ಪಂಜಾಬ್ (ಏ. 22): ದೇಶದಲ್ಲಿ ಸೋಂಕು ಹೆಚ್ಚುತ್ತಿದ್ದು, ಈ ಬಗ್ಗೆ ಮುನ್ನೆಚ್ಚರಿಕೆವಹಿಸುವಂತೆ ಸರ್ಕಾರ ಜನರಿಗೆ ಎಚ್ಚರಿಸುತ್ತಲೇ ಇದೆ. ಈ ಮುನ್ನೆಚ್ಚರಿಕೆಯ ನಡುವೆಯೂ ಬೈಸಾಕಿ ಆಚರಣೆಗಾಗಿ ಪಂಜಾಬ್ನ ಭಕ್ತರು ಪಾಕಿಸ್ತಾನಕ್ಕೆ ತೆರಳಿದ್ದಾರೆ. ಪಾಕ್ನಿಂದ ಮರಳಿದ ಈ ಭಕ್ತರಿಗೆಲ್ಲಾ ಸೋಂಕು ದೃಢಗೊಂಡಿದೆ. ಎರಡನೇ ಅಲೆ ಸೋಂಕು ದೇಶದಲ್ಲಿ ಉಲ್ಬಣವಾಗುತ್ತಿದ್ದಂತೆ ಪಂಜಾಬ್, ಮಹಾರಾಷ್ಟ್ರಗಳಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗುತ್ತಿದ್ದವು. ಈ ಹಿನ್ನಲೆ ಇಲ್ಲಿ ಬಿಗಿ ನಿಯಂತ್ರಣ ಕ್ರಮ ಕೂಡ ನಡೆಸಲಾಗಿತ್ತು. ಇಲ್ಲಿನ ಸ್ಥಳೀಯ ಆಡಳಿತ ಕೂಡ ಜನರಿಗೆ ಕಟ್ಟೆಚ್ಚರ ನೀಡಿತ್ತು. ಈ ಸಲಹೆಗಳನ್ನು ಗಾಳಿಗೆ ತೂರಿ ಸುಮಾರು ಜನ ಬೈಸಾಕಿ ಆಚರಣೆಗೆ ದೇಶದ ಗಡಿ ದಾಟಿದ್ದರು.
ಪಾಕಿಸ್ತಾನದಲ್ಲಿ ವಿವಿಧ ಸಿಖ್ ಸಂಘಟನೆಗಳು ಆಯೋಜಿಸಿದ್ದ ಬೈಸಾಕಿ ಆಚರಣೆ ಬಳಿಕ ಸ್ವದೇಶಕ್ಕೆ ಭಕ್ತರು ಮರಳಿದ್ದಾರೆ. ಈ ವೇಳೆ ಅವರಿಗೆ ರಾಪಿಡ್ ಆಂಟಿಜೆನ್ ಪರೀಕ್ಷೆ ನಡೆಸಲಾಗಿದೆ. ಈ ವೇಳೆ 100ರಲ್ಲಿ 98 ಮಂದಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಇನ್ನು ಪರೀಕ್ಷೆಗಳು ನಡೆಯುತ್ತಿದ್ದು ಅಂತಿಮ ವರದಿ ಸಿಗಲಿದೆ ಎಂದು ಗಡಿಯಲ್ಲಿನ ಸ್ಥಳೀಯ ಆರೋಗ್ಯ ಅಧಿಕಾರಿ ತಿಳಿಸಿದ್ದಾರೆ. ಇದುವರೆಗೂ 300 ಜನರನ್ನು ಪರೀಕ್ಷಿಸಲಾಗಿದೆ. ಕೋವಿಡ್ ದೃಢಪಟ್ಟವನ್ನು ಆಸ್ಪತ್ರೆ ಅಥವಾ ಮನೆಯಲ್ಲಿ ಕ್ವಾರಂಟೈನ್ ಮಾಡುವುದರ ಬಗ್ಗೆ ಅಧಿಕಾರಿಗಳು ತೀರ್ಮಾನ ತೆಗೆದುಕೊಳ್ಳಲಿದ್ದಾರೆ.
ಏ. 12 ರಂದು ಪಾಕಿಸ್ತಾನದಲ್ಲಿ ನಡೆದ ಪಂಜಾಬಿಗರ ಪ್ರಮುಖ ಹಬ್ಬವಾಗಿರುವ ಬೈಸಾಕಿ ಆಚರಣೆಯ ಜಾಥಾದಲ್ಲಿ ಭಾಗಿಯಾಗಲು ಸುಮಾರು 800 ಜನ ಭಾರತದಿಂದ ಹೋಗಿದ್ದರು. ಇಲ್ಲಿಂದ ಹೋಗುವ ಮೊದಲು ಅವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಕೋವಿಡ್ ನೆಗಟಿವ್ ವರದಿ ಬಂದ ಬಳಿಕವೇ ಅವರಿಗೆ ಅನುಮತಿ ನೀಡಲಾಗಿತ್ತು. ಇವರಿಗೆ ಪಾಕಿಸ್ತಾನದ ಹೈ ಕಮಿಷನ್ ಕೂಡ 10 ದಿನಗಳ ವೀಸಾ ನೀಡಿತ್ತು. ಇವರೆಲ್ಲಾ ಪಾಕಿಸ್ತಾನದ ಹಸನ್ ಅಬ್ದಾಲ್ನ ಗುರುದ್ವಾರ ಪಂಜಾ ಸಾಹಿಬ್ ಸೇರಿದಂತೆ ವಿವಿಧ ಸಿಖ್ ದೇವಾಲಯಕ್ಕೆ ಭೇಟಿ ನೀಡಿದ್ದರು. ಈಗ ಇವರಲ್ಲಿ ಸೋಂಕು ಕಾಣಿಸಿಕೊಂಡಿದೆ.
ಇದನ್ನು ಓದಿ: ಆಸ್ಪತ್ರೆಗಳಲ್ಲಿ ಪ್ಲಾಸ್ಮಾ ಕೊರತೆ : ಟಿಂಡರ್ ಡೇಟಿಂಗ್ ಆ್ಯಪ್‌ನಲ್ಲಿ ಪ್ಲಾಸ್ಮಾ ಡೋನರ್ ಹುಡುಕಿದ ಮಹಿಳೆ
ಇತನ್ಮಧ್ಯೆ, ಭಾರತದಲ್ಲಿ ಸೋಂಕು ಹೆಚ್ಚಾಗುತ್ತಿರುವ ಹಿನ್ನಲೆ ಪಾಕಿಸ್ತಾನ ಭಾರತೀಯ ಪ್ರಯಾಣಿಕರನ್ನು ಎರಡು ವಾರಗಳ ಕಾಲ ನಿಷೇಧಿಸಿದೆ. ಪಾಕ್ನ ರಾಷ್ಟ್ರೀಯ ಕಮಾಂಡ್ ಮತ್ತು ಆಪರೇಷನ್ ಸೆಂಟರ್ ಮುಖ್ಯಸ್ಥ ಅಸಾದ್ ಉಮರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಭಾರತದ ಪ್ರವಾಸವನ್ನು ಎರಡು ವಾರಗಳ ಕಾಲ ನಿಷೇಧಿಸಲಾಗಿದೆ.
ಪಾಕಿಸ್ತಾನ ಮಾತ್ರವಲ್ಲದೇ, ಅಮೆರಿಕ, ಬ್ರಿಟನ್, ಹಾಕಾಂಗ್ ಮತ್ತು ಸಿಂಗಾಪೂರ ಕೂಡ ಭಾರತಕ್ಕೆ ಪ್ರಯಾಣ ಕೈಗೊಳ್ಳದಂತೆ ತಮ್ಮ ದೇಶದ ಜನರಿಗೆ ತಿಳಿಸಿದೆ. ಕೋವಿಡ್ ಎರಡನೇ ಅಲೆಯಲ್ಲಿ ಭಾರತ ಸಿಲುಕಿದ್ದು, ಅತಿಹೆಚ್ಚು ಸೋಂಕು ಪತ್ತೆಯಾಗುತ್ತಿದೆ. ಈ ಹಿನ್ನಲೆ ಸುರಕ್ಷಾ ದೃಷ್ಟಿಯಿಂದ ಈ ಕ್ರಮಕ್ಕೆ ವಿವಿಧ ದೇಶಗಳು ಮುಂದಾಗಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ