HOME » NEWS » National-international » PAKISTAN TEMPORARY BAN ON SOCIAL MEDIA TO STOP TLP VIOLENCE FROM ERUPTING SNVS

ಪಾಕಿಸ್ತಾನದಲ್ಲಿ ಫೇಸ್​ಬುಕ್, ವಾಟ್ಸಾಪ್ ಸೇರಿ ಎಲ್ಲಾ ಸೋಷಿಯಲ್ ಮೀಡಿಯಾಗಳಿಗೆ ತಾತ್ಕಾಲಿಕ ನಿಷೇಧ

ಪಾಕಿಸ್ತಾನದ ಟಿಎಲ್ಪಿ ಎಂಬ ನಿಷೇಧಿತ ಉಗ್ರ ಸಂಘಟನೆಯು ಇಂದು ಶುಕ್ರವಾರದ ಪ್ರಾರ್ಥನೆ ಬಳಿಕ ವ್ಯಾಪಕ ಹಿಂಸಾಚಾರ ನಡೆಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಪಾಕ್ ಸರ್ಕಾರ ಮಧ್ಯಾಹ್ನ 3 ಗಂಟೆಯವರೆಗೆ ಸೋಷಿಯಲ್ ಮೀಡಿಯಾವನ್ನು ನಿಷೇಧಿಸಿದೆ.

news18
Updated:April 16, 2021, 1:53 PM IST
ಪಾಕಿಸ್ತಾನದಲ್ಲಿ ಫೇಸ್​ಬುಕ್, ವಾಟ್ಸಾಪ್ ಸೇರಿ ಎಲ್ಲಾ ಸೋಷಿಯಲ್ ಮೀಡಿಯಾಗಳಿಗೆ ತಾತ್ಕಾಲಿಕ ನಿಷೇಧ
ಪಾಕಿಸ್ತಾನದಲ್ಲಿ ಟಿಎಲ್​ಪಿ ಬೆಂಬಲಿಗರ ಪ್ರತಿಭಟನೆ (AFP Picture)
  • News18
  • Last Updated: April 16, 2021, 1:53 PM IST
  • Share this:
ನವದೆಹಲಿ(ಏ. 16): ಪಾಕಿಸ್ತಾನದಲ್ಲಿ ತಲೆದೋರಿರುವ ಕಾನೂನು ವ್ಯವಸ್ಥೆ ಸಮಸ್ಯೆ ಹಿನ್ನೆಲೆಯಲ್ಲಿ ಅಲ್ಲಿನ ಸರ್ಕಾರ ಸೋಷಿಯಲ್ ಮೀಡಿಯಾಗೆ ತಾತ್ಕಾಲಿಕವಾಗಿ ನಿಷೇಧ ಹೇರಿದೆ. ಫೇಸ್​ಬುಕ್, ವಾಟ್ಸಾಪ್, ಟ್ವಿಟ್ಟರ್, ಟಿಕ್ ಟಾಕ್, ಗೂಗಲ್, ಯೂಟ್ಯೂಬ್ ಆ್ಯಪ್ ಮತ್ತು ಜಾಲತಾಣಗಳನ್ನು ನಾಲ್ಕು ಗಂಟೆ ಕಾಲ ನಿರ್ಬಂಧಿಸಿದೆ. ಬೆಳಗ್ಗೆ 11ಗಂಟೆಯಿಂದ ಇವುಗಳಿಗೆ ಹೇರಲಾಗಿರುವ ನಿಷೇಧವು ಮಧ್ಯಾಹ್ನ 3ರವರೆಗೆ ಇರಲಿದೆ ಎಂದು ಪಾಕಿಸ್ತಾನದ ದೂರಸಂಪರ್ಕ ಪ್ರಾಧಿಕಾರ ಪಿಟಿಎ ತಿಳಿಸಿದೆ. ಪಾಕಿಸ್ತಾನದ ಆಂತರಿಕ ಸಚಿವಾಲಯದ ಸೂಚನೆ ಮೇರೆಗೆ ಪಿಟಿಎ ಈ ಕ್ರಮ ಕೈಗೊಂಡಿರುವುದು ತಿಳಿದುಬಂದಿದೆ.

ಏನು ಕಾರಣ?: ಪಾಕಿಸ್ತಾನದ ಉಗ್ರ ಸಂಘಟನೆ ಟೆಹ್ರೀಕ್-ಇ-ಲಬ್ಬಾಯಿಕ್ (ಟಿಎಲ್​ಪಿ)ಗೆ ಸೇರಿದ ಸದಸ್ಯರು ಮತ್ತು ಬೆಂಬಲಿಗರು ತಮ್ಮ ಮುಖ್ಯಸ್ಥ ಸಾದ್ ಹುಸೇನ್ ರಿಜ್ವಿ ಬಂಧನವನ್ನು ವಿರೋಧಿಸಿ ಸೋಮವಾರದಿಂದಲೂ ದೇಶಾದ್ಯಂತ ಹಿಂಸಾಚಾರ ನಡೆಸುತ್ತಿದ್ದಾರೆ. ಮೊನ್ನೆ ಬುಧವಾರ ಸರ್ಕಾರ ಈ ಸಂಘಟನೆಯನ್ನು ನಿಷೇಧಿಸಿತು. ಇವತ್ತು ಶುಕ್ರವಾರದ ಪ್ರಾರ್ಥನೆ ಬಳಿಕ ಟಿಎಲ್​ಪಿ ಸಂಘಟನೆ ದೇಶಾದ್ಯಂತ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಲಿದೆ ಎಂಬ ಮಾಹಿತಿ ಸಿಕ್ಕಿದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಸಾಧ್ಯತೆ ತೋರಿದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಸೋಷಿಯಲ್ ಮೀಡಿಯಾವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಹಾಗೆಯೇ, ಟಿಎಲ್​ಪಿಗೆ ಸಂಬಂಧಿತ ಸುದ್ದಿಗಳನ್ನ ಪ್ರಸಾರ ಮಾಡಬಾರದೆಂದು ಅಲ್ಲಿನ ಎಲ್ಲಾ ಟಿವಿ ವಾಹಿನಿಗಳಿಗೆ ಸೂಚಿಸಲಾಗಿದೆ.

ತಮ್ಮ ಮುಖ್ಯಸ್ಥನ ಬಂಧನ ವಿರೋಧಿಸಿ ಏಪ್ರಿಲ್ 12ರಿಂದೀಚೆ ಹಿಂಸಾಚಾರ ಸಹಿತ ಪ್ರತಿಭಟನೆಗಳು ಪಾಕಿಸ್ತಾನದ ವಿವಿಧೆಡೆ ನಡೆದಿವೆ. ಈ ಸಂಬಂಧ ಅಲ್ಲಿನ ಪೊಲೀಸರು 115 ಎಫ್​ಐಆರ್ ದಾಖಲಿಸಿದ್ದಾರೆ. ಎರಡು ಸಾವಿರಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದಾರೆನ್ನಲಾಗಿದೆ.

ಇದನ್ನೂ ಓದಿ: ಕೇವಲ 2 ಶರ್ಟ್ ಕದ್ದಿದ್ದಕ್ಕೆ 20 ವರ್ಷ ಜೈಲು; ಬಿಡುಗಡೆಯಾಗುವಷ್ಟರಲ್ಲಿ ಪತ್ನಿ-ಮಗನನ್ನು ಕಳೆದುಕೊಂಡಿದ್ದ ನತದೃಷ್ಟ!

ಟಿಎಲ್​ಪಿ ಹಿಂಸಾಚಾರಕ್ಕೆ ಏನು ಕಾರಣ?:

ಪಾಕಿಸ್ತಾನದ ಟಿಎಲ್​ಪಿಯ ಈ ಹಿಂಸಾಚಾರಕ್ಕೆ ಫ್ರಾನ್ಸ್ ದೇಶದಲ್ಲಿ ನಡೆದ ಘಟನೆಯ ನಂಟಿದೆ. ಪ್ರವಾದಿ ಮೊಹಮ್ಮದ್ ಅವರ ಅವಹೇಳನಕಾರಿ ಕಾರ್ಟೂನ್ ತೋರಿಸಿದ ಫ್ರಾನ್ಸ್​ನ ಶಿಕ್ಷಕರೊಬ್ಬರನ್ನು ಹತ್ಯೆಗೈಯಲಾಗಿತ್ತು. ಆ ಘಟನೆ ಬಳಿಕ ಇಸ್ಲಾಮೀ ಮೂಲಭೂತವಾದಿಗಳ ವಿರುದ್ಧ ಫ್ರಾನ್ಸ್ ಆಕ್ರೋಶಗೊಂಡು ಖಂಡಿಸಿತು. ಪ್ರವಾದಿ ಮೊಹಮ್ಮದ್ ಕಾರ್ಟೂನುಗಳನ್ನ ಹಿಂಪಡೆಯಲು ಸಾಧ್ಯವೇ ಇಲ್ಲ ಎಂದು ಸ್ಪಷ್ಟಪಡಿಸಿತು. ಫ್ರಾನ್ಸ್ ದೇಶದ ಈ ಧೋರಣೆಯನ್ನು ಪಾಕಿಸ್ತಾನ ಸೇರಿದಂತೆ ಕೆಲವಾರು ಮುಸ್ಲಿಮ್ ದೇಶಗಳು ಟೀಕಿಸಿವೆ. ಫ್ರಾನ್ಸ್ ದೇಶದೊಂದಿಗಿನ ರಾಜತಾಂತ್ರಿಕ ಸಂಬಂಧ ಕಡಿದುಕೊಳ್ಳಬೇಕು, ಫ್ರಾನ್ಸ್ ವಸ್ತುಗಳನ್ನ ಪಾಕಿಸ್ತಾನದಲ್ಲಿ ನಿಷೇಧಿಸಬೇಕು ಎಂಬಿತ್ಯಾದಿ ನಾಲ್ಕೈದು ಬೇಡಿಕೆಗಳನ್ನ ಟಿಎಲ್​ಪಿ ಮುಂದಿಟ್ಟು ಹೋರಾಟ ಮಾಡುತ್ತಾ ಬಂದಿದೆ.

ಈಗ ತಮ್ಮ ಬೇಡಿಕೆಗಳನ್ನ ಪಾಕ್ ಸರ್ಕಾರ ಈಡೇರಿಸಿಲ್ಲ ಎಂದು ಹೇಳಿ ಟಿಎಲ್​ಪಿ ದೊಡ್ಡ ಮಟ್ಟದಲ್ಲಿ ಚಳವಳಿ ಮಾಡಲು ಹೊರಟಿದೆ. ಇದನ್ನು ತಡೆಯಲು ಪಾಕ್ ಸರ್ಕಾರ ಏಪ್ರಿಲ್ 12ರಂದು ಟಿಎಲ್​ಪಿ ಮುಖ್ಯಸ್ಥ ಸಾದ್ ರಿಜ್ವಿಯನ್ನು ಬಂಧಿಸಿತು. ತಮ್ಮ ಬೆಂಬಲಿಗರು ಬೀದಿಗೆ ಬಂದು ಹಿಂಸಾಚಾರಗಳ ಮೂಲಕ ಉತ್ತರ ನೀಡಬೇಕು ಎಂದು ಸಾದ್ ರಿಜ್ವಿ ವಿಡಿಯೋ ಸಂದೇಶವೊಂದನ್ನು ಬಿಡುಗಡೆ ಮಾಡಿದರು. ಇದರಿಂದ ಅಲ್ಲಿ ದಿನವೂ ಅಲ್ಲಲ್ಲಿ ಹಿಂಸಾಚಾರಗಳಿಂದ ಕೂಡಿದ ಪ್ರತಿಭಟನೆಗಳು ನಡೆದಿವೆ. ಇವತ್ತು ಶುಕ್ರವಾರದ ಪ್ರಾರ್ಥನೆ ಬಳಿಕ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಯುವ ಸಾಧ್ಯತೆ ಇದೆ. ಹೀಗಾಗಿ, ಪಾಕಿಸ್ತಾನ ಸರ್ಕಾರ ಮಧ್ಯಾಹ್ನ 3ಗಂಟೆಯವರೆಗೆ ಸೋಷಿಯಲ್ ಮೀಡಿಯಾ ಆ್ಯಪ್ ಮತ್ತು ತಾಣಗಳನ್ನ ಬ್ಯಾನ್ ಮಾಡಿದೆ.
Published by: Vijayasarthy SN
First published: April 16, 2021, 1:53 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories