ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆಯ ದಿನದಂದೇ ಸಾರ್ವಜನಿಕ ಉದ್ಯಾನವನದಲ್ಲಿ ಮಹಿಳೆಯ ಮೇಲೆ ಅಮಾನವೀಯವಾಗಿ ದೌರ್ಜನ್ಯ ನಡೆಸಿರುವ ಘಟನೆ ವರದಿಯಾಗಿದೆ. ಶನಿವಾರ ಪಾಕಿಸ್ತಾನದಾದ್ಯಂತ ಜನರು ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗಿಯಾಗಿದ್ದರೆ, ಇತ್ತ ಲಾಹೋರ್ನ ಗ್ರೇಟರ್ ಇಕ್ಬಾಲ್ ಪಾರ್ಕ್ನಲ್ಲಿ ಮಹಿಳಾ ಟಿಕ್ ಟಾಕರ್ ಬಟ್ಟೆಯನ್ನು ಹರಿದು ಆಕೆಯ ಮೇಲೆ ದೌರ್ಜನ್ಯ ಎಸಗಲಾಗಿದೆ. ನೂರಾರು ಪುರಷರು ಮಹಿಳೆ ಮೇಲೆ ಮೃಗಗಳಂತೆ ವರ್ತಿಸಿರುವ ವರ್ತನೆ ಸಾಮಾಜಿಕ ಜಾಲತಾಣದಲ್ಲಿ ಕಂಡು ಬಂದಿದೆ. ಆಗಸ್ಟ್ 14ರಂದು ಸ್ವಾತಂತ್ರ್ಯ ದಿನಚರಣೆ ವೇಳೆ ಸಂತ್ರಸ್ತೆ ಮಹಿಳೆ ಮೇಲೆ ಮುಗಿಬಿದ್ದ ನೂರಾರು ಪುರುಷರು ಆಕೆಯ ಬಟ್ಟೆಯನ್ನು ಹರಿದು , ಆಕೆಯನ್ನ ಗಾಳಿಯಲ್ಲಿ ಎತ್ತಿ ಬಿಸಾಡಿರುವ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿದೆ.
ಪಾರ್ಕ್ನಲ್ಲಿ ಸ್ವಾತಂತ್ರ್ಯ ದಿನಚಾರಣೆಯಲ್ಲಿ ಭಾಗಿಯಾಗಿದ್ದ ಮಹಿಳೆಯನ್ನು ಸುತ್ತುವರಿದ ಪುರುಷರ ಗುಂಪು ಆಕೆಯನ್ನು ಹಿಂಸಿಸಿ, ದೌರ್ಜನ್ಯ ಎಸಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಂಡು ಬಂದಿದ್ದು, ಪುರಷರ ಗುಂಪು ಮಹಿಳೆಯ ಬಟ್ಟೆ ಹರಿದು ಹೋಗುವಂತೆ ಆಕೆ ಮೇಲೆ ಹಲ್ಲೆ ನಡೆಸಿರುವ ಘಟನೆಗಳು ಕಂಡು ಬಂದಿದೆ. ಏಕಾಂಕಿ ಮಹಿಳೆ ಮೇಲೆ ನೂರಾರು ಪುರುಷರ ಗುಂಪು ನಡೆಸಿರುವ ಈ ಕ್ರೌರ್ಯಕ್ಕೆ ನೆಟ್ಟಿಗರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಲಾಹೋರ್ನ ಲೋರಿ ಅಡ್ಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಲ್ಲದೇ, ಈ ದೌರ್ಜನ್ಯ ನಡೆಸಿದ ಪುರಷರ ಗುಂಪಿನ ವಿರುದ್ಧ ದೂರು ದಾಖಲಿಸಲಾಗಿದೆ. ಈ ಸಂಬಂಧ ಟಿಕ್ ಟಾಕರ್ ಮಹಿಳೆ ಕೂಡ ಗ್ರೇಟರ್ ಇಕ್ಬಾಲ್ ಪಾರ್ಕ್ನಲ್ಲಿ ದೂರು ದಾಖಲಿಸಿದ್ದಾರೆ ಎಂದು ಪಾಕಿಸ್ತಾನದ ಡಾನ್ ಪತ್ರಿಕೆ ವರದಿ ಮಾಡಿದೆ.
ಶನಿವಾರ ಸ್ವಾತಂತ್ರ್ಯ ದಿನಾಚರಣೆ ಹಿನ್ನಲೆ ಮಿನಾರ್ ಇ - ಪಾಕಿಸ್ತಾನದ ಬಳಿಕ ವಿಡಿಯೋ ಚಿತ್ರೀಕರಣ ಮಾಡುವಾಗ 300 ರಿಂದ 400 ಜನರು ತಮ್ಮ ಮೇಲೆ ದಾಳಿ ನಡೆಸಿದ್ದಾರೆ ಎಂದು ಸಂತ್ರಸ್ತ ಮಹಿಳೆ ದೂರಿನಲ್ಲಿ ದಾಖಲಿಸಿದ್ದಾರೆ. ಈ ವೇಳೆ ತನ್ನ ಜೊತೆಯಿದ್ದ ಆರು ಜನ ಸಹಚರರ ಜೊತೆ ತಪ್ಪಿಸಿಕೊಳ್ಳಲು ಯತ್ನಿಸಿದೆ ಆದರೆ ಸಾಧ್ಯವಾಗಲಿಲ್ಲ. ಜನರ ಗುಂಪು ಹೆಚ್ಚಿದ್ದ ಕಾರಣ ಅವರು ನನ್ನನ್ನು ಎಲ್ಲಾ ಕಡೆಯಿಂದ ಸುತ್ತುವರೆದರು. ಈ ವೇಳೆ ಪರಿಸ್ಥಿತಿ ಕಂಡ ಪಾರ್ಕ್ನ ಭದ್ರತಾ ಸಿಬ್ಬಂದಿ ಮಿನಾರ್-ಇ-ಪಾಕಿಸ್ತಾನದ ಎಲ್ಲಾ ಗೇಟ್ಗಳನ್ನು ತೆರೆದರು ಎಂದು ದೂರಿನಲ್ಲಿ ದಾಖಲಿಸಿದ್ದಾರೆ.
ಇದನ್ನು ಓದಿ: ವಿಶ್ರಾಂತಿ ಮೊರೆ ಹೋದ ಮಾಜಿ ಸಿಎಂ; ಮಗನೊಂದಿಗೆ ವಿದೇಶಕ್ಕೆ ಹಾರಿದ ಬಿಎಸ್ವೈ
ಈ ವೇಳೆ ಜನರು ನನ್ನನ್ನು ಎಳೆದಾಡಿದರು. ನನ್ನ ಬಟ್ಟೆಗಳನ್ನು ಹರಿದು ಹಾಕಿದರು, ಅನೇಕ ಜನರು ನನ್ನ ಸಹಾಯಕ್ಕೆ ಬಂದರೂ ಆಕ್ರಮಣಕಾರರ ಗುಂಪು ದೊಡ್ಡದಾಗಿದ್ದ ಹಿನ್ನಲೆ ಯಾವುದೇ ಪ್ರಯೋಜನವಾಗಿಲ್ಲ. ಈ ವೇಳೆ ನನ್ನ ಕೆಲ ಆಭರಣ ಮತ್ತು ಜೊತೆಗಿದ್ದವರ ಆಭರಣಗಳನ್ನು ಕೂಡ ಕದಿಯಲಾಗಿದೆ. ನನ್ನ ಉಂಗುರ, ಕಿವಿಯೋಲೆಯನ್ನು ಬಲವಂತವಾಗಿ ಬಿಚ್ಚಿಸಿ ಕೊಳ್ಳಲಾಯಿತು. ತನ್ನ ಸಹಚರರ ಮೊಬೈಲ್, ಐಡೆಂಟಿಟಿ ಕಾರ್ಡ್, 15 ಸಾವಿರ ರೂ ಹಣವನ್ನು ಕಸಿದು ಕೊಂಡರು ಎಂದು ದೂರಿನಲ್ಲಿ ದಾಖಲಿಸಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಲಾಹೋರ್ ಡಿಐಜಿ ಈ ಘಟನೆಯಲ್ಲಿ ಭಾಗಿಯಾದ ಆರೋಪಿಗಳ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಅಲ್ಲಿನ ಎಸ್ಪಿಗೆ ಸೂಚಿಸಿದ್ದಾರೆ. ಈ ಘಟನೆ ಮಹಿಳೆಯ ಗೌರವದ ಉಲ್ಲಂಘನೆಯಾಗಿದ್ದು, ದೌರ್ಜನ್ಯ ನಡೆಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ.
ಅಸಭ್ಯ ವಿಡಿಯೋಗಳ ಪ್ರಸಾರದ ಹಿನ್ನಲೆ ಅನೇಕ ಬಾರಿ ಚೀನಿ ಆ್ಯಪ್ ಟಿಕ್ಟಾಕ್ ಅನ್ನು ಪಾಕಿಸ್ತಾನ ಬ್ಯಾನ್ ಮಾಡಿ, ಮತ್ತೆ ಬಳಕೆಗೆ ಅವಕಾಶ ನೀಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ