ಲಾಹೋರ್: ಪಾಕಿಸ್ತಾನದಲ್ಲಿ (Pakistan) ಪ್ರಸ್ತುತ ತಲೆದೋರಿರುವ ಆಹಾರ ಬಿಕ್ಕಟ್ಟು (Food Crisis) ದೇಶಾದ್ಯಂತ ಗೋಧಿಯ (Wheat) ಕೊರತೆಗೆ ಕಾರಣವಾಗಿದೆ. ಇದರಿಂದ ದೇಶ ಅರಾಜಕತೆಗೆ (Anarchy) ತುತ್ತಾಗುವ ಸರ್ವ ಲಕ್ಷಣವೂ ಸನ್ನಿಹಿತವಾಗಿದೆ ಎಂದು ಪಾಕಿಸ್ತಾನ್ ಮಿಲಿಟರಿ ಮಾನಿಟರ್ ವರದಿಮಾ ಡಿದೆ. ಪಾಕ್ ಸದ್ಯ ಆರ್ಥಿಕ ಬಿಕ್ಕಟ್ಟಿನಿಂದ (Economic Crisis) ಕಂಗೆಟ್ಟಿದ್ದು ಗೋಧಿಯ ಅಭಾವವು ಇದಕ್ಕೆ ಸೂಕ್ತ ಉದಾಹರಣೆಯಾಗಿದೆ. ಇಲ್ಲಿನ ಬಡ ನಾಗರಿಕರು ಒಂದೆಡೆ ಆಹಾರದ ಕೊರತೆಯಿಂದ ಬಳಲುತ್ತಿದ್ದರೆ ಇನ್ನೊಂದೆಡೆ ಆರ್ಥಿಕ ಅಭಾವ ಅವರನ್ನು ಕಂಗೆಡಿಸಿದೆ. ಕಳೆದ ಕೆಲವು ತಿಂಗಳಿನಿಂದ ಪಾಕ್‌ನ ನಾಗರಿಕರ ಪರಿಸ್ಥಿತಿ ಅತ್ಯಂತ ಶೋಚನೀಯವಾಗಿದೆ ಎಂದು ಸುದ್ದಿಪತ್ರಿಕೆ ವರದಿ ಮಾಡಿದೆ.
ದೇಶದ ಭವಿಷ್ಯಕ್ಕೆ ಮಾರಕ
ಸಮಾಜದ ದುರ್ಬಲ ವರ್ಗಕ್ಕೆ ವಿಪತ್ತು ಅತಿಯಾಗಿ ಕಾಡಿದಾಗ ನಿಜವಾದ ಸಂಕಷ್ಟದ ಅರಿವು ಗೊತ್ತಾಗುತ್ತದೆ, ಅಂತೆಯೇ ದುಃಖದಿಂದ ಬಳಲುತ್ತಿರುವವರು, ದುರ್ಬಲರು ಇದರಿಂದ ಹೊರಬರಲು ಸಮಯ ತೆಗೆದುಕೊಳ್ಳುತ್ತಾರೆ. ಆಹಾರದ ಬಿಕ್ಕಟ್ಟು ದೇಶದ ಬಡವರ ಭವಿಷ್ಯವನ್ನು ಹತಾಶವಾಗಿ ಕಾಣುವಂತೆ ಮಾಡುತ್ತಿದೆ ಎಂದು ಪಿಎಂಎಂ ವರದಿ ಮಾಡಿದೆ.
ಧಾನ್ಯಗಳ ಅಗಾಧ ಕೊರತೆ
ಪಾಕಿಸ್ತಾನ್ ಬ್ಯೂರೋ ಆಫ್ ಸ್ಟ್ಯಾಟಿಸ್ಟಿಕ್ಸ್ ಬಿಡುಗಡೆ ಮಾಡಿದ ಇತ್ತೀಚಿನ ಸಂವೇದನಾಶೀಲ ಬೆಲೆ ಸೂಚಕ (SPI) ಪ್ರಕಾರ, ಏಪ್ರಿಲ್ 19, 2023 ಕ್ಕೆ ಕೊನೆಗೊಂಡ ವಾರಕ್ಕೆ ವರ್ಷದಿಂದ ವರ್ಷಕ್ಕೆ ಬೆಲೆಯಲ್ಲಿ 47.2 ಶೇಕಡಾ ಏರಿಕೆಯಾಗಿದೆ ಅಂತೆಯೇ ಧಾನ್ಯಗಳ ಅಗಾಧ ಕೊರತೆಗೆ ದೇಶ ತುತ್ತಾಗಿದೆ.
ಇದನ್ನೂ ಓದಿ: Pakistan: ಬಿಜೆಪಿ- ಆರ್ಎಸ್ಎಸ್ ವಿರುದ್ಧ ಬಿಲಾವಲ್ ಭುಟ್ಟೋ ಗಂಭೀರ ಆರೋಪ
ಪಾಕಿಸ್ತಾನದ ಪ್ರಮುಖ ಪತ್ರಿಕೆ 'ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್' ಇತ್ತೀಚಿನ ವರದಿಯ ಪ್ರಕಾರ, ಸಾವಿರಾರು ಜನರು ಮಾರುಕಟ್ಟೆಗೆ ಧಾವಿಸುತ್ತಿದ್ದು ಸಬ್ಸಿಡಿ ಗೋಧಿ ಹಿಟ್ಟಿನ ಚೀಲಗಳನ್ನು ಪಡೆಯಲು ಗಂಟೆಗಟ್ಟಲೆ ಕಾಯುತ್ತಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ, ಪ್ರತಿದಿನ ಕಾಣಿಸಿಕೊಳ್ಳುವ ವೀಡಿಯೊಗಳು ಪ್ರಸ್ತುತ ಬಿಕ್ಕಟ್ಟಿನ ತೀವ್ರತೆಗೆ ಸಾಕ್ಷಿಯಾಗಿದೆ ಎಂದು ಪಿಎಂಎಂ ವರದಿ ಮಾಡಿದೆ.
ಆಹಾರಕ್ಕಾಗಿ ಹಪಹಪಿಸುತ್ತಿರುವ ನಾಗರಿಕರು
ಯುಕೆ ಮೂಲದ ಫರಾನ್ ಜೆಫರಿ ಕಳೆದ ತಿಂಗಳು ಹಂಚಿಕೊಂಡ ಭಯಾನಕ ವೀಡಿಯೊದಲ್ಲಿ ಗೋಧಿ ಹಿಟ್ಟು ತುಂಬಿರುವ ಟ್ರಕ್‌ನಲ್ಲಿ ನೂರಾರು ಜನರು ನೇತಾಡಿಕೊಂಡಿದ್ದು ಅನೇಕರು ಟ್ರಕ್ ಅನ್ನು ಹಿಂಬಾಲಿಸುತ್ತಿರುವ ದೃಶ್ಯ ಕಣ್ಣಿಗೆ ಕಟ್ಟಿದಂತಿತ್ತು.
ವಾಹನದ ಸಮೀಪಕ್ಕೆ ಬಂದಿದ್ದ ಮಗುವೊಂದು ಅದೃಷ್ಟವಶಾತ್ ಪಾರಾದ ಘಟನೆ ಕೂಡ ಅಲ್ಲಿನ ಶೋಚನೀಯ ದೃಶ್ಯವನ್ನು ಕಣ್ಣಮುಂದೆ ತಂದಿತ್ತು.
ಈಗಾಗಲೇ ಕ್ಷೀಣ ಹಂತದಲ್ಲಿರುವ ಧಾನ್ಯಕ್ಕಾಗಿ ಬಡವರು ಹೋರಾಡುತ್ತಿದ್ದು ಹಲವಾರು ಸಾವು ನೋವುಗಳು ಸಂಭವಿಸಿವೆ ಎಂದು ಮಾಧ್ಯಮ ವರದಿ ಮಾಡಿದೆ. ಸರಕಾರಿ ವಿತರಣಾ ಕೇಂದ್ರಗಳಲ್ಲಿ ಕೂಡ ಸರತಿ ಸಾಲುಗಟ್ಟಿ ನಿಂತಿರುವ ಅನೇಕ ಜನರು ಕಾಲ್ತುಳಿತಕ್ಕೆ ಸಿಲುಕಿರುವ ಘಟನೆ ಕೂಡ ವರದಿಯಾಗಿದೆ.
ಏರಿಕೆಯಾದ ಗೋಧಿಯ ಬೆಲೆ
ಈದ್ ಹಬ್ಬದ ಸಮಯದಲ್ಲಿ ಕೂಡ ಹೆಚ್ಚಿನ ಹಣದುಬ್ಬರದ ದರದಿಂದ ಆಚರಣೆಗಳಿಗೆ ಅಗತ್ಯವಾದ ವಸ್ತುಗಳನ್ನು ಖರೀದಿಸಲು ಅನೇಕ ಪಾಕ್ ನಾಗರಿಕರು ಹರಸಾಹಸ ಪಟ್ಟಿದ್ದರು. ವಿಶ್ವ ಆಹಾರ ಕಾರ್ಯಕ್ರಮದ (ಡಬ್ಲ್ಯುಎಫ್‌ಪಿ) ವರದಿಯ ಪ್ರಕಾರ, ಕಳೆದ ವರ್ಷವೊಂದರಲ್ಲೇ ಗೋಧಿಯ ಬೆಲೆ ಶೇಕಡಾ 74 ರಷ್ಟು ಹೆಚ್ಚಾಗಿದೆ.
ಸಮಾಜಕ್ಕೆ ಅಂಟಿಕೊಂಡಿರುವ ಶಾಪ
ಭ್ರಷ್ಟಾಚಾರದಂತಹ ಸಾಮಾಜಿಕ ಪಿಡುಗುಗಳು ಕೂಡ ಬಡವರನ್ನು ಇನ್ನಷ್ಟು ಕಂಗೆಡಿಸುತ್ತಿದೆ ಹಾಗೂ ಉಳ್ಳವರ ದರ್ಪ ಇಲ್ಲದವರ ಮೇಲೆ ನಡೆಯುತ್ತಲೇ ಇದೆ. ಕೆಲವು ಪಾಕಿಸ್ತಾನಿ ಅಧಿಕಾರಿಗಳು ಹಿಟ್ಟಿನ ಚೀಲಗಳನ್ನು ಕದಿಯುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ ಎಂದು ಪಿಎಂಎಂ ವರದಿ ಮಾಡಿದೆ.
ಆದಾಗ್ಯೂ, ಪೂರೈಕೆ ಸರಪಳಿಯಲ್ಲಿನ ಭ್ರಷ್ಟಾಚಾರ, ಸಂಗ್ರಹಣೆ ಮತ್ತು ಬ್ಲ್ಯಾಕ್ ಮಾರುಕಟ್ಟೆಯಂತಹ ಅಂಶಗಳು ಸಮಸ್ಯೆಯನ್ನು ಇನ್ನಷ್ಟು ಉದ್ವಿಗ್ನಗೊಳಿಸುತ್ತಿದೆ ಎಂಬುದು ಪ್ರಸ್ತುತ ಸಮಸ್ಯೆಯಾಗಿದೆ ಎಂದು ತಿಳಿದು ಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ