ಇಸ್ಲಾಮಾಬಾದ್: ಪಾಕಿಸ್ತಾನದ (Pakistan) ಮಾಜಿ ಪ್ರಧಾನ ಮಂತ್ರಿ (Prime Minister) ಇಮ್ರಾನ್ ಖಾನ್ (Imran Khan) ಬಂಧನ ಕಾನೂನುಬಾಹಿರ (Illegal) ಎಂದಿರುವ ಸುಪ್ರೀಂ ಕೋರ್ಟ್ (Supreme Court) ತಕ್ಷಣವೇ ಬಿಡುಗಡೆ ಮಾಡಬೇಕೆಂದು ಸೂಚಿಸಿದೆ. ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಮಾಜಿ ಪ್ರಧಾನಿಯನ್ನ ಎರಡು ದಿನಗಳ ಹಿಂದೆ ನ್ಯಾಷನಲ್ ಅಕೌಂಟೆಬಿಲಿಟಿ ಬ್ಯೂರೋ (NAB) ಕೋರ್ಟ್ ಆವರಣದಲ್ಲೇ ಬಂಧಿಸಿತ್ತು. ಕೆಲವು ಆರೋಪಗಳ ಪ್ರಕರಣದ ವಿಚಾರಣೆಗೆ ಹಾಗೂ ಜಾಮೀನು ಪಡೆಯುವುದಕ್ಕಾಗಿ ಲಾಹೋರ್ನಿಂದ ಇಸ್ಲಮಾಬಾಸದ್ಗೆ ಆಗಮಿಸಿದ್ದ ವೇಳೆ ಇಮ್ರಾನ್ ಖಾನ್ರನ್ನು ರೇಂಜರ್‌ಗಳ ತಂಡ ಬಂಧಿಸಿತ್ತು. ಆದರೆ ಮಾಜಿ ಪ್ರಧಾನಿ ಬಂಧನದ ನಂತರ ಪಿಟಿಐ ಪಕ್ಷದ ಬೆಂಬಲಿಗರ ಹಿಂಸಾತ್ಮಕ ಪ್ರತಿಭಟನೆ ನಡೆಸಿದ್ದರು.
ತ್ರಿಸದಸ್ಯ ಪೀಠದಿಂದ ವಿಚಾರಣೆ
ಪಾಕಿಸ್ತಾನದ ಸುಪ್ರೀಂ ಕೋರ್ಟ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಗೆ ರಿಲೀಫ್ ನೀಡಿದೆ. ಅವರ ಬಂಧನ ಕಾನೂನು ಬಾಹಿರ ಎಂದು ದೇಶದ ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಕೂಡಲೇ ಅವರನ್ನು ಬಿಡುಗಡೆ ಮಾಡುವಂತೆ ಆದೇಶಿಸಲಾಗಿದೆ. ಈ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಉಮರ್ ಅತಾ ಬಂಡಿಯಾಲ್, ನ್ಯಾಯಮೂರ್ತಿ ಮುಹಮ್ಮದ್ ಅಲಿ ಮಜರ್ ಮತ್ತು ಅಥರ್ ಮಿನಲ್ಲಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ವಿಚಾರಣೆ ನಡೆಸಿ ಈ ಆದೇಶ ನೀಡಿದೆ. ಇದೇ ಸಂದರರ್ಭದಲ್ಲಿ ಪಾಕಿಸ್ತಾನದ ಮುಖ್ಯ ನ್ಯಾಯಮೂರ್ತಿ ಉಮರ್ ಅಟಾ ಬಂಡಿಯಾಲ್ ಆದೇಶದಲ್ಲಿ ಇಮ್ರಾನ್ ಖಾನ್ ಅವರು ತಮ್ಮ ಬೆಂಬಲಿಗರು ದೇಶದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಗೆ ಭಂಗ ತರುವುದನ್ನು ತಡೆಯಬೇಕು ಎಂದು ಹೇಳಿದ್ದಾರೆ.
ಇಮ್ರಾನ್ ಖಾನ್ ಬಂಧನ ಪ್ರಕರಣದ ತನಿಖೆಯ ಸಂದರ್ಭದಲ್ಲಿ ನ್ಯಾಷನಲ್ ಅಕೌಂಟೆಬಿಲಿಟಿ ಬ್ಯೂರೋ (ಎನ್‌ಎಬಿ) ಕಾರ್ಯಕ್ಷಮತೆ ಮತ್ತು ಬಂಧನದ ಸಮಯದಲ್ಲಿ ಪಾಕಿಸ್ತಾನ ರೇಂಜರ್‌ಗಳ ತೋರಿದ ವರ್ತನೆಯನ್ನು ನ್ಯಾಯಾಲಯವು ತನ್ನ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದೆ. ಎನ್‌ಎಬಿ ನ್ಯಾಯಾಲಯಕ್ಕೆ ಅವಮಾನ ಮಾಡಿದೆ. 90 ಜನರು ಅಧಿಕಾರಿಗಳು ನ್ಯಾಯಾಲಯಕ್ಕೆ ಪ್ರವೇಶಿಸಿ ನ್ಯಾಯಾಲಯದ ಗೌರವಕ್ಕೆ ಧಕ್ಕೆ ತಂದಿದ್ದಾರೆ. ಅಲ್ಲದೆ ನ್ಯಾಯಾಲಯದ ಆವರಣದಲ್ಲಿ ಯಾವುದೇ ವ್ಯಕ್ತಿಯನ್ನು ಬಂಧಿಸುವುದು ಹೇಗೆ? ಎಂದು ನ್ಯಾಯಾದೀಶರು ಅಸಮಾಧಾನ ಹೊರ ಹಾಕಿದ್ದಾರೆ.
ನಾಳೆ ಇಮ್ರಾನ್ ಖಾನ್ ವಿಚಾರಣೆ
ಇಸ್ಲಾಮಾಬಾದ್ ಹೈಕೋರ್ಟ್‌ನಲ್ಲಿ ನಾಳೆಯ ವಿಚಾರಣೆಯವರೆಗೆ ಇಮ್ರಾನ್ ಖಾನ್ ಅವರನ್ನು ಪೊಲೀಸ್ ಲೈನ್ಸ್ ಗೆಸ್ಟ್ ಹೌಸ್‌ನಲ್ಲಿ ಇರಿಸಲಾಗುವುದು. ಅವರನ್ನು ಭೇಟಿ ಮಾಡಲು 10 ಜನರಿಗೆ ಅವಕಾಶ ನೀಡಲಾಗಿದೆ. ಇಸ್ಲಾಮಾಬಾದ್ ಹೈಕೋರ್ಟ್‌ನಲ್ಲಿ ನಾಳೆ ಬೆಳಗ್ಗೆ 11.30ಕ್ಕೆ ಇಮ್ರಾನ್ ಖಾನ್ ಪ್ರಕರಣದ ವಿಚಾರಣೆ ನಡೆಯಲಿದೆ.
ಇದನ್ನೂ ಓದಿ: Pakistan: ಪಾಕಿಸ್ತಾನದಲ್ಲಿ ಪಿಎಂ ಆದವರ ಬದುಕು ನರಕ, ದೇಶ ಬಿಡಿ ಇಲ್ಲವೇ ಪ್ರಾಣ ಬಿಡಿ ಇವೆರಡೇ ಆಪ್ಶನ್!
ಕ್ಷಮೆಯಾಚಿಸಿದ ಇಮ್ರಾನ್ ಖಾನ್
ದೇಶದಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಗಾಗಿ ಇಮ್ರಾನ್ ಖಾನ್ ಸುಪ್ರೀಂ ಕೋರ್ಟ್‌ನಲ್ಲಿ ಕ್ಷಮೆಯಾಚಿಸಿದರು. ಈ ಬಗ್ಗೆ ತಮಗೇನೂ ಗೊತ್ತಿಲ್ಲ ಎಂದಿದ್ದಾರೆ. ದೇಶದಲ್ಲಿ ನಡೆದ ಗಲಭೆಗಳು, ಹಿಂಸಾತ್ಮಕ ಘರ್ಷಣೆಗಳು ಮತ್ತು ಬೆಂಕಿ ಹಚ್ಚುವ ಘಟನೆಗಳನ್ನು ಖಂಡಿಸುವಂತೆ ಸುಪ್ರೀಂ ಕೋರ್ಟ್ ಇಮ್ರಾನ್‌ಗೆ ಕೇಳಿದೆ. ಇನ್ನು ಈ ತೀರ್ಪಿನ ಹಿನ್ನೆಲೆಯಲ್ಲಿ ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ನಾಳೆ ರಾಷ್ಟ್ರೀಯ ಭದ್ರತಾ ಸಮಿತಿಯ ಉನ್ನತ ಮಟ್ಟದ ಸಭೆಯನ್ನು ಕರೆಯಲಿದ್ದಾರೆ.
ಪಾಕಿಸ್ತಾನ್ ಮಾಜಿ ಪಿಎಂ ವಿರುದ್ಧ ಕೇಳಿ ಬಂದಿರುವ ಆರೋಪಗಳೇನು?
ಪಾಕಿಸ್ತಾನದ ತಹ್ರಿಕ್ ಎ ಇನ್ಸಾಫ್(ಪಿಟಿಐ) ಪಕ್ಷದ ನಾಯಕನ ವಿರುದ್ಧ ತೋಷಖಾನ ಹಗರಣಕ್ಕೆ ಸಂಬಂಧಿಸಿದಂತೆ ಇಸ್ಲಾಮಾಬಾದ್ನ ಸ್ಥಳೀಯ ನ್ಯಾಯಾಲಯ ಮಾರ್ಚ್ನಲ್ಲಿ ಜಾಮೀನು ರಹಿತ ಬಂಧನ ವಾರಂಟ್ ಜಾರಿಗೊಳಿಸಿತ್ತು. ಆದರೆ ತೋಷಖಾನ ಪ್ರಕರಣದಲ್ಲಿ ವಿಚಾರಣೆ ನಡೆಸುತ್ತಿದ್ದ ಸ್ಥಳೀಯ ನ್ಯಾಯಾಲಯದ ಮಹಿಳಾ ನ್ಯಾಯಧೀಶರಿಗೆ ಇಮ್ರಾನ್ ಖಾನ್ ಬಹಿರಂಗವಾಗಿ ಬೆದರಿಕೆ ಹಾಕಲಾಗಿದ್ದಾರೆಂದು ಹೇಳಲಾಗಿತ್ತು.
ಆದರೆ ಅವರನ್ನು ಅಂದು ಬಂಧಿಸಲು ಪೊಲೀಸ್ ತಂಡ ಅವರ ನಿವಾಸಕ್ಕೆ ತೆರಳಿದ್ದ ವೇಳೆ, ಅವರ ಬೆಂಬಲಿಗರು ಖಾನ್ ನಿವಾಸವನ್ನು ಭದ್ರಕೋಟೆಯಂತೆ ಸುತ್ತುವರಿದು ಪೊಲೀಸರೊಂದಿಗೆ ಸಂಘರ್ಷಕ್ಕೆ ಇಳಿದು ಅವರನ್ನು ಮನೆಯೊಳಗೆ ಪ್ರವೇಶಿಸದಂತೆ ತಡೆಯೊಡ್ಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ