ಸಬರಮತಿ (ಅಕ್ಟೋಬರ್ 31); ಕಳೆದ ಫೆಬ್ರವರಿ 14 ರಂದು ಜಮ್ಮು-ಕಾಶ್ಮೀರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಯೋತ್ಪಾದಕರು ನಡೆಸಿದ್ದ ವಿಧ್ವಂಸಕ ಕೃತ್ಯಕ್ಕೆ ಸುಮಾರು 40 ಜನ ಭಾರತೀಯ ಸೈನಿಕರು ಮೃತಪಟ್ಟಿದ್ದರು. ಈ ಘಟನೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಘಟನೆಗೆ ಪಾಕಿಸ್ತಾನವೇ ಕಾರಣ ಎಂದು ಭಾರತ ಆರೋಪಿಸುತ್ತಿದ್ದರೂ ಸಹ ಪಾಕ್ ಈ ಹೊಣೆ ಹೊತ್ತಿರಲಿಲ್ಲ. ಆದರೆ, ಇತ್ತೀಚೆಗೆ ಪಾಕಿಸ್ತಾನದ ಸಂಸತ್ತಿನಲ್ಲಿ ಆ ದೇಶದ ಸಚಿವ ಪುಲ್ವಾಮಾ ದಾಳಿಯ ಹೊಣೆ ಹೊತ್ತಿದ್ದಾರೆ. ಇದರಿಂದಾಗಿ ಪುಲ್ವಾಮಾ ಭಯೋತ್ಪಾದಕ ದಾಳಿಯ ಹಿಂದಿನ ಸತ್ಯ ಬಹಿರಂಗಗೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಅಭಿಪ್ರಾಯಪಟ್ಟಿದ್ದಾರೆ.
ಮಾಜಿ ಉಪ ಪ್ರಧಾನಿ ಹಾಗೂ ಗೃಹ ಸಚಿವ ಸರ್ದಾರ್ ವಲ್ಲಭಾಯಿ ಪಟೇಲ್ ಅವರ 145ನೇ ಹುಟ್ಟುಹಬ್ಬದ ಪ್ರಯುಕ್ತ ಅವರ ಏಕತಾ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿ ನಂತರ ಸಭೆಯನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, "ಪುಲ್ವಾಮಾ ದಾಳಿಯ ಸಮಯದಲ್ಲಿ ಭದ್ರತಾ ಸಿಬ್ಬಂದಿಯ ತ್ಯಾಗದ ಬಗ್ಗೆ ಕೆಲವರು ದುಃಖಿತರಾಗಿರಲಿಲ್ಲ ಎಂಬುದನ್ನು ದೇಶ ಎಂದಿಗೂ ಮರೆಯಲು ಸಾಧ್ಯವಿಲ್ಲ. ವಿರೋಧ ಪಕ್ಷದವರು ಪುಲ್ವಾಮಾ ದಾಳಿಯಲ್ಲೂ ರಾಜಕೀಯ ಲಾಭವನ್ನು ಹುಡುಕುತ್ತಿದ್ದಾರೆಂದು ನನಗೆ ತಿಳಿದಿತ್ತು. ಹಾಗಾಗೀ ನಾನು ಎಲ್ಲಾ ವಿವಾದಗಳಿಂದ ದೂರವಿದ್ದು, ಎಲ್ಲಾ ಆರೋಪಗಳನ್ನು ಮೌನವಾಗಿ ಸಹಿಸಿಕೊಂಡಿದೆ.
"ನೆರೆಯ ದೇಶವು ತನ್ನ ಸಂಸತ್ತಿನಲ್ಲಿ ಪುಲ್ವಾಮಾ ದಾಳಿಯ ಜವಾಬ್ದಾರಿಯನ್ನು ಒಪ್ಪಿಕೊಂಡ ನಂತರ, ನಮ್ಮ ಕಷ್ಟದ ಸಮಯದಲ್ಲಿ ಕೊಳಕು ರಾಜಕೀಯವನ್ನು ಮಾಡಿದವರ ನಿಜ ಸ್ವರೂಪ ಬಹಿರಂಗವಾಗಿದೆ. ರಾಷ್ಟ್ರದ ಹಿತದೃಷ್ಟಿಯಿಂದ ಇಂತಹ ರಾಜಕೀಯ ಮಾಡದಂತೆ ನಾನು ವಿರೋಧ ಪಕ್ಷಗಳಿಗೆ ವಿನಂತಿಸುತ್ತೇನೆ" ಎಂದು ಮೋದಿ ತಿಳಿಸಿದ್ದಾರೆ.
“ಈ ಪಕ್ಷಗಳು ತಮ್ಮ ಗುರಿಗಳನ್ನು ಸಾಧಿಸುವಲ್ಲಿ ಭಾರತ ವಿರೋಧಿ ಶಕ್ತಿಗಳಿಗೆ ಸಹಾಯ ಮಾಡುತ್ತಿವೆ. ವಿರೋಧ ಪಕ್ಷಗಳು ದೇಶಕ್ಕೆ ಅಥವಾ ಅವರ ಪಕ್ಷಕ್ಕೆ ಯಾವುದೇ ಒಳ್ಳೆಯದನ್ನು ಮಾಡುವುದಿಲ್ಲ. ನಾವು ಇತರರಿಗೆ ಒಳ್ಳೆಯದನ್ನು ಮಾಡಿದಾಗ ಮಾತ್ರ ನಮಗೆ ಒಳ್ಳೆಯದಾಗುತ್ತದೆ ಎಂಬುದನ್ನು ನಾವು ನೆನಪಿಟ್ಟುಕೊಳ್ಳಬೇಕು. ಸರ್ದಾರ್ ಪಟೇಲ್ ಕಲ್ಪಿಸಿದಂತೆಯೇ ಭಾರತವನ್ನು ಸದೃ , ಸ್ವತಂತ್ರ ಮತ್ತು ಸ್ವಾವಲಂಬಿಗಳನ್ನಾಗಿ ಮಾಡಲು ನಾವೆಲ್ಲರೂ ಕೆಲಸ ಮಾಡಬೇಕು.
ಇಂದು ವಿಶ್ವದ ಎಲ್ಲಾ ದೇಶಗಳು ಭಯೋತ್ಪಾದನೆ ವಿರುದ್ಧ ಹೋರಾಡಲು ಒಂದಾಗಬೇಕಿದೆ. ಭಯೋತ್ಪಾದನೆ ಮತ್ತು ಹಿಂಸಾಚಾರದಿಂದ ಯಾರಿಗೂ ಪ್ರಯೋಜನವಿಲ್ಲ. ಭಾರತ ನಿರಂತರವಾಗಿ ಭಯೋತ್ಪಾದನೆ ವಿರುದ್ಧ ಹೋರಾಡುತ್ತಿದೆ" ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ