ಉಗ್ರ ಹಫೀಜ್ ಮನೆ ಬಳಿ ಸ್ಫೋಟ ಪ್ರಕರಣ: ಭಾರತೀಯನ ಪಾತ್ರ ಇದೆ ಎಂದು ಪಾಕ್ ಆರೋಪ

ಜೂನ್ 23ರಂದು ಲಾಹೋರ್​ನಲ್ಲಿರುವ ಉಗ್ರ ಹಫೀಜ್ ಸಯೀದ್ ಮನೆಯ ಹೊರಗೆ ಪ್ರಬಲ ಕಾರ್ ಬಾಂಬ್ ಸ್ಫೋಟವಾಗಿತ್ತು. ಆ ಘಟನೆಯಲ್ಲಿ ಭಾರತದ ಗುಪ್ತಚರ ಸಂಸ್ಥೆಗೆ ಜೋಡಿತವಾಗಿರುವ ಭಾರತೀಯ ನಾಗರಿಕನೊಬ್ಬ ಮಾಸ್ಟರ್ ಮೈಂಡ್ ಎಂಬುದಕ್ಕೆ ಸಾಕ್ಷ್ಯ ಸಿಕ್ಕಿದೆ ಎಂದು ಪಾಕಿಸ್ತಾನ ಪ್ರತಿಪಾದಿಸಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • News18
  • Last Updated :
  • Share this:
ನವದೆಹಲಿ: ಕಳೆದ ತಿಂಗಳು ಪಾಕಿಸ್ತಾನದ ಲಾಹೋರ್​ನಲ್ಲಿ ಜಮಾತ್-ಉದ್-ದಾವ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ಮನೆಯ ಹೊರಗೆ ಸಂಭವಿಸಿದ ಬಾಂಬ್ ಸ್ಫೋಟ ಘಟನೆಯಲ್ಲಿ ಭಾರತೀಯನೊಬ್ಬನ ಕೈವಾಡ ಇರುವುದು ತಿಳಿದುಬಂದಿದೆ ಎಂದು ಪಾಕಿಸ್ತಾನ ಗಂಭೀರ ಆರೋಪ ಮಾಡಿದೆ. ನಿನ್ನೆ ಭಾನುವಾರ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಪೊಲೀಸ್ ಮುಖ್ಯಸ್ಥ ಇನಾಮ್ ಘಾನಿ ಮತ್ತು ಮಾಹಿತಿ ಸಚಿವ ಫಾವದ್ ಚೌಧರಿ ಜೊತೆ ಪತ್ರಿಕಾಗೋಷ್ಠಿ ನಡೆಸಿದ ಪಾಕ್ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೊಯೀದ್ ಯೂಸುಫ್ ಅವರು ಈ ವಿಷಯವನ್ನು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಭಾರತೀಯ ಗುಪ್ತಚರ ಸಂಸ್ಥೆಯೊಂದಿಗೆ ಸಂಬಂಧ ಇರುವ ಭಾರತೀಯ ನಾಗರಿಕನೊಬ್ಬ ಈ ಘಟನೆಯ ಮಾಸ್ಟರ್ ಮೈಂಡ್ ಆಗಿದ್ದಾನೆ ಎಂದು ಮೊಯೀದ್ ಯೂಸುಫ್ ಆಪಾದಿಸಿದ್ದಾರೆ. ಆದರೆ, ಪಾಕಿಸ್ತಾನ ಈ ಹಿಂದೆಯೂ ಇಂಥ ಗಂಭೀರ ಆರೋಪಗಳನ್ನ ಮಾಡಿದ್ದಿದೆ. ಇವುಗಳನ್ನ ಭಾರತ ಸರ್ಕಾರ ಬಲವಾಗಿ ತಳ್ಳಿಹಾಕುತ್ತಲೇ ಇದೆ. ಸದಾ ಸುಳ್ಳುಗಳನ್ನ ಹೆಣೆಯುತ್ತಾ ಬರುತ್ತಿರುವ ಪಾಕಿಸ್ತಾನದ ಹೊಸ ಕಲ್ಪನೆ ಇದೆಂದು ಭಾರತದ ವಿದೇಶಾಂಗ ಸಚಿವಾಲಯ ಲೇವಡಿ ಮಾಡಿದೆ.

ಜೂನ್ 23ರಂದು ಲಾಹೋರ್​ನ ಜೋಹಾರ್ ಟೌನ್​ನಲ್ಲಿನರುವ ಹಫೀಜ್ ಸಯೀದ್ ಅವರ ಮನೆಯ ಹೊರಗೆ ಪ್ರಬಲ ಕಾರ್ ಬಾಂಬ್​ವೊಂದು ಸ್ಫೋಟಗೊಂಡಿತ್ತು. ಆ ಘಟನೆಯಲ್ಲಿ ಮೂವರು ವ್ಯಕ್ತಿಗಳು ಸಾವನ್ನಪ್ಪಿದರೆ, 24 ಮಂದಿಗೆ ಗಾಯಗಳಾಗಿದ್ದವು. ಯಾವ ಸಂಘಟನೆಗಳೂ ಈವರೆಗೆ ಈ ಸ್ಫೋಟ ಘಟನೆಯ ಹೊಣೆಹೊತ್ತಿಲ್ಲ. ಈಗ ಈ ಘಟನೆಯಲ್ಲಿ ಭಾರತದ RAW ಗುಪ್ತಚರ ಸಂಸ್ಥೆಯ ಕೈವಾಡ ಇದೆ ಎಂದು ಪಾಕಿಸ್ತಾನ ಪ್ರತಿಪಾದಿಸುತ್ತಿದೆ. ತನ್ನ ಬಳಿ ಸಾಕ್ಷ್ಯಗಳೂ ಇರುವುದಾಗಿ ಅದು ಹೇಳಿಕೊಂಡಿದೆ. “ಸ್ಫೋಟಗೊಂಡ ಸ್ಥಳದಲ್ಲಿ ಸಿಕ್ಕ ಎಲೆಕ್ಟ್ರಾನಿಕ್ ಉಪಕರಣ ಹಾಗೂ ವಿಧಿವಿಜ್ಞಾನ ಮಾಹಿತಿ ಮೂಲಕ ನಮಗೆ ಪ್ರಮುಖ ಮಾಸ್ಟರ್ ಮೈಂಡ್​ನ ಸುಳಿವು ಸಿಕ್ಕಿದೆ. ಉಗ್ರ ದಾಳಿಯ ನಿರ್ವಹಣೆ (Handlers) ಮಾಡಿದವರು ಯಾರು ಎಂಬುದನ್ನೂ ಪತ್ತೆ ಹಚ್ಚಿದ್ದೇವೆ. ಈ ಬಾಂಬ್ ಸ್ಪೋಟ ಘಟನೆಯ ಮಾಸ್ಟರ್ ಮೈಂಡ್ ಆಗಿರುವ ವ್ಯಕ್ತಿಯು ಭಾರತೀಯ ಗುಪ್ತಚರ ಸಂಸ್ಥೆ RAWಗೆ ಸೇರಿದನಾಗಿದ್ದು, ಈತ ಭಾರತದ ಪ್ರಜೆಯಾಗಿದ್ದಾನೆ ಎಂಬುದರಲ್ಲಿ ನಮಗೆ ಯಾವುದೇ ಅನುಮಾನ ಉಳಿದಿಲ್ಲ” ಎಂದು ಪಾಕ್ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೊಯೀದ್ ಯೂಸುಫ್ ಈ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಆದರೆ, ಶಂಕಿತ ಮಾಸ್ಟರ್ ಮೈಂಡ್​ನ ಗುರುತು ಸಿಕ್ಕಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ಪಾಕಿಸ್ತಾನದಲ್ಲಿ ಸಂಭವಿಸಿದ ಉಗ್ರ ದಾಳಿ ಘಟನೆಗಳಿಗೆ ಭಾರತವೇ ಕಾರಣ ಎಂದು ಪಾಕಿಸ್ತಾನ ಈ ಹಿಂದೆಯೂ ಅನೇಕ ಬಾರಿ ಆರೋಪ ಮಾಡಿದೆ. ತನ್ನ ಬಳಿ ಸಾಕ್ಷ್ಯಗಳಿವೆ ಎಂದು ಹೇಳುತ್ತಾ ಬರುತ್ತಿದೆ. ಆದರೆ, ಇದು ಸುಳ್ಳಿನ ಕಂತೆ ಎಂಬುದು ಭಾರತದ ವಾದ. ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಭಾರತದ ವಿರುದ್ಧ ಅಭಿಪ್ರಾಯ ರೂಪಿಸಲು ಪಾಕಿಸ್ತಾನ ನಡೆಸುತ್ತಿರುವ ಕುತಂತ್ರಗಳಲ್ಲಿ ಈ ಆರೋಪಗಳೂ ಸೇವೆ. ಜಾಗತಿಕವಾಗಿ ಬಹುತೇಕ ಯಾರೂ ಕೂಡ ಪಾಕ್ ಆರೋಪಗಳನ್ನ ಲೆಕ್ಕಕ್ಕೆ ಪರಿಗಣಿಸುವುದಿಲ್ಲ ಎಂದು ಭಾರತೀಯ ಅಧಿಕಾರಿಗಳು ಹೇಳುತ್ತಾರೆ.

ಇದನ್ನೂ ಓದಿ: ಪತಿಯನ್ನ ಕೊಂದು ಅದೇ ರಾತ್ರಿ ಪ್ರಿಯಕರನೊಂದಿಗೆ ಪ್ರಣಯ; 45ರ ಮಹಿಳೆ 27ರ ಯುವಕನ ಲವ್ ಅಂಡ್ ಕ್ರೈಮ್

ಕಳೆದ ವರ್ಷದ ನವೆಂಬರ್ ತಿಂಗಳಲ್ಲೂ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ಅವರು ತಮ್ಮ ದೇಶದಲ್ಲಿ ಸಂಭವಿಸಿದ ಅನೇಕ ಉಗ್ರ ದಾಳಿಗಳ ಹಿಂದೆ ಭಾರತದ ಕೈವಾಡ ಇದೆ ಎಂದು ಆರೋಪ ಮಾಡಿದ್ದರು. ಆಗ ಭಾರತ ತಿರುಗೇಟು ನೀಡಿತ್ತು. “ಇದೂ ಕೂಡ ಭಾರತದ ವಿರುದ್ಧ ಚಿತಾವಣೆ ನಡೆಸುವ ಪಾಕಿಸ್ತಾನದ ಹತಾಶ ಪ್ರಯತ್ನವಾಗಿದೆ. ಭಾರತದ ವಿರುದ್ಧ ಇದೆ ಎನ್ನಲಾದ ಸಾಕ್ಷ್ಯಗಳಿಗೆ ಯ ಆವುದೇ ಬೆಲೆ ಉಳಿದಿಲ್ಲ. ಇವೆಲ್ಲಾ ಪಾಕಿಸ್ತಾನದ ಹಸಿ ಸುಳ್ಳು ಮತ್ತು ಕಲ್ಪನೆಗಳಾಗಿವೆ” ಎಂದು ಭಾರತದ ವಿದೇಶ ವ್ಯವಹಾರಗಳ ಸಚಿವಾಲಯದ ವಕ್ತಾರರು ಕುಟುಕಿದ್ದರು.

ಇನ್ನು, ಜಮಾತ್ ಉದ್ ದಾವಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ಭಾರತಕ್ಕೆ ಬೇಕಾಗಿರುವ ಮೋಸ್ಟ್ ವಾಂಟೆಡ್ ಉಗ್ರರಲ್ಲಿ ಒಬ್ಬ. 2008ರ ಮುಂಬೈ ದಾಳಿ ಸೇರಿದಂತೆ ಹಲವು ಉಗ್ರ ಕೃತ್ಯಗಳಲ್ಲಿ ಈತನ ಪಾತ್ರ ಇದೆ. ಈತನನ್ನ ವಶಕ್ಕೆ ಪಡೆಯಲು ಭಾರತ ಸಾಕಷ್ಟು ಪ್ರಯತ್ನ ಪಡುತ್ತಿದೆಯಾದರೂ ಪಾಕಿಸ್ತಾನ ಸರ್ಕಾರ ಈತನನ್ನು ರಕ್ಷಿಸುತ್ತಿದೆ ಎಂಬ ಆರೋಪವಿದೆ.
Published by:Vijayasarthy SN
First published: