ಭಾರತ ನಿರ್ಮಿತ ಸ್ವತ್ತುಗಳನ್ನು ನಾಶಪಡಿಸಿ: ತಾಲಿಬಾನ್‌ಗೆ ಆದೇಶಿಸಿದ ಪಾಕಿಸ್ತಾನದ ಐಎಸ್‌ಐ

ಭಾರತ ಸರ್ಕಾರ 3 ಬಿಲಿಯನ್ ಹಣವನ್ನು ಹೂಡಿಕೆ ಮಾಡಿದೆ, ಆದರೆ 2015 ರಲ್ಲಿ ಉದ್ಘಾಟನೆಯಾದ ಅಫಘಾನ್ ಸಂಸತ್ ಕಟ್ಟಡವು ಭಾರತದ ಕೊಡುಗೆಯಲ್ಲೇ ಅತ್ಯಂತ ದೊಡ್ಡದು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಯುದ್ಧದಿಂದ ಹಾನಿಗೊಳಗಾದ ದೇಶವಾದ ಅಫಘಾನಿಸ್ತಾನದಲ್ಲಿ ಕಳೆದ ಹಲವಾರು ವರ್ಷಗಳಿಂದ ಭಾರತವು ಅನೇಕ ಯೋಜನೆಗಳನ್ನು ಕೈಗೊಂಡಿದ್ದು ಅದನ್ನು ನಾಶಮಾಡಲು ಹಾಗೂ ಗುರಿಯಾಗಿಸಿಕೊಂಡು ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ಅಫ್ಘಾನಿಸ್ತಾನದಲ್ಲಿ ಹೆಚ್ಚಿನ ಸಂಖ್ಯೆಯ ಪಾಕಿಸ್ತಾನಿ ಹೋರಾಟಗಾರರೊಂದಿಗೆ ಸೇರಿಕೊಂಡಿದೆ ಹಾಗೂ ತಾಲಿಬಾನ್​ ಉಗ್ರರಿಗೆ ಸೂಚನೆ ನೀಡಿದೆ ಎಂದು ವರದಿಯಾಗಿದೆ.

  ಅಲ್ಲಿನ ಪಾಕಿಸ್ತಾನ ಮತ್ತು ತಾಲಿಬಾನ್ ಭಯೋತ್ಪಾದಕರು  ಭಾರತೀಯ ನಿರ್ಮಿತ ಸ್ವತ್ತುಗಳನ್ನು ಗುರಿಯಾಗಿಸಲು ಮತ್ತು ಅಲ್ಲಿನ ಭಾರತದ ಯಾವುದೇ ಚಿಹ್ನೆಗಳು ಕಂಡರೂ ಅದನ್ನು ತೆಗೆದುಹಾಕಲು ನಿರ್ದಿಷ್ಟವಾದ ಸೂಚನೆಗಳೊಂದಿಗೆ ಸಂದೇಶ ಕಳುಹಿಸಲಾಗಿದೆ ಎಂದು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

  ಕಳೆದ ಎರಡು ದಶಕಗಳಿಂದ ಅಫ್ಘಾನಿಸ್ತಾನದಲ್ಲಿ ಪುನರ್ನಿರ್ಮಾಣದ ಕೆಲಸಗಳು ಸೇರಿದಂತೆ ಮತ್ತು ಡೆಲಾರಾಮ್ ಮತ್ತು ಜರಂಜ್ ಸಲ್ಮಾ ಅಣೆಕಟ್ಟು ನಡುವಿನ 218 ಕಿ.ಮೀ ರಸ್ತೆ ಅಭಿವೃದ್ದಿ ಸೇರಿದಂತೆ ಇತರೇ ಕ್ಷೇತ್ರಗಳಲ್ಲಿ ಭಾರತ ಸರ್ಕಾರ 3 ಬಿಲಿಯನ್ ಹಣವನ್ನು ಹೂಡಿಕೆ ಮಾಡಿದೆ, ಆದರೆ 2015 ರಲ್ಲಿ ಉದ್ಘಾಟನೆಯಾದ ಅಫಘಾನ್ ಸಂಸತ್ ಕಟ್ಟಡವು ಭಾರತದ ಕೊಡುಗೆಯಲ್ಲೇ ಅತ್ಯಂತ ದೊಡ್ಡದು ಹಾಗೂ ಸದಾ ನೆನಪಿನಲ್ಲಿ ಉಳಿಯುವಂತಹದ್ದು ಎಂದು ಹೇಳಲಾಗಿದೆ. ಆದರೆ ಈಗ ಭಯೋತ್ಪಾದಕರು ಭಾರತದ ವಿರುದ್ದ ಕತ್ತಿ ಮಸೆಯುತ್ತಿದ್ದು, ಎಲ್ಲಾ ನಿರ್ಮಾಣಗಳನ್ನು ಹಾಳು ಮಾಡುವ ಸೂಚನೆ ಎದ್ದು ಕಾಣುತ್ತಿದೆ ಎಂದು ವರದಿ ತಿಳಿಸಿದೆ.

  ಅಮೇರಿಕಾ ತನ್ನ ಸೈನ್ಯವನ್ನು ಯಾವಾಗ ಹಿಂದೆ ಕರೆಸಿಕೊಳ್ಳಲು ಪ್ರಾರಂಭಿಸಿತೋ ಅಂದಿನಿಂದ ಅಫಘಾನಿಸ್ತಾನದಲ್ಲಿ ಯುದ್ದದ ವಾತಾವರಣ ಹಾಗೂ ಭಯೋತ್ಪಾದಕರ ಮೇಲುಗೈ ಆಗುತ್ತಿದೆ.

  ಅಶ್ರಫ್ ಘನಿ ನೇತೃತ್ವದ ಅಫ್ಘಾನಿಸ್ತಾನ ಸರ್ಕಾರದ ವಿರುದ್ಧ ತಾಲಿಬಾನ್ ನಡೆಸುತ್ತಿರುವ ಹೋರಾಟವನ್ನು ಬಹಿರಂಗವಾಗಿ ಬೆಂಬಲಿಸಲು 10,000 ಕ್ಕೂ ಹೆಚ್ಚು ಪಾಕಿಸ್ತಾನಿಗಳು ಅಫ್ಘಾನಿಸ್ತಾನದ ಯುದ್ಧ ವಲಯಕ್ಕೆ ಪ್ರವೇಶಿಸಿದ್ದಾರೆ ಎಂದು ಅಂದಾಜಿಸಲಾಗಿದೆ. ಇದು ಹೀಗೆ ಮುಂದುವರೆದರೆ ಮತ್ತೆ ಅಫ್ಘನ್​ ತನ್ನ ಕೆಟ್ಟ ಪರಿಸ್ಥಿತಿಗೆ ಹಿಂದಿರುಗುವುದರಲ್ಲಿ ಸಂದೇಹವಿಲ್ಲ.

  ಅಫ್ಘಾನಿಸ್ತಾನದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಭಾರತ ಅಪಾರ ಕೊಡುಗೆ ನೀಡಿದೆ ಮತ್ತು ಅಲ್ಲಿನ ಶಿಕ್ಷಕರು ಮತ್ತು ಸಹಾಯಕ ಸಿಬ್ಬಂದಿಗೆ ತರಬೇತಿ ನೀಡುವಲ್ಲಿ ದೊಡ್ಡ ಪಾತ್ರ ವಹಿಸಿತ್ತು.
  ಪಾಕಿಸ್ತಾನ ಬೆಂಬಲಿತ ಇಸ್ಲಾಮಿಕ್ ಭಯೋತ್ಪಾದಕ ಗುಂಪುಗಳು, ಹಕ್ಕಾನಿ ನೆಟ್ವರ್ಕ್ ಸೇರಿದಂತೆ, ಅಲ್ಲಿನ ಇತರೇ ಸಣ್ಣ-ಪುಟ್ಟ ಗುಂಪುಗಳು ಕೂಡ ಭಾರತದ ವಿರುದ್ಧ ಹಲವಾರು ವರ್ಷಗಳಿಂದ ಹೆಚ್ಚು ಕೆಲಸ ಮಾಡುತ್ತಿವೆ.

  ಭಾರತಕ್ಕೆ ವಿರುದ್ಧವಾಗಿ ಕಂಡುಬರುವ ಅಲ್ಟ್ರಾ-ರಾಡಿಕಲ್ ಇಸ್ಲಾಮಿಸ್ಟ್ ಸಮೂಹವು ಇಲ್ಲಿಯವರೆಗೆ ಯಾವುದೇ ಭರವಸೆ ಅಥವಾ ಸೂಚನೆಯನ್ನು ನೀಡಿಲ್ಲವಾದ್ದರಿಂದ ಈ ವಿಷಯದ ಬಗ್ಗೆ ಭಾರತದ ಕಡೆಯವರು ಸಮಸ್ಯೆ ಬಗೆಹರಿಸುತ್ತಿದ್ದಾರೆ ಎಂದು ಹೇಳಲಾಗಿದೆ.

  ಕಾಬೂಲ್ ವಿಮಾನ ನಿಲ್ದಾಣದಲ್ಲಿನ ಪರಿಸ್ಥಿತಿಯನ್ನು ಭಾರತೀಯ ಏಜೆನ್ಸಿಗಳು ಸೂಕ್ಷ್ಮವಾಗಿ ಗಮನಿಸುತ್ತಿವೆ, ಅದು ಬಹಳ ಹಿಂದಿನಿಂದಲೂ ಅಮೆರಿಕದ ಕಾವಲಿನಲ್ಲಿ ಇಲ್ಲದ ಕಾರಣ ಏನಾದರೂ ಅವಘಡ ಸಂಭವಿಸಬಹುದು ಎಂದು ಅಂದಾಜಿಸಲಾಗಿದೆ. ಅಲ್ಲದೇ ಬಾಗ್ರಾಮ್ ವಾಯುನೆಲೆ ಸೇರಿದಂತೆ ಅಮೆರಿಕನ್ನರ ಅಡಿಯಲ್ಲಿ ಅನೇಕ ವಾಯುನೆಲೆಗಳು ತಾಲಿಬಾನ್ ಜೊತೆಗಿನ ಜಗಳದ ನಡುವೆ ಖಾಲಿಯಾಗಿ ಬಿದ್ದಿವೆ ಎಂದು ಹೇಳಲಾಗಿದೆ. ಈ ಎಲ್ಲಾ ಬೆಳವಣಿಗೆಗಳನ್ನು ನೋಡುತ್ತಿದ್ದರೆ ಸಂಪೂರ್ಣ ಅಫ್ಘನ್​ ಸರ್ಕಾರದ ಕೈ ತಪ್ಪಲಿದೆ ಎಂದು ಹೇಳಲಾಗುತ್ತಿದೆ.

  ಇದನ್ನೂ ಓದಿ: ಯುಪಿ ಪ್ರವಾಸಕ್ಕೆ ಪ್ರಿಯಾಂಕ ಬಂದಿದ್ದಾರೆ ಹೊರತು, ಜನರ ಕಷ್ಟ ಕೇಳಲು ಬಂದಿಲ್ಲ: ಬಿಜೆಪಿ ವ್ಯಂಗ್ಯ

  ಸಾಕಷ್ಟು ನಿರ್ಮಾಣ ಕಾರ್ಯಗಳಲ್ಲಿ ಭಾಗಿಯಾಗಿರುವ ಭಾರತೀಯ ಕಾರ್ಮಿಕರನ್ನು ಸಹ ದೇಶದಿಂದ ಹೊರಹೋಗುವಂತೆ ಕೋರಲಾಗಿದೆ. ಭಾರತದ ಸಾರ್ವಜನಿಕ ವಲಯದ ಕಂಪನಿ ವಾಪ್ಕೋಸ್ ಅಣೆಕಟ್ಟು ಯೋಜನೆಯ ಸಹಾಯಕ್ಕೆ ಹಾಗೂ ಅದರ ಉಸ್ತುವಾರಿಗೆ ಅಲ್ಲಿ ಕೆಲವು ಅಧಿಕಾರಿಗಳನ್ನು ನಿಯೋಜಿಸಿತ್ತು. ಭಾರತವು ಇತ್ತೀಚೆಗೆ ಕಾಬೂಲ್ ನಗರಕ್ಕೆ ಕುಡಿಯುವ ನೀರನ್ನು ಒದಗಿಸಲು ಶಾಹೂತ್ ಅಣೆಕಟ್ಟು ಸೇರಿದಂತೆ ಸುಮಾರು ಕಾಮಗಾರಿಗಳಿಗೆ 350 ಮಿಲಿಯನ್ ಮೊತ್ತದ ಬೃಹತ್​ ಯೋಜನೆಗಳನ್ನು ಅಲ್ಲಿ ಅನುಷ್ಠಾನಕ್ಕೆ ತಂದಿತ್ತು.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: