ಬಹುಮತ ಕಳೆದುಕೊಂಡ Imran Khan ಪಾಕ್ ಪ್ರಧಾನಿ ಸ್ಥಾನದಿಂದಲೂ ಔಟ್ ಆಗ್ತಾರಾ?
ಪಾಕಿಸ್ತಾನದ ಇತಿಹಾಸದಲ್ಲಿ ಯಾವುದೇ ಪ್ರಧಾನಿಯನ್ನು ಈವರೆಗೆ ಅವಿಶ್ವಾಸ ನಿರ್ಣಯದ ಮೂಲಕ ಪದಚ್ಯುತಗೊಳಿಸಲಾಗಿಲ್ಲ. ಇಮ್ರಾನ್ ಖಾನ್ ಅವರು ಈ ಸವಾಲನ್ನು ಎದುರಿಸುತ್ತಿರುವ ಮೂರನೇ ಪ್ರಧಾನಿಯಾಗಿದ್ದಾರೆ.
ಪಾಕ್ ಪ್ರಧಾನಿ ಇಮ್ರಾನ್ ಖಾನ್ಗೆ (Pak PM Imran Khan) ಇತ್ತೀಚೆಗೆ ಒಂದೊಂದೇ ಸಂಕಷ್ಟಗಳು. ಇತ್ತೀಚೆಗಷ್ಟೇ ಪಾಕ್ ಸೇನೆಯ (Pakistan Army) ಕೆಂಗಣ್ಣಿಗೆ ಗುರಿಯಾಗಿದ್ದ ಪಾಕಿಸ್ತಾನದ ಮಾಜಿ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರ ಈಗ ಪ್ರಧಾನಿ ಸ್ಥಾನವನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಕ್ರಿಕೆಟ್ ಜೀವನಕ್ಕೆ ನಿವೃತ್ತಿ ಘೋಷಿಸಿದ ಹಾಗೆ, ಈಗ ಪ್ರಧಾನಿ ಸ್ಥಾನಕ್ಕೂ ರಾಜೀನಾಮೆ ಕೊಡುತ್ತಾರಾ ಎಂಬ ಅನುಮಾನಗಳು ದಟ್ಟವಾಗುತ್ತಿವೆ. ಇದಕ್ಕೆ ಕಾರಣ ಪಾಕ್ ಪ್ರಧಾನಿ ಬಹುಮತ (Majority) ಕಳೆದುಕೊಂಡಿದ್ದಾರೆ. ಏಪ್ರಿಲ್ ಮೊದಲ ವಾರದಲ್ಲಿ ನಡೆಯಲಿರುವ ಪ್ರಮುಖ ವಿಶ್ವಾಸ ಮತಕ್ಕೂ ಮುನ್ನ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರ ಪ್ರಮುಖ ಮಿತ್ರ ಪಕ್ಷ ಮುತಾಹಿದಾ ಕ್ವಾಮಿ ಮೂವ್ಮೆಂಟ್ ಪಾಕಿಸ್ತಾನ (MQM - P) ವಿರೋಧ ಪಕ್ಷವಾದ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (PPP) ಜೊತೆ ಒಪ್ಪಂದ ಮಾಡಿಕೊಂಡಿದೆ.
ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಅನ್ನು ಅಧಿಕಾರದಲ್ಲಿ ಉಳಿಸಿಕೊಳ್ಳಲು MQM-P ಯ ಮಂತ್ರಿಗಳು ಪ್ರಮುಖರಾಗಿದ್ದು, ಅವರು ಮಾರ್ಚ್ 30 ರ ಮಧ್ಯಾಹ್ನ ಸಂಪುಟಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಮೂಲಗಳು ನ್ಯೂಸ್ 18 ಗೆ ತಿಳಿಸಿವೆ. ಈ ಹಿನ್ನೆಲೆ ಪ್ರಧಾನಿಯಾಗಿಯೂ ಇಮ್ರಾನ್ ಖಾನ್ ಅವರ ಆಟ ಮುಗಿದಂತೆ ಕಾಣುತ್ತಿದೆ.
ರಾಜೀನಾಮೆ ನೀಡಿದರೆ ಮುಂದೇನು? ಒಂದು ವೇಳೆ ಅವರು ರಾಜೀನಾಮೆ ನೀಡಿದರೆ, ಇಮ್ರಾನ್ ಖಾನ್ ಅವರು ಪಾಕಿಸ್ತಾನ ಸಂಸತ್ತಿನ ಕೆಳಮನೆಯಾದ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಬಹುಮತವನ್ನು ಕಳೆದುಕೊಳ್ಳುತ್ತಾರೆ ಮತ್ತು ವಿರೋಧ ಪಕ್ಷ ಸಂಸದರ ಸಂಖ್ಯೆ 180 ಕ್ಕೆ ಏರುತ್ತದೆ ಎಂದು ತಿಳಿದುಬಂದಿದೆ.
ಈ ಸನ್ನಿವೇಶದಲ್ಲಿ ಇಮ್ರಾನ್ ಖಾನ್ ಅವರು ಅವಿಶ್ವಾಸ ನಿರ್ಣಯದ ಮೊದಲೇ ಸಂಸತ್ತಿನ ಹೊರಗೆ ಪಾಕಿಸ್ತಾನದ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂಬ ಊಹಾಪೋಹವೂ ಹರಡಿದೆ. ಅವಿಶ್ವಾಸ ನಿರ್ಣಯದ ಮೇಲೆ ನಡೆಯಲಿರುವ ಮತದಾನದ ದಿನದಂದು ರಾಷ್ಟ್ರೀಯ ಅಸೆಂಬ್ಲಿಯಲ್ಲಿ ನಡೆಯಲಿರುವ ಅಧಿವೇಶನದ ವೇಳೆ ಮತದಾನದಿಂದ ದೂರವಿರಲು ಅಥವಾ ಹಾಜರಾಗದಂತೆ ಇಮ್ರಾನ್ ಖಾನ್ ಮಂಗಳವಾರ ಪಿಟಿಐ ಶಾಸಕರಿಗೆ ಸೂಚಿಸಿದ್ದರು.
ಅವಿಶ್ವಾಸ ನಿರ್ಣಯ ಇತಿಹಾಸದಲ್ಲೇ ಆಗಿಲ್ಲ! ಪಾಕಿಸ್ತಾನದ ಇತಿಹಾಸದಲ್ಲಿ ಯಾವುದೇ ಪ್ರಧಾನಿಯನ್ನು ಈವರೆಗೆ ಅವಿಶ್ವಾಸ ನಿರ್ಣಯದ ಮೂಲಕ ಪದಚ್ಯುತಗೊಳಿಸಲಾಗಿಲ್ಲ. ಇಮ್ರಾನ್ ಖಾನ್ ಅವರು ಈ ಸವಾಲನ್ನು ಎದುರಿಸುತ್ತಿರುವ ಮೂರನೇ ಪ್ರಧಾನಿಯಾಗಿದ್ದಾರೆ. ಇನ್ನೊಂದು ಪ್ರಮುಖ ಅಂಶವೆಂದರೆ, ಪಾಕಿಸ್ತಾನದ ಯಾವುದೇ ಪ್ರಧಾನ ಮಂತ್ರಿ ಐದು ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಿಲ್ಲ ಎನ್ನುವುದು.
ಬಹುಮತಕ್ಕೆ ಎಷ್ಟು ಸಂಸದರು ಬೇಕು? 342 ಸದಸ್ಯ ಬಲದ ಪಾಕಿಸ್ತಾನದ ಸಂಸತ್ನಲ್ಲಿ ಅಧಿಕಾರದಲ್ಲಿ ಉಳಿಯಲು ಇಮ್ರಾನ್ ಖಾನ್ಗೆ 172 ಮತಗಳ ಅಗತ್ಯವಿದೆ. ಅವಿಶ್ವಾಸ ನಿರ್ಣಯದ ಮೇಲಿನ ಮತದಾನ ಏಪ್ರಿಲ್ 3 ರಂದು ನಡೆಯಲಿದೆ ಎಂದು ಆಂತರಿಕ ಸಚಿವ ಶೇಖ್ ರಶೀದ್ ಹೇಳಿದ್ದಾರೆ.
ವಿದೇಶದ ಪಿತೂರಿ..! ತನ್ನ ಸರ್ಕಾರವನ್ನು ಉರುಳಿಸಲು ವಿದೇಶಿ ಧನ ಸಹಾಯದ ಪಿತೂರಿ ನಡೆಯುತ್ತಿದೆ ಎಂದು ಇಮ್ರಾನ್ ಖಾನ್ ಆರೋಪ ಮಾಡಿದ್ದಾರೆ. ಚೀನಾದ ದೀರ್ಘಕಾಲದ ಬೆಂಬಲಿಗ ಮತ್ತು ಪಾಶ್ಚಿಮಾತ್ಯರ ಸಾಂಪ್ರದಾಯಿಕ ಮಿತ್ರರಾಷ್ಟ್ರವಾದ ಪಾಕಿಸ್ತಾನ, ಯುಎನ್ ಜನರಲ್ ಅಸೆಂಬ್ಲಿಯಲ್ಲಿ ರಷ್ಯಾ ವಿರುದ್ಧ ಮತದಾನದಿಂದ ದೂರವಿತ್ತು.
ಇಮ್ರಾನ್ ಖಾನ್ ಅವರ ಆಡಳಿತ ಪಕ್ಷದಲ್ಲಿ ಸುಮಾರು 20 ಪಕ್ಷಾಂತರಗಳು ನಡೆದಿದ್ದು ಮತ್ತು ಅವರ ಸಮ್ಮಿಶ್ರ ಪಾಲುದಾರರಲ್ಲಿ ಬಿರುಕು ಉಂಟಾಗಿರುವ ಕಾರಣ, ಅಧಿಕಾರದಲ್ಲಿ ಉಳಿಸಿಕೊಳ್ಳಲು ಅಗತ್ಯವಿರುವ 172 ಮತಗಳ ಸರಳ ಬಹುಮತದ ಕೊರತೆಯನ್ನುಂಟುಮಾಡಿದೆ ಎಂದು ತಿಳಿದುಬಂದಿದೆ.
ಪ್ರಧಾನ ಮಂತ್ರಿಯು ಪ್ರಬಲ ಮಿಲಿಟರಿಯ ಬೆಂಬಲವನ್ನು ಈಗಾಗಲೇ ಕಳೆದುಕೊಂಡಿದ್ದಾರೆ. ಈ ಹಿನ್ನೆಲೆ ಪಾಕ್ ಸೇನೆಯೇ ದೇಶವನ್ನು ಯಾರು ಆಳುತ್ತಾರೆ ಎಂಬುದನ್ನು ನಿರ್ಧರಿಸುತ್ತದೆ ಎಂದು ಪ್ರತಿಪಕ್ಷಗಳು ಮತ್ತು ವಿಶ್ಲೇಷಕರು ಹೇಳುತ್ತಿದ್ದಾರೆ. ಆದರೆ, ಈ ಹೇಳಿಕೆಗಳನ್ನು ಸ್ವತ: ಇಮ್ರಾನ್ ಖಾನ್ ಮತ್ತು ಮಿಲಿಟರಿ ಇಬ್ಬರೂ ನಿರಾಕರಿಸುತ್ತಾರೆ.
ಒಟ್ಟಾರೆ ಇಮ್ರಾನ್ ಖಾನ್ ಕ್ರಿಕೆಟ್ನಲ್ಲಿ ಔಟಾದಂತೆ ಪಾಕ್ ಪ್ರಧಾನಿ ಸ್ಥಾನವನ್ನು ಕಳೆದುಕೊಳ್ಳಲಿದ್ದಾರಾ ಅಥವಾ ಅದಕ್ಕೂ ಮುನ್ನ ರಾಜೀನಾಮೆ ನೀಡಲಿದ್ದಾರಾ ಎಂಬುದನ್ನು ಕಾದು ನೋಡಬೇಕಾಗಿದೆ.
Published by:guruganesh bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ