ ಮುಲಾಯಂ ಸಿಂಗ್ ಎಂಬಾತನ ಜೊತೆ ಆನ್‌ಲೈನ್‌ನಲ್ಲಿ ಸಂಪರ್ಕ ಆಗುತ್ತದೆ. ಅಲ್ಲಿಂದ ದಿನನಿತ್ಯ ಲೂಡೋ ಆಡುವ ಅವರು ಒಂದು ದಿನ ಪರಸ್ಪರ ನಂಬರ್ ಪಡೆದುಕೊಂಡು ಪ್ರೀತಿಸಲು ಶುರು ಮಾಡಿದ್ದಾರೆ. ಅಲ್ಲದೇ ನಾವು ಜೊತೆಯಾಗಿ ಬಾಳಬೇಕು ಹೀಗಾಗಿ ಮದುವೆ ಆಗಲು ನಿರ್ಧರಿಸಿದ್ದಾರೆ.
ಹೀಗೆ ಜತೆಯಾಗಿ ಬಾಳಲು ನಿರ್ಧರಿಸಿದ ಈ ಜೋಡಿಗೆ ಭಾರತ ಮತ್ತು ಪಾಕಿಸ್ತಾನ ನಡುವಿನ ರಾಜತಾಂತ್ರಿಕ ಸಮಸ್ಯೆಗಳು ಎದುರಾಗಿದೆ. ಕಾನೂನಿನ ತೊಡಕಿನ ಕಾರಣಕ್ಕೆ ವೀಸಾ ಸಿಗದೆ ನೇರವಾಗಿ ಭಾರತಕ್ಕೆ ಬರಲಾಗದ ಇಕ್ರಾ ಜೀವಾನಿ ಪಾಕಿಸ್ತಾನದಿಂದ ನೇಪಾಳಕ್ಕೆ ಹೋಗಿ ಅಲ್ಲಿಂದ ಕಠ್ಮಂಡು ವಿಮಾನ ನಿಲ್ದಾಣದಲ್ಲಿ ಬಂದಿಳಿಯುತ್ತಾಳೆ. ಇತ್ತ ಮುಲಾಯಂ ಸಿಂಗ್ ಕೂಡ ಉತ್ತರಪ್ರದೇಶದಿಂದ ಕಠ್ಮಂಡುವಿಗೆ ತೆರಳುತ್ತಾನೆ. ನಂತರ ಅಲ್ಲಿ ಜತೆಯಾದ ಇಬ್ಬರೂ ನೇಪಾಳದಲ್ಲೇ ಮದುವೆಯಾಗಿ ಅಲ್ಲಿಂದ ಭಾರತದ ಸೋನಾಲಿ ಪ್ರದೇಶಕ್ಕೆ ಅಕ್ರಮವಾಗಿ ನುಸುಳಿ ಬರುತ್ತಾರೆ. ಅಲ್ಲಿಂದ ನೇರವಾಗಿ ಬೆಂಗಳೂರಿಗೆ ಬಂದಿಳಿದ ಜೋಡಿ ಎರಡು ವರ್ಷಗಳ ಕಾಲ ಜತೆಯಾಗಿ ಬದುಕುತ್ತಾರೆ.
ಹಿಂದೂ ಮುಸ್ಲಿಂ ಜತೆಯಾಗಿ ಬದುಕೋದು ಭಾರತದಂತಹ ದೇಶದಲ್ಲಿ ಅಪರಾಧ ಎನ್ನುವಷ್ಟರ ಮಟ್ಟಿಗೆ ಭಾವನೆ ಸೃಷ್ಟಿಯಾಗಿರೋದ್ರಿಂದ ಇಂತಹ ಸಮಸ್ಯೆ ಎದುರಾಗಬಾರದು ಎನ್ನುವ ಕಾರಣಕ್ಕೆ ಇಕ್ರಾ ಜೀವಾನಿ ತಾನು ಹಿಂದೂ ಹೆಸರನ್ನು ಇಟ್ಟುಕೊಂಡು ಜೀವನ ಶುರು ಮಾಡ್ತಾಳೆ. ಆದರೆ ಆಕೆ ತನ್ನ ಧಾರ್ಮಿಕ ನಂಬಿಕೆಯಲ್ಲಿ ಬದಲಾವಣೆ ಮಾಡದ ಕಾರಣ ಪ್ರತಿನಿತ್ಯ ನಮಾಜ್ ಮಾಡೋದು, ಕುರಾನ್ ಓದೋದು ಮಾಡುತ್ತಿರುತ್ತಾಳೆ. ಇದನ್ನು ಗಮನಿಸಿದ ಅಕ್ಕಪಕ್ಕದ ನಿವಾಸಿಗಳು ಆಕೆಯ ಮೇಲೆ ಸಂಶಯಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೂಲಂಕೂಶವಾಗಿ ವಿಚಾರಣೆ ನಡೆಸಿದಾಗ ಆಕೆ ಪಾಕಿಸ್ತಾನ ಮೂಲದವಳು ಎಂದು ತಿಳಿದು ಬಂದಿದೆ.
ಇದನ್ನೂ ಓದಿ: Pakistan: ಕೆಟ್ಟರೂ ಬುದ್ದಿ ಕಲಿಯದ ಪಾಕಿಸ್ತಾನ, ಭಾರತದ ವಿರುದ್ಧ ಮತ್ತೊಂದು ಪಿತೂರಿಗೆ ಪಾಕ್ ಸಜ್ಜು!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ