ಇಸ್ಲಮಾಬಾದ್ (ಅಕ್ಟೋಬರ್ 27) ಮಂಗಳವಾರ ಬೆಳಿಗ್ಗೆ ವಾಯುವ್ಯ ಪಾಕಿಸ್ತಾನದ ಪೇಶಾವರ ಹೊರವಲಯದಲ್ಲಿರುವ ಇಸ್ಲಾಮಿಕ್ ಸೆಮಿನರಿಯ ಧಾರ್ಮಿಕ ಶಾಲೆಯಲ್ಲಿ ಪ್ರಬಲ ಬಾಂಬ್ ಸ್ಫೋಟ ಸಂಭವಿಸಿದ್ದು, ಕನಿಷ್ಠ ಏಳು ಮಕ್ಕಳು ಸಾವನ್ನಪ್ಪಿದ್ದಾರೆ ಮತ್ತು 70 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಮತ್ತು ಆಸ್ಪತ್ರೆಯ ವಕ್ತಾರರು ತಿಳಿಸಿದ್ದಾರೆ. ಜಾಮಿಯಾ ಜುಬೈರಿಯಾ ಮದರಸಾದ ಮುಖ್ಯ ಸಭಾಂಗಣದಲ್ಲಿ ಧರ್ಮಗುರು ಇಸ್ಲಾಂ ಧರ್ಮದ ಬೋಧನೆಗಳ ಕುರಿತು ಉಪನ್ಯಾಸ ನೀಡುತ್ತಿರುವಾಗ ಬಾಂಬ್ ಸ್ಫೋಟ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿ ವಾಕರ್ ಅಜೀಮ್ ತಿಳಿಸಿದ್ದಾರೆ. ಮದರಸಾದಲ್ಲಿ ಯಾರೋ ಓರ್ವ ವ್ಯಕ್ತಿ ಒಂದು ಚೀಲವನ್ನು ಬಿಟ್ಟು ಹೊರಟ ಕೆಲವೇ ನಿಮಿಷಗಳಲ್ಲಿ ಬಾಂಬ್ ಸ್ಫೋಟಗೊಂಡಿದೆ ಎಂದು ಆರಂಭಿಕ ತನಿಖೆಗಳಿಂದ ತಿಳಿದುಬಂದಿದೆ.
ಬಾಂಬ್ ಸ್ಫೋಟದಲ್ಲಿ ಗಾಯಗೊಂಡ ಅನೇಕರ ಸ್ಥಿತಿ ಗಂಭೀರವಾಗಿದೆ ಮತ್ತು ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಆಸ್ಪತ್ರೆಯ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಮದರಸಾ ಹೆಚ್ಚಾಗಿ ವಯಸ್ಕ ವಿದ್ಯಾರ್ಥಿಗಳಿದ್ದರು, ಸ್ಫೋಟ ಸಂಭವಿಸಿದ ಸಂದರ್ಭದಲ್ಲಿ ಅನೇಕರು ಅಧ್ಯಯನ ನಡೆಸುತ್ತಿದ್ದರು ಎಂದು ನಗರದ ನಿವಾಸಿ ಅಬ್ದುಲ್ ರಹೀಮ್ ಹೇಳಿದ್ದಾರೆ. ಗಾಯಗೊಂಡವರಲ್ಲಿ ಅವರ 27 ವರ್ಷದ ಸೋದರ ಸಂಬಂಧಿ ಕೂಡ ಇದ್ದಾರೆ ಎಂದು ಅವರು ತಿಳಿಸಿದ್ದಾರೆ.
ಪೇಶಾವರ್ ಅಫ್ಘಾನಿಸ್ತಾನದ ಗಡಿಯಲ್ಲಿರುವ ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಪ್ರಾಂತೀಯ ರಾಜಧಾನಿ. ಇತ್ತೀಚಿನ ವರ್ಷಗಳಲ್ಲಿ ಈ ಪ್ರಾಂತ್ಯವು ಇಂತಹ ಹಲವು ಉಗ್ರಗಾಮಿ ದಾಳಿಗಳಿಗೆ ಸಾಕ್ಷಿಯಾಗಿದೆ. ಆದರೆ, ಪಂಥೀಯ ಹಿಂಸಾಚಾರವು ಪಾಕಿಸ್ತಾನದಾದ್ಯಂತದ ಅನೇಕ ಮಸೀದಿಗಳು ಅಥವಾ ಸೆಮಿನರಿಗಳಲ್ಲಿ ಜನರನ್ನು ಸ್ಪೋಟಿಸಿ ಕೊಲ್ಲುತ್ತಿರುವುದು ಆಘಾತಕಾರಿ ವಿಚಾರವಾಗಿದೆ.
ಇದನ್ನೂ ಓದಿ : ಹತ್ರಾಸ್ ಪ್ರಕರಣದ ಸಿಬಿಐ ಮೇಲ್ವಿಚಾರಣೆಯನ್ನು ಅಲಹಾಬಾದ್ ಹೈಕೋರ್ಟ್ ನಿರ್ವಹಿಸಲಿ; ಸುಪ್ರೀಂ ಆದೇಶ
ನೈರುತ್ಯ ನಗರವಾದ ಕ್ವೆಟ್ಟಾದಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಇಬ್ಬರು ಸಾವನ್ನಪ್ಪಿದ ಎರಡು ದಿನಗಳ ನಂತರ ಮತ್ತೆ ಉಗ್ರಗಾಮಿ ಸಂಘಟನೆಗಳು ಪೆಶಾವರದ ಶಾಲೆಯಲ್ಲೇ ಬಾಂಬ್ ಸ್ಪೋಟಿಸಿರುವುದು ಅಲ್ಲಿನ ಸರ್ಕಾರಕ್ಕೂ ತಲೆನೋವಾಗಿ ಪರಿಣಮಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ