ಪಾಕಿಸ್ತಾನ(Pakistan)ದಲ್ಲಿ ಅತ್ಯಾಚಾರಿ(Rapist)ಗಳನ್ನು ನಿಯಂತ್ರಿಸಲು ಅಲ್ಲಿನ ಸರ್ಕಾರ ದಿಟ್ಟ ಕ್ರಮವೊಂದನ್ನು ಕೈಗೊಂಡಿದೆ. ಒಂದು ಲೆಕ್ಕದಲ್ಲಿ ಇದೊಂದು ಕ್ರಾಂತಿಕಾರಿ ಬೆಳವಣಿಗೆ(Revolutionary growth) ಎನ್ನಬಹುದು. ಪಾಕಿಸ್ತಾನ ಇದೇ ಮೊದಲ ಬಾರಿಗೆ ಕೆಮಿಕಲ್ ಕ್ಯಾಸ್ಟ್ರೇಶನ್(Chemical castration) ಎನ್ನುವ ಶಿಕ್ಷೆಯನ್ನು ಅತ್ಯಾಚಾರಿಗಳಿಗೆ ವಿಧಿಸಲು ತಯಾರಾಗಿದೆ. ಕೆಮಿಕಲ್ ಕ್ಯಾಸ್ಟ್ರೇಶನ್ ಎನ್ನುವುದು ಲೈಂಗಿಕ ಚಟುವಟಿಕೆ ಕಡಿಮೆ ಮಾಡಲು ಔಷಧಿಗಳ ಬಳಕೆಯ ಪದ್ಧತಿ. ಅತ್ಯಾಚಾರಿಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ದಕ್ಷಿಣ ಕೊರಿಯಾ, ಪೋಲೆಂಡ್, ಜೆಕ್ ರಿಪಬ್ಲಿಕ್ ಮತ್ತು USನಲ್ಲಿನ ಕೆಲವು ರಾಜ್ಯಗಳಲ್ಲಿ ಇದು ಕಾನೂನು(Law) ಪ್ರಕಾರ ನೀಡುವ ಶಿಕ್ಷೆಯ ರೂಪವಾಗಿದೆ. ಪಾಕ್ ಸಂಸತ್ತು(Parliament of Pakistan) ಈ ಹೊಸ ಕಾನೂನನ್ನು ಅಂಗೀಕರಿಸಿದ ನಂತರ ಪಾಕಿಸ್ತಾನದಲ್ಲಿ ಅನೇಕ ಅತ್ಯಾಚಾರ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದ ಲೈಂಗಿಕ ಅಪರಾಧಿಗಳಿಗೆ ಈ ರಾಸಾಯನಿಕ ಕ್ಯಾಸ್ಟ್ರೇಶನ್ ಚಿಕಿತ್ಸೆ ಕೊಡಲು ತೀರ್ಮಾನಿಸಲಾಗಿದೆ. ಅದು ಅಪರಾಧ ಪ್ರಕರಣಗಳನ್ನು ಶೀಘ್ರ ಇತ್ಯರ್ಥಗೊಳಿಸಲು ಮತ್ತು ಕಠಿಣ ಶಿಕ್ಷೆ ವಿಧಿಸುವ ಉದ್ದೇಶ ಹೊಂದಿದೆ.
ದೇಶದಲ್ಲಿ ಹೆಚ್ಚುತ್ತಿರುವ ಮಹಿಳೆಯರು ಮತ್ತು ಮಕ್ಕಳ ಅತ್ಯಾಚಾರ ಪ್ರಕರಣಗಳ ವಿರುದ್ಧ ಸಾರ್ವಜನಿಕ ಆಕ್ರೋಶ ವ್ಯಕ್ತವಾಗಿತ್ತು. ಅದರ ಪರಿಣಾಮವಾಗಿ ಈ ಮಸೂದೆ ಅಂಗೀಕಾರ ಮಾಡಲಾಗಿದೆ. ಅತ್ಯಾಚಾರ ಅಪರಾಧವನ್ನು ಪರಿಣಾಮಕಾರಿಯಾಗಿ ತಡೆಯಲು ಎಲ್ಲೆಡೆಯೆದ ಒತ್ತಾಯ ಕೇಳಿಬಂದ ಹಿನ್ನೆಲೆಯಲ್ಲಿ ಈ ಕ್ರಮ ಜರುಗಿಸಲಾಗಿದೆ. ಅಪರಾಧಿಯ ಒಪ್ಪಿಗೆಯೊಂದಿಗೆ ಅತ್ಯಾಚಾರಿಗಳ ಕೆಮಿಕಲ್ ಕ್ಯಾಸ್ಟ್ರೇಶನ್ ಮತ್ತು ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸಲು ಕರೆ ನೀಡುವ ಮೂಲಕ ಪಾಕಿಸ್ತಾನ ಕ್ಯಾಬಿನೆಟ್ ಈ ನೀತಿಯನ್ನು ಅನುಮೋದಿಸಿದೆ. ಹೊಸ ಅತ್ಯಾಚಾರ-ವಿರೋಧಿ ಸುಗ್ರೀವಾಜ್ಞೆಗೆ ಅಧ್ಯಕ್ಷ ಆರಿಫ್ ಅಲ್ವಿ ಅನುಮೋದನೆ ನೀಡಿದ ಸುಮಾರು 1 ವರ್ಷದ ನಂತರ ಈ ಮಸೂದೆ ಅಂಗೀಕಾರವಾಗಿದೆ.
ಕ್ರಿಮಿನಲ್ ಕಾನೂನು ತಿದ್ದುಪಡಿ ಮಸೂದೆ 2021ರ ಈ ಮಸೂದೆಯನ್ನು 33 ಇತರ ಮಸೂದೆಗಳೊಂದಿಗೆ ಬುಧವಾರ ಸಂಸತ್ತಿನ ಜಂಟಿ ಅಧಿವೇಶನದಲ್ಲಿ ಅಂಗೀಕರಿಸಲಾಯಿತು. ಇದು ಪಾಕಿಸ್ತಾನದ ದಂಡ ಸಂಹಿತೆ, 1860 ಮತ್ತು ಕ್ರಿಮಿನಲ್ ಪ್ರೊಸೀಜರ್ ಕೋಡ್, 1898 ಅನ್ನು ತಿದ್ದುಪಡಿ ಮಾಡುವ ಪ್ರಯತ್ನ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ. ಕೆಮಿಕಲ್ ಕ್ಯಾಸ್ಟ್ರೇಶನ್ ಎನ್ನುವುದು ಪ್ರಧಾನ ಮಂತ್ರಿಗಳು ರೂಪಿಸಿದ ನಿಯಮಗಳ ಮೂಲಕ ನ್ಯಾಯಯುತ ಪ್ರಕ್ರಿಯೆ. ಒಬ್ಬ ವ್ಯಕ್ತಿಯು ತನ್ನ ಜೀವನಾವಧಿಯಲ್ಲಿ ಲೈಂಗಿಕ ಸಂಭೋಗ ಮಾಡಲು ಅಸಮರ್ಥನಾಗುವಂತೆ ಮಾಡುವುದು ಈ ಶಿಕ್ಷೆಯ ಕಾರ್ಯವೈಖರಿ. ಇದಕ್ಕೆ ಬಳಸಲಾಗುವ ಔಷಧಿಗಳನ್ನು ಸರ್ಕಾರ ಮೂಲಕ ನ್ಯಾಯಾಲಯವು ನಿರ್ಧರಿಸಬಹುದು. ಸದ್ಯಕ್ಕೆ ಈ ಮಸೂದೆ ಹೇಳುವ ಈ ಪರಿಹಾರವನ್ನು ವೈದ್ಯಕೀಯ ಮಂಡಳಿಗೆ ಸೂಚಿಸಲಾಗಿದೆ.
ಆದರೆ, ಜಮಾತ್-ಇ-ಇಸ್ಲಾಮಿ ಸೆನೆಟರ್ ಮುಷ್ತಾಕ್ ಅಹ್ಮದ್ ಈ ಮಸೂದೆಯನ್ನು ವಿರೋಧಿಸಿದ್ದಾರೆ. ಇದು ಇಸ್ಲಾಮಿಕ್ ಮತ್ತು ಷರಿಯಾ ವಿರುದ್ಧವಾಗಿದೆ ಎನ್ನುವುದು ಅವರ ವಾದ. ಅತ್ಯಾಚಾರಿಯನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಬೇಕು. ಅದನ್ನು ಬಿಟ್ಟು ಈ ರೀತಿಯ ಕ್ರಮ ಕೊಗೊಳ್ಳುವುದು ಸರಿಯಲ್ಲ. ಶರಿಯಾದಲ್ಲಿ ಈ ರೀತಿಯ ಶಿಕ್ಷೆಯ ಬಗ್ಗೆ ಯಾವುದೇ ಉಲ್ಲೇಖವಿಲ್ಲ ಎಂದು ಹೇಳಿದ್ದಾರೆ. ಸದ್ಯಕ್ಕೆ, ಪಾಕಿಸ್ತಾನದಲ್ಲಿ ಲೈಂಗಿಕ ದೌರ್ಜನ್ಯ ಅಥವಾ ಅತ್ಯಾಚಾರ ಪ್ರಕರಣಗಳಲ್ಲಿ ಶೇಕಡಾ 4ಕ್ಕಿಂತ ಕಡಿಮೆ ಪ್ರಕರಣಗಳಲ್ಲಿ ಮಾತ್ರ ಅಪರಾಧಿಗಳಿಗೆ ಶಿಕ್ಷೆ ಆಗುತ್ತಿದೆ ಎಂದು ಅಲ್ಲಿನ ಕಾನೂನು ತಜ್ಞರು ಹೇಳುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ