ಕೊಚ್ಚಿ: ಕೊಚ್ಚಿಯ ಎಡಪಲ್ಲಿ ಮೂಲದ ಪದ್ಮಾ ಲಕ್ಷ್ಮಿ (Padma Lakshmi) ಕೇರಳ (Kerala) ರಾಜ್ಯದ ತೃತೀಯ ಲಿಂಗಿ (Transgender Lawyer) ಸಮುದಾಯದಿಂದ ಮೊದಲ ವಕೀಲರಾಗಿ ನೋಂದಣಿ ಮಾಡಿಕೊಳ್ಳುವ ಮೂಲಕ ಇತಿಹಾಸ ಬರೆದಿದ್ದಾರೆ. ಪದ್ಮಾ ಲಕ್ಷ್ಮಿ ಭಾನುವಾರ ರಾಜ್ಯದ ಬಾರ್ ಕೌನ್ಸಿಲ್‌ನಲ್ಲಿ (Bar Council) ವಕೀಲರಾಗಿ ರಿಜಸ್ಟರ್ ಮಾಡಿಕೊಂಡಿದ್ದಾರೆ. ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಬಾರ್ ದಾಖಲಾತಿ ಪ್ರಮಾಣಪತ್ರವನ್ನು ಹಸ್ತಾಂತರಿಸಿದ 1,529 ಕಾನೂನು ಪದವೀಧರರಲ್ಲಿ ಪದ್ಮಾ ಕೂಡ ಒಬ್ಬರು. ರಾಜ್ಯ ಕಾನೂನು ಸಚಿವ ಪಿ.ರಾಜೀವ್ (Minister P Rajeev) ಈ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಮಾಹಿತಿ ನೀಡಿದ್ದಾರೆ.
ಪದ್ಮಾ ಲಕ್ಷ್ಮಿ ಅವರು ಭೌತಶಾಸ್ತ್ರದಲ್ಲಿ ಪದವಿ ಪಡೆದ ನಂತರ ಎರ್ನಾಕುಲಂ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಎಲ್ಎಲ್ಬಿಗೆ ಸೇರಿಕೊಂಡರು. ಇದೀಗ ಲಾ ಪ್ರಾಕ್ಟೀಸ್ ನಂತರ ನ್ಯಾಯಾಂಗ ಸೇವಾ ಪರೀಕ್ಷೆಗಳನ್ನು ಎದುರಿಸುವ ಗುರಿ ಹೊಂದಿದ್ದಾರೆ. ರಾಜ್ಯದ ಕಾನೂನು ಸಚಿವ ಪಿ ರಾಜೀವ್ ಅವರು ವಕೀಲೆಯ ಫೋಟೋವನ್ನು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ಪುಟಗಳಲ್ಲಿ ಹಂಚಿಕೊಂಡು ಅಭಿನಂದನೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಇವರೆ ನೋಡಿ ದೇಶದ ಮೂರನೇ ಟ್ರಾನ್ಸ್ ಜೆಂಡರ್ ಜಡ್ಜ್
ಸತ್ಯಶ್ರೀ ಶರ್ಮಿಳಾ ದೇಶದ ಮೊಟ್ಟಮೊದಲ ತೃತೀಯ ಲಿಂಗಿ ವಕೀಲೆ
ತಮಿಳುನಾಡಿನ ಸತ್ಯಶ್ರೀ ಶರ್ಮಿಳಾ ದೇಶದ ಮೊದಲ ತೃತೀಯ ಲಿಂಗಿ ವಕೀಲೆ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ. ಅವರು ಮೂಲತಃ ರಾಮನಾಥಪುರಂ ಜಿಲ್ಲೆಯವರು. ಸತ್ಯಶ್ರೀ, 2007ರಲ್ಲಿ ಸೇಲಂ ಸೆಂಟ್ರಲ್ ಲಾ ಕಾಲೇಜಿನಿಂದ ಕಾನೂನು ಪದವಿ ಪಡೆದುಕೊಂಡಿದ್ದರು. 2007ರಲ್ಲಿ ಕುಟುಂಬ ತೊರೆದು, ತೃತೀಯಲಿಂಗಿ ಸಮುದಾಯಕ್ಕೆ ಕಾಂಚಿಪುರಂನಲ್ಲಿ ಸೇರಿಕೊಂಡಿದ್ದರು. ಕಾನೂನು ವಿಭಾಗದಲ್ಲಿ ಪದವಿ ಪಡೆದು ವಕೀಲೆಯಾಗುವ ಮೂಲಕ ಆ ಸಮೂದಾಯಕ್ಕೆ ಮಾದರಿಯಾಗಿ ನಿಂತಿದ್ದಾರೆ.
ಇದನ್ನೂ ಓದಿ: Trans Tea Stall: ಈ ರಾಜ್ಯದ ರೈಲು ನಿಲ್ದಾಣದಲ್ಲಿದೆ ಭಾರತದ ಮೊದಲ ತೃತೀಯ ಲಿಂಗಿಗಳ ಟೀ ಸ್ಟಾಲ್!
ಜೊಯಿತಾ ಮಂಡಲ್ ಮೊದಲ ತೃತೀಯಲಿಂಗಿ ನ್ಯಾಯಾದೀಶೆ
ಪಶ್ಚಿಮ ಬಂಗಾಳದ ತೃತೀಯಲಿಂಗಿ ಜೊಯಿತಾ ಮಂಡಲ್ ದೇಶದಲ್ಲಿಯೇ ಮೊದಲ ನ್ಯಾಯದೀಶೆ. ಸಾಂಪ್ರದಾಯಿಕ ಹಿಂದೂ ಕುಟುಂಬದಲ್ಲಿ ಜನಿಸಿದ ಜೊಯಿತಾ ಹುಡುಗನಾಗಿ ಹುಟ್ಟಿ ಹುಡುಗಿಯಾಗಿ ಬದಲಾಗಿ ಚಿಕ್ಕ ವಯಸ್ಸಿನಲ್ಲೇ ಕುಟುಂಬದಿಂದ ಹೊರಬಂದು ಸಾಕಷ್ಟು ಕಷ್ಟ ಪಟ್ಟು ಓದಿ ದೇಶದ ಮೊದಲ ತೃತೀಯಲಿಂಗಿ ನ್ಯಾಯಾದೀಶೆ ಎನಿಸಿಕೊಂಡರು. ಇವರು 2017ರಲ್ಲಿ ಪಶ್ಚಿಮ ಬಂಗಾಳದ ಇಸ್ಲಾಂಪುರದ ಲೋಕ ಅದಾಲತ್‌ನಲ್ಲಿ ನ್ಯಾಯಾಧೀಶೆಯಾಗಿ ನೇಮಕಗೊಂಡಿದ್ದರು.
2018ರ ಆರಂಭದಲ್ಲಿ ಮಹಾರಾಷ್ಟ್ರದ ನಾಗಪುರದಲ್ಲಿ ನಡೆದ ಲೋಕ ಅದಾಲತ್‌ನಲ್ಲಿ ತೃತೀಯಲಿಂಗಿ ಕಾರ್ಯಕರ್ತೆ ವಿದ್ಯಾ ಕಾಂಬ್ಳೆ ಅವರನ್ನು ಸದಸ್ಯ ನ್ಯಾಯಾಧೀಶರಾಗಿ ನೇಮಕವಾಗುವ ಮೂಲಕ ದೇಶದ 2ನೇ ತೃತೀಯಲಿಂಗಿ ನ್ಯಾಯಾದೀಶೆ ಎನಿಸಿಕೊಂಡಿದ್ದರು. ಅದೇ ವರ್ಷ ಭಾರತದ ಮೂರನೇ ತೃತೀಯಲಿಂಗಿ ನ್ಯಾಯಾಧೀಶರಾಗಿ ಗುವಾಹಟಿಯ ಸ್ವಾತಿ ಬಿದಾನ್ ಅವರನ್ನು ನೇಮಕ ಮಾಡಲಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ