ಗುರುಗ್ರಾಮ್: ಓಯೋ ರೂಮ್ಸ್ ಸಂಸ್ಥಾಪಕ ರಿತೇಶ್ ಅಗರ್ವಾಲ್ (Ritesh Agarwal) ಅವರ ತಂದೆ ರಮೇಶ್ ಅಗರ್ವಾಲ್ (Ramesh Agarwal) ಶುಕ್ರವಾರ ಮಧ್ಯಾಹ್ನ ಹರಿಯಾಣದ (Haryana)ಗುರುಗ್ರಾಮ್‌ನಲ್ಲಿ ಬಹುಮಹಡಿ ಕಟ್ಟಡದಿಂದ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ರಮೇಶ್ ಅಗರ್ವಾಲ್ ಗುರುಗ್ರಾಮ್‌ನಲ್ಲಿರುವ ಡಿಎಲ್‌ಎಫ್‌ನ ದಿ ಕ್ರೆಸ್ಟ್ ಸೊಸೈಟಿಯ 20ನೇ ಮಹಡಿಯಿಂದ ಮಧ್ಯಾಹ್ನ 1 ಗಂಟೆ ಸುಮಾರಿಗೆ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಡಿಎಲ್‌ಎಫ್ ಭದ್ರತಾ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ತಕ್ಷಣ ರಮೇಶ್ ಅಗರ್ವಾಲ್ರನ್ನು ಚಿಕಿತ್ಸೆಗಾಗಿ ಪಾರಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆಸ್ಪತ್ರೆಗೆ ಕರೆತರುವಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ರಮೇಶ್ ಅಗರವಾಲ್ ಅವರ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರ ಮಾಡಲಾಗಿದೆ.
ಆಸ್ಪತ್ರೆಗೆ ಸಾಗಿಸುವ ಮುನ್ನವೇ ಸಾವು
" ಬಹುಮಹಡಿ ಕಟ್ಟದಿಂದ ವ್ಯಕ್ತಿಯೊಬ್ಬ ಬಿದ್ದಿದ್ದಾನೆ ಎಂದು ಭದ್ರತಾ ಸಿಬ್ಬಂದಿ ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳೀಯ ಠಾಣಾ ಸಿಬ್ಬಂದಿಗಳು ಘಟನೆಯ ಸ್ಥಳಕ್ಕೆ ಭೇಟಿ ನೀಡಿದ್ದು, ಸ್ಥಳದ ಪರಿಶೀಲನೆಯ ಸಮಯದಲ್ಲಿ, ಬಿದ್ದ ವ್ಯಕ್ತಿ ರಮೇಶ್ ಅಗರ್ವಾಲ್ ಎಂದು ಗುರುತಿಸಲಾಗಿದೆ. ಅವರನ್ನು ತಕ್ಷಣ ಪಾರಸ್ ಆಸ್ಪತ್ರೆಗೆ ಕರೆತರಲಾಯಿತು " ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ರಮೇಶ್ ಅವರ 29 ವರ್ಷದ ಮಗ ರಿತೇಶ್ ಅಗರವಾಲ್ ಅವರ ವಿವಾಹವು ಗೀತಾಂಶಾ ಸೂದ್ ಜತೆ ನಡೆದಿತ್ತು. ಮಗನ ಮದುವೆಯಲ್ಲಿ ರಮೇಶ್ ಅವರು ಸಂಭ್ರಮದಿಂದ ಭಾಗಿಯಾಗಿದ್ದರು. ಮಾರ್ಚ್ 7ರಂದು ಈ ದಂಪತಿ ದಿಲ್ಲಿಯ ತಾಜ್ ಪ್ಯಾಲೇಸ್ ಪಂಚತಾರಾ ಹೋಟೆಲ್‌ನಲ್ಲಿ ಅದ್ದೂರಿ ಆರತಕ್ಷತೆ ಆಯೋಜಿಸಿದ್ದರು.
ಇದನ್ನೂ ಓದಿ: OYO Founder Meet Modi: ಪ್ರಧಾನಿ ಮೋದಿಯವರನ್ನು ವಿವಾಹಕ್ಕೆ ಆಹ್ವಾನಿಸಿದ ಓಯೋ ಸಂಸ್ಥಾಪಕ ರಿತೇಶ್ ಅಗರ್ವಾಲ್
ನನ್ನಂತಹ ಹಲವರಿಗೆ ಸ್ಪೂರ್ತಿಯಾಗಿದ್ದರು
ತಮ್ಮ ತಂದೆ ನಿಧನರಾಗಿರುವ ಬಗ್ಗೆ ರಿತೇಶ್ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ, " ನನ್ನ ಕುಟುಂಬ ಮತ್ತು ನನ್ನ ಮಾರ್ಗದರ್ಶಕರಾಗಿದ್ದ, ನನ್ನ ಶಕ್ತಿಯಾಗಿದ್ದ ನನ್ನ ತಂದೆ ರಮೇಶ್ ಅಗರ್ವಾಲ್ ಮಾರ್ಚ್ 10 ರಂದು ನಿಧನರಾದರು ಎಂಬ ವಿಷಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ತಂದೆ ಅಕಾಲಿಕ ಸಾವಿನಿಂದ ನಮ್ಮ ಕುಟುಂಬಕ್ಕೆ ಅಪಾರ ನಷ್ಟವಾಗಿದೆ. ನಮ್ಮ ಕಠಿಣ ಸಮಯಗಳಲ್ಲೂ ನನ್ನ ತಂದೆ ತೋರಿದ ಸಹಾನುಭೂತಿ ಮತ್ತು ಆತ್ಮೀಯತೆಯು ನನ್ನನ್ನ ಇಲ್ಲಿಯವರೆಗೆ ತಂದಿತ್ತು. ಅವರು ನನಗೆ ಮತ್ತು ನಮ್ಮಲ್ಲಿ ಅನೇಕರಿಗೆ ಪ್ರತಿದಿನ ಸ್ಫೂರ್ತಿಯಾಗಿದ್ದರು. ಅವರ ಮಾತುಗಳು ನಮ್ಮ ಹೃದಯದಲ್ಲಿ ಆಳವಾಗಿ ಪ್ರತಿಧ್ವನಿಸುತ್ತವೆ. ಈ ದುಃಖದ ಸಮಯದಲ್ಲಿ ನಮ್ಮ ಖಾಸಗಿತನವನ್ನು ಗೌರವಿಸುವಂತೆ ನಾವು ಪ್ರತಿಯೊಬ್ಬರಲ್ಲಿ ವಿನಂತಿಸುತ್ತೇವೆ " ಎಂದು ರಿತೇಶ್ ಅಗರ್ವಾಲ್ ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ.
ಅದ್ದೂರಿಯಾಗಿ ನಡೆದಿದ್ದ ಅಗರ್ವಾಲ್ ವಿವಾಹ
ಮಾರ್ಚ್ 7ರಂದು ರಿತೇಶ್ ಅಗರ್ವಾಲ್ ಅವರ ವಿವಾಹ ಅದ್ದೂರಿಯಾಗಿ ನಡೆದಿತ್ತು. ಈ ಮದುವೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಸಾಫ್ಟ್‌ಬ್ಯಾಂಕ್‌ನ ಮಸಯೋಶಿ ಸನ್ ಸೇರಿದಂತೆ ಪ್ರಮುಖ ಸ್ಟಾರ್ಟಪ್ ಸಂಸ್ಥಾಪಕರು ಮತ್ತು ಹೂಡಿಕೆದಾರರು ಭಾಗವಹಿಸಿದ್ದರು. 29 ವರ್ಷದ ಉದ್ಯಮಿ ಅಗರ್ವಾಲ್ ಸಾಫ್ಟ್‌ಬ್ಯಾಂಕ್‌ನ ಮುಖ್ಯಸ್ಥ ಮಸೊಯೊಶಿ ಸನ್ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
2013ರಲ್ಲಿ ಓಯೊ ರೂಮ್ಸ್ ಸ್ಥಾಪನೆ
ಉದ್ಯಮಿ ರಿತೇಶ್ ಅಗರ್ವಾಲ್ ಅವರು ದೇಶದ ಯುವ ಬಿಲಿಯನೇರ್‌ಗಳ ಸಾಲಿನಲ್ಲಿದ್ದು, ತಮಗೆ ಕೇವಲ 19 ವರ್ಷ ಇರುವಾಗಲೇ 2013ರಲ್ಲಿ ಓಯೋ ಕಂಪೆನಿಯನ್ನು ಸ್ಥಾಪಿಸಿದ್ದರು. ಜಪಾನ್‌ನ ಸಂಘಟಿತ ಸಂಸ್ಥೆಯಾದ ಸಾಫ್ಟ್‌ಬ್ಯಾಂಕ್ ಓಯೋದಲ್ಲಿನ ಅತಿದೊಡ್ಡ ಹೂಡಿಕೆದಾರರಾಗಿದ್ದಾರೆ.
ಯಾವುದೇ ಆಡಂಬರವಿಲ್ಲದ ವಸತಿ ಸೌಕರ್ಯವನ್ನು ಒದಗಿಸುವಲ್ಲಿ ಓಯೋ ಜನಪ್ರಿಯತೆ ಪಡೆದಿದ್ದು, ಪ್ರವಾಸಿಗರ ಬಜೆಟ್ಗೆ ತಕ್ಕಂತೆ ವಸತಿ ಸೌಲಭ್ಯ ಒದಗಿಸಲು ಹಾಗೂ ಸುಲಭವಾಗಿ ಸಂಪರ್ಕಿಸಲು ನೆರವಾಗುತ್ತಿದೆ. ಇದು 800ಕ್ಕೂ ಹೆಚ್ಚು ನಗರಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ