ಪಾಕಿಸ್ತಾನವನ್ನು ತ್ಯಜಿಸಿ ಭಾರತದ ಆಶ್ರಯ ಪಡೆಯಲು ಮುಂದಾದ ಇಮ್ರಾನ್ ಖಾನ್ ಪಕ್ಷದ ಶಾಸಕ; ಕಾರಣವೇನು ಗೊತ್ತಾ?

ಸೋಮವಾರ ಕುಟುಂಬ ಸಮೇತರಾಗಿ ಭಾರತಕ್ಕೆ ಆಗಮಿಸಿರುವ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಪಕ್ಷದ ಶಾಸಕ ಬಲದೇವ್ ಸಿಂಗ್ ತಾನು ಮತ್ತೆ ಪಾಕಿಸ್ತಾನಕ್ಕೆ ಹಿಂದಿರುಗಲಾರೆ ಎಂದು ತಿಳಿಸಿದ್ದಾರೆ.

MAshok Kumar | news18-kannada
Updated:September 10, 2019, 8:20 AM IST
ಪಾಕಿಸ್ತಾನವನ್ನು ತ್ಯಜಿಸಿ ಭಾರತದ ಆಶ್ರಯ ಪಡೆಯಲು ಮುಂದಾದ ಇಮ್ರಾನ್ ಖಾನ್ ಪಕ್ಷದ ಶಾಸಕ; ಕಾರಣವೇನು ಗೊತ್ತಾ?
ಪಾಕಿಸ್ತಾನದ ಶಾಸಕ ಬಲದೇವ್​ ಸಿಂಗ್ ಮತ್ತು ಕುಟುಂಬ.
  • Share this:
ನವ ದೆಹಲಿ (ಸೆಪ್ಟೆಂಬರ್.10); ಪಾಕಿಸ್ತಾನದಲ್ಲಿ ಅಲ್ಪ ಸಂಖ್ಯಾತರಿಗೆ ರಕ್ಷಣೆ ಇಲ್ಲ ಎಂದು ಆರೋಪಿಸಿರುವ ಅಲ್ಲಿನ ಸಿಖ್ ಸಮುದಾಯದ ಶಾಸಕ ಬಲದೇವ್ ಸಿಂಗ್ ಇದೀಗ ಕುಟುಂಬ ಸಮೇತರಾಗಿ ಭಾರತಕ್ಕೆ ತಲುಪಿದ್ದು, ಇಲ್ಲೇ ಆಶ್ರಯ ಪಡೆಯಲು ಮುಂದಾಗಿರುವ ವಿಚಾರ ಪಾಕಿಸ್ತಾನ ಸರ್ಕಾರಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಜುಗರಕ್ಕೀಡು ಮಾಡುವಂತಾಗಿದೆ.

ಬಲದೇವ್ ಸಿಂಗ್ (43) ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರ ತೆಹ್ರಿಕ್-ಇ-ಇನ್ಸಾಫ್ ಪಕ್ಷದ ಅಲ್ಪ ಸಂಖ್ಯಾತ ಸಮುದಾಯದ ಶಾಸಕ. ಬ್ಯಾರಿಕೋಟ್ ಜಿಲ್ಲೆಯ ಮೀಸಲು ಕ್ಷೇತ್ರವಾದ ಖೈಬರ್ ಫಖ್ತುನ್ ಖ್ವಾ ವಿಧಾನಸಭಾ ಕ್ಷೇತ್ರದಿಂದ ಇವರು ಶಾಸಕನಾಗಿ ಆಯ್ಕೆಯಾಗಿದ್ದಾರೆ.

ಆದರೆ, ಸೋಮವಾರ ಕುಟುಂಬ ಸಮೇತರಾಗಿ ಭಾರತಕ್ಕೆ ಆಗಮಿಸಿರುವ ಬಲದೇವ್ ಸಿಂಗ್ ತಾನು ಮತ್ತೆ ಪಾಕಿಸ್ತಾನಕ್ಕೆ ಹಿಂದಿರುಗಲಾರೆ ಎಂದು ತಿಳಿಸಿದ್ದಾರೆ. ಈ ಕುರಿತು ಮಾಧ್ಯಮಗಳೆದುರು ಮಾತನಾಡಿರುವ ಅವರು, “ಪಾಕಿಸ್ತಾನದಲ್ಲಿ ಅಲ್ಪ ಸಂಖ್ಯಾತ ಸಮುದಾಯದವರನ್ನು ಹೀನಾಯವಾಗಿ ನಡೆಸಿಕೊಳ್ಳಲಾಗುತ್ತಿದೆ. ಹಿಂದೂಗಳು ಮತ್ತು ಸಿಖ್ಖರನ್ನು ಪ್ರತಿದಿನ ಕೊಲ್ಲಲಾಗುತ್ತಿದೆ.

2016ರಲ್ಲಿ ನನ್ನದೇ ಕ್ಷೇತ್ರದ ಅಲ್ಪಸಂಖ್ಯಾತ ಸಮುದಾಯದ ಸಂಸದನನನ್ನು ಕೊಲ್ಲಲಾಗಿತ್ತು. ಆದರೆ, ಕೊಲೆ ಆರೋಪಿಗಳ ವಿರುದ್ಧ ಸುಳ್ಳು ಪ್ರಕರಣಗಳನ್ನು ಹೊರಿಸಿ 2018ರಲ್ಲಿ ಖುಲಾಸೆಗೊಳಿಸಲಾಗಿತ್ತು. ಪಾಕಿಸ್ತಾನ ಅಲ್ಪ ಸಂಖ್ಯಾತರಿಗೆ ಸೂಕ್ತ ದೇಶವಲ್ಲ. ಹೀಗಾಗಿ ನಾನು ಭಾರತಲ್ಲೇ ಆಶ್ರಯ ಪಡೆಯುವ ಉದ್ದೇಶದಿಂದ ಬಂದಿದ್ದೇನೆ” ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ : ಪುಲ್ವಾಮ ದಾಳಿಯ ಸೂತ್ರದಾರ ಮಸೂದ್​ ಅಜರ್​ ಬಿಡುಗಡೆ; ಭಾರತ ವಿರುದ್ಧ ಪಾಕ್​ ಸಂಚು?

ಜಮ್ಮು-ಕಾಶ್ಮೀರಕ್ಕೆ ಕಲಂ 370ರ ಅಡಿಯಲ್ಲಿ ಭಾರತ ಸರ್ಕಾರ ನೀಡುತ್ತಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ನಂತರ ಪಾಕಿಸ್ತಾನ ಸರ್ಕಾರ ಭಾರತದ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೋರಾಟಕ್ಕಿಳಿದಿದೆ. ಅಲ್ಲದೆ, ಇತ್ತೀಚೆಗೆ ಹೇಳಿಕೆ ನೀಡಿದ್ದ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ “ಭಾರತದಲ್ಲಿ ಅಲ್ಪ ಸಂಖ್ಯಾತ ಸಮುದಾಯದವರಿಗೆ ರಕ್ಷಣೆ ಇಲ್ಲ. ಮುಸ್ಲೀಮರನ್ನು ಗುರಿಯಾಗಿರಿಸಿಕೊಂಡು ಹಿಂದೂಸ್ತಾನದಲ್ಲಿ ದಾಳಿ ನಡೆಸಲಾಗುತ್ತಿದೆ” ಎಂದು ಆರೋಪಿಸಿದ್ದರು.

ಆದರೆ, ಇದೀಗ ಅವರ ಆರೋಪದ ಬೆನ್ನಿಗೆ ಸ್ವತಃ ಅವರದೇ ಪಕ್ಷದ ಶಾಸಕ ಪಾಕಿಸ್ತಾನದಲ್ಲಿ ಅಲ್ಪ ಸಂಖ್ಯಾತ ಸಮುದಾಯದ ಜನರಿಗೆ ರಕ್ಷಣೆ ಇಲ್ಲ ಎಂದು ಭಾರತವನ್ನು ಆಶ್ರಯಿಸಿರುವುದು ಪಾಕಿಸ್ತಾನಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
First published:September 10, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ