ಕೊರೋನಾ ಭೀತಿ ಕಾರಣದಿಂದಾಗಿ ಪ್ರತಿ ವರ್ಷ ನಡೆಯಬೇಕಿದ್ದ SCO ಸದಸ್ಯ ರಾಷ್ಟ್ರಗಳ ರಾಷ್ಟ್ರೀಯ ಭದ್ರತಾ ಸಲಹೆಗಾರರ ಸಭೆಯನ್ನು ಈ ವರ್ಷ ವರ್ಚುವಲ್ ಆಗಿ ಆಯೋಜಿಸಲಾಗಿತ್ತು. ಮಂಗಳವಾರದಿಂದ ಈಗಾಗಲೇ ಸಭೆ ಆರಂಭವಾಗಿದೆ. ಆದರೆ, ಈ ಸಭೆಯಲ್ಲಿ ಪಾಕಿಸ್ತಾನದ ಭದ್ರತಾ ಸಲಹೆಗಾರ ಜಮ್ಮುಕಾಶ್ಮೀರವನ್ನು ಪಾಕಿಸ್ತಾನದ ವಿವಾದಿತ ಭೂಪ್ರದೇಶ ಎಂದು ತನ್ನ ನಕ್ಷೆಯಲ್ಲಿ ತೋರಿಸಿದ್ದನ್ನು ಪ್ರತಿಭಟಿಸಿ ಭಾರತ ಸರ್ಕಾರದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಶಾಂಘೈ ಸಹಕಾರ ಸಂಸ್ಥೆ (SCO)ಯ ವರ್ಚುವಲ್ ಸಭೆಯಿಂದ ಹೊರನಡೆದಿದ್ದಾರೆ ಎಂದು ತಿಳಿದುಬಂದಿದೆ. ಈ ಸಬಂಧ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ, "SCO ಅಧ್ಯಕ್ಷ ದೇಶ ರಷ್ಯಾ ಆಯೋಜಿಸಿದ್ದ SCO ಸದಸ್ಯ ರಾಷ್ಟ್ರಗಳ ರಾಷ್ಟ್ರೀಯ ಭದ್ರತಾ ಸಲಹೆಗಾರರ(NSAs) ಸಭೆಯಲ್ಲಿ ಪಾಕಿಸ್ತಾನ ಉದ್ದೇಶಪೂರ್ವಕವಾಗಿ ವಿವಾದಾತ್ಮಕವಾದ ಕಾಲ್ಪನಿಕ ನಕ್ಷೆಯನ್ನು ತಯಾರಿಸಿದೆ" ಎಂದು ಆರೋಪಿಸಿದ್ದಾರೆ.
"ಅಂತಾರಾಷ್ಟ್ರೀಯ ಮಟ್ಟದ ಸೌಹಾರ್ದ ಸಭೆಯಲ್ಲೂ ಸಹ ಪಾಕಿಸ್ತಾನ ಪದೇ ಪದೇ ಕಾಶ್ಮೀರ ವಿಚಾರವನ್ನು ಮುಂದಿಟ್ಟು ಗಲಭೆ ಸೃಷ್ಟಿಸುತ್ತಿದೆ. ಈ ಅಕ್ರಮ ನಕ್ಷೆಯನ್ನು ಪಾಕಿಸ್ತಾನ ಬಳಸುವುದಕ್ಕೆ ಭಾರತ ತೀವ್ರ ಆಕ್ಷೇಪವನ್ನು ಶಾಂಘೈ ಸಭೆಯಲ್ಲಿ ವ್ಯಕ್ತಪಡಿಸಿದೆ.
ಪಾಕಿಸ್ತಾನದ ಕ್ರಮವು ಆತಿಥೇಯರ ವಿರುದ್ಧದ ಸಲಹೆಯನ್ನು ನಿರ್ಲಕ್ಷಿಸಿದೆ ಮತ್ತು ಸಭೆಯ ಮಾನದಂಡಗಳನ್ನು ಉಲ್ಲಂಘಿಸಿದೆ. ಆತಿಥೇಯರೊಂದಿಗೆ ಸಮಾಲೋಚಿಸಿದ ನಂತರ, ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಆ ಸಂದರ್ಭದಲ್ಲಿ ಪ್ರತಿಭಟಿಸಿ ಸಭೆಯಿಂದ ಹೊರಬಂದರು ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ತಿಳಿಸಿದ್ದಾರೆ.
ಪಾಕಿಸ್ತಾನದ ಈ ಕೃತ್ಯವನ್ನು ಬೆಂಬಲಿಸುವುದಿಲ್ಲ ಮತ್ತು ಇಸ್ಲಾಮಾಬಾದ್‌ನ ಪ್ರಚೋದನಕಾರಿ ಕೃತ್ಯವು SCO ದಲ್ಲಿ ಭಾರತದ ಭಾಗವಹಿಸುವಿಕೆಯ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಆಶಿಸುತ್ತಿದೆ ಎಂದು ರಷ್ಯಾದ ಮೂಲಗಳು ದೋವಲ್‌ಗೆ ತಿಳಿಸಿವೆ ಎನ್ನಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ