ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ (Pakistan) ಹಣದುಬ್ಬರದ (Inflation) ಅಬ್ಬರ ಜೋರಾಗಿದ್ದು, ನೆರೆಯ ರಾಷ್ಟ್ರ ಅಕ್ಷರಶಃ ದಿವಾಳಿಯತ್ತ ದಾಪುಗಾಲು ಇಡುತ್ತಿದೆ. ರಾಜಕೀಯ ಅನಿಶ್ಚಿತತೆ, ಚೀನಾದ ಸಾಲದ ಪಾಶ, ನಿಯಂತ್ರಣಕ್ಕೆ ಸಿಗದ ಹಣದುಬ್ಬರದಿಂದ ಪಾಕಿಸ್ತಾನ ಸಾಲದ ಸುಳಿಗೆ ಸಿಲುಕಿದ್ದು, ಪ್ರಧಾನಿ ಶೆಹಬಾಜ್ ಷರೀಫ್ (Shehbaz Sharif) ನೇತೃತ್ವದ ಪಾಕಿಸ್ತಾನ ಸರಕಾರ ಎಷ್ಟೇ ಪ್ರಯತ್ನ ಪಟ್ಟರೂ ಪರಿಸ್ಥಿತಿ ಹತೋಟಿಗೆ ಸಿಗುತ್ತಿಲ್ಲ.
ಪಾಕಿಸ್ತಾನದಲ್ಲಿ ಇದೇ ಮೊದಲ ಬಾರಿಗೆ ಹಾಲಿನ ದರ 200 ರೂಪಾಯಿ ಗಡಿ ದಾಟಿದ್ದು, ಹಾಲು ಮಾರಾಟಗಾರರು ಒಂದು ಲೀಟರ್ ಹಾಲಿನ ದರವನ್ನು 190 ರಿಂದ 210 ರೂಪಾಯಿಗೆ ಏರಿಕೆ ಮಾಡಿದ್ದಾರೆ ಎಂದು ಅಂತರಾಷ್ಟ್ರೀಯ ಪತ್ರಿಕೆ ವರದಿ ಮಾಡಿದೆ. ಇಷ್ಟೇ ಅಲ್ಲದೇ, ಕೋಳಿ ಮಾಂಸದ ದರ ಕೂಡ ಪಾಕ್‌ನಲ್ಲಿ ಭಾರೀ ಏರಿಕೆಯಾಗಿದ್ದು, ಒಂದು ಕೆಜಿ ಕೋಳಿಗೆ 700-800 ರೂಪಾಯಿ ತನಕ ಏರಿಕೆ ಆಗಿದೆ. ಕೆಲ ದಿನಗಳ ಹಿಂದೆ ಈ ದರ 620 ರೂಪಾಯಿ ಇತ್ತು. ಇದೀಗ ಮತ್ತೆ ಒಂದೇ ವಾರದ ಅವಧಿಯಲ್ಲಿ 120 ರೂಪಾಯಿಗಿಂತಲೂ ಏರಿಕೆ ಕಂಡಿದೆ. ಇನ್ನು ಬೋನ್‌ಲೆಸ್ ಚಿಕನ್ ಮಾಂಸದ ದರ 900 ರಿಂದ 1000 ರೂಪಾಯಿ ತನಕ ಇದೆ.
ದಿಕ್ಕೇ ತೋಚದಂತಾದ ಪಾಕ್!
ಪಾಕಿಸ್ತಾನದ ಬಳಿ ಇದ್ದ ವಿದೇಶಿ ಮೀಸಲು ಕರಗುತ್ತಿದ್ದು, ಎಲ್ಲ ದೇಶಗಳಂತೆ ಪಾಕಿಸ್ತಾನ ಕೂಡ ವಿದೇಶಿ ಹಣದ ರೂಪದಲ್ಲಿ ಒಂದಷ್ಟು ಸಂಗ್ರಹ ಇಟ್ಟುಕೊಂಡಿದೆ. ಒಂದು ವೇಳೆ ಆ ದೇಶದ ಕರೆನ್ಸಿ ಮೌಲ್ಯ ತಗ್ಗಿ, ಭಾರಿ ಕುಸಿತ ಕಂಡರೆ ಬೇರೆ ದೇಶಗಳಿಗೆ ಹಣ ಪಾವತಿಸಲು ಫಾರಿನ್ ರಿಸರ್ವ್ ಇರುತ್ತದೆ. ಇದು ಹೆಚ್ಚಾದಷ್ಟು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಂತಹ ದೇಶದ ಬಗ್ಗೆ ನಂಬಿಕೆ ಹೆಚ್ಚಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಪಾಕಿಸ್ತಾನದ ಬಳಿ ಎರಡು ವಾರಗಳಿಗೆ ಆಗುವಷ್ಟು ಮಾತ್ರ ಫಾರಿನ್ ರಿಸರ್ವ್ ಇದೆ ಎಂದು ಹೇಳಲಾಗ್ತಿದೆ.
ಎಲ್ಲದಕ್ಕೂ ದುಪ್ಪಟ್ಟು ದರ
ಪಾಕಿಸ್ತಾನದಲ್ಲಿ ಅಗತ್ಯ ವಸ್ತುಗಳ ಬೆಲೆ ಭಾರೀ ಮಟ್ಟದಲ್ಲಿ ಏರಿಕೆ ಕಂಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕರಾಚಿ ಹಾಲು ಚಿಲ್ಲರೆ ವ್ಯಾಪಾರಿಗಳ ಸಂಘದ ಮಾಧ್ಯಮ ಸಂಯೋಜಕ ವಹೀದ್ ಗಡ್ಡಿ, 1,000 ಕ್ಕೂ ಹೆಚ್ಚು ಅಂಗಡಿ ಮಾಲೀಕರು ಹಾಲನ್ನು ದುಬಾರಿ ದರಕ್ಕೆ ಮಾರುತ್ತಿದ್ದಾರೆ. ಹೀಗೆ ಮಾಡುತ್ತಿರುವ ಅಂಗಡಿ ಮಲೀಕರು ವಾಸ್ತವವಾಗಿ ನಮ್ಮ ಸಂಘದ ಸದಸ್ಯರಲ್ಲ ಎಂದು ಹೇಳಿದ್ದಾರೆ. ಹೈನು ಉತ್ಪಾದಕ ಸಂಘದ 4,000 ಚಿಲ್ಲರೆ ಮಾರಾಟಗಾರರು ಲೀಟರ್‌ಗೆ 190 ರೂ.ನಂತೆ ಹಾಲು ಮಾರಾಟ ಮುಂದುವರಿಸಿರುವುದಾಗಿ ಅವರು ಹೇಳಿದ್ದಾರೆ.
ಇದನ್ನೂ ಓದಿ: Pakistan: ಆರ್ಥಿಕ ಹಿಂಜರಿತದಲ್ಲಿರುವ ಪಾಕಿಸ್ತಾನಕ್ಕೆ ಹೊಸ ಕಂಟಕ, ನಿಗೂಢ ಕಾಯಿಲೆಯಿಂದ ಹಲವರು ಸಾವು!
ತೈಲ ಆಮದಿಗೂ ಹಣವಿಲ್ಲ!
ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನಕ್ಕೆ ವ್ಯವಹಾರ ನಡೆಸಲು ಅಸಾಧ್ಯವಾಗಿದ್ದು, ಇದರಿಂದ ಪೆಟ್ರೋಲ್ ಮತ್ತು ಡೀಸೆಲ್ ಆಮದಿಗೂ ಹಣವಿಲ್ಲದಂತಾಗಿದೆ. ಹೀಗಾಗಿಯೇ ಪಾಕ್‌ನಲ್ಲಿ ಪೆಟ್ರೋಲ್, ಡೀಸೆಲ್ ದರಗಳು ಲೀಟರ್‌ಗೆ 250 ರೂಪಾಯಿ ಗಡಿ ದಾಟಿದೆ. ದಿನ ಬಳಕೆಯ ವಸ್ತುಗಳಾದ ಅಕ್ಕಿ, ಗೋಧಿ ಬೆಲೆಯೂ ಗಗನಮುಖಿಯಾಗಿದ್ದು ಜನಸಾಮಾನ್ಯರು ಜೀವನ ನಡೆಸಲು ಪರದಾಟ ನಡೆಸುವಂತಾಗಿದೆ.
ಚೀನಾ ಮತ್ತು ಪಾಕಿಸ್ತಾನ ಎಕನಾಮಿಕ್ ಕಾರಿಡಾರ್ ಯೋಜನೆಗೆ ಪಾಕಿಸ್ತಾನವು ಚೀನಾದಿಂದ 60 ಬಿಲಿಯನ್ ಅಮೆರಿಕನ್ ಡಾಲರ್ ಸಾಲ ಪಡೆದುಕೊಂಡಿದೆ. ಈ ಸಾಲವನ್ನು ಮರು ಪಾವತಿ ಮಾಡಲು ಪರದಾಟ ಮಾಡುತ್ತಿದೆ ಎಂದು ತಿಳಿದು ಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ