ಪಾಕಿಸ್ತಾನದಲ್ಲಿರುವ ಚೀನೀ ರಾಯಭಾರ ಕಚೇರಿ ಮೇಲಿನ ಉಗ್ರ ದಾಳಿಯಲ್ಲಿ ಭಾರತದ ರಾ ಕೈವಾಡ: ಪಾಕ್ ಆರೋಪ

ಆಫ್ಘಾನಿಸ್ತಾನದಲ್ಲಿ ಸಂಚು ರೂಪಿದ್ದು, ಭಾರತ ರಾ ಸಂಸ್ಥೆಯು ಈ ದಾಳಿಯನ್ನು ಸಂಘಟಿಸಿದ್ದು ಶಂಕಿತರ ವಿಚಾರಣೆಯಿಂದ ತಿಳಿದುಬಂದಿದೆ ಎಂಬುದು ಪಾಕ್ ಆರೋಪ.

Vijayasarthy SN | news18
Updated:January 12, 2019, 6:46 PM IST
ಪಾಕಿಸ್ತಾನದಲ್ಲಿರುವ ಚೀನೀ ರಾಯಭಾರ ಕಚೇರಿ ಮೇಲಿನ ಉಗ್ರ ದಾಳಿಯಲ್ಲಿ ಭಾರತದ ರಾ ಕೈವಾಡ: ಪಾಕ್ ಆರೋಪ
ಪ್ರಾತಿನಿಧಿಕ ಚಿತ್ರ
Vijayasarthy SN | news18
Updated: January 12, 2019, 6:46 PM IST
ನವದೆಹಲಿ(ಜ. 12): ಪಾಕಿಸ್ತಾನದಲ್ಲಿ ಸಂಭವಿಸುವ ಅನೇಕ ಉಗ್ರಗಾಮಿ ಹಾಗೂ ಬಾಂಬ್ ದಾಳಿ ಘಟನೆಗಳಿಗೆ ಭಾರತವನ್ನು ಥಳಕು ಹಾಕುವ ಪಾಕಿಸ್ತಾನ ಈಗ ಮತ್ತೊಂದು ಹೊಸ ಆಪಾದನೆ ಮಾಡಿದೆ. ಕಳೆದ ವರ್ಷದ ನವೆಂಬರ್​ನಲ್ಲಿ ಪಾಕಿಸ್ತಾನದ ಕರಾಚಿ ನಗರದಲ್ಲಿರುವ ಚೀನೀ ರಾಯಭಾರ ಕಚೇರಿಯಲ್ಲಿ ಸಂಭವಿಸಿದ ಉಗ್ರಗಾಮಿಗಳ ದಾಳಿ ಘಟನೆಯಲ್ಲಿ ಭಾರತದ ಕೈವಾಡ ಇದೆ ಎಂದು ಪಾಕಿಸ್ತಾನ ಗಂಭೀರ ಆರೋಪ ಮಾಡಿದೆ. ಭಾರತದ ಗುಪ್ತಚರ ಸಂಸ್ಥೆ ರಾ (ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್) ಈ ದಾಳಿಯ ಹಿಂದಿದೆ ಎಂದು ಪಾಕಿಸ್ತಾನ ಪೊಲೀಸ್ ಅಭಿಪ್ರಾಯಪಟ್ಟಿದೆ. ಆಫ್ಘಾನಿಸ್ತಾನದ ನೆಲದಲ್ಲಿ ಕೂತು ಈ ದಾಳಿಯ ಸಂಚು ನಡೆಸಲಾಗಿದೆ. ಹಾಗೆಯೇ ಪಾಕ್-ಚೀನಾ ದೇಶಗಳ ಮಹತ್ವದ ಸಿಪೆಕ್ ಕಾರಿಡಾರ್ ಯೋಜನೆಯನ್ನು ಹಳ್ಳಿ ಹಿಡಿಸಲು ಈ ಕೃತ್ಯ ಎಸಗಲಾಗಿದೆ ಎಂಬುದು ಪಾಕಿಸ್ತಾನದ ಆರೋಪವಾಗಿದೆ.

ಬಲೂಚಿಸ್ತಾನ್ ಲಿಬರೇಷನ್ ಆರ್ಮಿ ಎಂಬ ಉಗ್ರ ಸಂಘಟನೆಗೆ ಸೇರಿದ ಐವರು ಶಂಕಿತರನ್ನು ಕರಾಚಿ ಪೊಲೀಸರು ಬಂಧಿಸಿದ್ದಾರೆ. ಅವರನ್ನು ವಿಚಾರಣೆಗೊಳಪಡಿಸಿದಾಗ ಹಲವು ಮಾಹಿತಿ ಲಭ್ಯವಾಗಿದೆ. ಆಫ್ಘಾನಿಸ್ತಾನದಲ್ಲಿ ಕೂತು ಸಂಚು ಹೆಣೆದದ್ದು, ಹಾಗೂ ಭಾರತ ರಾ ಸಂಸ್ಥೆಯು ಈ ದಾಳಿಯನ್ನು ಕ್ರೋಢೀಕರಿಸಿದ್ದು ಇತ್ಯಾದಿ ವಿಚಾರಗಳು ಈ ಶಂಕಿತರ ವಿಚಾರಣೆಯಿಂದ ತಿಳಿದುಬಂದಿದೆ ಎಂದು ಕರಾಚಿ ಪೊಲೀಸ್ ಮುಖ್ಯಸ್ಥ ಅಮೀರ್ ಶೇಖ್ ತಿಳಿಸಿದ್ದಾರೆ.

ಚೀನೀ ರಾಯಭಾರಿ ಕಚೇರಿಯಲ್ಲಿ ನಡೆದ ಉಗ್ರ ದಾಳಿಯ ಹಿಂದೆ ರಾ ಕೈವಾಡ ಇದೆ ಎಂಬ ಪಾಕ್ ಆರೋಪವನ್ನು ಭಾರತ ಸಾರಸಗಟಾಗಿ ತಳ್ಳಿ ಹಾಕಿದೆ. ನಮ್ಮತ್ತ ಹೀಗೆ ಬೊಟ್ಟು ಮಾಡುವ ಬದಲು ಪಾಕಿಸ್ತಾನವು ತನ್ನೊಳಗೆ ಬೇರೂರಿರುವ ಭಯೋತ್ಪಾದನೆ ಮತ್ತು ಉಗ್ರರ ಜಾಲವನ್ನು ನಿರ್ಮೂಲನೆ ಮಾಡಲು ಸೂಕ್ತ ಕ್ರಮ ಕೈಗೊಳ್ಳುವುದು ಒಳ್ಳೆಯದು ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರರು ಪಾಕಿಸ್ತಾನಕ್ಕೆ ಕಿವಿಮಾತು ಹೇಳಿದ್ದಾರೆ.

2018ರ ನವೆಂಬರ್ 23ರಂದು ಮೂವರು ಉಗ್ರಗಾಮಿಗಳು ಕರಾಚಿಕ ಕ್ಲಿಫ್ಟಾನ್ ಪ್ರದೇಶದಲ್ಲಿರುವ ಚೀನೀ ರಾಯಭಾರ ಕಚೇರಿಯ ಮೇಲೆ ದಾಳಿಗೆ ಪ್ರಯತ್ನಿಸಿದ್ದರು. ಈ ವೇಳೆ ಪಾಕ್ ಭದ್ರತಾ ಪಡೆ ಹಾಗೂ ಉಗ್ರರ ನಡುವೆ ಗುಂಡಿನ ಚಕಮಕಿ ನಡೆದು ಎಲ್ಲಾ ಮೂವರೂ ಉಗ್ರರು ಹತರಾಗಿದ್ದರು. ಹಾಗೆಯೇ ಇಬ್ಬರು ಪೊಲೀಸರೂ ಅಸುನೀಗಿದ್ದರು.
First published:January 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...