ಭಾರತೀಯ ಉಪಖಂಡದ ಅಲ್-ಖೈದಾ ಭಯೋತ್ಪಾದಕ ಸಂಘಟನೆ ಒಂದು ವಾರದಲ್ಲಿ "ಕಾಶ್ಮೀರ ನಮ್ಮದು" ಎಂಬ ಎರಡು ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ. 18 ನಿಮಿಷಗಳ ಈ ವೀಡಿಯೋದಲ್ಲಿ ಬಾಬ್ರಿ ಮಸೀದಿ ಧ್ವಂಸ, ಭಾರತದಲ್ಲಿ ಮುಸ್ಲಿಂ ಮಕ್ಕಳು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯದ ಬಗ್ಗೆ ಮಾತನಾಡಲಾಗಿದೆ. ಭಾರತೀಯ ಸೇನೆಯು ನೀಡಿದ ಹಿಂಸೆಯನ್ನು ಉಲ್ಲೇಖಿಸಲಾಗಿದೆ. ಅಲ್ಲದೆ, ಕಳೆದ ವಾರ ಅಸ್ಸಾಂನಲ್ಲಿ ನಡೆದ ಹಿಂಸಾಚಾರಕ್ಕೆ ತಾವು ಸೇಡು ತೀರಿಸಿಕೊಳ್ಳುವುದಾಗಿಯೂ ತಿಳಿಸಲಾಗಿದೆ. ಈ ಎಲ್ಲಾ ಕಾರಣಗಳಿಗಾಗಿಯೇ ನಾವು ಬಂದೂಕು ಹಿಡಿದು ಹೋರಾಟಕ್ಕೆ ಮುಂದಾಗಿದ್ದೇವೆ ಎಂದು ಉಗ್ರರು ಹೇಳಿದ್ದಾರೆ. ಆದರೆ, ಈ ವಿಡಿಯೋ ಪಾಕಿಸ್ತಾನದ ಲಿಪಿಯಲ್ಲಿದ್ದು, ಪಾಕ್ ಬೆಂಬಲಿತ ಅಲ್-ಕೈದಾ ಅಥವಾ ಟಿಆರ್ಎಫ್ ಉಗ್ರ ಸಂಘಟನೆ ಚಿತ್ರೀಕರಿಸಿರುವ ಸಾಧ್ಯತೆ ಇದೆ ಎಂದು ಉನ್ನತ ಗುಪ್ತಚರ ಮೂಲಗಳು ಸಿಎನ್ಎನ್-ನ್ಯೂಸ್ 18 ಗೆ ತಿಳಿಸಿವೆ.
"FATF (Financial Action Task Force) ಮತ್ತು ಇತರ ವೇದಿಕೆಗಳಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿರುವ ಪಾಕಿಸ್ತಾನವು, ಭಾರತದಲ್ಲಿಉದ್ವಿಗ್ನತೆಯನ್ನು ಸೃಷ್ಟಿಸುವ ಸಲುವಾಗಿ ಈ ಎಲ್ಲಾ ನಕಲಿ ಸಂಸ್ಥೆಗಳನ್ನು ಬಳಸುತ್ತಿದೆ" ಎಂದು ಮೂಲಗಳು ತಿಳಿಸಿವೆ.
ಕಳೆದ ತಿಂಗಳು ಪಾಕಿಸ್ತಾನದ ಮಾಧ್ಯಮಗಳಿಗೆ ಸಂದರ್ಶನ ನೀಡಿದ್ದ ತಾಲಿಬಾನ್ ವಕ್ತಾರ ಸುಹೇಲ್ ಶಾಹೀನ್ ಕಾಶ್ಮೀರ ಸೇರಿದಂತೆ ವಿಶ್ವದ ಯಾವುದೇ ಮೂಲೆಯಲ್ಲಿ ಮುಸ್ಲಿಂಗೆ ಸಂಕಷ್ಟ ಎದುರಾದರೆ ಅದನ್ನು ಪ್ರಶ್ನೆ ಮಾಡುವ ಹಕ್ಕು ತಮಗಿದೆ ಎಂದು ಆತ ಘೋಷಿಸಿಕೊಂಡಿದ್ದ. ಆದರೆ, ನ್ಯೂಸ್ 18 ತಾಲಿಬಾನ್ ವಕ್ತಾರ ಸುಹೇಲ್ ಶಾಹೀನ್ ಅವರನ್ನು ಸಂಪರ್ಕಿಸಿದಾಗ, ಅವರು ತಮ್ಮ ಮಾತುಗಳನ್ನು ತಿರುಚಲಾಗಿದೆ ಎಂದು ಸ್ಪಷ್ಟಪಡಿಸಿದ್ದರು.
ಅಲ್ಲದೆ, "ಭಾರತವು ಅಫ್ಘಾನ್ ಹಿಂದುಗಳು ಮತ್ತು ಸಿಖ್ಖರ ಬಗ್ಗೆ ಕಾಳಜಿ ವಹಿಸುವಂತೆಯೇ, ಮುಸ್ಲಿಂ ಜಗತ್ತು ಕಾಶ್ಮೀರದ ಬಗ್ಗೆ ಚಿಂತಿಸುತ್ತಿದೆ" ಎಂದು ಶಾಹೀನ್ ನ್ಯೂಸ್ 18 ಗೆ ಹೇಳಿದ್ದರು. ಈ ನಡುವೆ "ಅಫ್ಘಾನಿಸ್ತಾನವು ಕಾಶ್ಮೀರದ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಅವರು ಪುನರುಚ್ಚರಿಸಿದ್ದರು. ಯಾವುದೇ ದೇಶದ ವಿರುದ್ಧ "ಸಶಸ್ತ್ರ ಕಾರ್ಯಾಚರಣೆ ನಡೆಸುವ ನೀತಿಯನ್ನು ಹೊಂದಿಲ್ಲ" ಎಂದಿದ್ದರು.
ದೋಹಾದ ರಾಜಕೀಯ ಕಚೇರಿಯ ವಕ್ತಾರ ಶಾಹೀನ್, ಗುರುವಾರ ವಿಡಿಯೋ ಲಿಂಕ್ ಮೂಲಕ ಬಿಬಿಸಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ, "ನಾವು ನಮ್ಮ ಧ್ವನಿಯನ್ನು ಎತ್ತುತ್ತೇವೆ. ಮುಸ್ಲಿಮರು ನಿಮ್ಮ ಸ್ವಂತ ಜನರು, ನಿಮ್ಮ ಸ್ವಂತ ಪ್ರಜೆಗಳು ಮತ್ತು ಅವರು ಸಹ ಸಮಾನ ಹಕ್ಕುಗಳಿಗೆ ಅರ್ಹರು. ಮುಸ್ಲಿಮರಾಗಿ, ಕಾಶ್ಮೀರ ಮತ್ತು ಬೇರೆ ಯಾವುದೇ ದೇಶದಲ್ಲಿ ವಾಸಿಸುವ ಮುಸ್ಲಿಮರ ಪರವಾಗಿ ಮಾತನಾಡುವುದು ನಮ್ಮ ಹಕ್ಕು" ಎಂದು ತಿಳಿಸಿದ್ದರು.
ಇದನ್ನೂ ಓದಿ: Terror Attack: ಮತ್ತೆ ಕಾಶ್ಮೀರದಲ್ಲಿ ಭಯೋತ್ಪಾದಕರಿಂದ ದಾಳಿ; 5 ಯೋಧರು ಹುತಾತ್ಮ, ಇಬ್ಬರು ಉಗ್ರರ ಹತ್ಯೆ
ಅವರು ಅಫ್ಘಾನಿಸ್ತಾನದ ಇಸ್ಲಾಮಿಕ್ ಎಮಿರೇಟ್ ಸ್ಥಾಪನೆಯಾದ ನಂತರ ತಾಲಿಬಾನ್ ಗುಂಪು ಕಾಶ್ಮೀರವನ್ನೂ ಜಿಹಾದ್ ಪಟ್ಟಿಯಲ್ಲಿ ಸೇರಿಸಿವೆ ಎನ್ನಲಾಗಿತ್ತು. ಈ ಎಲ್ಲಾ ಹಿನ್ನೆಲೆಯಲ್ಲಿ ಕಳೆದ ಎರಡು ವಾರಗಳಲ್ಲಿ ಬಿಡುಗಡೆಯಾದ ಅಲ್-ಖೈದ ವಿಡಿಯೋ ಉದ್ವಿಗ್ನತೆಗೆ ಕಾರಣವಾಗಿತ್ತು. ಆದರೆ, ಇದೀಗ ಇದರ ಹಿಂದೆ ಪಾಕಿಸ್ತಾನದ ಕೈವಾಡ ಸ್ಪಷ್ಟವಾಗಿರುವ ಹಿನ್ನೆಲೆಯಲ್ಲಿ ವಿಡಿಯೋವನ್ನು ನಕಲಿ ಎನ್ನಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ