ನವದೆಹಲಿ(ಏ. 02): ಭಾರತ ಮತ್ತು ಪಾಕಿಸ್ತಾನದ ಮಧ್ಯೆ ವ್ಯವಹಾರ ಸುಧಾರಣೆಯತ್ತ ಸಾಗುತ್ತಿರುವಾಗಲೇ ಪಾಕಿಸ್ತಾನ ಯೂಟರ್ನ್ ಮಾಡಿದೆ. ಕಾಶ್ಮೀರದ ಸ್ವಾಯತ್ತತೆ ರದ್ದುಗೊಳಿಸಿದ ಭಾರತದ ಕ್ರಮವನ್ನು ಪ್ರಶ್ನಿಸಿ ಪಾಕಿಸ್ತಾನ ಕ್ಯಾತೆ ತೆಗೆದಿದೆ. ಆರ್ಟಿಕಲ್ 370 ಅನ್ನು ಮರುಸ್ಥಾಪನೆಯಾಗುವವರೆಗೂ ಭಾರತದ ಜೊತೆ ವ್ಯವಹಾರ ಸಾಧ್ಯವಿಲ್ಲ ಎಂದು ಪಾಕಿಸ್ತಾನದ ಸಂಪುಟ ನಿರ್ಧರಿಸಿದೆ. ಭಾರತದಿಂದ ಸಕ್ಕರೆ ಮತ್ತು ಹತ್ತಿಯನ್ನು ಆಮದು ಮಾಡಿಕೊಳ್ಳಬೇಕೆಂದು ಪಾಕಿಸ್ತಾನದ ಆರ್ಥಿಕ ಸಮನ್ವಯ ಸಮಿತಿ ಮಾಡಿದ ಶಿಫಾರಸು ಈಗ ಹಳ್ಳಕ್ಕೆ ಬಿದ್ದಂತಾಗಿದೆ.
ನಿನ್ನೆ ನಡೆದ ಪಾಕಿಸ್ತಾನದ ಸಂಪುಟ ಸಭೆಯ ಬಳಿಕ ಮಾತನಾಡಿದ ಪಾಕಿಸ್ತಾನದ ಆಂತರಿಕ ವ್ಯವಹಾರಗಳ ಸಚಿವ ಶೇಖ್ ರಷೀದ್, “ಭಾರತದೊಂದಿಗೆ ವ್ಯಾಪಾರ ಸಂಬಂಧ ಮರುಸ್ಥಾಪನೆಯಾಗಬೇಕಾರೆ ಭಾರತ ಮೊದಲು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಮರುಸ್ಥಾಪಿಸಬೇಕು” ಎಂದು ಒತ್ತಾಯಿಸಿದ್ದಾರೆ.
370ನೇ ವಿಧಿ ಮರುಸ್ಥಾಪನೆಯಾಗುವವರೆಗೂ ಭಾರತದಿಂದ ಹತ್ತಿ ಮತ್ತು ಸಕ್ಕರೆ ಆಮದು ಸಾಧ್ಯವಿಲ್ಲ ಎಂದು ಶೇಖ್ ರಷೀದ್ ಹೇಳಿದ್ದಾರೆ. ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ ಕೂಡ ಇದಕ್ಕೆ ಧ್ವನಿಗೂಡಿಸಿದ್ದಾರೆ. ಸಂಪುಟ ಸಭೆಯಲ್ಲಿ ಪಾಲ್ಗೊಂಡಿದ್ದ ಖುರೇಷಿ, ಭಾರತ ಮತ್ತು ಪಾಕ್ ಸಂಬಂಧ ಸಹಜಸ್ಥಿತಿಗೆ ಬರುತ್ತಿದೆ ಎಂಬುದೆಲ್ಲಾ ಸುಳ್ಳು ಎಂದಿದ್ದಾರೆ.
“ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಸಂಬಂಧ ಸಹಜಸ್ಥಿತಿಗೆ ಬರುತ್ತಿದೆ ಎಂಬ ಅಭಿಪ್ರಾಯ ಇದೆ. ಕಾಶ್ಮೀರದ ಸ್ವಾಯತ್ತ ಸ್ಥಾನಮಾನವನ್ನು ರದ್ದುಗೊಳಿಸುವ ಕ್ರಮ ಹಿಂಪಡೆಯುವವರೆಗೂ ಭಾರತ ಮತ್ತು ಪಾಕ್ ಮಧ್ಯೆ ಸಂಬಂಧ ಯಾವತ್ತೂ ಸಹಜಸ್ಥಿತಿಗೆ ಬರಲು ಆಗುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: Corona virus Updates: ಏ.15ರಿಂದ 20ರವರೆಗೆ ಕೊರೋನಾ ಹರಡುವ ಸಾಧ್ಯತೆ ಹೆಚ್ಚು; ವಿಜ್ಞಾನಿಗಳಿಂದ ಎಚ್ಚರಿಕೆ!
“ಭಾರತದಿಂದ ಹತ್ತಿ ಮತ್ತು ಸಕ್ಕರೆಯನ್ನು ಆಮದು ಮಾಡಿಕೊಳ್ಳುವ ಪ್ರಕ್ರಿಯೆ ಪುನಾರಂಭಗೊಳಿಸಲು ಅನುಮತಿಗೆ ಇಸಿಸಿ ಮಾಡಿಕೊಂಡ ಮನವಿ ಬಗ್ಗೆ ಇವತ್ತಿನ ಸಂಪುಟ ಸಭೆಯಲ್ಲಿ ಚರ್ಚೆ ಮಾಡಲಾಯಿತು. ಆದರೆ, ಈ ಪ್ರಸ್ತಾಪವನ್ನು ಸದ್ಯಕ್ಕೆ ತಿರಸ್ಕರಿಸಲಾಗಿದೆ” ಎಂದು ಪಾಕ್ ವಿದೇಶಾಂಗ ಸಚಿವರು ಹೇಳಿದ್ದಾರೆ.
ಭಾರತ ಮತ್ತು ಪಾಕ್ ಮಧ್ಯೆ ವ್ಯಾಪಾರ ಸಂಬಂಧ ಮರುಸ್ಥಾಪನೆಯಾಗುವ ಪ್ರಕ್ರಿಯೆಗೆ ಭಾರತದಲ್ಲೂ ಕೆಲವೆಡೆಯಿಂದ ವಿರೋಧ ವ್ಯಕ್ತವಾಗಿದೆ. ಭಯೋತ್ಪಾದನೆಗೆ ಪಾಕಿಸ್ತಾನ ಕುಮ್ಮಕ್ಕು ಕೊಡುತ್ತಿರುವಾಗ ಭಾರತ ಆ ದೇಶದೊಂದಿಗೆ ವ್ಯವಹಾರ ನಡೆಸುವುದು ಸರಿಯಲ್ಲ ಎಂದು ಬಿಜೆಪಿ ರಾಜ್ಯಸಭಾ ಸಂಸದ ಸುಬ್ರಮಣಿಯನ್ ಸ್ವಾಮಿ ಸೇರಿದಂತೆ ಹಲವರು ಆಕ್ಷೇಪಿಸಿದ್ದಾರೆ.
ಭಾರತ ಮತ್ತು ಪಾಕಿಸ್ತಾನದ ಮಧ್ಯೆ ತಿಕ್ಕಾಟಕ್ಕೆ ಪ್ರಮುಖವಾಗಿ ಕಾರಣವಾಗಿರುವುದು ಕಾಶ್ಮೀರ ವಿಚಾರ. ಜಮ್ಮು ಮತ್ತು ಕಾಶ್ಮೀರದ ಒಂದು ಭಾಗವು (ಪಾಕ್ ಆಕ್ರಮಿತ ಕಾಶ್ಮೀರ) ಪಾಕಿಸ್ತಾನದ ವಶದಲ್ಲಿದೆ. ಮತ್ತೊಂದು ಭಾಗ ಭಾರತದಲ್ಲಿದೆ. ಭಾರತದಲ್ಲಿರುವ ಜಮ್ಮು-ಕಾಶ್ಮೀರವನ್ನ ಸ್ವತಂತ್ರಗೊಳಿಸಬೇಕೆನ್ನುವ ಉಗ್ರಗಾಮಿಗಳ ಹೋರಾಟಕ್ಕೆ ಪಾಕಿಸ್ತಾನ ಮೊದಲಿಂದಲೂ ಬೆಂಬಲ ನೀಡುತ್ತಾ ಬಂದಿದೆ. ಜಮ್ಮು-ಕಾಶ್ಮೀರಕ್ಕೆ ಭಾರತ ಸ್ವಾಯತ್ತತೆ ನೀಡಿದ್ದರೂ ಪ್ರತ್ಯೇಕತಾವಾದಿಗಳ ಹೋರಾಟ ಇದ್ದೇ ಇತ್ತು. ಕಾಶ್ಮೀರಕ್ಕೆ ಸಂವಿಧಾನದಲ್ಲಿ ವಿಶೇಷ ಸ್ಥಾನಮಾನ ಕಲ್ಪಿಸಿದ್ದ 370ನೇ ವಿಧಿಯನ್ನು ಭಾರತ 2019, ಆಗಸ್ಟ್ 5ರಂದು ರದ್ದುಗೊಳಿಸಿತು. ಭಾರತದ ಈ ಕ್ರಮವನ್ನು ಪ್ರಶ್ನಿಸಿ ಪಾಕಿಸ್ತಾನ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಧ್ವನಿ ಎತ್ತಲು ಮಾಡುತ್ತಿರುವ ನಿರಂತರ ಪ್ರಯತ್ನ ಫಲಕೊಡುತ್ತಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ