ಕರಾಚಿ (ಆ.23): ಮೂರು ದಶಕಗಳಲ್ಲಿ ಇದೇ ಮೊದಲ ಬಾರಿಗೆ ದಾವೂದ್ ಇಬ್ರಾಹಿಂ ನಮ್ಮಲ್ಲಿಯೇ ಇರುವುದಾಗಿ ಪಾಕಿಸ್ತಾನ ಒಪ್ಪಿಕೊಂಡಿದೆ . ವಿಶ್ವಸಂಸ್ಥೆಯ ಅನುಮೋದನೆ ನಿರ್ಣಯದಡಿಯಲ್ಲಿ 88 ಭಯೋತ್ಪಾದಕರನ್ನು ನಿಷೇಧಿಸುವ ಆದೇಶವನ್ನು ಪಾಕಿಸ್ತಾನ ಸರ್ಕಾರ ಹೊರಡಿಸಿದೆ. ಈ ಆದೇಶದಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಹೆಸರು ಕೂಡ ಇದೆ.
ದಾವೂದ್ ಇಬ್ರಾಹಿಂ ಸಾಕಷ್ಟು ಅಕ್ರಮ ದಂದೆಗಳನ್ನು ನಡೆಸುತ್ತಿದ್ದಾನೆ. 1993ರಲ್ಲಿ ನಡೆದ ಮುಂಬೈ ಬಾಂಬ್ ದಾಳಿಗೆ ಈತನೇ ಮಾಸ್ಟರ್ ಮೈಂಡ್. ಈ ಘಟನೆ ನಡೆದ ನಂತರದಲ್ಲಿ ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್ಗಳ ಸಾಲಿಗೆ ದಾವೂದ್ ಸೇರಿದ್ದ.
ಇಲ್ಲೊಂದು ಅಚ್ಚರಿಯ ವಿಚಾರವಿದೆ. ಅದೇನೆಂದರೆ, ಪಾಕಿಸ್ತಾನ 2015 ಹಾಗೂ 2019ರಲ್ಲಿ ಇದೇ ಮಾದರಿಯ ಕೆಲವು ದಾಖಲೆಗಳನ್ನು ಬಿಡುಗಡೆ ಮಾಡಿತ್ತು. ಆದರೆ, ಇಬ್ರಾಹಿಂ ಎಲ್ಲಿದ್ದಾನೆ ಎಂಬುದಾಗಿ ಪಾಕಿಸ್ತಾನ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಈಗ ಇದೇ ಮೊದಲ ಬಾರಿಗೆ ದಾವೂದ್ ಪಾಕಿಸ್ತಾನದಲ್ಲಿರುವುದಾಗಿ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಅಷ್ಟೇ ಅಲ್ಲ, ಆತನ ನಿವಾಸದ ವಿಳಾಸ ಕೂಡ ಬಹಿರಂಗವಾಗಿದೆ. ಈತನ ಮೇಲೆ ಆರ್ಥಿಕ ನಿರ್ಬಂಧವನ್ನೂ ಹೇರಿವೆ.
ದಾವೂದ್ ಇಬ್ರಾಹಿಂ ಬಳಿ ಐದು ಪಾಸ್ಪೋರ್ಟ್ಗಳು ಇವೆ ಎನ್ನಲಾಗಿದೆ. ಈ ಪೈಕಿ ಎಲ್ಲ ಪಾಸ್ಪೋರ್ಟ್ಗಳು ನಕಲಿ ಆಗಿದ್ದು, ಒಂದೊಂದು ದೇಶಕ್ಕೆ ಹೋಗುವಾಗ ಒಂದೊಂದು ಪಾಸ್ಪೋರ್ಟ್ಗಳನ್ನು ಈತ ಬಳಕೆ ಮಾಡುತ್ತಿದ್ದಾನೆ. ಆದರೆ, ದೇಶದ ನಾಗರೀಕತೆಗೆ ಸಂಬಂಧಿಸಿದ ಯಾವುದೇ ಕಾರ್ಡ್ಗಳನ್ನು ಆತನಿಗೆ ನೀಡಿಲ್ಲ ಎಂದು ಪಾಕ್ ಹೇಳಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ