ನಿಂತಿಲ್ಲ ಉಗ್ರ ಬೆಂಬಲ; ಎಫ್ಎಟಿಎಫ್​ನ ಬೂದು ಪಟ್ಟಿಯಲ್ಲೇ ಪಾಕಿಸ್ತಾನ ಮುಂದುವರಿಕೆ

ಎಫ್ಎಟಿಎಫ್ ನೀಡಿದ ಕ್ರಿಯಾ ಯೋಜನೆಯ 27 ಅಂಶಗಳ ಪೈಕಿ ಪಾಕಿಸ್ತಾನ ಆರಕ್ಕೆ ಬದ್ಧತೆ ತೋರಿಲ್ಲ. ಹೀಗಾಗಿ, ಅದನ್ನು ಗ್ರೇ ಲಿಸ್ಟ್​ನಲ್ಲಿ ಮುಂದುವರಿಸಲು ಜಾಗತಿಕ ನಿಗಾ ಸಂಸ್ಥೆ ನಿರ್ಧರಿಸಿದೆ.

ಇಮ್ರಾನ್ ಖಾನ್

ಇಮ್ರಾನ್ ಖಾನ್

 • News18
 • Last Updated :
 • Share this:
  ನವದೆಹಲಿ(ಅ. 23): ನಿರೀಕ್ಷೆಯಂತೆ ಪಾಕಿಸ್ತಾನವನ್ನು ಎಫ್​ಎಟಿಎಫ್​ನ ಗ್ರೇ ಲಿಸ್ಟ್​ನಲ್ಲಿ ಮುಂದುವರಿಸಲಾಗುತ್ತಿದೆ. ಜಾಗತಿಕ ಭಯೋತ್ಪಾದನೆಗೆ ಹಣಕಾಸು ವ್ಯವಸ್ಥೆ ಮತ್ತು ಹಣ ದುರುಪಯೋಗ ಆಗುವುದನ್ನು ಗಮನಿಸುವ ಎಫ್​ಎಟಿಎಫ್ ಸಂಸ್ಥೆ ಪಾಕಿಸ್ತಾನಕ್ಕೆ ನೀಡಿರುವ ಕ್ರಿಯಾ ಯೋಜನೆಯ 27 ಅಂಶಗಳ ಪೈಕಿ ಇನ್ನೂ 6 ಅಂಶಗಳು ನೆರವೇರಿಲ್ಲ. ಹೀಗಾಗಿ, ಫೈನಾನ್ಷಿಯಲ್ ಆಕ್ಷನ್ ಟ್ಯಾಸ್ಕ್ ಫೋರ್ಸ್ ಸಂಸ್ಥೆ ಪಾಕಿಸ್ತಾನವನ್ನು ಬೂದು ಪಟ್ಟಿಯಲ್ಲಿ ಮುಂದುವರಿಸಿದೆ. ಇವತ್ತು ನಡೆದ ಎಫ್​ಎಟಿಎಫ್ ಸಭೆಯಲ್ಲಿ ಈ ವಿಚಾರವನ್ನು ಚರ್ಚಿಸಿದ ಬಳಿಕ ನಿರ್ಧಾರ ತೆಗೆದುಕೊಳ್ಳಲಾಗಿದೆ.

  2018ರ ಜೂನ್​ನಲ್ಲಿ ಎಫ್​ಎಟಿಎಫ್​ನ ಗ್ರೇ ಲಿಸ್ಟ್​ಗೆ ಪಾಕಿಸ್ತಾನವನ್ನು ಮೂರನೇ ಬಾರಿಗೆ ಸೇರಿಸಲಾಯಿತು.  ಹಣಕಾಸು ದುರ್ಬಳಕೆ ಮತ್ತು ಭಯೋತ್ಪಾದನೆಗೆ ಹಣದ ಸಹಾಯ ಮಾಡುವ ಕಾರ್ಯಗಳನ್ನ ನಿಲ್ಲಿಸುವ ನಿಟ್ಟಿನಲ್ಲಿ ಪಾಕಿಸ್ತಾನಕ್ಕೆ 27 ಅಂಶಗಳ ಕಾರ್ಯ ಯೋಜನೆಯನ್ನ ನೀಡಿತು. ಆ ಎಲ್ಲಾ 27 ಅಂಶಗಳನ್ನೂ ಜಾರಿಗೆ ತರುವಂತೆ 2019ರ ಅಂತ್ಯದವರೆಗೂ ಗಡುವು ನೀಡಿತು. ಆದರೆ, ಈ ವರ್ಷದ ಆರಂಭದಲ್ಲಿ ಕೋವಿಡ್ ಸಾಂಕ್ರಾಮಿಕ ಸಂಕದಷ್ಟ ಉದ್ಭವಿಸಿದ ಹಿನ್ನೆಲೆಯಲ್ಲಿ ಗಡುವನ್ನು ವಿಸ್ತರಿಸಲಾಗಿತ್ತು. ಈಗ ಈ ಕಾರ್ಯಯೋಜನೆಯನ್ನು ಎಷ್ಟರಮಟ್ಟಿಗೆ ಜಾರಿಗೊಳಿಸಲಾಗಿದೆ ಎಂದು ಇವತ್ತಿನ ಎಫ್​ಎಟಿಎಫ್ ಸಭೆಯಲ್ಲಿ ವಿಮರ್ಶಿಸಲಾಯಿತು. 21 ಅಂಶಗಳು ಮಾತ್ರ ಜಾರಿಯಾಗಿವೆ. ಉಳಿದ 6 ಅಂಶಗಳ ಪಾಲನೆಯಾಗಿಲ್ಲ. ಹೀಗಾಗಿ, ಗ್ರೇ ಪಟ್ಟಿಯಲ್ಲಿ ಪಾಕ್ ಹೆಸರು ಮುಂದುವರಿಯುತ್ತದೆ.

  ಇದನ್ನೂ ಓದಿ: ಆದ್ಯತೆ ಮೇರೆಗೆ ಲಸಿಕೆ ನೀಡಲು 30 ಕೋಟಿ ಮಂದಿಯ ಪಟ್ಟಿಗೆ ಸಿದ್ಧತೆ; ರಾಜ್ಯಗಳಿಂದ ಪ್ರತ್ಯೇಕ ಪಟ್ಟಿ ಬೇಡ ಎಂದ ಕೇಂದ್ರ ಸರ್ಕಾರ

  ಬಾಕಿ ಇರುವ ಆರು ಅಂಶಗಳಲ್ಲಿ ಶೇ. 20ರಷ್ಟು ಪ್ರಗತಿ ತೋರಲಾಗಿದೆ. ಹಣ ದುರ್ಬಳಕೆ ವಿಚಾರ ಸಂಬಂಧ ಇರುವ ಅಂಶಗಳನ್ನ ಪಾಕಿಸ್ತಾನ ಸಂಪೂರ್ಣವಾಗಿ ಪಾಲಿಸಿದೆ. ಬಾಕಿ ಇರುವ 6 ಅಂಶಗಳು ಭಯೋತ್ಪಾದನೆಗೆ ಹಣಕಾಸು ವ್ಯವಸ್ಥೆ ಮಾಡಿರುವುದಕ್ಕೆ ಸಂಬಂಧಿಸಿದ್ದಾಗಿದೆ. ಲಷ್ಕರೆ ತೊಯಬಾ, ಜೇಷ್-ಎ-ಮೊಹಮ್ಮದ್ ಮೊದಲಾದ ಉಗ್ರ ಸಂಘಟನೆಗಳಿಗೆ ಹಣದ ಹರಿವನ್ನು ತಡೆಯಲು ಪಾಕಿಸ್ತಾನ ವಿಫಲವಾಗಿರುವುದು ಅದಕ್ಕೆ ಕುತ್ತು ತಂದಿದೆ.

  ಹಣಕಾಸು ಕ್ರಿಯಾ ಪಡೆಯಾಗಿರುವ ಎಫ್​ಎಟಿಎಫ್ ಸ್ಥಾಪನೆಯಾಗಿದ್ದು 1989ರಲ್ಲಿ. ಅಂತಾರಾಷ್ಟ್ರೀಯ ಹಣ ಅವ್ಯವಹಾರ ತಡೆಯಲು ಹುಟ್ಟಿಕೊಂಡಿದ್ದ ಸಂಸ್ಥೆ ಇದು. ನಂತರದ ದಿನಗಳಲ್ಲಿ ಇದಕ್ಕೆ ಟೆರರ್ ಫೈನಾನ್ಸಿಂಗ್ ಅಂಶವನ್ನೂ ಸೇರಿಸಲಾಯಿತು. ಈ ಸಂಸ್ಥೆಯಲ್ಲಿ ಭಾರತ, ಚೀನಾ ಇತ್ಯಾದಿ 39 ಸದಸ್ಯ ರಾಷ್ಟ್ರಗಳಿವೆ. ಇದು ಮೂರು ಪಟ್ಟಿಗಳನ್ನ ಮಾಡುತ್ತದೆ. ಬಿಳಿ, ಬೂದು ಮತ್ತು ಕಪ್ಪು ಪಟ್ಟಿ. ಜಾಗತಿಕವಾಗಿ ಅತಿ ಕಂಟಕ ಸೃಷ್ಟಿಸುವ ದೇಶಗಳನ್ನ ಬ್ಲಾಕ್ ಲಿಸ್ಟ್​ಗೆ ಸೇರಿಸಲಾಗುತ್ತದೆ. ಇದರಲ್ಲಿ ಸದ್ಯ ಇರಾನ್ ಮತ್ತು ಉತ್ತರ ಕೊರಿಯಾ ಇವೆ. ಗ್ರೇ ಅಥವಾ ಬೂದು ಪಟ್ಟಿಯಲ್ಲಿ ಪಾಕಿಸ್ತಾನ ಸೇರಿದಂತೆ 18 ದೇಶಗಳಿವೆ. ವರ್ಷಕ್ಕೆ ಮೂರು ಬಾರಿ, ಅಂದರೆ ಫೆಬ್ರವರಿ, ಜೂನ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಎಫ್​ಎಟಿಎಫ್​ನ ಪ್ಲೀನರಿ ಮೀಟಿಂಗ್ ನಡೆದು ಅಲ್ಲಿ ವಿಮರ್ಶೆಗಳಾಗಿ ಪಟ್ಟಿ ಪರಿಷ್ಕರಣೆ ಅಗುತ್ತದೆ.

  ಇದನ್ನೂ ಓದಿ: ಬಿಹಾರವನ್ನು ಶಿಲಾಯುಗಕ್ಕೆ ತಳ್ಳಿದವರಿಗೆ ಜನರ ಬಳಿ ಮತ ಕೇಳುವ ಧೈರ್ಯ ಎಷ್ಟು? - ಪ್ರಧಾನಿ ಮೋದಿ

  ಪಾಕಿಸ್ತಾನವನ್ನು ವಾಸ್ತವವಾಗಿ ಬ್ಲಾಕ್ ಲಿಸ್ಟ್​ಗೆ ಸೇರಿಸುವ ಸಾಧ್ಯತೆ ದಟ್ಟವಾಗಿದ್ದವು. ಆದರೆ, ಎಫ್​ಎಟಿಎಫ್​ನ 39 ಸದಸ್ಯ ರಾಷ್ಟ್ರಗಳಲ್ಲಿ ಕನಿಷ್ಠ 3 ರಾಷ್ಟ್ರಗಳ ಬೆಂಬಲ ಸಿಕ್ಕರೆ ಕಪ್ಪು ಪಟ್ಟಿಯಿಂದ ತಪ್ಪಿಸಿಕೊಳ್ಳಬಹುದು. ಪಾಕಿಸ್ತಾನಕ್ಕೆ ಚೀನಾ, ಟರ್ಕಿ ಮತ್ತು ಮಲೇಷ್ಯಾ ದೇಶಗಳು ನಿರಂತರವಾಗಿ ಬೆಂಬಲ ನೀಡುತ್ತಾ ಬಂದಿವೆ. ಹೀಗಾಗಿ, ಕಪ್ಪು ಪಟ್ಟಿಗೆ ಪಾಕಿಸ್ತಾನ ಸೇರ್ಪಡೆಯಾಗಿಲ್ಲ. ಒಂದು ವೇಳೆ, ಬ್ಲ್ಯಾಕ್ ಲಿಸ್ಟ್​ಗೆ ಸೇರ್ಪಡೆಯಾದರೆ ಪಾಕಿಸ್ತಾನದ ಆರ್ಥಿಕತೆ ಇನ್ನಷ್ಟು ಅಧಃಪತನವಾಗುವುದರಲ್ಲಿ ಅನುಮಾನ ಇಲ್ಲ. ಇಷ್ಟಾದರೂ ಪಾಕಿಸ್ತಾನ ತನ್ನ ಉಗ್ರ ಪೋಷಣೆಯ ಧೋರಣೆಯನ್ನು ನಿಲ್ಲಿಸಲು ಮೀನಮೇಷ ಎಣಿಸುತ್ತಿರುವುದು ಅಚ್ಚರಿ ಮೂಡಿಸುತ್ತದೆ.
  Published by:Vijayasarthy SN
  First published: