ಮಧ್ಯ ಪ್ರದೇಶ: ಭಕ್ತಿ-ಭಾವದಲ್ಲಿ ಆಳವಾಗಿ ಮುಳುಗಿದವರು, ದೈವಿಕ ಶಕ್ತಿಗೆ (Divine Power) ಶರಣಾಗುವವರು ಲೌಕಿಕ ಜಗತ್ತನ್ನು ಮರೆತು ಬಿಡುತ್ತಾರೆ ಎಂದು ಹೇಳುವುದನ್ನ ಕೇಳಿದ್ದೇವೆ. ಹಾಗೇ ಕಷ್ಟಬಂದಾಗ ದೇವರು (God) ನೆನಪಾಗುತ್ತಾರೆ, ಸುಖವಿದ್ದಾಗ ಅಥವಾ ಯಾವುದೇ ಸಮಸ್ಯೆ ಇಲ್ಲದೇ ಹೋದರೆ ದೇವರ ಬಗ್ಗೆ ತಲೆಕೆಡಿಸಿಕೊಳ್ಳದ ಜನ ಬಹಳಷ್ಟಿದ್ದಾರೆ. ಆದರೆ ಕೆಲವರು ಸಂಪೂರ್ಣವಾಗಿ ದೇವರಿಗೆ ಶರಣಾಗಿರುತ್ತಾರೆ, ಅವರಿಗೆ ಬೌತಿಕ ಆಸ್ತಿ-ಪಾಸ್ತಿಗಳ ಮೇಲೆ ಯಾವುದೇ ವ್ಯಾಮೋಹ (Infatuation) ಇರುವುದಿಲ್ಲ. ದೇವರಿಗಾಗಿ ಬದುಕುತ್ತಾರೆ, ಅವರಿಗೆ ದೇವರೇ ಉಸಿರು.. ದೇವರೇ ಸರ್ವಸ್ವ.. ಕೋಟಿ ಆಸ್ತಿ ಇದ್ದರೂ ದೇವರಿಗಾಗಿ ಎಲ್ಲವನ್ನು ಬಿಟ್ಟುಕೊಡುವ ಸನ್ಯಾಸತ್ವ (Monasticism) ಸ್ವೀಕರಿಸಿದವರಿದ್ದಾರೆ. ಅಂತಹವರ ಪಾಲಿಗೆ ಉತ್ತರ ಪ್ರದೇಶದ (Uttar Pradesh) ವ್ಯಕ್ತಿಯೊಬ್ಬರು ಸೇರುತ್ತಾರೆ. 600 ಎಕರೆಗೂ ಹೆಚ್ಚಿನ ಕೃಷಿ ಭೂಮಿಯನ್ನು ಹೊಂದಿರುವ ಇವರು ಕಳೆದ ಮೂರು ದಶಕಗಳಿಂದ ಕಾಲು ನಡಿಗೆಯಲ್ಲೇ ತೀರ್ಥಯಾತ್ರೆ ಮಾಡುತ್ತಾ ಕಳೆಯುತ್ತಿದ್ದಾರೆ.
ಉತ್ತರ ಪ್ರದೇಶದ ಸಾಹಿರ್ ಔರೈಯಾ ನಿವಾಸಿ ಧ್ರುವದಾಸ್ ಮಹಾರಾಜ್ ಬಾಬಾ ಅವರು ಕಳೆದ 30 ವರ್ಷಗಳಿಂದ ಕಾಲುನಡಿಗೆಯಲ್ಲಿ ತೀರ್ಥಯಾತ್ರೆ ಮಾಡುತ್ತಿದ್ದಾರೆ. ಮಹಾರಾಜರು ದೇಶಾದ್ಯಂತ ಹಲವು ದೇವಾಲಯಗಳಿಗೆ ಭೇಟಿ ನೀಡಿದ್ದಾರೆ. ಈ ಮಹಾರಾಜರು ವಿಶೇಷ ದಿನಚರಿ ಹೊಂದಿದ್ದು, ತಮ್ಮ ಡೈರಿಯಲ್ಲಿ ಎಲ್ಲಾ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳ ಲೆಕ್ಕವನ್ನು ಬರೆಯುತ್ತಾರೆ. ಈ ಸನ್ಯಾಸಿ ಬಾಬಾ ಅವರ ಆಸಕ್ತಿದಾಯಕ ಕಥೆಯನ್ನು ಈ ಸುದ್ದಿಯಲ್ಲಿ ತಿಳಿದುಕೊಳ್ಳೋಣ.
ಇದನ್ನೂ ಓದಿ: Tirumala: ಭಕ್ತರಿಗೆ ಈಗಲೂ ಪಂಗನಾಮ ಹಾಕ್ತಾರಾ ದಲ್ಲಾಳಿಗಳು? ಇವ್ರನ್ನು ನಂಬಿದ್ರೆ ಗೋವಿಂದಾ!
ಬಾಲ್ಯದಲ್ಲಿ ತಾಯಿ ಕಳೆದುಕೊಂಡ ಬಾಬಾ
ವಾಸ್ತವವಾಗಿ, ಧ್ರುವದಾಸ್ ಮಹಾರಾಜರ ಬಾಲ್ಯದಲ್ಲಿಯೇ ತಾಯಿಯನ್ನು ಕಳೆದುಕೊಂಡಿದ್ದಾರೆ. ಇದರಿಂದಾಗಿ ಅವರು ಬಾಲ್ಯದಲ್ಲಿ ಅಗತ್ಯವಿದ್ದ ತಾಯಿಯ ಪ್ರೀತಿಯನ್ನು ಕಳೆದುಕೊಳ್ಳಬೇಕಾಯಿತು. ಚಿಕ್ಕ ವಯಸ್ಸಿನಲ್ಲಿ ಮಾತೃ ಪ್ರೇಮ ಸಿಗದ ಕಾರಣ, ಬಾಬಾ ತಮ್ಮ ನೋವನ್ನು ಸಹಿಸಿಕೊಳ್ಳಲು ಅಂದಿನಿಂದಲೇ ದೇವರನ್ನು ಪ್ರೀತಿಸಲು, ಆರಾಧಿಸಲು ಪ್ರಾರಂಭಿಸಿದ್ದಾಗಿ ತಿಳಿಸಿದ್ದಾರೆ.
ದೇಶದ ಬಹುತೇಕ ದೇವಾಲಯಕ್ಕೆ ಭೇಟಿ
ಸನ್ಯಾಸತ್ವ ಸ್ವೀಕರಿಸಿದ ಮೇಲೆ ತನ್ನ ಮನೆ, ಕೋಟ್ಯಂತರ ಆಸ್ತಿ ಎಲ್ಲವನ್ನೂ ತ್ಯಾಗ ಮಾಡಿದ್ದಾರೆ. ಕಳೆದ ಮೂವತ್ತು ವರ್ಷಗಳಲ್ಲಿ ಧುವದಾಸ ಮಹಾರಾಜರು ದೇಶದ ಬಹುತೇಕ ದೇವಾಲಯಗಳಿಗೆ ಭೇಟಿ ನೀಡಿದ್ದಾರೆ. ಅಪಾರ ಆಸ್ತಿ ಹೊಂದಿದ್ದರೂ ಸ್ವಂತ ಆಶ್ರಮ ನಿರ್ಮಿಸಿಕೊಂಡಿಲ್ಲ. ಎಲ್ಲಿ ದೇವಸ್ಥಾನ ಕಂಡುಬಂದರೂ ಅಲ್ಲಿಯೇ ನೆಲೆಸುತ್ತಾರೆ. ಈ ಬಾಬಾ ಮಧ್ಯ ಪ್ರದೇಶದ ಭಿಂಡ್ಗೆ ಆಗಮಿಸಿದ್ದು, ತಮ್ಮ ಕಥೆಯನ್ನು news18 ಜೊತೆಗೆ ಹಂಚಿಕೊಂಡಿದ್ದಾರೆ.
ಪ್ರತಿಯೊಂದು ಚಟುವಟಿಕೆಯನ್ನು ಬರೆದುಕೊಳ್ಳುತ್ತಾರೆ
ಧ್ರುವದಾಸ ಮಹಾರಾಜರು ತಮ್ಮ ಪಾದಯಾತ್ರೆಯ ಸಮಯದಲ್ಲಿ ಬಿಡುವು ಸಿಕ್ಕಾಗ ತಿನ್ನುವುದು, ಕುಡಿಯುವುದು ಸೇರಿ ದೈನಂದಿನ ಚಟುವಟಿಕೆಯನ್ನು ಡೈರಿಯಲ್ಲಿ ಬರೆದಿದ್ದಾರೆ. ಕೇವಲ ತಿನ್ನುವುದು, ಕುಡಿಯುವುದು ಮಾತ್ರವಲ್ಲ, ಪಯಣದಲ್ಲಿ ತಮ್ಮನ್ನು ಯಾರಾದರೂ ನಿಂದಿಸಿದರೆ, ಅದನ್ನೂ ಅದೇ ದಿನಚರಿಯಲ್ಲಿ ನಮೂದಿಸುವುದಾಗಿ ತಿಳಿಸಿದ್ದಾರೆ.
ಅಲ್ಲದೆ ಮಹಾರಾಜರು ದೇವಸ್ಥಾನಕ್ಕೆ ಹೋದಾಗ ತಮ್ಮ ಡೈರಿಯನ್ನು ದೇವರ ಮುಂದೆ ಇಡುತ್ತಾರಂತೆ. ತಮ್ಮನ್ನು ನಿಂದಿಸಿದವರಿಗೆ, ಕೆಟ್ಟದಾಗಿ ನಡೆಸಿಕೊಂಡವರಿಗೆ ಒಳ್ಳೆಯದಾಗಲಿ ಎಂದು ಬೇಡಿಕೊಳ್ಳುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: Godman Nithyanandaನ ಕೈಲಾಸ ದೇಶದಿಂದ ಅಮೆರಿಕಾದ 30 ನಗರಗಳೊಂದಿಗೆ ‘ಸಿಸ್ಟರ್ ಸಿಟಿ’ ಹಗರಣ!
ದೇವಸ್ಥಾನದಲ್ಲೇ ಆಶ್ರಯ
ಧ್ರುವದಾಸ ಮಹಾರಾಜರು ಭಿಂದ್ನಿಂದ ಕಾಲುನಡಿಗೆಯಲ್ಲಿ ಖತುಸ್ಯಾಮ್ಗೆ ತೆರಳಲಿದ್ದಾರೆ. ನಂತರ ಅಯೋಧ್ಯಾ ನಗರಕ್ಕೆ ಹೋಗಲಿದ್ದಾರೆ. ಈ ಪಯಣದಲ್ಲಿ ದಾರಿಯಲ್ಲಿ ಎಲ್ಲೇ ದೇವಾಲಯ ಸಿಕ್ಕಿದರೂ ಅಲ್ಲಿಯೇ ವಿಶ್ರಾಂತಿ ಪಡೆಯುವುದಾಗಿ, ಯಾರಾದರೂ ತಿನ್ನಲು ಮತ್ತು ಕುಡಿಯಲು ಕೊಟ್ಟರೆ ಅದನ್ನು ಸ್ವೀಕರಿಸುತ್ತಾರಂತೆ. ಒಂದು ವೇಳೆ ಏನು ಸಿಗದಿದ್ದರೆ ಹಸಿವಿನಿಂದಲೇ ತಮ್ಮ ಪಯಣವನ್ನು ಮುಂದುವರಿಸುತ್ತಾರೆ. ಈ ಬಾಬಾ ಕಳೆದ 30 ವರ್ಷಗಳಿಂದ ಎಲ್ಲೂ ವಾಹನದಲ್ಲಿ ಪ್ರಯಾಣಿಸಿಯೇ ಇಲ್ಲ ಎನ್ನುವುದು ಆಶ್ಚರ್ಯಕರ ಸಂಗತಿ.
ನೆಮ್ಮದಿ ಇಲ್ಲದಿದ್ದರೆ ಎಷ್ಟು ಹಣವಿದ್ದರೂ ವ್ಯರ್ಥ
ಇಡೀ ಜಗತ್ತೇ ಹಣದ ಸುತ್ತುತ್ತದೆ, ಆದರೆ ನಮ್ಮ ಬಳಿ ಎಷ್ಟೇ ಹಣವಿದ್ದರೂ, ನೆಮ್ಮದಿ ಇಲ್ಲದಿದ್ದರೆ ಅದೆಲ್ಲವೂ ವ್ಯರ್ಥ ಎಂಬುದು ಧ್ರುವದಾಸರ ವಿಷಯದಲ್ಲಿ ನಿಜವಾಗಿದೆ. ಧ್ರುವದಾಸರಿಗೆ ಕೋಟ್ಯಂತರ ರೂಪಾಯಿ ಆಸ್ತಿ ಇದೆ. 1100 ಬಿಘಾ ಜಮೀನು (ಸುಮಾರು 680 ಎಕರೆ) ಇದೆ. ಆದರೆ ಇದೆಲ್ಲವನ್ನೂ ಅವರು ಅನುಭವಿಸುತ್ತಿಲ್ಲ. ತೀರ್ಥಯಾತ್ರೆಗಳಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ದೇವರ ಆರಾಧನೆಯಲ್ಲಿ ತೊಡಗಿಕೊಂಡಿದ್ದಾರೆ. ಯಾವುದೇ ಆಸ್ತಿ ನಮ್ಮೊಂದಿಗೆ ಬರುವುದಿಲ್ಲ, ಕೇವಲ ಒಳ್ಳೆಯ ಕಾರ್ಯಗಳು ಯಾವಾಗಲೂ ನಮ್ಮೊಂದಿಗೆ ಬರುತ್ತವೆ. ಆದ್ದರಿಂದ ನಾನು ಎಲ್ಲವನ್ನೂ ತೊರೆದು ದೇವರ ಪೂಜೆಯಲ್ಲಿ ತೊಡಗಿದ್ದೇನೆ ಎನ್ನುತ್ತಾರೆ ಧ್ರುವದಾಸರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ